ಶುಕ್ರವಾರ, ಸೆಪ್ಟೆಂಬರ್ 4, 2015

ಶಿವಮೊಗ್ಗದಲ್ಲಿ ‘ನಾಟ್ಯಾರಾಧನಾ-6'

ಶಿವಮೊಗ್ಗದಲ್ಲಿ ನಾಟ್ಯಾರಾಧನಾ


ಪ್ರತಿವರ್ಷ ಆಗಸ್ಟ್ ಸೆಪ್ಟೆಂಬರ್ ಅವಧಿಯ ಶ್ರಾವಣದ ಹಬ್ಬಗಳ  ಸಾಮೀಪ್ಯದಲ್ಲಿದ್ದಂತೆಯೇ ಬಂತೆಂದರೆ ಶಿವಮೊಗ್ಗೆಯ ಕಲಾವಲಯದಲ್ಲೊಂದು ವಿಶೇಷ ಸಡಗರ ಮೂಡುತ್ತದೆ.  ಭಾರತದ ವಿವಿಧ ರಾಜ್ಯಗಳಿಂದ ವಿವಿಧ ಪ್ರಸಿದ್ಧ ನಾಟ್ಯ ತಂಡಗಳು ಶಿವಮೊಗ್ಗೆಗೆ ಬಂದು ಇಲ್ಲಿನ  ಸಹಚೇತನ ನಾಟ್ಯಾಲಯ ಸಂಸ್ಥೆಯು ನಡೆಸುವ ನಾಟ್ಯಾರಾಧನೆಗೆ ವಿಶಿಷ್ಟ ಮೆರುಗು ತರುತ್ತವೆ.  ಕಳೆದ ಐದು   ವರ್ಷಗಳಲ್ಲಿ ಯಶಸ್ವಿಯಾಗಿ ಐದು ಸಂಭ್ರಮದ ನಾಟ್ಯಾರಾಧನಾಮಹೋತ್ಸವಗಳನ್ನು ನಡೆಸಿರುವ ಶಿವಮೊಗ್ಗದ ಸಹಚೇತನ ನಾಟ್ಯಾಲಯವು  ಇದೇ ಸೆಪ್ಟೆಂಬರ್ 4, 5 ಮತ್ತು 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರಲ್ಲಿ ತನ್ನ ಆರನೆಯ ನಾಟ್ಯಾರಾಧನಾಮಹೋತ್ಸವವನ್ನು ಹಮ್ಮಿಕೊಂಡಿದೆ. 

ಈ ವರ್ಷದ ನಾಟ್ಯಾರಾಧನೆಯಲ್ಲಿ ಸಹಚೇತನ ನಾಟ್ಯಾಲಯದ ನೃತ್ಯ ಗುರು ಸಹನಾ ಎಸ್ ಪ್ರಭು ಮತ್ತು ಅವರ  ನಾಟ್ಯಾಲಯದ ವಿದ್ಯಾರ್ಥಿಗಳು  ತಮ್ಮ ಕಾರ್ಯಕ್ರಮದ ಮೊದಲ ಅಂಗವಾಗಿ ರಾಮನೆಡೆಗೆ ನೃತ್ಯನಡಿಗೆ ಇಟ್ಟಿದ್ದಾರೆ.  ಈ ಮೂಲಕ ರಾಮಸ್ಯ ಪ್ರಿಯದರ್ಶನಂಅಂದರೆ ಮಹಾನ್ ಮರ್ಯಾದ ಪುರುಷೋತ್ತಮ ಶ್ರೀರಾಮನ ಪ್ರಿಯದರ್ಶನವನ್ನು ಪ್ರೇಕ್ಷಕ ಬಂಧುಗಳ ಅನುಭಾವಕ್ಕೆ ತರುತ್ತಲಿದ್ದಾರೆ.  ರಾಮನಿದ್ದಲ್ಲಿ ಮಹಾಸತಿ ಸೀತೆಯ ಸ್ಮರಣೆ  ಇಲ್ಲದಿದ್ದರೆ ಎಂತುನಮ್ಮ ಸಹನಾ ಪ್ರಭು ಸೀತೆಯ ಸ್ವಗತದ ಅಂತರ್ಗತವನ್ನು ಕಾರ್ಯಕ್ರಮದ ನಾಟ್ಯಾರಾಧನೆಯ ಎರಡನೇ ದಿನದಲ್ಲಿ ನೃತ್ಯರೂಪಕವಾಗಿ ನಿರೂಪಿಸುತ್ತಿದ್ದಾರೆ.  ಅತಿಥಿ ದೇವೋ ಭವ ಎಂಬ ಹೃದಯಾಳವುಳ್ಳ ಈ ನಾಟ್ಯಾರಾಧನೆಯಲ್ಲಿ ಕೇವಲ ನಾಟ್ಯಾಲಯದ ಕಲಾವಿದರ ನೃತ್ಯ ಪ್ರದರ್ಶನವಷ್ಟೇ ಅಲ್ಲದೆ, ಅತಿಥಿ ತಂಡಗಳಾದ ಒರಿಸ್ಸಾದ ಪುರಿಯ ಅಭಿನ್ನ ಸುಂದರ್ ಗೊತಿಪುವಾ ನೃತ್ಯ ಪರಿಷತ್ನಿಂದ ಗೋತಿಪುವಾನೃತ್ಯ ಹಾಗೂ ಕೋಲ್ಕತ್ತದ ಫಾಸ್ಕೋ ನವಯುವಕ್ ಭಾವ್ ನೃತ್ಯ ಸಮಿತಿವತಿಯಿಂದ ಛಾವ್ನೃತ್ಯ ಪ್ರದರ್ಶನಗಳು ಶಿವಮೊಗ್ಗೆಯ ನೃತ್ಯಾರಾಧಕ ಅತಿಥಿ ಬಂಧುಗಳ ಹೃದಯಾಳಗಳನ್ನು ಸೋರೆಗೊಳ್ಳಲಿವೆ.

ಕಳೆದ ವರ್ಷಗಳಲ್ಲಿ ಇದೇ ವೇದಿಕೆಯಲ್ಲಿ ಭರತನಾಟ್ಯ, ಕೂಚಿಪುಡಿ, ಮೋಹಿನಿಯಾಟ್ಟಂ, ಕಥಕ್, ಮಣಿಪುರಿ, ಕಲರಿ ಪಯಟ್, ಸತ್ರಿಯಾ  ಮುಂತಾದ ಭಾರತೀಯ ವಿವಿಧ ಸಾಂಸ್ಕೃತಿಕ  ನೃತ್ಯಪ್ರಾಕಾರಗಳು ಆಯಾ ಕಲೆಗೆ ಪ್ರಸಿದ್ಧವಾದ ದೇಶದ ಪ್ರತಿಷ್ಟಿತ ಕಲಾವಿದರ ತಂಡಗಳಿಂದ ಇದೇ ವೇದಿಕೆಯಲ್ಲಿ ಪ್ರಸ್ತುತಗೊಂಡಿವೆ.  ಹೀಗೆ ವೈಶಿಷ್ಟ್ಯಪೂರ್ಣ ನಾಟ್ಯರೂಪಕಗಳ  ಅರ್ಪಣೆಯ ಮೂಲಕ ನಾಟ್ಯಾರಾಧನೆಯಲ್ಲಿ ತೊಡಗಿರುವ ನಿಷ್ಠಾವಂತ ಸಂಸ್ಥೆಯಾದ ಸಹಚೇತನ ನಾಟ್ಯಾಲಯವು ಹಿರಿಯ ಸಾಂಸ್ಕೃತಿಕ ಔನ್ನತ್ಯದ ಧ್ಯೇಯವನ್ನು ತನ್ನ ಉಸಿರಾಗಿಸಿರಿಸಿಕೊಂಡಿದೆ.

2005ರ ವರ್ಷದಲ್ಲಿ ಪುಟ್ಟದಾಗಿ ಆರಂಭವಾದ ಸಹಚೇತನ ನಾಟ್ಯಾಲಯವು ಇಂದು ನೂರಾರು ವಿದ್ಯಾರ್ಥಿಗಳು, ಸಹಸ್ರಾರು ಕಲಾಭಿಮಾನಿಗಳ ಒಡನಾಟದಲ್ಲಿ ಸುದೃಢವಾಗಿ ಮುನ್ನಡೆಯುತ್ತಿದೆ.  ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಕಾಪಾಡಿಕೊಂಡು ಬರುವುದರ ಜೊತೆ ಜೊತೆಗೆ, ಅದರ ಉನ್ನತಿ ಮತ್ತು ಏಳ್ಗೆಗಾಗಿ ನಿರಂತರವಾಗಿ ಶ್ರಮಿಸುವುದು ಹಾಗೂ ಶಾಸ್ತ್ರೀಯ ಸಂಪ್ರದಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದು ನಮ್ಮ ಉದ್ದೇಶ.  ಅದಕ್ಕಾಗಿ ಪಟ್ಟಣಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಮತ್ತು ಹಿಂದುಳಿದ ಮಕ್ಕಳಲ್ಲಿಯೂ ಸಹಾ ನೃತ್ಯ ಕಲೆಯನ್ನು ಬೆಳೆಸುವ ಆಶಯಗಳೊಂದಿಗೆ ನಾವು ನಮ್ಮ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎನ್ನುತ್ತಾರೆ ಈ ಸಂಸ್ಥೆಯ ಕೇಂದ್ರಬಿಂದುವಾಗಿರುವ ನೃತ್ಯ ಗುರು ಸಹನಾ ಎಸ್ ಪ್ರಭು.    ಈ ನಿಟ್ಟಿನಲ್ಲಿ ಅವರು ತಮ್ಮ ಕಲಾಶಾಲೆಗೆ ಬರುವ ಆಸಕ್ತರಿಗೆ ಕಲಿಸುವುದಷ್ಟೇ  ಅಲ್ಲದೆಹಿಂದುಳಿದ ಬಡಾವಣೆಯ ಮಕ್ಕಳಿಗೂ ಉಚಿತ ನೃತ್ಯ ತರಬೇತಿಗಳನ್ನು ನೀಡುತ್ತಿದ್ದಾರೆ.  ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ  ಮಕ್ಕಳಿಗೆ ಕಲಾಪ್ರಕಾರಗಳಲ್ಲಿ ತರಬೇತಿ ನೀಡುತ್ತಿದ್ದಾರೆ.  ಶಾಲಾ ಪಠ್ಯಕ್ಕೆ ನೃತ್ಯವನ್ನು ಅಳವಡಿಸಿ ಮಕ್ಕಳಿಂದಲೇ ಕಾರ್ಯಕ್ರಮಗಳು ಮೂಡುವಂತೆ ಮಾಡಿ, ಪಠ್ಯ ಮತ್ತು ಕಲೆ ಮಾಧ್ಯಮಗಳೆರಡಕ್ಕೂ ಆಕರ್ಷಣೆ ತರುವ ಕಾರ್ಯ ಮಾಡುತ್ತಿದ್ದಾರೆ, ಚಿಂದಿ ಆಯುವ ಮಕ್ಕಳ ಕೇಂದ್ರವಾದ ಮಾಧವನೆಲೆಯ ಮಕ್ಕಳಿಗೆ ಉಚಿತವಾಗಿ ಕಲಾ ತರಬೇತಿ ಮತ್ತು ಕಲಾವೇದಿಕೆಗಳನ್ನು ಸೃಷ್ಟಿಸುತ್ತಿದ್ದಾರೆ.

ಹೀಗೆ ಕಲೆ ಮತ್ತು ಸಮಾಜಸೇವೆಗೆ ತಮ್ಮನ್ನೂ ತಮ್ಮ ಸಂಸ್ಥೆ ಸಹಚೇತನ ನಾಟ್ಯಾಲಯವನ್ನೂ ಮುಡಿಪಾಗಿಟ್ಟಿರುವ ನೃತ್ಯ ಗುರು ಸಹನಾ ಎಸ್ ಪ್ರಭು ಅವರು ತಮ್ಮ ಎಳೆಯ ಹತ್ತನೇ ವಯಸ್ಸಿನಿಂದಲೇ ನೃತ್ಯದ ವ್ಯಾಮೋಹವನ್ನು ಬೆಳೆಸಿಕೊಂಡವರು. ನೃತ್ಯ, ನಾಟಕ ಮತ್ತು ಚಿತ್ರಕಲೆಗಳಲ್ಲಿ ಆಸಕ್ತರಾದ ಸಹನಾ ತಮ್ಮ ಕಾಲೇಜು ವ್ಯಾಸಂಗದ ದಿನಗಳಲ್ಲಿ ಎನ್ ಎಸ್ ಎಸ್ ಅಭ್ಯರ್ಥಿಯಾಗಿ ನವದೆಹಲಿಯ ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡ ಕೀರ್ತಿವಂತರು.  ನಾಟ್ಯ ಕಲೆಯಲ್ಲಿ ಶಿಸ್ತುಬದ್ಧ ಸಾಧನೆಯನ್ನು  ಮಾಡಿರುವ ಸಹನಾ ಚೇತನ್ ದೇಶದಾದ್ಯಂತ ಪ್ರತಿಷ್ಟಿತ ವೇದಿಕೆಗಳಲ್ಲಿ ನೃತ್ಯ ಕಲಾವಿದೆಯಾಗಿ, ನೃತ್ಯ ಸಂಯೋಜಕಿಯಾಗಿ ಕಲಾರಸಿಕರ ಮನಸೂರೆಗೊಂಡಿರುವುದೇ ಅಲ್ಲದೆ, ಇನ್ನೂ ಯುವ ವಯಸ್ಸಿನಲ್ಲೇ ನೃತ್ಯ ಗುರುವೆನಿಸಿದ್ದು, ನೂರಾರು ಪ್ರತಿಭಾವಂತ ನೃತ್ಯ ಕಲಾವಿದರನ್ನು ತಯಾರುಮಾಡಿದ್ದಾರೆ.  ಅವರ ಗುರು ಮಾರ್ಗದರ್ಶನದ ಲಾಭವನ್ನು ಭಾರತೀಯ ಕಲಾಸಕ್ತಿಯುಳ್ಳ ಹಲವಾರು ವಿದೇಶಿಯರೂ ಪಡೆದುಕೊಂಡಿದ್ದಾರೆ.

ಡಿ.ವಿ.ಜಿ ಅವರ ಅಂತಃಪುರ ಗೀತೆಗಳು’, ‘ಕಲಾ ಸುಂದರಿ’, ‘ಆದಿಕಾವ್ಯ ರಾಮಾಯಣದ ಆವಿರ್ಭಾವ’, ‘ನವರಸಗಳಲ್ಲಿ ರಾಮ’, ‘ವಚನಸಾರ’, ವಂದೇ ಮಾತರಂ’, ‘ಕೃಷ್ಣಲೀಲೆ’, ‘ಭರತನಾಟ್ಯದ ಮಾರ್ಗ’, ‘ದಾಕ್ಷಿಣಾತ್ಯ ತಪಸ್ವಿನಿ ಅಕ್ಕಮಹಾದೇವಿಯ ಜೀವನಗಾಥೆ’, ‘ಚಂದ್ರ-ರೋಹಿಣಿ’, ‘ಯಕ್ಷಮ’, ‘ಶಿವೋಹಂ’, ‘ಋತು ರಂಗ’, ‘ಕೃಷ್ಣಂ ವಂದೇ ಜಗದ್ಗುರುಂ’, ‘ಭಾಮಿನಿ ಸತ್ಯಭಾಮೆಯ ಪ್ರಲಾಪಮುಂತಾದ ಅನೇಕ ರೂಪಕಗಳು ಸಹನಾ ಚೇತನರ ಸೃಜನಶೀಲ ನೃತ್ಯ ಸಂಯೋಜನೆಗಳಲ್ಲಿ ಬೆಳಕು ಕಂಡಿವೆ.  ಸಹನಾ ಪ್ರಭು ಅವರು ಪ್ರಸಿದ್ಧ ನೃತ್ಯ ಕಲಾವಿದರಾದ ವೈಜಯಂತಿ ಕಾಶಿ ಅವರೊಂದಿಗೆ ಸಹಾ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇನ್ನೂ ಯುವ ವಯಸ್ಸಿನಲ್ಲೇ ಕಲೆ, ಸಂಸ್ಕೃತಿ ಮತ್ತು ಸಮಾಜಸೇವೆಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಹನಾ ಚೇತನ್ ಅವರು, ‘ಅಜಿತಶ್ರೀಎಂಬ ಪುರಸ್ಕಾರವನ್ನು ಪ್ರತಿಷ್ಟಾಪಿಸಿ ಯಾವುದೇ ಪ್ರಚಾರಾಪೇಕ್ಷೆಯಿಲ್ಲದೆ  ವಿವಿಧ ರೀತಿಯಲ್ಲಿ  ಸಮಾಜಕ್ಕೆ  ಸೇವೆ ಸಲ್ಲಿಸುತ್ತಿರುವ ಅನೇಕ ಮಹನೀಯರನ್ನು ಗೌರವಿಸುತ್ತಲೂ ಇದ್ದಾರೆ.   ಸಹನಾ ಚೇತನ್ ಅವರನ್ನು ನಾಡಿನ ಅನೇಕ ಸಾಂಸೃತಿಕ ಮತ್ತು ಸೇವಾ ಸಂಸ್ಥೆಗಳು ಗೌರವಿಸಿವೆ.


ಸಹನಾ ಎಸ್. ಪ್ರಭು ಅವರು ಸಮಾನ ಸಾಂಸ್ಕೃತಿಕ ಆಸಕ್ತರೊಡನೆ ಸಹಚೇತನ  ನಾಟ್ಯಾಲಯವನ್ನು  ಎಲ್ಲರೀತಿಯಲ್ಲೂ ಸಶಕ್ತವಾಗಿಮಹದುದ್ಧೇಶಗಳಿಂದ ನಡೆಸುತ್ತಿದ್ದಾರೆ.   ಅವರು ಈ  ಸೆಪ್ಟೆಂಬರ್ 4, 5 ಮತ್ತು 6ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿರುವ  ನಾಟ್ಯಾರಾಧನಾಮಹೋತ್ಸವವು ಯಶಸ್ವಿಯಾಗಲಿ.   ಅವರ ಈ ಕೈಂಕರ್ಯಕ್ಕೆ ಸಕಲ ರೀತಿಯ ಆಡಳಿತ, ಸಾಂಸ್ಥಿಕ ಮತ್ತು ಜನಬಲಗಳು ಜೊತೆಗೂಡಲಿ ಎಂಬುದು ನಮ್ಮ ನಲ್ಮೆಯ ಹಾರೈಕೆ.


Tag: Naatyaaraadhana, Sahana S. Prabhu

ಕಾಮೆಂಟ್‌ಗಳಿಲ್ಲ: