ಭಾನುವಾರ, ಮಾರ್ಚ್ 8, 2015

ಅನ್ನದಾನಯ್ಯ ಪುರಾಣಿಕ

ಅನ್ನದಾನಯ್ಯ ಪುರಾಣಿಕರು

ಕನ್ನಡ ನಾಡು ನುಡಿಗಾಗಿ ನಿರಂತರ ಸೇವೆ, ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು ಸಲ್ಲಿಸಿದ ಸೇವೆ, ನ್ಯಾಯಾಂಗದಲ್ಲಿ ನಿಷ್ಠಾವಂತ ಸೇವೆ, ಸಂಘ ಸಂಸ್ಥೆಗಳ ಸ್ಥಾಪನೆ ಹಾಗೂ ಇವೆಲ್ಲಕ್ಕೂ ತಿಲಕವಿಟ್ಟಂತೆ ಸಾಹಿತ್ಯರತ್ನ ಬಿರುದಾಂಕಿತರಾದವರು ಶ್ರೀಯುತ ಅನ್ನದಾನಯ್ಯ ಪುರಾಣಿಕರು. ಅನ್ನದಾನಯ್ಯ ಪುರಾಣಿಕರು ಕವಿರತ್ನ ಪಂಡಿತ ಕಲ್ಲಿನಾಥ ಶಾಸ್ತ್ರಿಗಳು ಹಾಗೂ ತಾಯಿ ದಾನಮ್ಮನವರ ಸುಪುತ್ರರಾಗಿ ಕೊಪ್ಪಳ ಜಿಲ್ಲೆಯ ದ್ಯಾಂಪುರದಲ್ಲಿ ಮಾರ್ಚ್ 8, 1928ರ ವರ್ಷದಲ್ಲಿ ಜನಿಸಿದರು. ಕಾವ್ಯಾನಂದರೆಂದು ಪ್ರಖ್ಯಾತರಾದ ಸಿದ್ಧಯ್ಯ ಪುರಾಣಿಕರು ಹಾಗೂ ಬಸವರಾಜ ಪುರಾಣಿಕರು ಇವರ ಸಹೋದರರು.

ಅನ್ನದಾನಯ್ಯ ಪುರಾಣಿಕರ ಶಿಕ್ಷಣ ಕುಕನೂರು, ಕೊಪ್ಪಳ ಹಾಗೂ ಗುಲ್ಬರ್ಗಾಗಳಲ್ಲಿ ನೆರವೇರಿತು. ದೇಶದ ಸ್ವಾತಂತ್ರ್ಯಕ್ಕಾಗಿ ಕಾಳಜಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ಸಲುವಾಗಿ ಇವರ ಎರಡು ವರ್ಷಗಳ ವಿದ್ಯಾಭ್ಯಾಸಕ್ಕೆ ತಡೆ ಉಂಟಾಯಿತು. ಮುಂದೆ ಪುರಾಣಿಕರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ, ಸಾಹಿತ್ಯ ರತ್ನ ಪದವಿಗಳ ಜೊತೆಗೆ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು  ಪಡೆದರು.

ಬೆಂಗಳೂರಿನ ಉಚ್ಛ ನ್ಯಾಯಲಯದಲ್ಲಿ ವೃತ್ತಿನಿರತ ಕಾನೂನು ತಜ್ಞರಾಗಿ ತಮ್ಮ ವೃತ್ತಿ ಜೀವನವನ್ನು ನಡೆಸಿದ ಅನ್ನದಾನಯ್ಯ ಪುರಾಣಿಕರು ಮುಂದೆ ಸರ್ಕಾರಿ ನ್ಯಾಯವಾದಿಗಳಾಗಿಯೂ ಹನ್ನೊಂದು ವರ್ಷಗಳ  ಶ್ರೇಷ್ಠ ಸೇವೆ ಸಲ್ಲಿಸಿದರು. ಜೊತೆಗೆ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಪ್ರಾಧ್ಯಾಪಕಾರಾಗಿ ಹಾಗೂ ಪರೀಕ್ಷರಾಗಿ ಸಹಾ ಪುರಾಣಿಕರು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಎರೆದಿದ್ದಾರೆ. ಕರ್ನಾಟಕ ಭಾಷಾ ಆಯೋಗದ ಸದಸ್ಯರಾಗಿ ಸುಮಾರು 25 ಮಹತ್ವದ ಕಾನೂನು ಗ್ರಂಥಗಳ ಕನ್ನಡ ಅನುವಾದದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಕರ್ನಾಟಕ ಗೆಜೆಟಿಯರ್ ಸಲಹಾ ಸಮಿತಿಯಲ್ಲಿ ಸುಮಾರು 15 ಗೆಜೆಟಿಯರ್ ಪ್ರಕಟಣೆಗಳಲ್ಲಿ ಸಹಾ ಸರ್ಕಾರೇತರ ಸದಸ್ಯರಾಗಿ ಪುರಾಣಿಕರ ಮಹತ್ವದ ಸೇವೆ ಸಂದಿದೆ. ದೆಹಲಿಯಲ್ಲಿ ಅಖಿಲ ಭಾರತ ನ್ಯಾಯವಾದಿಗಳ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಕಾರ್ಯಕಾರಣಿಯಲ್ಲಿ ಕರ್ನಾಟಕದ ಏಕಮಾತ್ರ ಸದಸ್ಯರಾಗಿ ಪ್ರತಿನಿಧಿಸಿದ ಕೀರ್ತಿ ಕೂಡಾ ಪುರಾಣಿಕರದ್ದಾಗಿದೆ.

ತಮ್ಮ ವಿದ್ಯಾರ್ಥಿ ಜೀವನದ ದೆಸೆಯಿಂದಲೂ ನಿರಂತರ ಕ್ರಿಯಾಶೀಲರಾಗಿದ್ದ ಅನ್ನದಾನಯ್ಯ ಪುರಾಣಿಕರು ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾಗಿ, ಸಹಜೀವನ ಸಾಹಿತ್ಯ ಪ್ರಕಾಶನದ ಸಂಪಾದಕರಾಗಿ, ಹಲವಾರು ಸಾಂಸ್ಕೃತಿಕ ಸಾಹಿತ್ಯಕ ಸಮ್ಮೇಳನಗಳ ಸಂಯೋಜಕಾರಾಗಿ, ಕರ್ನಾಟಕ ಹೈದರಾಬಾದು ಪ್ರದೇಶಗಳ ಕನ್ನಡ ಜೀವನಾಡಿಯಾಗಿ ಅಪಾರ ಸೇವೆ ಸಲ್ಲಿಸಿದವರಾಗಿದ್ದಾರೆ.  ಪ್ರಕಾಶಕರಾಗಿ ಸಹಾ ಸೇವೆ ಸಲ್ಲಿಸಿರುವ ಪುರಾಣಿಕರು ಐದು ಮಹತ್ವದ ಗ್ರಂಥಗಳನ್ನು ಅದರಲ್ಲೂ ಚೆನ್ನಬಸವ ಸಾಹಿತ್ಯದ ಪ್ರಕಾಶಕರಾಗಿ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷಟ್ಟಿನಲ್ಲಿ ಸದಸ್ಯತ್ವಗೌರವ ಕಾರ್ಯದರ್ಶಿ, ಕನ್ನಡ ನಿಘಂಟು ಸಮಿತಿ ಸದಸ್ಯತ್ವ, ಕನ್ನಡ ನುಡಿ ಸಂಪಾದಕತ್ವ, ಮೂರು ಸಾಹಿತ್ಯ ಸಮ್ಮೇಳನಗಳ ಸಂಯೋಜಕತ್ವ ಹೀಗೆ ಹಲವಾರು ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನ್ನದಾನಯ್ಯ ಪುರಾಣಿಕರು ಯುನೆಸ್ಕೋ ಸಮ್ಮೇಳನದಲ್ಲಿ ಸಹಾ ಕನ್ನಡ ನಾಡನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಕನ್ನಡ ಸಂಘದ ಅಧಕ್ಷರಾಗಿ, ‘ನ್ಯಾಯ ದರ್ಶನದ ಸಂಪಾದಕರಾಗಿ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಸಹಾ ಪುರಾಣಿಕರು ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಅಖಿಲ ಭಾರತ ಬಸವ ಸಮಿತಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ, ದತ್ತಿಯ ಗೌರವ ಕಾರ್ಯದರ್ಶಿಗಳಾಗಿ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಸಾಧನೆಗಳ ರೂವಾರಿಯಾಗಿದ್ದಾರೆ. ಇದಲ್ಲದೆ ಬೆಂಗಳೂರು ಶೇಷಾದ್ರಿಪುರಂ ಶಿಕ್ಷಣ ದತ್ತಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಂಸ್ಥೆಯ ವ್ಯವಸ್ಥಾಪಕ ಸಮಿತಿ, ಕನ್ನಡ ಸಾಹಿತ್ಯ ಸಂವರ್ಧಕ ದತ್ತಿ, ಬಸವ ಸಮಿತಿ ದತ್ತಿ ಮುಂತಾದ ಅನೇಕ ಸಂಸ್ಥೆಗಳಲ್ಲಿ ಅನ್ನದಾನಯ್ಯ ಪುರಾಣಿಕರ ಸೇವೆ ನಿರಂತರವಾಗಿ ಸಂದಿದೆ.

ಕಳೆದ ಆರು ದಶಕಗಳಲ್ಲಿ ಅನ್ನದಾನಯ್ಯ ಪುರಾಣಿಕರ ಸಾಹಿತ್ಯ ಸೇವೆ ನಿರಂತರವಾಗಿ ಸಾಗುತ್ತಿದ್ದು ಚೆನ್ನಬಸವ ಸಾಹಿತ್ಯ, ನ್ಯಾಯ ದರ್ಶನ, ಭಗೀರಥ, ಶರಣು ಸ್ವಾಮಿ, ವಚನ ವಾಹಿನಿ, ಷಟಸ್ಥಲ ಧರ್ಮಸಾರ, ವಚನದೀಪ್ತಿ, ಷಡುಸ್ಥಲ ಬ್ರಹ್ಮಿ ಚೆನ್ನಬಸವಣ್ಣ, ವಚನ ಪ್ರಕಾಶ, ವಚನ ಮಂದಾರ, ವಚನ ಸಂಗಮ, ಕರ್ನಾಟಕ ಸಹಕಾರಿ ಸಂಘಗಳ ಕಾನೂನು, ನ್ಯಾಯಶಾಸ್ತ್ರ, ವಚನ ಮಲ್ಲಿಗೆ, ಸಮಗ್ರ ವಚನ ಸಂಪುಟ, ನ್ಯಾಯ ಪಥಿಕ, ಮುಂತಾದ ಮಹತ್ವದ ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವುದಲ್ಲದೆ ನೂರಾರು ಲೇಖನಗಳನ್ನು ನಿರಂತರವಾಗಿ ಮೂಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ವಚನ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳೂ ಸೇರಿದಂತೆ ಅನೇಕ ಪ್ರಶಸ್ತಿ, ಗೌರವ, ಸನ್ಮಾನ ಗೌರವಗಳು ಅನ್ನದಾನಯ್ಯ ಪುರಾಣಿಕರನ್ನು ಅರಸಿ ಬಂದಿವೆ. 


ಕನ್ನಡ ನಾಡು ನುಡಿಗಾಗಿ ಅಪಾರ ಸೇವೆ ಸಲ್ಲಿಸುತ್ತಾ ಬಂದಿರುವ ಈ ಹಿರಿಯರು ಅಕ್ಟೋಬರ್ 20, 2015ರಂದು ಈ ಲೋಕವನ್ನಗಲಿದರು.  ಈ ಮಹಾನ್  ಚೇತನಕ್ಕೆ  ನಮನಗಳು.  

Tag: Annadaanaiah Puranikaಕಾಮೆಂಟ್‌ಗಳಿಲ್ಲ: