ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಲತಿ ಪಟ್ಟಣಶೆಟ್ಟಿ



ಮಾಲತಿ ಪಟ್ಟಣಶೆಟ್ಟಿ


ಮಾಲತಿ ಪಟ್ಟಣಶೆಟ್ಟಿ ಸಾಹಿತ್ಯ, ಪ್ರಾಧ್ಯಾಪನ ಮತ್ತು ಸಂಘಟನಾ ಕಾರ್ಯಗಳಲ್ಲಿ ಹೆಸರಾದವರು.

ಮಾಲತಿ ಪಟ್ಟಣಶೆಟ್ಟಿ ಅವರು 1940ರ ಡಿಸೆಂಬರ್ 26ರಂದು ಕೊಲ್ಹಾಪುರದಲ್ಲಿ ಜನಿಸಿದರು.  ತಂದೆ ಶಾಂತೇಶ ಬಸವಣ್ಣೆಪ್ಪ ಕೋಟೂರ ಅವರು ಮತ್ತು ತಾಯಿ ಶಿವಗಂಗಾ ಅವರು.

ಮಾಲತಿ ಅವರ ವಿದ್ಯಾಭ್ಯಾಸ ಧಾರವಾಡದಲ್ಲಿ ನೆರವೇರಿತು.  ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಮಾಲತಿ ಪಟ್ಟಣಶೆಟ್ಟಿ ಅವರು  ಬೆಳಗಾವಿಯ ರಾಣಿ ಪಾರ್ವತಿದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಬೋಧನ ವೃತ್ತಿ ಪ್ರಾರಂಭಿಸಿದರು.  ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಮತ್ತು  ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ  ಸೇವೆ ಸಲ್ಲಿಸಿ ನಿವೃತ್ತರಾದರು. 

ಮಾಲತಿ ಪಟ್ಟಣಶೆಟ್ಟಿ ಅವರ ಸಾಹಿತ್ಯ ಕೃಷಿಯಲ್ಲಿ ಬಾ ಪರೀಕ್ಷೆಗೆ, ಗರಿಗೆದರಿ ತಂದೆ ಬದುಕು, ಗುಲಾಬಿ, ದಾಹ ತೀರ, ಮೌನ ಕರಗುವ ಹೊತ್ತು, ಇತ್ತೀಚಿನ ಕವಿತೆಗಳು, ಹೂದಂಡಿ (ಆಯ್ದ ಕವಿತಾ ಸಂಗ್ರಹ) ಮುಂತಾದವು ಕಾವ್ಯ ಸಂಕಲನಗಳು.  

ಇಂದು ನಿನ್ನಿನ ಕಥೆಗಳು ಮತ್ತು ಸೂರ್ಯ ಮುಳುಗುವುದಿಲ್ಲ ಕಥಾ ಸಂಕಲನಗಳು.  

ಬಸವರಾಜ ಕಟ್ಟೀಮನಿಯವರ ಬದುಕು ಬರಹ ಕುರಿತಾಗಿ ಮೂಡಿದ್ದು ವಿಮರ್ಶೆ. 

ಕಾವ್ಯ 96 (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ), ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ) ಮತ್ತು ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ) ಮುಂತಾದವು ಮಾಲತಿ ಪಟ್ಟಣಶೆಟ್ಟಿ ಅವರ ಸಂಪಾದನೆಗಳು.

ಬಸವರಾಜ ಕಟ್ಟೀಮನಿ ಅವರ 'ಮಾಡಿ ಮಡಿದವರು' ಕೃತಿಯ ಕುರಿತಾಗಿ ಮಾಲತಿ ಪಟ್ಟಣಶೆಟ್ಟಿ ಅವರ ‘ಸಾರ ಸಂಗ್ರಹ’ವೂ ಪ್ರಕಟಗೊಂಡಿದೆ.

ಬಹುಮುಖಿ ವ್ಯಕ್ತಿತ್ವದವರಾದ ಮಾಲತಿ ಪಟ್ಟಣಶೆಟ್ಟಿ ಅವರು  ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡಮಿ ಸಲಹಾ ಸದಸ್ಯರಾಗಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಕಾರ‍್ಯಾಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಮಂಗಳಾಮಂಟಪದ ಕಾರ‍್ಯಾಧ್ಯಕ್ಷೆಯಾಗಿ, ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಸದಸ್ಯರಾಗಿ, ಎಲ್.ಐ.ಸಿ.ಯ ಧಾರವಾಡ ಮಹಿಳಾ ಉದ್ಯೋಗಿಗಳ ದೌರ್ಜನ್ಯ ನಿಯಂತ್ರಕ ಸಮಿತಿಯ  ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಹೀಗೆ ವಿವಿಧರೀತಿಯಲ್ಲಿ  ಕಾರ‍್ಯನಿರ್ವಹಿಸುವುದರ ಜೊತೆಗೆ 2014 – 2017 ಅವಧಿಯಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸಹಾ ಕಾರ್ಯನಿರ್ವಹಿಸಿದರು.  ಹಲವಾರು ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಕಟಣೆಗಳು ಸ್ಥಗಿತಕೊಂಡಿದ್ದ ಸಮಯದಲ್ಲಿ ಎಲ್ಲವನ್ನೂ ಶೀಘ್ರದಲ್ಲಿ ಇತ್ಯರ್ಥಗೊಳಿಸುವ ವ್ಯವಸ್ಥೆಯನ್ನು ಮಾಲತಿ ಪಟ್ಟಣಶೆಟ್ಟಿ ಅವರು ತಮ್ಮ  ಕಾರ್ಯಾಧ್ಯಕ್ಷತೆಯ ಕಾಲಾವಧಿಯಲ್ಲಿ ಮೂಡಿಸಿದರು. 

ಮಾಲತಿ ಪಟ್ಟಣಶೆಟ್ಟಿ ಅವರ ಸಾಹಿತ್ಯ ಕೃಷಿಗೆ ಅನೇಕ ಬಹುಮಾನಗಳು ಸಂದಿರುವುದೇ ಅಲ್ಲದೆ,   ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ,  ಗೀತಾ ದೇಸಾಯಿ ಕಾವ್ಯ ಪ್ರಶಸ್ತಿ,  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ 2000ದ ಇಸವಿಯ  ಗೌರವ ಪ್ರಶಸ್ತಿ, ಬೆಳಗಾವಿಯ ನಾಡೋಜ ಪತ್ರಿಕೆಯ ಕಾತ್ಯಾಯಿನಿ ಸಾಹಿತ್ಯ ಪ್ರಶಸ್ತಿ, ಸರಸ್ವತಿ ಚಿಮ್ಮಲಗಿ ಪ್ರಶಸ್ತಿ,  ಡಿ.ಎಸ್.ಕರ್ಕಿ ಪ್ರಶಸ್ತಿ, ಹಲವಾರು ಕಾವ್ಯ ಗೋಷ್ಠಿ ಅಧ್ಯಕ್ಷತೆಗಳು ಮುಂತಾದ ಅನೇಕ ಗೌರವಗಳು ಸಂದಿವೆ.

ಹಿರಿಯ ಸಾಧಕರಾದ ಮಾಲತಿ ಪಟ್ಟಣಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of writer Malathi Pattanashetty 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ