ಗುರುವಾರ, ಅಕ್ಟೋಬರ್ 31, 2013

ಉದಯವಾದ ನಮ್ಮ ಕನ್ನಡ ನಾಡು

ಉದಯವಾದ ನಮ್ಮ ಕನ್ನಡ ನಾಡು

ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆಯನ್ನು ಆಡುವ ಜನ ವಿಶೇಷವಾಗಿ ವಾಸ ಮಾಡುತ್ತಿರುವ ಪ್ರದೇಶವನ್ನು ಕನ್ನಡ ನಾಡು ಎಂದು ವ್ಯವಹರಿಸುತ್ತೇವೆ.  ಈ ನಾಡಿಗೆ ಪ್ರಾಚೀನವೂ ಉಜ್ವಲವೂ ಆದ ಇತಿಹಾಸವಿದೆ, ಸಂಸ್ಕೃತಿ ಸಾಹಿತ್ಯಗಳ ಪರಂಪರೆಯಿದೆ. 

ವೈಭವದ ವಿಜಯನಗರ ಸಾಮ್ರಾಜ್ಯ ಅಸ್ತಮಿಸಿದ ಅನಂತರದಲ್ಲಿ, ಕನ್ನಡ ರಾಜ್ಯದ ಎಲ್ಲೆಕಟ್ಟುಗಳು ಬಹುವಾಗಿ ಕುಗ್ಗಿಹೋದುವು.  ಆದರೆ ಯಾದವ ವಂಶದವರೆಂದು ತಮ್ಮನ್ನು ಕರೆದುಕೊಳ್ಳುವ ಒಡೆಯರ ಕಾಲದಲ್ಲಿ, ಮೈಸೂರು ಸಂಸ್ಥಾನವೆಂಬ ಹೆಸರಿನಲ್ಲಿ, ಈ ರಾಜ್ಯ ಮತ್ತೆ ತಲೆಯೆತ್ತಿತು.  ಈ ಸಂಸ್ಥಾನವೂ ಆಗಾಗ ಹಿಗ್ಗು ಕುಗ್ಗುಗಳನ್ನು ಕಂಡಿತು.  19ನೆಯ ಶತಮಾನದ ಹೊತ್ತಿಗೆ ಮೈಸೂರು ಸಂಸ್ಥಾನ ಮತ್ತು ಕೊಡಗು ರಾಜ್ಯಗಳು ಮಾತ್ರ ಪೂರ್ಣ ಕನ್ನಡ ಮಾತನ್ನಾಡುವ ಪ್ರದೇಶವಾಗಿದ್ದು, ಪರಂಪರೆಯ ಹಾಗೂ ಇತಿಹಾಸದ ಕನ್ನಡ ನಾಡಿನ ಹೆಚ್ಚಿನ ಭಾಗಗಳು ಮದರಾಸು ಪ್ರಾಂತ್ಯ, ಮುಂಬಯಿ ಪ್ರಾಂತ್ಯ ಹಾಗೂ ಹೈದರಾಬಾದಿನ ಸಂಸ್ಥಾನಗಳ ಆಳ್ವಿಕೆಗೆ ಸೇರಿಹೋಗಿದ್ದುವು.  ಹೀಗೆ ಸೇರಿಹೋಗಿದ್ದ ಭಾಗಗಳನ್ನು, ಭಾಷೆಯ ಆಧಾರದ ಮೇಲೆ ಮತ್ತೆ ಒಂದುಗೂಡಿಸಿಕೊಳ್ಳಲು ದೇಶಾಭಿಮಾನಿಗಳೂ ಭಾಷಾಭಿಮಾನಿಗಳೂ ಆದ ಕನ್ನಡ ಜನರು ಈಗ್ಗೆ ಸುಮಾರು ನೂರು ವರ್ಷಗಳಷ್ಟು ಹಿಂದೆಯೇ ಪ್ರಯತ್ನಗಳನ್ನು ಮಾಡತೊಡಗಿದರು.  ಈ ಪ್ರಯತ್ನಗಳು ಘಟ್ಟ ಘಟ್ಟಗಳಲ್ಲಿ ಬೆಳೆದು, ಕರ್ನಾಟಕ ಏಕೀಕರಣವೆಂಬ ಹೋರಾಟವಾಗಿ ಬಲಿದು ಬಲಗೊಳ್ಳುತ್ತ ನಡೆದು, ೧೯೫೬ರ ನವೆಂಬರ್ ೧ ರಂದು ಹಳೆಯ ಮೈಸೂರು ಸಂಸ್ಥಾನವೆಂಬುದರ ಸ್ಥಾನದಲ್ಲಿ ನವಮೈಸೂರು ರಾಜ್ಯ ಉದಯಿಸಿತು.

ಈ ನವಮೈಸೂರು ರಾಜ್ಯದಲ್ಲಿ ಸಮಾವೇಶಗೊಂಡ ಪ್ರದೇಶಗಳು ಹೀಗಿವೆ:

೧. ಹಳೆಯ ಮೈಸೂರು ಸಂಸ್ಥಾನ, ಬಳ್ಳಾರಿ;
೨. ಮುಂಬಯಿ ರಾಜ್ಯದ (ಚಂದಗಡ ತಾಲ್ಲೂಕನ್ನು ಬಿಟ್ಟು) ಬೆಳಗಾವಿ ಜಿಲ್ಲೆ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು;
೩. ಹೈದರಾಬಾದ್ ಸಂಸ್ಥಾನದ ಗುಲ್ಬರ್ಗ ಜಿಲ್ಲೆ (ಕೋಡಂಗಲ್, ತಾಂಡೂರು ತಾಲ್ಲೂಕುಗಳನ್ನು ಬಿಟ್ಟು) ಮತ್ತು ರಾಯಚೂರು ಜಿಲ್ಲೆ (ಆಲಂಪುರ, ಗದ್ದಾಲ್ ತಾಲ್ಲೂಕುಗಳನ್ನು ಬಿಟ್ಟು) ಹಾಗೂ ಬಿದರೆ ಜಿಲ್ಲೆಯ ಬಿದರೆ, ಭಾಲ್ಕಿ, ಸಂತಪುರ ಹುಮ್ನಾಬಾದ್ ತಾಲ್ಲೂಕುಗಳು;
೪. ಮದರಾಸು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು, ಅಮೀನ್ ದೇವಿ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು;
೫. ಕೊಡಗು
ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಡಳಿತದ ಕಾರಣಗಳಿಂದ ಈಗಿನ ಕರ್ನಾಟಕಕ್ಕೆ ಸೇರಬೇಕಾಗಿದ್ದ ಇನ್ನೂ ಕೆಲವು ಭಾಗಗಳು ಹಾಗೆ ಸೇರದೆ ಬಿಟ್ಟು ಹೋಗಿವೆಯೆಂದು ಭಾವಿಸಲಾಗಿದೆ.  ಕಾಸರಗೋಡು, ನೀಲಗಿರಿ, ಹೊಸೂರು, ತಾಳವಾಡಿ, ಮಡಶಿರ, ಆಲೂರು, ಆದವಾನಿ, ರಾಯದುರ್ಗ, ದೇಗಲೂರು, ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಗಡಹಿಂಗ್ಲ ಇವು ಆ ಭಾಗಗಳು.  ಮಹಾರಾಷ್ಟ್ರ – ಕರ್ನಾಟಕ ಗಡಿವಿವಾದವನ್ನು ಪುನರ್ವಿಮರ್ಶಿಸಿ ಇತ್ಯರ್ಥಪಡಿಸಲು ನೇಮಕವಾಗಿದ್ದ ‘ಮಹಾಜನ ಆಯೋಗ’ ಅಕ್ಕಲಕೋಟೆ, ಜತ್ತ ಮತ್ತು ಕಾಸರಗೋಡುಗಳು ಕರ್ನಾಟಕಕ್ಕೂ ನಿಪ್ಪಾಣಿ, ಖಾನಾಪುರ, ಹಳಿಯಾಳ ಮೊದಲಾದುವು ಮಹಾರಾಷ್ಟ್ರಕ್ಕೆ ಸೇರಬೇಕೆಂದೂ ಬೆಳಗಾಂವಿ ಮೈಸೂರಿನಲ್ಲೇ ಉಳಿಯಬೇಕೆಂದೂ ತೀರ್ಪು ನೀಡಿತು.  ಆದರೆ ಗಡಿಹೊಂದಾಣಿಕೆಗಳ ಬಗ್ಗೆ ಇನ್ನೂ ತೀರ್ಮಾನ ಸಾಧ್ಯವಾಗಿಲ್ಲ.

ನವ ಮೈಸೂರು ರಾಜ್ಯ ಉದಯಗೊಂಡು, ಇತಿಹಾಸ ಪ್ರಸಿದ್ಧವಾದ ಕನ್ನಡ ರಾಜ್ಯದ ಹಳೆಯ ಗಡಿಗಳು ಕೆಲಮಟ್ಟಿಗಾದರೂ ಕೂಡಿಕೊಳ್ಳುವಂತಾದ ಮೇಲೆ, ಸಹಜವಾಗಿಯೇ ಇದು ಕರ್ನಾಟಕವೆಂಬ ಹಳಮೆಯ, ಹೆಮ್ಮೆಯ ಹೆಸರನ್ನು ಪಡೆದುಕೊಳ್ಳಲು ಸಿದ್ಧವಾದಂತೆ ಆಯಿತು.  ಇದಕ್ಕಾಗಿ ಪ್ರತ್ಯೇಕವಾದ ಪ್ರಯತ್ನಗಳು ಸಾಹಿತಿಗಳ ಕಡೆಯಿಂದಲೂ ಸಾಮಾನ್ಯ ಜನತೆಯ ಕಡೆಯಿಂದಲೂ ನಿರಂತರವಾಗಿ ನಡೆಯತೊಡಗಿತು.  ಈ ಪ್ರಯತ್ನಗಳು ಹೆಚ್ಚು ಉದ್ರೇಕಕ್ಕೆ ಅವಕಾಶ ಕೊಡದ ಹೋರಾಟವಾಗಿ ಪರಿಣಮಿಸಿ, ಕಡೆಗೆ ಫಲಿಸಿ, ಮೈಸೂರು ರಾಜ್ಯವಾಗಿದ್ದ ಕನ್ನಡನಾಡು ಈಗ ೧೯೭೩ರ ನವೆಂಬರ್ ೧ ರಿಂದ ಕರ್ನಾಟಕ ಎಂಬ ಹೆಸರಿನಲ್ಲಿ ಬೆಳಗುತ್ತಿದೆ.  ಅನಧಿಕೃತವಾಗಿ ಕನ್ನಡ ಜನರ ವ್ಯವಹಾರದಲ್ಲಿ ಎಂದಿನಿಂದಲೂ ರೂಢಿಯಲ್ಲಿದ್ದ, ದೇಶ, ಭಾಷೆ ಹಾಗೂ ಜನಸಮುದಾಯದ ಅಭಿಮಾನದ ಸಂಕೇತವಾಗಿದ್ದ ಆ ಹೆಸರು ಈಗ ಅಧಿಕೃತವಾಗಿಯೂ ವ್ಯವಹಾರಗೊಳ್ಳುವುದಕ್ಕೆ ಸಾಧ್ಯವಾಯಿತು.

ಇನ್ನೂ ಈಚೆಗೆ, ೧೯೭೯ ರ ನವೆಂಬರ್ ೧ ರಿಂದ, ಕರ್ನಾಟಕಭಾಷೆ ಕನ್ನಡವೆಂದು ಅಧಿಕೃತವಾಗಿ ಘೋಷಿಸಲ್ಪಟ್ಟಿತು.


ಮಾಹಿತಿ ಕೃಪೆ: ನಮ್ಮ ಕರ್ನಾಟಕ, ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ.

Tag: Udayavaada namma kannada naadu