ಗುರುವಾರ, ಜನವರಿ 16, 2014

ರಾಜು ಅನಂತಸ್ವಾಮಿ ನೆನಪು

ರಾಜು ಅನಂತಸ್ವಾಮಿ

ಕನ್ನಡ ಸುಗಮಸಂಗೀತ ಲೋಕದಲ್ಲಿ ಅಪಾರ  ಭರವಸೆ ಮೂಡಿಸಿದ್ದ ರಾಜು ಅನಂತಸ್ವಾಮಿ ಈ ಲೋಕವನ್ನಗಲಿ ಐದು ವರ್ಷಗಳು ಕಳೆದು ಹೋಯಿತು (17.01.2009).   ಪುಟ್ಟವಯಸ್ಸಿನಲ್ಲೇ ವಾದ್ಯವಾದನ, ಗಾಯನ, ಇವೆಲ್ಲವುಗಳನ್ನು ತಮ್ಮ ತಂದೆಯವರೊಂದಿಗೆ ನಿಷ್ಠೆಯಿಂದ ಕಲಿತ ಈ ಹುಡುಗ ಮುಂದೆ ಅವರದ್ದೇ ದನಿ ಪುನಃ ಧರೆಗಿಳಿದಿದೆಯಲ್ಲ ಎಂಬ ಆಶ್ಚರ್ಯ ಪ್ರೀತಿ ಭರವಸೆಗಳನ್ನೆಲ್ಲಾ ನಾಡಿನಲ್ಲಿ ಹಬ್ಬಿಸಿಬಿಟ್ಟಿದ್ದ.

ಮೈಸೂರು ಅನಂತಸ್ವಾಮಿಯವರ ಮಗನಾಗಿ ಅವರ ಕೀರ್ತಿ ಪತಾಕೆಯನ್ನು ಎಲ್ಲೆಡೆಯಲ್ಲಿ ಅವರ ಕ್ಯಾಸೆಟ್, ಸಿ.ಡಿಗಳ ಮೂಲಕ ತಲುಪಿಸುವುದು ಮಾತ್ರವಲ್ಲದೆ ಅವರದೇ ಧಾಟಿಯಲ್ಲಿ ಹಾಡಿಕೂಡ ಇಂದಿನ ಪೀಳಿಗೆಯವರಿಗೆ ಅನಂತಸ್ವಾಮಿಯವರ ಗಾಯನದ ಅನಂತತೆಯನ್ನು ಪರಿಚಯಿಸಿದ ಈ ಹುಡುಗ.

ಈತನ ಚುರುಕುತನ, ಹಾಸ್ಯಪ್ರಜ್ಞೆ ಇವುಗಳನ್ನೆಲ್ಲ ಕಂಡವರು ಇಂತಹ ಚಿನಕುರುಳಿ ಅಭಿನಯದಲ್ಲಿ ಮೂಡಿದರೆ ಚೆನ್ನ ಎಂದು ಹಲವಾರು ಸಿನಿಮಾಗಳಲ್ಲಿ ಕೂಡ ಕರೆತಂದರು.  ಅವರ ನಿರೀಕ್ಷೆ ಹುಸಿಯಾಗಲಿಲ್ಲ.  ಅಲ್ಲೂ ಕೂಡ ತನ್ನ ಛಾಪನ್ನು ಮುದ್ರೆ ಒತ್ತಿಬಿಟ್ಟ.   ರತ್ನನ ಪದಗಳು ಈ ಹುಡುಗನ ಬಾಯಲ್ಲಿ ಕೇಳಿದರೆ ಅದೆಂತದ್ದೋ ಆನಂದ.  ತಮ್ಮ ತಂದೆಯಂತೆಯೇ ಹಾಡುತ್ತಿದ್ದರೂ ಅದಕ್ಕೆ ತನ್ನದೇ ಆದ ಮೆರುಗು ಕೂಡ ನೀಡಿದ್ದ.

ಈಗಲೂ ಯಾವ ಮೋಹನ ಮುರಳಿ ಕರೆಯಿತುಹಾಡನ್ನು ಈತ ಅಮೆರಿಕ ಅಮೆರಿಕಚಿತ್ರದಲ್ಲಿ ತನ್ನ ಅಂತರಾಳದ ಆಳದಲ್ಲಿ ಹಾಡಿರುವ ರೀತಿ ನಮ್ಮನ್ನು ವಿಸ್ಮಯಲೋಕಕ್ಕೆ ಕರೆದೊಯ್ಯುವಂತಿದೆ.  ರತ್ನಮಾಲ ಅವರೊಡನೆ ಆತ ಹಾಡಿರುವ ಮತ್ತದೇ ಬೇಸರ ನಮ್ಮನ್ನು ಅಂತರ್ಮುಖರನ್ನಾಗಿ ಮಾಡಿಸಿಬಿಡುತ್ತದೆ.  ರತ್ನನಪದ ಹಾಡುವಲ್ಲಿ ಆತನ ಲವಲವಿಕೆ ಕುಣಿದು ಕುಪ್ಪಳಿಸುವಂತೆ ಮಾಡುವಂತದ್ದು.  ಬನ್ನಿ ಹರಸಿರಿ ತಂದೆಯೇ ಎಂದು ಹೇಳುವಲ್ಲಿ ಮೇಲಿದ್ದ ತಂದೆಯನ್ನು ಭಕ್ತಿಭಾವದಿಂದ ಕರೆತರುವಂತಿದೆ.  ಮುಚ್ಚು ಮರೆಯಿಲ್ಲದೆಯೇ ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೇ ಅಂತರಾತ್ಮಎಂದು ಹಾಡುವಾಗ ಆತ ತನ್ನಾತ್ಮವನ್ನೇ ತೆರೆದಿಡುತ್ತಿದ್ದ.   ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆಯಿಲ್ಲ. ಆದರೆ ಕೊನೆ ಎಂಬುದು ಅಷ್ಟು ಬೇಗ ಒಳ್ಳೆಯದಕ್ಕೆ ಮಾತ್ರ ಬರುತ್ತದೆ ಎಂಬುದು ಮಾತ್ರ ದುರ್ವಿಧಿ.

ತಾನು ಮಾಡಿದ್ದನ್ನೆಲ್ಲ ಎಲ್ಲರಿಗೂ ಇಷ್ಟವಾಗುವಂತೆ ಮಾಡಿದ್ದ ಈ ಹುಡುಗ ತನ್ನನ್ನು ಮಾತ್ರ ಅಷ್ಟು ಬೇಗ ಕಳೆದುಕೊಳ್ಳಲು ಅದ್ಯಾವ ಮುರಳಿ ಈತನನ್ನು ಪ್ರೇರೇಪಿಸಿಬಿಟ್ಟಿತೊ!  ಅಂದು  ಆ ಸಮಯದಲ್ಲಿ ಸಿ. ಅಶ್ವಥ್ ಹೇಳಿದ ಮಾತು ನೆನಪಾಗುತ್ತದೆ.  ಆತನ ಪ್ರತಿಭೆ ಅಗಾಧವಾದದ್ದು.  ಅವೆಲ್ಲವೂ ಪೂರ್ಣ ಹೊರಬರುವುದಕ್ಕೆ ಮುಂಚೆಯೇ ನಡೆದುಬಿಟ್ಟ”.  ಅನಂತಸ್ವಾಮಿಗಳ ಹೆಸರನ್ನು ತನ್ನೊಡನೆ ಅನಂತತೆಗೆ ಏರಿಸಿಬಿಟ್ಟು ತನ್ನ ಪಾಡಿಗೆ ನಡೆದುಬಿಟ್ಟ ಈ ರಾಜು ಅನಂತಸ್ವಾಮಿ.


ಅಂದಿನ ದಿನಗಳಲ್ಲಿ ಮಳೆಯಲ್ಲಿ ನಿಂತು ಅನಂತಸ್ವಾಮಿಗಳು ಹಾಡು ಕೇಳಿದ ದಿನಗಳನ್ನು ಮರೆಯಲಾಗುತ್ತಿಲ್ಲ. ಅಂತೆಯೇ ಈ ರಾಜು ಅನಂತಸ್ವಾಮಿ ಹಾರಿಸಿದ ಗಾಯನ ವರ್ಷಧಾರೆಯನ್ನು ಕೂಡ, ಜೊತೆಗೆ ಬಲು ಬೇಗ ನಡೆದು ಉರುಳಿಸಿದ ಕಣ್ಣೀರಿನ ಹನಿಗಳನ್ನು ಕೂಡ.

ಕಾಮೆಂಟ್‌ಗಳಿಲ್ಲ: