ವಿಜಯಲಕ್ಷ್ಮಿ ಬಾಳೆಕುಂದ್ರಿ
ವಿಜಯಲಕ್ಷ್ಮಿ ಬಾಳೇಕುಂದ್ರಿ
ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು ವೈದ್ಯರಾಗಿ ಮತ್ತು ಸಾಹಿತಿಯಾಗಿ ಹೆಸರಾಗಿರುವವರು.
ವಿಜಯಲಕ್ಷ್ಮಿ ಬಾಳೇಕುಂದ್ರಿಯವರು 1950ರ ಆಗಸ್ಟ್ 6ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು.
ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಹುಬ್ಬಳ್ಳಿಯ ಕೆ.ಎಂ.ಸಿ. ಕಾಲೇಜಿನಿಂದ ಎಂ.ಬಿ.ಬಿ.ಎಸ್. ಪದವಿ ಪಡೆದು ಮುಂದೆ ಬೆಂಗಳೂರಲ್ಲಿ ಎಂ.ಡಿ ಪದವಿ ಪಡೆದರು. ಮುಂದೆ ಡಿ.ಎಂ. ಕಾರ್ಡಿಯಾಲಜಿಯಲ್ಲಿ ಕರ್ನಾಟಕದ ಪ್ರಪ್ರಥಮ ಮಹಿಳಾ ಹೃದಯ ತಜ್ಞೆ ಎನಿಸಿಕೊಂಡರು. 1998ರಲ್ಲಿ ದೆಹಲಿಯ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್ ಮತ್ತು ಆಲ್ ಇಂಡಿಯಾ ಮೆಡಿಕಲ್ ಸೈನ್ಸಸ್‌ನಿಂದ ವಿಶೇಷ ತರಬೇತಿ ಪಡೆದಿದ್ದಲ್ಲದೆ ಅಮೆರಿಕದ ಮಿನಿಯ ಪೊಲಿಸ್, ರಾಚೆಸ್ಟರ್, ಬಾಸ್ಟನ್, ಚಿಕಾಗೋಗಳಲ್ಲೂ ವಿಶೇಷ ತರಬೇತಿ ಪಡೆದು ಬಂದರು.
ವೈದ್ಯಕೀಯ ಸೇವೆಗಾಗಿ ಹುಬ್ಬಳ್ಳಿಯ ಕೆ.ಎಂ.ಸಿ. ಮೆಡಿಕಲ್ ಕಾಲೇಜಿನಲ್ಲಿ, ನಂತರ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜ್, ರಾಜಾಜಿನಗರದ ಇ.ಎಸ್.ಐ. ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿ ಮುಂದೆ ಜಯದೇವ ಹೃದ್ರೋಗ ವಿದ್ಯಾಲಯದಲ್ಲಿ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ ಮಾಡಿದರು.
ಮೊದಲು ವಯಸ್ಕರಿಗಷ್ಟೇ ಹೃದಯ ಚಿಕಿತ್ಸೆಯಲ್ಲಿ ನಿರತರಾಗಿದ್ದ ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರನ್ನು ಮಕ್ಕಳ ಹೃದಯ ಚಿಕಿತ್ಸೆಯ ಕಡೆ ಗಮನ ಹರಿಸುವಂತೆ ಮಾಡಿದವರು ಸ್ನೇಹಿತೆ ಎಲಿಜಬೆತ್ ಬ್ರಾನ್‌ಲಿನ್ ಎಂಬಾಕೆ. ಇದರಿಂದ ಪ್ರೇರಿತರಾದ ಬಾಳೇಕುಂದ್ರಿಯವರು ಮಕ್ಕಳ ಹೃದಯದ ಸಮಸ್ಯೆಗಳತ್ತ ಮೊದಲ ಆದ್ಯತೆ ನೀಡಿ ಕರ್ನಾಟಕದಲ್ಲಿ ಮಕ್ಕಳ ಹೃದಯ ಚಿಕಿತ್ಸಾ ಕೇಂದ್ರವನ್ನು ಜಯದೇವ ಆಸ್ಪತ್ರೆಯಲ್ಲಿ ಪ್ರಾರಂಭಿಸುವಲ್ಲಿ ಯಶಸ್ವಿಯಾದರು. ಮಕ್ಕಳಲ್ಲಿ ಹುಟ್ಟಿನಿಂದಲೇ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಗುಣಪಡಿಸಲು ರಾಷ್ಟ್ರೀಯ ನಿಯಮವೊಂದನ್ನು ರೂಪಿಸುವಲ್ಲಿ ಶ್ರಮಿಸಿ, ಮಕ್ಕಳ ತಜ್ಞವೈದ್ಯರಿಗೆ ಹಾಗೂ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಡಿ. ಮತ್ತು ಡಿ.ಸಿ.ಎಚ್ ಅಧ್ಯಯನದಲ್ಲಿ ನಿರತರಾಗಿರುವವರಿಗೆ ಸೂಕ್ತ ತರಬೇತಿ ನೀಡತೊಡಗಿದರು.
ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಪ್ರಜಾವಾಣಿ ವಾಚಕರ ವಿಭಾಗಕ್ಕೆ ‘ಬಡವರ ಪ್ರಾಮಾಣಿಕತೆಗೆ ಬರ ಇಲ್ಲ’ ಎಂಬ ಲೇಖನ ಮೊದಲು ಬರೆದರು. ನಂತರ ಶಿಕ್ಷಣ, ಮದ್ಯಪಾನದ ಆಪತ್ತು, ಮಹಿಳೆಯರ ಹೊಣೆ ಹೀಗೆ ಹಲವು ಹತ್ತು ವಿಷಯಗಳ ಬಗ್ಗೆ ‘ಜೀವನಧಾರೆ’ ಎಂಬ ಅಂಕಣದಲ್ಲಿ ಬರೆದರು. ಇವು ಸಂಗ್ರಹ ರೂಪದಲ್ಲಿ ‘ಜೀವನಧಾರೆ’, ‘ಜೀವನ ಜ್ಯೋತಿ’, 'ಜೀವನ ಸಾಂತ್ವನ' ಮುಂತಾದ ಪುಸ್ತಕಗಳ ರೂಪದಲ್ಲಿ ಮೂಡಿದೆ.
ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ 'ಜೀವನ ಸಂಜೀವಿನಿ’ ಕೃತಿಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳಿವೆ. ಕೋಪಶಮನ, ನಗು, ಧ್ಯಾನ, ವ್ಯಾಯಾಮ, ರೂಢಿ, ಅಭ್ಯಾಸಗಳು, ಜೀವನಶೈಲಿ ಹೀಗೆ 10 ಅಧ್ಯಾಯಗಳಲ್ಲಿ ಸಾಮಾನ್ಯಜ್ಞಾನ, ವಿಜ್ಞಾನ, ಅಧ್ಯಾತ್ಮಿಕ ವಿಷಯಗಳ ಸಂಮಿಶ್ರಣದೊಂದಿಗಿನ ವಿಷಯಗಳು ಇದರಲ್ಲಿವೆ. ಇವರ ಇತರ ಕೃತಿಗಳಲ್ಲಿ ಸಮಾಜ ವಿಕಾಸಕ್ಕೆ ಶರಣ ಸಂಸ್ಕೃತಿ, ಕಾಯಕ ಯೋಗಿ ಬಾಳೇಕುಂದ್ರಿ, ಶರಣ ಶಿರೋಮಣಿ ಅಕ್ಕನಾಗಮ್ಮ, ಕರ್ನಾಟಕದ ವೀರವನಿತೆಯರು, ಮಕ್ಕಳಲ್ಲಿ ಜನನದಿಂದ ಬರುವ ಹೃದಯದ ಕಾಯಿಲೆ ಮತ್ತು ವಿಜಯ, ಸಮೃದ್ಧ ಕರ್ನಾಟಕಕ್ಕೆ ಸದೃಢ ಹೃದಯ, ನಮ್ಮ ಹೃದಯ, ನಮ್ಮ ಹೃದಯ ಅಮೂಲ್ಯ ಆಸ್ತಿ, ಹೃದಯದ ಕಥೆ ಮತ್ತು ವ್ಯಥೆ ಮುಂತಾದವು ಸೇರಿವೆ. ಇದಲ್ಲದೆ ಮಕ್ಕಳಿಗಾಗಿ ಪುಟಾಣಿ ಪದಗಳು, ಕನ್ನಡ ಕಂದಮ್ಮನ ಕವನಗಳು, ಹನಿಗವನ, ಭಕ್ತಿಗೀತೆ, ಭಾವಗೀತೆಗಳು, ರುಮ್ಯಾಟಿಕ್ ಫೀವರ್ ಅಂಡ್ ರುಮ್ಯಾಟಿಕ್ ಹಾರ್ಟ್ ಡಿಸೀಸಸ್ ಮತ್ತು ಹೃದ್ರೋಗ ತಜ್ಞರಿಗಾಗಿ ಬರೆದ ಕೃತಿ ‘ಸ್ಬೆಪ್ ಬೈ ಸ್ಟೆಪ್ ಟು ಎಕೊ ಕಾರ್ಡಿಯೊಗ್ರಾಂ’ ಕೃತಿಗಳೂ ಇವೆ.
ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ನೂರಾರು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ವಿಶ್ವದೆಲ್ಲೆಡೆ ಪ್ರಸ್ತುತಪಡಿಸಿದ್ದಾರೆ.
ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿಯವರಿಗೆ ಡಾ.ಬಿ.ಸಿ. ರಾಯ್ ಪ್ರಶಸ್ತಿ , ಜೀವನ ಸಾಧನೆಗಾಗಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ, ರಾಷ್ಟ್ರಪತಿಗಳ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ವಿಶ್ವಮಾನವ ಪ್ರಶಸ್ತಿ, ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ, ಡಾ. ವಿಜಯಾ ಶ್ರೀನಿವಾಸ್ ಸ್ಮಾರಕ ಪ್ರಶಸ್ತಿ, ಬಸವೇಶ್ವರ ಸಮಿತಿಯ ಕಾಯಕಶ್ರೀ ಪ್ರಶಸ್ತಿ, ರಾಜ್ಯ ಭೂಷಣ ಪ್ರಶಸ್ತಿ, ಮುಂತಾದ ಹಲವಾರು ಗೌರವಗಳು ಸಂದಿವೆ.
On the birth day of First Lady cardiologist in Karnataka and popular writer Dr. Vijayalakshmi Balekundri
ಕಾಮೆಂಟ್‌ಗಳು