ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಋಷಿಗಳು

ಋಷಿಗಳು


ಋಷಿಗಳು ದಿವ್ಯ ಜ್ಞಾನವನ್ನು ಪಡೆದ ಕವಿಗಳು.  ಅಲೌಕಿಕ ದರ್ಶನ ಪಡೆದ ಮಹಾ ಪುರುಷರು. ದಿವ್ಯಮಂತ್ರಗಳನ್ನು ಹಾಡುವವರು. ಕುತ್ಸ, ವಸಿಷ್ಠ, ಅತ್ರಿ, ಅಗಸ್ತ್ಯ ಇತ್ಯಾದಿ ಅನೇಕ ಋಷಿಗಳನ್ನು ಇಲ್ಲಿ ಸ್ಮರಿಸಬಹುದು. ಋಷಿಗಳು ದೇವಮಾನವ ಅಸುರ ವರ್ಗದಿಂದ ಭಿನ್ನರು. ವೇದಾದಿ ಪವಿತ್ರ ಗ್ರಂಥಗಳನ್ನು ಬರೆದವರು ಅಥವಾ ದೇವವಾಣಿಯಿಂದ ಅರಿತವರು. ಆದ್ದರಿಂದ ಇವರನ್ನು ಮಂತ್ರದ್ರಷ್ಟಾರರೆನ್ನಲಾಗಿದೆ. 

ವೇದದ ಪ್ರತಿ ಸೂಕ್ತದಲ್ಲೂ ದೇವತೆ, ಛಂದಸ್ಸು ಮತ್ತು ವಿನಿಯೋಗಗಳೊಂದಿಗೆ ಕರ್ತೃವಾದ ಋಷಿಯ ಹೆಸರನ್ನೂ ಹೇಳಿದೆ. ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಗೋತ್ರ ಋಷಿಗಳು. ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ- ಇವರು ಸಪ್ತರ್ಷಿ ಮಂಡಲದ ಏಳು ನಕ್ಷತ್ರರೂಪಿ ಋಷಿಗಳು. ಇವರೊಂದಿಗೆ ಮನು ಇನ್ನೂ ಮೂರು ಹೆಸರುಗಳನ್ನು (ಪ್ರೆಚೇತಸ, ಭೃಗು, ನಾರದ) ಸೇರಿಸಿ ಹತ್ತು ಮಂದಿಯನ್ನು ಪ್ರಜಾಪತಿಗಳು ಎಂದು ಹೆಸರಿಸಿದ್ದಾನೆ. ಋಷಿಗಳಲ್ಲಿ ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿ, ಮಹರ್ಷಿ, ಪರಮರ್ಷಿ, ಶ್ರುತರ್ಷಿ, ಕಾಂಡರ್ಷಿ ಎಂಬ ವೈವಿಧ್ಯವಿದೆ.

ಕೆಲವು ಋಷಿಗಳ ಕೆಲವು ಮಾತು: 

ಕಶ್ಯಪ:  ಕಶ್ಯಪರು ಮರೀಚಿ ಮಹರ್ಷಿಯ ಮಗ. ಅತ್ಯಂತ ಪ್ರಾಚೀನನೆಂದು ಶ್ರುತಿಗಳು ಹೇಳುತ್ತವೆ. ವೇದಮಂತ್ರ ದ್ರಷ್ಟಾರನಾದ ಈತನ ವ್ಯಕ್ತಿತ್ವ ಬಹುಮಖಶಕ್ತಿಯ ಪ್ರತೀಕವಾಗಿ ತೋರುತ್ತದೆ. ಈತನಿಗೆ ದಿತಿ ಅದಿತಿ ಮೊದಲಾದ ಹದಿಮೂರು ಮಂದಿ ಹೆಂಡತಿಯರು. ಅದಿತಿಯ ಮಕ್ಕಳೇ ಆದಿತ್ಯರು. ದಿತಿಯ ಮಕ್ಕಳು ದೈತ್ಯರು. ಉಳಿದ ಪತ್ನಿಯರಲ್ಲಿ ನಾಗರು, ಉರಗರು ಮೊದಲಾದವರ ಉತ್ಪತ್ತಿಯಾಯಿತು. ದಿವಸ್ವಂತನಿಗೂ ಗರುಡನಿಗೂ ಕಶ್ಯಪನೇ ತಂದೆ. ಈತ ಒಬ್ಬ ಪ್ರಜಾಪತಿಯೂ ಆಗಿದ್ದ. ವಾಮನಾವತಾರದಲ್ಲಿ ವಿಷ್ಣುವಿಗೆ ಈತ ಪಿತ, ಪರಶುರಾಮನಿಗೂ ದಾಶರಥಿ ರಾಮನಿಗೂ ಪುರೋಹಿತ.

ಅತ್ರಿ: ಬ್ರಹ್ಮನ ಮಾನಸಪುತ್ರ. ಮಂತ್ರದ್ರಷ್ಟನಾದ ಮಹರ್ಷಿ. ಕರ್ದಮ ಬ್ರಹ್ಮನ ಮಗಳಾದ ಅನಸೂಯೆಯನ್ನು ಮದುವೆಯಾಗಿ ಚಂದ್ರ, ದತ್ತಾತ್ರೇಯ ಮತ್ತು ದೂರ್ವಾಸರನ್ನು ಪಡೆದ. ವನವಾಸದಲ್ಲಿದ್ದ ಶ್ರೀರಾಮ, ಈತನ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಅವನಿಗೆ ಬೋಧಿಸಿದ. ಕೆಲವು ಕಾಲ ಬ್ರಹ್ಮಪಟ್ಟದಲ್ಲಿದ್ದ.

ಭಾರದ್ವಾಜ (ಅಥವಾ ಬೃಹಸ್ಪತ್ಯ) ವಿದ್ವಾಂಸರ, ಅರ್ಥಶಾಸ್ತ್ರಜ್ಞ, ವ್ಯಾಕರಣಕಾರರ ಮತ್ತು ವೈದ್ಯ. ಪುರಾಣಗಳು ಹಾಗೂ ಋಗ್ವೇದದಲ್ಲಿ ಇವರ ಕೊಡುಗೆಗಳು ಅಂದಿನ ಭಾರತೀಯ ಸಮಾಜದಲ್ಲಿ ಒಳನೋಟ ನೀಡುವಲ್ಲಿ ಗಣನೀಯ ಪಾತ್ರ ವಹಿಸಿದವು. ಇವರು ಮತ್ತು ಇವರ ಶಿಷ್ಯವರ್ಗದವರನ್ನು ಋಗ್ವೇದದ ಆರನೇ ಗ್ರಂಥದ ಲೇಖಕರು ಎಂದು ಪರಿಗಣಿಸಲಾಗಿದೆ.

ವಿಶ್ವಾಮಿತ್ರ ಪ್ರಾಚೀನ ಭಾರತದಲ್ಲಿ ಬಹಳ ಪ್ರಸಿದ್ಧ ಋಷಿ. ಋಗ್ವೇದದ ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಚಂದ್ರವಂಶದಲ್ಲಿ ವಿಶ್ವರಥ ಹೆಸರಿನ ಕ್ಷತ್ರಿಯ ರಾಜನಾಗಿದ್ದ.

ಗೌತಮ: ದೀರ್ಘತಮ ಮತ್ತು ಪ್ರದ್ವೇಷಿಣಿಯರ ಮಗ. ಈತನ ತಂದೆ ಆಂಗಿರಸ ಕುಲದವನಿದ್ದು ಬೃಹಸ್ಪತಿಯ ಶಾಪದ ಮೂಲಕ ಹುಟ್ಟುಕುರುಡನಾಗಿದ್ದ. ಎಷ್ಟೋ ಕಡೆಗಳಲ್ಲಿ ದೀರ್ಘತಮ ತಾನೇ ಗೌತಮ ಎಂದು ಹೇಳಿಕೊಂಡಿದ್ದಾನೆ. ಗೌತಮನಿಗೆ ಔಶೀನರೀ ಎಂಬ ಶೂದ್ರ ಸ್ತ್ರೀಯಲ್ಲಿ ಕಕ್ಷೀವಾನ ಮುಂತಾದ ಮಕ್ಕಳು ಹುಟ್ಟಿದರು. ಸನತ್ಕುಮಾರ ಈತನಿಗೆ ಬ್ರಹ್ಮವಿದ್ಯೆ ಹೇಳಿಕೊಟ್ಟ ಗುರು. ಗೌತಮನಿಗೆ ಹಂಸ ಮತ್ತು ಪರಮಹಂಸ ಧ್ಯಾನವನ್ನು ಹೇಗೆ ಮಾಡಬೇಕೆಂದು ಗುರು ಹೇಳಿಕೊಟ್ಟ. ಗೌತಮನನ್ನು ಬ್ರಹ್ಮರ್ಷಿ ಎಂದು ಕರೆಯಲಾಗಿದೆ. ಬ್ರಹ್ಮದೇವನ ಮಾನಸಕನ್ಯೆ ಅಹಲ್ಯೆ ಈತನ ಹೆಂಡತಿ. ಗೌತಮೀ ಎಂಬುದು ಈಕೆಯ ಒಂದು ಹೆಸರು. ಶತಾನಂದ ಈಕೆಯ ಮಗ. ಈಕೆಯ ಹೆಸರಿನಿಂದಲೇ ಗೋದಾವರಿ ನದಿಗೆ ಗೌತಮೀ ಎಂಬ ಹೆಸರು ಬಂದಿದೆ. ವೃಷಾದರ್ಭಿ ಎಂಬ ರಾಜ ತನ್ನ ರಾಜ್ಯದಲ್ಲಿ ಅನ್ನಕ್ಷಾಮ ಒದಗಿದ್ದರಿಂದ ಋಷಿಗಳಿಗೆ ದಾನ ಕೊಡಲು ನಿಶ್ಚಯಿಸಿದಾಗ ಆ ದಾನವನ್ನು ನಿರಾಕರಿಸಿದ ಏಳು ಋಷಿಗಳಲ್ಲಿ ಗೌತಮನೂ ಒಬ್ಬ. ತನ್ನ ಶಿಷ್ಯ ಉದಂಕನಿಗೇ ಮಗಳನ್ನು ಕೊಟ್ಟು ಲಗ್ನ ಮಾಡಿದನೆನ್ನಲಾಗಿದೆ. ಗೌತಮನ ಆಶ್ರಮ ಪಾರಿಯಾತ್ರ (ವಿಂಧ್ಯ) ಪರ್ವತದ ಹತ್ತಿರ ಇತ್ತೆಂದು ಹೇಳಲಾಗಿದೆ. ಅಲ್ಲಿ ಈತ ಅರುವತ್ತು ಸಾವಿರ ವರ್ಷಗಳವರೆಗೆ ತಪಸ್ಸು ಮಾಡಿದನೆಂದು ಪ್ರತೀತಿ. ಹನ್ನೆರಡು ವರ್ಷದ ಬರಗಾಲ ಪ್ರಾಪ್ತವಾದರೂ ಗೌತಮ ಅಲ್ಲಿನ ಋಷಿಗಳಿಗೆ ಊಟವನ್ನು ಒದಗಿಸಿ ಬದುಕಿಸಿದ.

ಜಮದಗ್ನಿ:  ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದಸಪ್ತರ್ಷಿಗಳಲ್ಲಿ ಒಬ್ಬ. ರೇಣುಕಾದೇವಿ ಈತನ ಪತ್ನಿ. ಈತನಿಗೆ ಐದು ಜನ ಮಕ್ಕಳಿದ್ದರು. ವಿಷ್ಣುವಿನ ಅವತಾರವಾದಪರಶುರಾಮ ಈತನ ಕೊನೆಯ ಮಗ.

ವಸಿಷ್ಠ: ಬ್ರಹ್ಮರ್ಷಿ, ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬ. ಅರುಂಧತಿ ಈತನ ಪತ್ನಿ. ಇವರಿಬ್ಬರ ಮಗ ಶಕ್ತಿ. ಶಕ್ತಿಯ ಪತ್ನಿ ಅದೃಶ್ಯಂತಿ. ಇವರ ಮಗ ಪರಾಶರ. ಪರಾಶರನಿಗೆ ಮತ್ಸ್ಯಗಂಧಿಯಲ್ಲಿ ಜನಿಸಿದವ ವೇದವ್ಯಾಸ. ವಸಿಷ್ಠ ಯಜ್ಞದಲ್ಲಿ ತೊಡಗಿದ್ದಾಗ, ಜರೂಥನೆಂಬ ರಾಕ್ಷಸ ಅದನ್ನು ಕೆಡಿಸಲು ಯತ್ನಿಸಿದಾಗ ವಸಿಷ್ಠ ಅಗ್ನಿಯ ಸಹಾಯದಿಂದ ಅವನನ್ನು ಕೊಲ್ಲಿಸಿದ. ಕಾರ್ತವೀರ್ಯಾರ್ಜುನ ವಸಿಷ್ಠನ ಆಶ್ರಮ ದಹಿಸಿದ್ದರಿಂದ ವಸಿಷ್ಠ ಅವನಿಗೆ ಶಾಪ ಕೊಟ್ಟ. ವಸಿಷ್ಠ ತನ್ನ ತೇಜಸ್ಸಿನಿಂದ ರಾಕ್ಷಸರನ್ನು ನಿಗ್ರಹಿಸಿ ಇಂದ್ರನನ್ನು ಕಾಪಾಡಿದ. ವಸಿಷ್ಠನ ಬಳಿ ಇದ್ದ ನಂದಿನಿಧೇನುವನ್ನು ಪಡೆಯಲಾರದೆ ವಿಶ್ವಾಮಿತ್ರ ವಸಿಷ್ಠನನ್ನು ದ್ವೇಷಿಸುವುದರೊಂದಿಗೆ ಬ್ರಹ್ಮರ್ಷಿಯಾಗಲು ಘೋರತಪಸ್ಸನ್ನು ಮಾಡಿ ವಸಿಷ್ಠನ ಅನುಗ್ರಹದಿಂದಲೇ ಬ್ರಹ್ಮರ್ಷಿಯಾದ.

ಅಗಸ್ತ್ಯ: ವೇದೋಕ್ತನಾದ ಈ ಬ್ರಹ್ಮರ್ಷಿಗೆ ಕುಂಭಸಂಭವ, ಕಳಶಯೋನಿಜ ಎಂಬ ಹೆಸರುಗಳೂ ಉಂಟು. ತಂದೆ ಪುಲಸ್ತ್ಯ. ತಾಯಿ ಕರ್ದಮಬ್ರಹ್ಮನ ಮಗಳಾದ ಹವಿರ್ಭುಕ್. ಪಿತೃಗಳ ಕೋರಿಕೆಯ ಮೇಲೆ ಸಂತಾನಪ್ರಾಪ್ತಿಗಾಗಿ ಲೋಪಾಮುದ್ರೆ ಎಂಬ ಕನ್ನಿಕೆಯನ್ನು ಸೃಜಿಸಿ ಮದುವೆಯಾದ. ಇವನ ಮಗ ದೃಢಸ್ಯು ಅಥವಾ ಇಧ್ಮವಾಹ. ಇಲ್ವಲ ವಾತಾಪಿ ಎಂಬ ದೈತ್ಯರನ್ನು ಕೊಂದದ್ದು, ಇಂದ್ರಪದವಿ ದೊರಕಿತೆಂಬ ಕಾರಣದಿಂದ ಮತಾಂಧನಾಗಿ ಋಷಿಗಳಿಂದ ತನ್ನ ರಥವನ್ನೆಳೆಸಿದ ನಹುಷನ ಪದಚ್ಯುತಿ, ವಿಂಧ್ಯಪರ್ವತ ಮೇರುವಿನಷ್ಟಾಗಬೇಕೆಂಬ ಉದ್ದೇಶದಿಂದ ಬೆಳೆಯುತ್ತಿದ್ದುದನ್ನು ತಡೆಗಟ್ಟಿದ್ದು, ಸಮುದ್ರಗರ್ಭ ದಲ್ಲಿ ಅಡಗಿಕೊಂಡಿದ್ದ ಕಾಲೇಯರೆಂಬ ರಾಕ್ಷಸರನ್ನು ಹೊರಗೆಡಹುವುದಕ್ಕಾಗಿ ಸಮುದ್ರವನ್ನೇ ಆಪೋಶನಯ ಮಾಡಿದ್ದು-ಇವೆಲ್ಲ ಅಗಸ್ತ್ಯನಿಂದಾದ ಲೋಕರಕ್ಷಣಾಕಾರ್ಯಗಳು.  ತಮಿಳು ನಾಡಿನ ಪೊದಿಯಲ್ ಬೆಟ್ಟದಲ್ಲಿ ನೆಲೆಸಿ ತಮಿಳುಭಾಷೆಗೆ ಜನ್ಮವಿತ್ತನೆಂದೂ ಅಗತ್ತಿಯಂ ಎಂಬ ಪ್ರಥಮ ತಮಿಳುವ್ಯಾಕರಣವನ್ನು ಬರೆದನೆಂದೂ ತಮಿಳು ಪ್ರಥಮ ಸಾಹಿತ್ಯ

ಮರೀಚಿ:. ಬ್ರಹ್ಮನ ಮಾನಸಪುತ್ರ. ಕಷ್ಯಪನ ತಂದೆ.  ದೇವ ಮತ್ತ ಅಸುರರ ತಾತ. 

ಪುಲಸ್ತ್ಯ: ಕೃತಯುಗದ ಅಂತ್ಯ ಭಾಗದಲ್ಲಿ ಮೇರುಪರ್ವತದ ತಪ್ಪಲಲ್ಲಿ ತಪಸ್ಸು ಮಾಡಿಕೊಂಡಿದ್ದ. ತೃಣಬಿಂದು ಮುನಿಯ ಮಗಳಾದ ಗೋ ಎಂಬಾಕೆಯನ್ನು ಮದುವೆಯಾದ. ವಿಶ್ರವಸ ಇವನ ಹಿರಿಯ ಮಗ. ಕಾರ್ತವೀರ್ಯಾರ್ಜುನನ ಮೇಲೆ ಯುದ್ಧಮಾಡಿ ಸೆರೆ ಸಿಕ್ಕ ರಾವಣನನ್ನು ಈತ ಬಿಡಿಸಿದ. ಕರ್ದಮ ಬ್ರಹ್ಮನ ಮಗಳಾದ ಹವಿರ್ಭುಕ್ ಎಂಬಾಕೆಯನ್ನು ಮದುವೆಯಾಗಿ ಅಗಸ್ತ್ಯನನ್ನು ಪಡೆದ. ಇಲಬಿಲೆ ಎಂಬಾಕೆಯಲ್ಲಿ ಕುಬೇರನನ್ನು ಕೇಶಿನಿ ಎಂಬಾಕೆಯಲ್ಲಿ ರಾವಣಾದಿಗಳನ್ನೂ ಪ್ರೀತಿ ಎಂಬಾಕೆಯಲ್ಲಿ ದಂಭೋಳಿಯನ್ನೂ ಪಡೆದ. ಸಂಧ್ಯಾ, ಪ್ರತೀಚ್ಯಾ ಎಂಬ ಇನ್ನಿಬ್ಬರು ಇವನ ಹೆಂಡತಿಯರು. ಭೂಪ್ರದಕ್ಷಿಣೆಯ ವಿಷಯವಾಗಿ ಈತ ಬ್ರಹ್ಮನೊಂದಿಗೆ ಸಂವಾದ ಮಾಡಿದ. ತನ್ನ ತಂದೆಯಾದ ಶಕ್ತಿಮುನಿಯನ್ನು ರಾಕ್ಷಸ ನುಂಗಿದನೆಂದು ಪರಾಶರಮುನಿ ರಾಕ್ಷಸಕುಲ ವಿನಾಶಕ್ಕೆಂದು ಯಜ್ಞ ಮಾಡತೊಡಗಿದಾಗ ಈತ ಅಲ್ಲಿಗೆ ಹೋಗಿ ಬೇಡಿ ಯಜ್ಞವನ್ನು ನಿಲ್ಲಿಸಿದ.

ಪುಲಹ: ಚತುರ್ಮುಖನ ಹೊಕ್ಕಳಿನಿಂದ ಜನಿಸಿದ ಒಬ್ಬ ಬ್ರಹ್ಮರ್ಷಿ. ಈತನು ಕರ್ದಮ ಬ್ರಹ್ಮನ ಮಗಳಾದ ಗತಿಯೆಂಬವಳನ್ನು ಮದುವೆಯಾಗಿ ಕರ್ಮಶ್ರೇಷ್ಠ, ವರೀಯಸ್‌, ಸಹಿಷ್ಣು ಎಂಬ ಮೂವರು ಪುತ್ರರನ್ನು ಪಡೆದನು.

ಕೃತು: ಸಪ್ತರ್ಷಿಗಳಲ್ಲಿ ಒಬ್ಬನಾದ ಸ್ವಯಂಭೂ ಮನ್ವಂತರದಲ್ಲಿ ಈತ ಪ್ರಜಾಪತಿ. ದಕ್ಷನ ಅಳಿಯ. ಈತನ ಪತ್ನಿ ಸಂತತಿ. ಇವರಿಗೆ 60000 ಮಕ್ಕಳಿದ್ದರಂತೆ.  ಕೃತುವಿಗೆ ಪುಣ್ಯ ಮತ್ತು ಸತ್ಯವತಿ ಎಂಬ ಇಬ್ಬರು ಸಹೋದರಿಯರಿದ್ದರು. 

ಪ್ರಚೇತಸ: ಪೃಥು ಚಕ್ರವರ್ತಿಯ ವಂಶಸ್ಥನಾದ ಪ್ರಾಚೀನ ಬರ್ಹಿ ಮತ್ತು ಶತದೃತಿಗಳ ಮಗ. ವೃಕ್ಷಗಳ ಕನ್ಯೆಯಾದ ಮಾರಿಷೆಯನ್ನು ಮದುವೆಯಾಗಿ ದಕ್ಷ ಪ್ರಜಾಪತಿಯನ್ನು ಪಡೆದ. ಇದು ಭಾರತ ಭಾಗವತಗಳಿಂದ ತಿಳಿದು ಬರುವ ವಿಷಯ. ಪ್ರಾಚೇತಸರು ಹನ್ನೊಂದು ಮಂದಿ. ಇವರು ಶಿವನನ್ನು ತಪಸ್ಸಿನಿಂದ ಮೆಚ್ಚಿಸಿ ಅವನಿಂದ ಪ್ರಜಾಧಿಪತ್ಯವನ್ನು ಬಯಸಿದರು. ಶಿವನಾದರೋ "ನಿಮಗೆ ಪ್ರಜಾಧಿಪತ್ಯ ದೊರೆಯಲಾರದು. ನಿಮ್ಮ ಪುತ್ರನಾದ ದಕ್ಷನಿಗೆ ಪ್ರಜಾಧಿಪತ್ಯ ದೊರೆಯುವುದು" ಎಂದು ಹೇಳಿ ಅದೃಶ್ಯನಾದ. ಇದಾದ ಅನಂತರ ಪ್ರಾಚೇತಸರು ಹಿಂದಿರುಗುವಾಗ ಲೋಕದಲ್ಲೆಲ್ಲ ಮರಗಳು ಬೆಳೆದುಕೊಂಡು, ಲೋಕವೇ ಅರಣ್ಯಮಯವಾಗಿತ್ತು. ಇದನ್ನು ಕಂಡು ಕ್ಷುದ್ರರಾದ ಪ್ರಾಚೇತಸರು ಮರಗಳನ್ನೆಲ್ಲ ಕಡಿಯತೊಡಗಿದರು. ಆಗ ವೃಕ್ಷಗಳು ಓಷಧೀಶನಾದ ಚಂದ್ರನಿಗೆ ಮೊರೆಯಿಟ್ಟುವು. ಚಂದ್ರ ಬಂದು ಪ್ರಾಚೇತಸರನ್ನು ಶಾಂತಗೊಳಿಸಿ ಅವರಿಗೆ ಅರಣ್ಯ ಮಂತ್ರಿಯಾದ ಮಾರಿಷೆಯನ್ನು ಕೊಟ್ಟು ವಿವಾಹ ಮಾಡಿಸಿದ. ಅವರ ಮಗನಾದ ದಕ್ಷ ಪ್ರಜಾಪತಿಯಾದ. ಈ ವಿಷಯ ವಿಷ್ಣು ಪುರಾಣದಲ್ಲಿದೆ.

ಭೃಗು: ಬ್ರಹ್ಮನ ಹೃದಯದಿಂದ ಹುಟ್ಟಿದ ಈತ ಸ್ವಾಯಂಭು ಮನ್ವಂತರದವ. ಈತನ ವಂಶದವರೇ ಭಾರ್ಗವರು. ಈತನಿಗೆ ಖ್ಯಾತಿ ಎಂಬವಳು ಪತ್ನಿ. ಈಕೆಗೆ ಲಕ್ಷ್ಮಿ ವರನೀಡಿ ಅದನ್ನು ನೆರವೇರಿಸಲು ಈಕೆಯ ಉದರಲ್ಲಿ ಮಗಳಾಗಿ ಜನಿಸಿದಳು. ಅದರಿಂದ ಭಾರ್ಗವೀ ಎಂದೂ ಹೆಸರಾಯಿತು. ಭೃಗುವಿಗೆ ಖ್ಯಾತಿಯ ಗರ್ಭದಲ್ಲಿ ಧಾತ ವಿಧಾತರೆಂಬ ಪುತ್ರರೂ ಜನಿಸಿದರು.ಇವರಲ್ಲಿ ಪ್ರಣುಂಡ, ಮೃಕಂಡು,ಮಾರ್ಕಂಡೇಯ, ಭವನಾರಾಯಣ ಮತ್ತು ಜನಿಸಿದರು ಇವರೆಲ್ಲ ಭಾರ್ಗವ ಪದ್ಮಶಾಲಿಗಳೆಂದು ಕರೆಯಲಾಗುತ್ತದೆ.

ನಾರದ: ಬಹುಪಾಲು ಪುರಾಣಗಳಲ್ಲಿ ಕಾಣಿಸಿಕೊಳ್ಳುವ ಪಾತ್ರ. ನಾರದರನ್ನು ಕುರಿತು ಜನ ಸಾಮಾನ್ಯರಲ್ಲಿ ಹಲವು ಕಲ್ಪನೆಗಳು ರೂಢವಾಗಿವೆ. ಈತ ಮಹಾನ್ ಭಕ್ತ. ಭಗವದ್ಗೀತೆ ನಾರದರನ್ನು ದೇವರ್ಷಿ ಎಂದು ಬಣ್ಣಿಸಿದೆ. ಹಾಗೆ ನೋಡಿದರೆ ಈತನ ಉಲ್ಲೇಖ ವೇದಕಾಲದಿಂದ ಹಿಡಿದು ಪುರಾಣ ಪುಣ್ಯಕಥೆಗಳಲ್ಲಿಯೂ ಕಂಡುಬರುವುದು.


ಮುಂದಿನ ದಿನಗಳಲ್ಲಿ ಇವರ ಕುರಿತು ಹೆಚ್ಚು ಅರಿಯಲು ಯತ್ನಿಸೋಣ

Rishis or the Great Saints 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ