ಶುಕ್ರವಾರ, ಅಕ್ಟೋಬರ್ 6, 2017

ಡಾ. ಸೌಮ್ಯಾ ಸ್ವಾಮಿನಾಥನ್


ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ 
ಹುದ್ದೆಗೆ ಡಾ. ಸೌಮ್ಯಾ ಸ್ವಾಮಿನಾಥನ್

ವಿಶ್ವ ಆರೋಗ್ಯ ಸಂಸ್ಥೆಯ ಯೋಜನೆಗಳ ಅನುಷ್ಠಾನ ವಿಭಾಗದ ಉಪ ಮಹಾ ಪ್ರಧಾನ ನಿರ್ದೇಶಕರಾಗಿ ಭಾರತೀಯ ವೈದ್ಯೆ ಮತ್ತು ವೈದ್ಯಕೀಯ ಸಂಶೋಧಕಿ  ಡಾ. ಸೌಮ್ಯಾ ಸ್ವಾಮಿನಾಥನ್ ಅವರು ನೇಮಕಗೊಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಪ್ರಧಾನ ನಿರ್ದೇಶಕ ಹುದ್ಧೆಯ ನಂತರದ ಈ ಎರಡನೇ ಹುದ್ದೆಯನ್ನು ಡಾ. ಸೌಮ್ಯಾ ಅಲಂಕರಿಸುತಿದ್ದಾರೆ.

ಮೂಲತಃ ಮಕ್ಕಳ  ವೈದ್ಯೆಯಾದ ಸೌಮ್ಯಾ ಸ್ವಾಮಿನಾಥನ್ ಅವರು ಕ್ಷಯರೋಗದ ಕುರಿತಾದ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದಾರೆ.    ಪ್ರಸ್ತುತ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕಿ (ಐಸಿಎಂಆರ್) ಹಾಗೂ ಆರೋಗ್ಯ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಸೌಮ್ಯಾ ಅವರು, ಚೆನ್ನೈನಲ್ಲಿರುವ ರಾಷ್ಟ್ರೀಯ ಕ್ಷಯರೋಗ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ   ಕಾರ್ಯನಿರ್ವಹಿಸಿದ್ದರು.

ಭಾರತೀಯ ಹಸಿರು ಕ್ರಾಂತಿಯ ಪಿತಾಮಹರೆನಿಸಿರುವ ಡಾ. ಎಂ. ಎಸ್. ಸ್ವಾಮಿನಾಥನ್ ಅವರ ಪುತ್ರಿಯಾದ ಡಾ. ಸೌಮ್ಯಾ ಸ್ವಾಮಿನಾಥನ್  ಅವರು ಭಾರತ, ಯುನೈಟೆಡ್ ಕಿಂಗ್ಡಂ ಮತ್ತು ಅಮೆರಿಕಗಳಲ್ಲಿ ತಮ್ಮ ವ್ಯಾಸಂಗ ತರಬೇತಿಗಳನ್ನು ನಡೆಸಿದವರು.  2009 – 2011 ಅವಧಿಯಲ್ಲಿ ಇವರು ಯೂನಿಸೆಫ್, ಯು ಎನ್ ಡಿ ಪಿ, ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಜಂಟಿ ವಿಶಿಷ್ಟ ಕಾರ್ಯಕ್ರಮವಾದ ‘ಉಷ್ಣವಲಯದ ಕಾಹಿಲೆಗಳ’ ಕುರಿತಾದ ಸಂಶೋಧನೆ ಮತ್ತ ತರಬೇತಿ ಕಾರ್ಯಕ್ರಮಗಳ ಪ್ರಧಾನ ಸಂಯೋಜಕಿಯಾಗಿದ್ದರು.  ಇದಲ್ಲದೆ  ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವದ ಅನೇಕ ಅರೋಗ್ಯ ಪ್ರಾತಿನಿಧಿಕ ಸಂಸ್ಥೆಗಳ ಹಲವಾರು ಸಮಿತಿಗಳು ಮತ್ತು ಸಲಹಾ ಸಮಿತಿಗಳಲ್ಲಿ ಇವರು ಸಂಭಾವಿತ  ಪ್ರಾತಿನಿಧ್ಯತೆ ಪಡೆದವರಾಗಿದ್ದಾರೆ.

ಈ ಮಹತ್ವದ ಸಾಧನೆಗಾಗಿ ಡಾ. ಸೌಮ್ಯಾ ಸ್ವಾಮಿನಾಥನ್ ಅವರಿ ಅಭಿನಂದನೆ ಮತ್ತು ಶುಭ ಹಾರೈಕೆ ಸಲ್ಲಿಸೋಣ. 

Tag: Dr. Soumya Swaminathan, WHO

ಕಾಮೆಂಟ್‌ಗಳಿಲ್ಲ: