ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜು ಅನಂತಸ್ವಾಮಿ ನೆನಪು

ರಾಜು ಅನಂತಸ್ವಾಮಿ

ರಾಜು ಅನಂತಸ್ವಾಮಿ ನಮ್ಮ ನಾಡು ಕಂಡ ಅಮೋಘ ಪ್ರತಿಭೆ. ಇಂದು ಅವರ ಸಂಸ್ಮರಣೆ ದಿನ. 

ರಾಜು ಅನಂತಸ್ವಾಮಿ ಅವರು ಹುಟ್ಟಿದ ದಿನ ಏಪ್ರಿಲ್ 19, 1972.   ಪ್ರತಿಭೆಯ ಅನಂತತೆಯ ಮಹಾನ್ ಶಿಖರ ಮೈಸೂರು ಅನಂತಸ್ವಾಮಿಗಳ ಮಗನಾದ ರಾಜು ಅನಂತಸ್ವಾಮಿ, ತಂದೆಯೊಂದಿಗೆ ಪುಟ್ಟ ಹುಡುಗನಾಗಿದ್ದಾಗಲೇ  ತಬಲಾದಲ್ಲಿ ತಾಳ ಹಾಕುತ್ತಾ ಶ್ರದ್ಧೆಯಿಂದ ಕಛೇರಿಗಳಲ್ಲಿ ಪಾಲ್ಗೊಳ್ಳುತ್ತಿದ್ದುದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.  ತನ್ನ ಒಂಭತ್ತನೆಯ ವಯಸ್ಸಿನಲ್ಲೇ ತಮ್ಮ ತಂದೆಯವರ ಕಛೇರಿಗೆ ತಬಲಾ ನುಡಿಸಿದ ಈ ಹುಡುಗ,  ಮುಂದೆ ಹಾರ್ಮೋನಿಯಂ ಹಿಡಿದು ಅನಂತಸ್ವಾಮಿಗಳಂತೆ ತಾನೂ ಹಾಡುತ್ತಾ ಮೇರು ಶಿಖರವಾಗಿ ಬೆಳೆದರು.  ಅನಂತಸ್ವಾಮಿ ಅವರು ಈ ಲೋಕವನ್ನು ಬಿಟ್ಟು ಹೋದಾಗ, ಅವರ ಅಮರಧ್ವನಿ ನಮ್ಮೊಂದಿಗಿಲ್ಲ ಎಂಬ ಕೊರತೆಯನ್ನು ಸಾಕಷ್ಟು ನೀಗಿಸಿದ್ದರು.   ಹೀಗಿದ್ದರೂ,  ಆತ ತಮ್ಮ  ತಂದೆಯವರ  ಒಂದು ಧ್ವನಿಯ ಛಾಯೆಯಾಗಿ ಮಾತ್ರ ಉಳಿಯದೆ, ತಮ್ಮದೇ ಆದ ವೈಶಿಷ್ಟ್ಯತೆಗಳನ್ನು ಸಹಾ ಅಭಿವ್ಯಕ್ತಿಸುತ್ತ,  ಸುಗಮ ಸಂಗೀತಕ್ಷೇತ್ರವನ್ನು ಬೆಳೆಸುತ್ತ ಬಂದರು.  ಒಂದೆಡೆ ತಮ್ಮದೇ ಆದ ರಾಗ ಸಂಯೋಜನೆಗಳು, ಮತ್ತೊಂದೆಡೆಯಲ್ಲಿ  ಅನಂತಸ್ವಾಮಿಗಳು ಮಾಡಿದ ಕೆಲಸಕ್ಕೆ ವಿಸ್ತಾರ ಇವೆರಡನ್ನೂ ಜೊತೆಜೊತೆಯಾಗಿ ನೀಡುತ್ತಾ ಸಾಗಿದರು.

ರಾಜು ಅನಂತಸ್ವಾಮಿ ಅವರು ಹಾಡಿದ ಹಾಡುಗಳು, ಅವರು  ಪಾಠ ಹೇಳಿಕೊಟ್ಟ ಶಿಷ್ಯರು, ಅವರು ಮುಂದೆ ತಂದ ಹಲವು ಪ್ರತಿಭೆಗಳು, ಅವರು  ಹೊರತಂದ ಧ್ವನಿಮುದ್ರಿಕೆಗಳು ಇವೆಲ್ಲಾ ಅಗಾಧ ಕೊಡುಗೆಗಳಾಗಿವೆ. ಇವೆಲ್ಲವನ್ನೂ ಅವರು ತಾವು  ಬದುಕಿದ್ದ ಅತ್ಯಲ್ಪ ಜೀವಿತಾವಧಿಯ ಕಾಲದಲ್ಲೇ ಮಾಡಿದ್ದರು ಎನ್ನುವುದು,  ಈ ಸಕಲ ಸಾಧನೆಗಳೂ   ಅವರಿಗಿದ್ದ ಅತ್ಯಭೂತ ಸಾಧ್ಯತೆಗಳಲ್ಲಿನ, ಒಂದು ಭಾಗ ಮಾತ್ರವಾಗಿದ್ದವು ಎಂಬುದನ್ನು ನೆನಪಿಸುತ್ತವೆ.

ರಾಜು ಅನಂತಸ್ವಾಮಿ ಅವರು  ಹಾಡಿರುವ ಹಾಡುಗಳ ಪಟ್ಟಿ ಹೇಳುತ್ತ  ಹೋದರೆ, ಆಕಾಶದಲ್ಲಿ ತುಂಬಿರೋ ನಕ್ಷತ್ರಗಳನ್ನು ಎಣಿಸಿದ ಹಾಗೆ.  ಅವರ ಹಾಡುಗಳು ಕೂಡಾ ನಕ್ಷತ್ರಗಳಷ್ಟೇ ಪ್ರಕಾಶಿಸುವಂತಹವು.  ರತ್ನನ ಪದಗಳು, ಹೆಂಡತಿ ಒಬ್ಬಳು, ಕೈಲಾಸಂ ಗೀತೆಗಳು ಮುಂತಾದ  ಹಾಸ್ಯ ಮಿಶ್ರಿತ ಲಘು ಧಾಟಿಯ ಹಾಡುಗಳಿರಲಿ, ಬನ್ನಿ ಹರಸಿರಿ ತಂದೆಯೇ, ನಾಕು ತಂತಿ, ದೇವ ನಿನ್ನ ಮಾಯೆಗಂಜಿ, ಯಾಕೆ ಅರ್ಥ ಬಾಳಿಗೆ , ಮತ್ತದೇ ಬೇಸರ, ಯಾವ ಮೋಹನ ಮುರಳಿ ಕರೆಯಿತು, ಮಂಕುತಿಮ್ಮನ ಕಗ್ಗದಂತಹ ಭಾವ ಪರವಶತೆ ತುಂಬುವ, ತುಂಬು ಗಾಂಭೀರ್ಯ ಬಯಸುವ ಹಾಡುಗಳಿರಲಿ, ಅದಕ್ಕೆ ರಾಜು  ಜೀವ ತುಂಬಿದ ರೀತಿ ಮನೋಜ್ಞವಾದದ್ದು.  

ರಾಜು ಅನಂತಸ್ವಾಮಿ  ಸಿನಿಮಾಗಳಿಗೆ ಮತ್ತು ದೂರದರ್ಶನ ಧಾರಾವಾಹಿಗಳಿಗೆ  ಗಾಯಕರಾಗಿದ್ದುದು, ನಟನೆಗೆ ಇಳಿದಿದ್ದುದು, ಅಲ್ಲಿ ತೋರಿದ  ಸೊಗಸುಗಾರಿಕೆ;  ತಾವು ಕೆಲಸ ಮಾಡಿದವರ ಜೊತೆಯಲ್ಲೆಲ್ಲಾ ನಲ್ಮೆಯನ್ನು ಹರಡಿ, ಚೆಲುವನ್ನು ಬಿತ್ತಿದ್ದು .... ಇವೆಲ್ಲಾ,  ಆತ ಎಂತಹ ವಾತಾವರಣವನ್ನು ಕೂಡಾ ತಮ್ಮದಾಗಿಸಿಕೊಳ್ಳಬಲ್ಲವರಾಗಿದ್ದರು ಎಂಬುದರ ಮತ್ತಷ್ಟು ಕುರುಹುಗಳಾಗಿವೆ.  ನಟನೆಯಲ್ಲಿ ಅವರು ಮೂಡಿಸಿದ ಲೀಲಾಜಾಲ ಅಭಿವ್ಯಕ್ತಿ ಯಾವುದೇ ಮೇಧಾವಿ ಕಲಾವಿದನ ಸಾಮರ್ಥ್ಯಕ್ಕೂ ಕಡಿಮೆಯಾದದ್ದಲ್ಲ ಎನ್ನುತ್ತಾರೆ ಅವರನ್ನು ನಿರ್ದೇಶಿಸಿದ್ದ ಗೆಳೆಯರು.  ಅವರು ರಂಗಭೂಮಿಯಲ್ಲಿ ನೀಡಿದ ಸಂಗೀತ ಸಂಯೋಜನೆ ಪ್ರೇಮಾ ಕಾರಂತರನ್ನೂ ಕೂಡಾ ಅಚ್ಚರಿಗೀಡು ಮಾಡಿತ್ತು ಎನ್ನುತಾರೆ ಸಿನಿಮಾ ಮತ್ತು ರಂಗಭೂಮಿ ನಟ ನಿರ್ದೇಶಕ ಮಂಡ್ಯ ರಮೇಶ್. 

ಜನವರಿ 17, 2009ರಂದು  ರಾಜು ಅನಂತಸ್ವಾಮಿ ಅವರು  ಈ ಲೋಕವನ್ನು ಬಿಟ್ಟು ಹೋದರು.  ಅವರ ಪ್ರತಿಭಾನ್ವಿತ ಇಹಲೋಕದ ಕಿರುಯಾತ್ರೆ ಅಮರ.

Raju Anantaswamy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ