ಬುಧವಾರ, ಸೆಪ್ಟೆಂಬರ್ 28, 2016

ವಾಮನ ಬೇಂದ್ರೆ ಇನ್ನಿಲ್ಲ

ವಾಮನ ದತ್ತಾತ್ರೇಯ ಬೇಂದ್ರೆ 

ಅತ್ಯುತ್ತಮ ಪ್ರಾಧ್ಯಾಪಕರೂ, ಸಾಹಿತಿಗಳೂ ಆಗಿದ್ದ  ವರಕವಿ  ದತ್ತಾತ್ರೇಯ  ರಾಮಚಂದ್ರ  ಬೇಂದ್ರೆಯವರ  ಪುತ್ರರಾದ  ವಾಮನ ಬೇಂದ್ರೆಯವರು ಇಂದು  ಮುಂಜಾನೆ  ನಿಧನರಾಗಿದ್ದಾರೆ  (28.09.2016).   ವಾಮನ ಬೇಂದ್ರೆಯವರು  ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ ಜುಲೈ 28, 1935ರ ವರ್ಷದಲ್ಲಿ ಜನಿಸಿದರು. ತಂದೆ ವರಕವಿ ದ.ರಾ.ಬೇಂದ್ರೆ, ತಾಯಿ ಲಕ್ಷ್ಮೀಬಾಯಿಯವರು.  ಅವರ  ಪ್ರಾರಂಭಿಕ ಶಿಕ್ಷಣ ಗದಗದಲ್ಲಿ ನೆರವೇರಿತು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ ಪಡೆದ ವಾಮನ ಬೇಂದ್ರೆಯವರು,  ಪುಣೆ ವಿಶ್ವವಿದ್ಯಾಲಯಕ್ಕೆ ಲಕ್ಷ್ಮೀಶನ ಜೈಮಿನಿ ಭಾರತ - ಒಂದು ಅಧ್ಯಯನ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಗಳಿಸಿದರು.

ವಾಮನ ಬೇಂದ್ರೆಯವರು ಉದ್ಯೋಗ ಪ್ರಾರಂಭಿಸಿದ್ದು  ಸಾಂಗ್ಲಿಯ ವೆಲ್ಲಿಂಗ್‌ಡನ್ ಕಾಲೇಜಿನಲ್ಲಿ. ನಂತರ ವಿದ್ಯಾರಣ್ಯ ಕಿರಿಯ ಕಾಲೇಜ್ ಧಾರವಾಡದಲ್ಲಿ ಉಪನ್ಯಾಸಕರಾಗಿ, ಕಿಟಲ್ ಕಲಾ ಕಾಲೇಜ್ ಧಾರವಾಡದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿನ  ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು.

ವಾಮನ ಬೇಂದ್ರೆಯವರಿಗೆ ಸಾಹಿತ್ಯ ರಚನೆ ತಂದೆಯವರಿಂದ  ಬಂದ ಬಳುವಳಿ. ಶಾಲೆಯಲ್ಲಿದ್ದಾಗಲೇ ಅವರ ಬರವಣಿಗೆ ಪ್ರಾರಂಭಗೊಂಡಿತು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗಲೇ ಪ್ರಬಂಧ, ನಾಟಕ ರಚನೆಯಲ್ಲಿ ಸಮರ್ಥರಾಗಿದ್ದ ಅವರು, ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿಭಾಷೆಗಳ ಮೇಲಣ ಪ್ರಭುತ್ವ ಸಾಧಿಸಿದ್ದರಲ್ಲದೆ. ಸಂಗೀತ, ನಾಟಕ, ಭಾಷಣ ಮುಂತಾದ ಕಲೆಗಳನ್ನು ಸಹಾ ತಮ್ಮ ಹವ್ಯಾಸವಾಗಿರಿಸಿಕೊಂಡಿದ್ದರು.

ವಾಮನ ಬೇಂದ್ರೆಯವರ ಮೊದಲ ಕವನ ಮೊದಲ ತೊದಲು.  ನಂತರ ಅನಂತಧಾರೆ,  ಸ್ಪಂದನ ಪ್ರಕಟಗೊಂಡವು.  ಸೊಂಡಿಲ ಗಣಪ್ಪ ಬಂದ, ಸ್ಪರ್ಶ ಹಾಗೂ ಇತರ ನಾಟಕಗಳೂ ಸೇರಿ ಮೂವತ್ತಕ್ಕೂ ಹೆಚ್ಚು ರೇಡಿಯೋ ನಾಟಕಗಳ ರಚನೆ ಮಾಡಿದರು.   ಕುಶಲಕವಿ ಲಕ್ಷ್ಮೀಶ, ಲಕ್ಷ್ಮೀಶ ಕವಿ-ಕಾವ್ಯ ಪರಂಪರೆ, ಲಕ್ಷ್ಮೀಶ : ಒಂದು ಅಧ್ಯಯನ, ಬೇಂದ್ರೆ ಕಾವ್ಯಲೋಕ, ಬೇಂದ್ರೆ ಬೆಳಕು, ಕವಿಚೂತವನ ಚೈತ್ರ ಲಕ್ಷ್ಮೀಶ. ಜೀವನಚರಿತ್ರೆ- ದ.ರಾ.ಬೇಂದ್ರೆ ಜೀವನ ಪರಿಚಯ ಮುಂತಾದ ವಾಮನ ಬೇಂದ್ರೆಯವರ ಹಲವು ಕಥನಗಳು.  ಇದಲ್ಲದೆ ಕುಣಿಯೋಣ ಬಾರ, ಅಂಬಿಕಾತನಯ ಹಾಡs ಬೆಳದಿಂಗಳ ನೋಡs, ನೋಡ್ಯಾನs ದಶಾವತಾರ, ಅಂಬಿಕಾತನಯ ಹಾಡ್ಯಾನs, ಕನ್ನಡಕ್ಕೆ ಕಿಟೆಲ್ ಕೊಡುಗೆ, ನಾಳಿನ ಕನಸು, ಚೈತನ್ಯದ ಪೂಜೆ, ನಮನ, ದರ್ಶನ, ವಿಕಾಸ, ವಿನ್ಯಾಸ, ತತ್ತ್ವ, ಸಿದ್ಧಾಂತ, ಬೇಂದ್ರೆ ಋತುದರ್ಶನ, ಬೇಂದ್ರೆ ಸಮಗ್ರ ಕಾವ್ಯ ಸಂಪುಟ, ಬೇಂದ್ರೆಯವರ ಜೀವನ ಮಹಾಕಾವ್ಯ ಔದುಂಬರ ಗಾಥೆಮುಂತಾದ ಕೃತಿಗಳನ್ನು ವಾಮನ ಬೇಂದ್ರೆಯವರು ಸಂಪಾದಿಸಿದರು. ಅವರ ಭಾಷಾಂತರಗಳೆಂದರೆ ಗುರುಗೋವಿಂದ ಸಿಂಗ, ಭಾರತೀಯ ಸಾಹಿತ್ಯ ಸಂಕಲನ, ಕಾಲಾಯ ತಸ್ಮೈನಮಃ, ಜಾನಪದ ಸಾಹಿತ್ಯ, ಸಮರ್ಥ ರಾಮದಾಸ ಹಾಗೂ ಸ್ವಾಮಿ ವಿವೇಕಾನಂದ ಮುಂತಾದವು.  ಇದಲ್ಲದೆ ಅವರು  ಬೇಂದ್ರೆಯವರ ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕನ್ನಡ-ಮರಾಠಿ ಭಾಷಾ ಬಾಂಧವ್ಯ ಪ್ರಶಸ್ತಿ, ಶ್ರೀವರದರಾಜ ಆದ್ಯ ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾಮನ ಬೇಂದ್ರೆಯವರಿಗೆ ಸಂದಿದ್ದವು.

ವಾಮನ ಬೇಂದ್ರೆಯವರ ಅನಂತಧಾರೆಕವನ ಸಂಕಲನಕ್ಕೆ ಮುನ್ನುಡಿಯಲ್ಲಿ ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಹೀಗೆ ಗುರುತಿಸುತ್ತಾರೆ: 

“ಸಾಧನಕೇರಿಯ ಶ್ರೀಮಾತಾದಲ್ಲಿ ದ ರಾ  ಬೇಂದ್ರೆಯವರು ಈಗ ಇಲ್ಲ; ಈಗ ಅವರು ಸಾವಿರದ ಮನೆಗಳಲ್ಲಿಮನೆ ಮಾಡಿಕೊಂಡಿದ್ದಾರೆ.  ಆದರೂ ಧಾರವಾಡದ ಮನೆ ಅವರ ಕರ್ಮಕ್ಷೇತ್ರವೇ.  ಈ ಸಂಕಲನದ ಕವಿತೆಯೊಂದರಲ್ಲಿ ವಾಮನರು ಹೇಳುತ್ತಾರೆ

ಬರ್ರಿ ಬರ್ರಿ ನೀವು ಒಳಗೆ ಬನ್ನಿರಿ
ಬೇಂದ್ರೆ ಇನ್ನಿಲ್ಲಾ ಅನ್ನಬ್ಯಾಡರಿ
ಬಟ್ಟಲ ಸಕ್ಕರ್ಯಾ್ಗಿ ಸಿಹಿ ಹಂಚತಾನ
ಮನಸ್ಸಿದ್ದರೆ ಕೈ ಹಾಕರಿ.

ಹೀಗೆ  ವರಕವಿ  ಬೇಂದ್ರೆಯವರ  ಸವಿಸಕ್ಕರೆಯನ್ನು  ಎಲ್ಲೆಡೆ  ಹಂಚುತ್ತಿದ್ದ  ವಾಮನ ದತ್ತಾತ್ರೇಯ  ಬೇಂದ್ರೆಯವರು  ಇಲ್ಲವಾಗಿರುವುದು  ನಮ್ಮ  ಕನ್ನಡ  ನಾಡಿಗರ  ಬದುಕಿಗೆ  ಅಪಾರ ನಷ್ಟವಾದಂತಾಗಿದೆ. 

ಈ  ಮಹಾನ್  ಚೇತನದ  ಆತ್ಮಕ್ಕೆ  ಶಾಂತಿ  ಒದಗಲಿ  ಎಂಬ  ಪ್ರಾರ್ಥನೆಯೊಂದಿಗೆ  ನಮ್ಮ  ನಮನಗಳು.

Tag: Vamana Dattatreya Bendre


ಕಾಮೆಂಟ್‌ಗಳಿಲ್ಲ: