ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆತ್ಮಾವಲೋಕನ ಮತ್ತು ಆತ್ಮ ಸಾಕ್ಷಾತ್ಕಾರ

ಹಲವು ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿದ್ದಾಗ ನಮ್ಮ ಸಹೋದ್ಯೋಗಿಗಳ ಮೇಜಿನ ಮೇಲೆ, “Oh God, I am lost, Please, Help me” ಎಂಬ ಉದ್ಘಾರದ ಸಣ್ಣ ಫಲಕವೊಂದಿತ್ತು. ಆ ಬರಹ ನನ್ನನ್ನು ತೀವ್ರವಾಗಿ ಸೆಳೆದಿತ್ತು. ದೇವರಿಗೆ ಬಹುಷಃ ಎಲ್ಲ ದಿನಗಳೂ ಅಡ್ಡ ಬಿದ್ದಿದ್ದೇನೆ. ಓದಿನ ದಿನಗಳಲ್ಲಿ ಓದದೆ ಪಾಸು ಮಾಡು ಎಂದು ಆಲದ ಮರ, ಗುಡಿಗಳನ್ನು ಸುತ್ತಿದ್ದೇನೆ. ಶಾಲೆಯ ಪುಸ್ತಕಗಳನ್ನು ಹೆಚ್ಚು ಓದದಿದ್ದರೂ ರಾಮಾಯಣ, ಮಹಾಭಾರತ ಕಥೆಗಳನ್ನು ಓದಿದ್ದೇನೆ. ಕೆಲಸ ಸಿಗಲಿ ಎಂದು ಹರಕೆ ಹೊತ್ತು ಕೆಲಸ ಗಿಟ್ಟಿಸಿದ್ದೇನೆ. ಬಾಸ್ ಬೈದಾಗ, ಸಂಭಳ ಸಾಲದಿದ್ದಾಗ, ಪ್ರೇಮ ಪತ್ರ ಒಪ್ಪಿಗೆ ಆಗುತ್ತದೋ ಇಲ್ಲವೋ ಎಂಬ ಭಯವಿದ್ದಾಗ, ಹೆಂಡತಿ ಕೋಪಗೊಂಡಾಗ, ನಾನು ಅರೋಗ್ಯ ತಪ್ಪಿದಾಗ, ನನ್ನ ಹೆಂಡತಿ ಮಕ್ಕಳು ಅನಿವಾರ್ಯವಾಗಿ ದೂರ ಇರಬೇಕಾದಾಗ, ಸಾಲದ ಹೊರೆ ಹೆಚ್ಚಿದ್ದಾಗ, ದಿನ ನಿತ್ಯ ನನ್ನ ತಪ್ಪುಗಳಿಂದಲೋ ಇನ್ಯಾವುದೇ ಕಾರಣದಿಂದಲೋ ನನ್ನ ಗೆಳೆಯರು – ಬಂಧುಗಳು ನನ್ನಿಂದ ವಿಮುಖರಾದಾಗ, ಮುಂದೆ ಹೇಗಪ್ಪ ಎಂಬ ಶಂಕೆ ಆದಾಗ, ಹಲವು ರೀತಿಯ ಭಯಗಳು ಉಂಟಾದಾಗ ಹೀಗೆ ಪ್ರತಿ ಭಾರಿ ದೇವರನ್ನು ಒಂದಲ್ಲ ಒಂದು ರೀತಿ ಶರಣು ಹೋಗಿದ್ದೇನೆ. ಇಷ್ಟಾದರೂ ದೇವರೇ, “ನಾನು ಕಳೆದು ಹೋಗಿದ್ದೇನೆ – ನಾನು ಅಸಹಾಯಕ ಎಂಬ ಪೂರ್ಣ ಮನೋಭಾವದಿಂದ” ಎಂದೂ ಬೇಡಿಲ್ಲ ಎಂಬ ಅರಿವು, ನಾನು ದೇವರನ್ನು ಸೀಮಿತ ದೃಷ್ಟಿಯಲ್ಲಿ ನೋಡುತ್ತಿರಬಹುದೇ ಎಂದು ಚಿಂತಿಸುವಂತೆ ಮಾಡಿತು.

ನಾವು ಆತ್ಮ – ದೇವರು ಇತ್ಯಾದಿ ವಿಚಾರದ ಬಗ್ಗೆ ಯಾರನ್ನಾದರೂ ಕೇಳಿದರೆ, ಎರಡು ವಿಚಾರಗಳು ತಕ್ಷಣ ನಮ್ಮ ಅನುಭವಕ್ಕೆ ಬರುತ್ತವೆ. ನಾವು ಆ ಪ್ರಶ್ನೆ ಕೇಳುತ್ತಿರುವುದು, ನಾವು ಯಾರನ್ನು ಕೆಳುತ್ತಿದ್ದೇವೆಯೋ ಅವರಲ್ಲಿ ನಮ್ಮ ಬಗ್ಗೆ ಒಳ್ಳೆಯ ಭಾವ ಮೂಡಿಸುವ ಆಕಾಂಕ್ಷೆ ಮೊದಲಿನದು. ನಾವು ಯಾರನ್ನು ಕೆಳುತ್ತೇವೆಯೋ ಅವರು ನಿಸ್ಸಂಶಯವಾಗಿ ಅವರು ಓದಿರುವ ಧರ್ಮಗ್ರಂಥಗಳ ಬಗ್ಗೆ, ಮಹಾ ಪುರುಷರ ಬಗ್ಗೆ ಹೇಳುತ್ತಾರೆ, ಅವರ ಅನುಭವವವನ್ನು ಹೇಳುವುದಿಲ್ಲ ಎನ್ನುವುದು ಎರಡನೆಯದು.

ನನಗೆ ರಾಮಕೃಷ್ಣ ಪರಮಹಂಸರು ಹೇಳುವ ಇಷ್ಟವಾದ ಕಥೆ ಇದು: “ಒಬ್ಬ ತಂದೆ ತನ್ನ ಮಕ್ಕಳನ್ನು ಮಹಾನ್ ಗುರುಗಳ ಬಳಿಯಲ್ಲಿ ಅಧ್ಯಯನಕ್ಕೆ ಕಳುಹಿಸಿದ್ದರು. ಹಲವು ವರ್ಷಗಳ ಅಧ್ಯಯನದ ನಂತರ ಮಕ್ಕಳು ಮನೆಗೆ ಹಿಂದಿರುಗಿದರು. ಆಧ್ಯಾತ್ಮದ ಆಸಕ್ತ ತಂದೆ ಮೊದಲನೆಯ ಮಗನನ್ನು ಕೇಳಿದರು. ದೇವರ ಬಗ್ಗೆ ನೀನೇನು ಅರಿತಿರುವೆ ಮಗು. ಮಗ ತಾನು ಕೇಳಿದ್ದನ್ನೆಲ್ಲ ಹೇಳಿದ, ತಂದೆಯೇ, “ದೇವರೆಂದರೆ, ಎಲ್ಲಕ್ಕಿಂತ ದೊಡ್ಡದು, ಬ್ರಹ್ಮ ರೂಪಿ, ನಿರ್ವಿಕಾರ, ನಿರ್ಗುಣ, ಸದ್ಗುಣ ಶೀಲ, ಸಕಲ ಜ್ಞಾನಗಳ ಆಗರ, ಎಲ್ಲೆಲ್ಲಿಯೂ ಇರುವವ ಇತ್ಯಾದಿ ಇತ್ಯಾದಿ.” ಎಲ್ಲವನ್ನೂ ಶಾಂತಚಿತ್ತನಾಗಿ ಆಲಿಸಿದ ತಂದೆ, ಈಗ ಎರಡನೆ ಮಗನನ್ನು ಕೇಳಿದ, ಮಗು, ನಿನ್ನ ಅನುಭವವಾದರು ಏನು? ಎರಡನೆಯ ಮಗ ಮಾತನಾಡದೆ ಮೌನವಹಿಸಿದ. ತಂದೆ ಪ್ರತಿಕ್ರಯಿಸಿದ, “ನೀನು ಅರಿತಿರುವ ಲಕ್ಷಣಗಳಿವೆ!”.

ಸೃಷ್ಟಿಯಲ್ಲಿನ ಎಲ್ಲ ಜೀವಿಗಳಂತೆ ಮನುಷ್ಯನಿಗೂ ದೇಹ ಮತ್ತು ಇಂದ್ರಿಯಗಳ ತೋಷಣೆಗಾಗಿನ ಬಯಕೆಗಳಿವೆ. ಅಷ್ಟರ ಮಟ್ಟಿಗೆ ಮನುಷ್ಯ ಕೂಡ ಒಂದು ಪ್ರಾಣಿ. ಮನುಷ್ಯನೂ ಗಿಡ ಮರಗಳಂತೆ, ಪ್ರಾಣಿಗಳಂತೆ ಬದುಕಬಹುದಿತ್ತು. ಆದರೆ ಮನುಷ್ಯ ಈ ಪ್ರಾಣಿಗಳಿಗೆ, ಗಿಡಮರಗಳಿಗೆ ಮೀರಿದ ಸಂವೇದನೆಯನ್ನು ಪಡಿದಿದ್ದಾನೆ. ಆದ್ದರಿಂದ ಆತ ತನ್ನ ದೇಹ ಮತ್ತು ಇಂದ್ರಿಯಗಳ ಪರಿದಿಗೂ ಮೀರಿದ ಯಾವುದನ್ನೋ ಹುಡುಕುತ್ತಲೇ ಇರುತ್ತಾನೆ. ಅರಸುವಿಕೆ ಮನುಷ್ಯನ ಮೂಲ ಗುಣ. ಈ ಅರಸುವಿಕೆ ‘ಅತೃಪ್ತಿಯೇ?’. ನಮ್ಮ ಹಲವು ಧರ್ಮಗಳು ಆಸೆಯೇ ದುಃಖಕ್ಕೆ ಕಾರಣ ಎಂದು ಉದ್ಘೋಷಿಸಿರುವಾಗ, ‘ಆಸೆಯೇ ಇಲ್ಲದ ಅತೃಪ್ತಿಯೇ?’ ಎಂಬ ಪ್ರಶ್ನೆ ನನ್ನೆದುರು ನಿಂತಿದೆ. ಬುದ್ಧ ಭಗವಾನರಂತವರ ಭೋಧನೆಯಲ್ಲಿ, ಬುಧ್ಧತ್ವ- ಮೊಕ್ಷಗಳನ್ನೋಳಗೊಂಡಂತೆ ಆತ್ಮ ಜ್ಞಾನದ ಆಸಕ್ತನಿಗೆ ಯಾವುದೂ ಅಪೇಕ್ಷಣೀಯವಲ್ಲ. ತನ್ನನ್ನು ತಾನು ಬರಿದಾಗಿಸಿಕೊಳ್ಳುವುದೇ “ನಿರ್ವಾಣ”.

ನನಗೆ ಬುಧ್ಧ ಭಗವಾನರು ಹೇಳುವ ನಿರ್ವಾಣದಲ್ಲಿ ಅತಿ ಗೌರವ ಪ್ರೀತಿಗಳಿವೆ. ಇಷ್ಟಾದರೂ, ನಾನು ಜೀವನದ ವಿಧ್ಯಾರ್ಥಿ, ನಾನು ಮಾಡುತ್ತಿರುವುದು ಒಂದು ರೀತಿಯ ಅರಸುವಿಕೆಯೇ ಆದ್ದರಿಂದ ಈ “ಅತೃಪ್ತಿ” ಎಂಬ ಪದವನ್ನು ಹುಡುಕಾಟ-ಅರಸುವಿಕೆಗಳ ಅನ್ವರ್ಥವಾಗಿ ಮತ್ತು ಬದುಕಿನ ಜಂಜಾಟಗಳ ನಡುವಿನ ಅನ್ವೇಷಕ ಶಕ್ತಿಯಾಗಿ ಬಳಸುತ್ತಿದ್ದೇನೆ.

ನಾನೂ, ಮಿಕ್ಕೆಲ್ಲರಂತೆ ಅತೃಪ್ತಿಯನ್ನು ಬಯಸುವುದಿಲ್ಲ. ಆದರೆ, “ಈ ಅತೃಪ್ತಿಯೇ ನನ್ನ ಚಲನ ಶಕ್ತಿಯ ಇಂಧನ ಅಲ್ಲವೆ?” ಎಂದು ನನಗನ್ನಿಸುತ್ತದೆ. ದೇವರು ಅಥವ ಪ್ರಕೃತಿ ನಮಗೆ ಕೊಟ್ಟಿರುವ ಅಮೂಲ್ಯ ಕೊಡುಗೆ ಎಂದರೆ ನಮ್ಮ ಜೀವನದಲ್ಲಿ ನಮಗೆ ಆಗಾಗ ಮೂಡುವ ಅತೃಪ್ತಿ. ನಮ್ಮ ಅವಶ್ಯಕತೆಗಳು ಎಲ್ಲ ಅನ್ವೇಷಣೆಗಳ ಮೂಲ ಇರಬಹುದು. ಆದರೆ ನಮ್ಮಲ್ಲಿ ಏನೆಲ್ಲಾ ಇದ್ದರೂ ಅದೇನೋ ಇಲ್ಲ ಎಂಬ ಅತೃಪ್ತಿ ಇದೆಯಲ್ಲ ಅದೇ ನಮ್ಮ ಬದುಕಿನ ಎಲ್ಲ ನೋವು, ಸಾಧನೆ ಮತ್ತು ಅರಿವುಗಳ ಮೂಲ. ಬದುಕನ್ನು ಕೆದಕಿದಷ್ಟೂ ನೋವು, ನೋವನ್ನು ಶಮನ ಮಾಡಲು ಪ್ರಯತ್ನಿಸಿದಷ್ಟೂ ಅತೃಪ್ತಿ, ಅತೃಪ್ತಿ ಹೆಚ್ಚಾದಷ್ಟೂ ಹುಡುಕಾಟ, ಆ ಹುಡುಕಾಟದ ದೆಸೆಯಲ್ಲಿ ಏನೋ ಹೊಳಹು, ಏನೋ ಧನ್ಯಭಾವ , ಮತ್ತೆ ಅದರಲ್ಲೂ ಹಳತಾಗಿ ಇನ್ನೇನೋ ಅರಸುವಿಕೆ ಹೀಗೆ ನಮ್ಮ ಅತೃಪ್ತ ಜೀವ ಸಂಚಾರಿಯಾಗಿ ನಿರಂತರ ಯಾತ್ರೆಯಲ್ಲಿರುತ್ತದೆ.

ಸಿದ್ಧಾರ್ಥ ಮಹಾನುಭಾವ ಸಾಮ್ರಾಜ್ಯ, ರಾಜಭೋಗ, ಸುಖ ಸಂಸಾರ ಎಲ್ಲ ಇದ್ದೂ ಯಾವುದೋ ಅತೃಪ್ತಿಯಲ್ಲಿದ್ದರು. ನಮ್ಮ ಮಹಾತ್ಮಗಾಂಧಿ ಅವರು ವ್ಯವಸ್ಥೆ ತೋರುವ ಭೇದಭಾವಗಳ ಬಗ್ಗೆ ಅತೃಪ್ತಿ ಹೊಂದಿದ್ದರು. ನಮ್ಮ Infosysನ ನಾರಾಯಣ ಮೂರ್ತಿ ಅವರು, ಕಮುನಿಸ್ಟ್ ದೇಶವೊಂದರಲ್ಲಿ ಅಲ್ಲಿನ ವ್ಯವಸ್ಥೆಯ ತಪ್ಪು ಕಲ್ಪನೆಗಳ ಸಂದೇಹಗಳಿಗೆ ಬಲಿಪಶುವಾಗಿ ವಿನಾಕಾರಣ ತಾವು ಬಂಧನಕ್ಕೆ ಒಳಗಾದಾಗ ತಮ್ಮಲ್ಲಿ ಮೂಡಿದ ಅಸಂತೋಷ-ಅತೃಪ್ತಿಗಳು ತಮ್ಮಲ್ಲಿ ಎರಡು ಪ್ರಮುಖ ಚಿಂತನೆಗಳನ್ನು ಹುಟ್ಟು ಹಾಕಿದವು, ಒಂದು ಪ್ರಜಾಪ್ರಭುತ್ವಕ್ಕೆ ಮಿಗಿಲಾದದ್ದಿಲ್ಲ ಮತ್ತು ಎರಡನೆಯದು, ಸಾಕಷ್ಟು ಉತ್ತಮ ಗಳಿಕೆಯ ವಾತಾವರಣಗಳು ಸೃಷ್ಟಿ ಆಗದೆ ಭಾರತ ದೇಶದಲ್ಲಿ ಪ್ರಗತಿ ಸಾಧ್ಯವಿಲ್ಲ ಎನ್ನುತ್ತಾರೆ. ಬಿಲ್ ಗೇಟ್ಸ್ ಅವರಿಗೆ ಗಣಕ ಯಂತ್ರ ಉಪಯೋಗಿಸಲು ಯಾವುದೊ ಕಾರ್ಖಾನೆಗೆ, ಸೈನ್ಯದ ನಿಯಂತ್ರಣ ಕಚೇರಿಗಳಿಗೆ, ದೊಡ್ಡ ವಿಶ್ವ ವಿಧ್ಯಾಲಯಗಳಿಗೆ ಜನ ಹೋಗಬೇಕಾದ ಬಗ್ಗೆ ಅತೃಪ್ತಿ ತೀವ್ರವಾಗಿತ್ತು. ಸ್ಟೀವ್ ಜಾಬ್ಸ್ ಅವರಿಗೆ ಏನಾದರೂ ಹೊಸದು ಮಾಡದಿದ್ದರೆ ಅತೃಪ್ತಿ. ಅದಕ್ಕಾಗಿ ಅವರು ಅವರ ಬಗ್ಗೆ ಚಿಂತಿಸಲೇ ಇಲ್ಲ. ಅವರ ಬಳಿ ಏನೂ ಇಲ್ಲದ ದಿನಗಳಲ್ಲಿ ಅವರು ಅವರಿದ್ದ ಸ್ಥಳದಿಂದ ೫ ಮೈಲು ದೂರ ಇದ್ದ ಇಸ್ಕಾನ್ ಕೃಷ್ಣ ದೇವಸ್ಥಾನಕ್ಕೆ ಊಟ ಸಿಗುತ್ತದೆ ಎಂದು ನಡೆದು ಹೋಗುತ್ತಿದ್ದರಂತೆ. ಹಲವು ಬಾರಿ ಕೆಲಸ ಕಳೆದುಕೊಂಡರು. ಆಪಲ್ ಸಂಸ್ಥೆ ಕೂಡ ಅವರನ್ನು ಹೊರಗೆ ಬಿಸಾಡಿತ್ತು. ಆದರೂ ಅವರು ಹೊಸತನ್ನು ಸಾಧಿಸಬೇಕೆನ್ನುವ ಅತೃಪ್ತಿಯನ್ನು ನಿರಂತರ ಮಂತ್ರವಾಗಿರಿಸಿಕೊಂಡು ಮುಂದುವರೆದಿದ್ದಾರೆ. ಥಾಮಸ್ ಆಲ್ವಾ ಎಡಿಸನ್ ಅವರಿಗೆ ತಾವು ಏನೆಲ್ಲವನ್ನು ನಿರ್ಮಿಸಿದರೂ ಇನ್ನೂ ಏನೋ ನಿರ್ಮಿಸದ ಅತೃಪ್ತಿ, ಐನ್ ಸ್ಟೀನ್ ಅವರಿಗೆ ಪ್ರಪಂಚದ – ವಿಜ್ಞಾನದ ಎಲ್ಲ ನಿಗೂಢಗಳನ್ನೂ ಭೇದಿಸಲಾಗದ ಅತೃಪ್ತಿ, ಹಿಟ್ಲರ್-ಅಲೆಗ್ಸಾಂಡರ್ ಅವರಿಗೆ ಇಡೀ ವಿಶ್ವ ಅವರದಾಗದ ಅತೃಪ್ತಿ, ರಫಿ, ಲತಾ, ಕಿಶೋರ್, ಪಿ.ಬಿ.ಎಸ,, ಮುಖೇಶ್, ಎಸ.ಪಿ.ಬಿ,, ರೆಹಮಾನ್, ಮೈಖೆಲ್ ಜಾಕ್ಸನ್, ಎಂ,ಎಸ, ಸುಬ್ಬುಲಕ್ಷ್ಮಿ, ಮನ್ಸೂರ್ ಇನ್ನೂ ನಿಮಗಿಷ್ಟವಾದ ಯಾವುದೇ ಸಂಗೀತಕಾರರ ಗಾಯನದಲ್ಲೂ ನಿಮ್ಮನ್ನು ಸೆಳೆಯುವ ಆರ್ದ್ರತೆ ಇದೆಯಲ್ಲ ಅದು ಕೂಡ ಯಾವುದೋ ಕಾಣದ್ದನ್ನು ಅರಸುವ ಸೂಕ್ಷ್ಮತೆಯೇ. ನಮ್ಮ ಹಲವಾರು ರಾಜಕೀಯ ನಾಯಕರುಗಳಿಗೆ ಸ್ಥಾನಮಾನ ಗಳಿಸದ-ಉಳಿಸಿಕೊಳ್ಳದ ಅತೃಪ್ತಿ ನಿರಂತರವಾಗಿರುತ್ತದೆ , ನಮ್ಮಂತವರಿಗೆ ಬಗೆ ಬಗೆಯ ಕಾಮನೆಗಳ, ವಸ್ತುಗಳ, ಅಹಂಭಾವ ಪೂರೈಸದ, ವಿಚಿತ್ರ, ವಿಚ್ಚಿದ್ರಕಾರಕದವರೆಗಿನ ನಿಗೂಡ ಅತೃಪ್ತಿಗಳು. ಪುಟ್ಟ ಮಕ್ಕಳಿಗೆ ಕೂಡ ಅವರಿಗೆ ಬೇಕಾದ್ದು ತಕ್ಷಣವೇ ಸಿಗಲಿಲ್ಲ ಎಂಬ ಯಾವುದೊ ಅತೃಪ್ತಿ. ನಮ್ಮ ರತನ್ ಟಾಟ ಅವರ ಇತ್ತೀಚಿನ ಭಾಷಣ ಓದುತ್ತಿದ್ದೆ. ಅವರು ಶಾಲೆಯಲ್ಲಿದ್ದಾಗ ಅವರ ಅಜ್ಜಿ ಇವರಿಗಾಗಿ ಶ್ರೀಮಂತ ಕಾರು ಕಳುಹಿಸುತ್ತಿದ್ದರಂತೆ. ತಾವು ಇತರ ಮಕ್ಕಳಂತೆ ಸಾಮನ್ಯವಾಗಿರಲು ಸಾಧ್ಯವಿಲ್ಲವಲ್ಲ ಎಂಬ ಅತೃಪ್ತಿ ಅಂದಿನ ದಿನಗಳಲ್ಲಿ ತಮ್ಮನ್ನು ಕಾಡುತ್ತಿತ್ತು ಎನ್ನುತ್ತಾರವರು.
ಈ ಅತೃಪ್ತಿಯ ಹಿನ್ನಲೆಯ ಬೆನ್ನು ಹತ್ತಿ ಮನುಷ್ಯ ಹೋದಾಗ ಆತ ಕಾಣುವ ಗೆಲುವುಗಳು, ಆತನ ಸಾಧನೆಯನ್ನು, ಪ್ರಪಂಚಕ್ಕೆ ತಿಳಿಸುತ್ತವೆ, ನಿಜ!. ಸೋಲುಗಳು ಬಹಳ ಸಲ ಮನುಷ್ಯರನ್ನು ಇಲ್ಲದಂತೆ, ಇಲ್ಲವೇ ನಗಣ್ಯರನ್ನಾಗಿ ಮಾಡಿರಲೂ ಸಾಕು! ಆದರೆ, ಈ ಗೆಲುವು ಸೋಲುಗಳ ಮಧ್ಯೆ ಅವರು ನಡೆದ ಹಾದಿ ಇದೆಯಲ್ಲ, ಆ ಹಾದಿ ನಿರ್ಮಾಣದ ಬಗೆ ಇದೆಯೆಲ್ಲ, ಆ ಹಾದಿಯ ನಿರ್ಮಾಣದಲ್ಲಿ, ಆ ಹಾದಿಯ ತಪಸ್ಸಿನಲ್ಲಿ ಅವರು ಅವರನ್ನು ಕಳೆದುಕೊಂಡ ಕ್ಷಣಗಳಿವೆಯಲ್ಲ - ಅದು ನೀವಾಗಿರಬಹುದು, ನಾನಾಗಿರಬಹುದು, ತೇನ್ಸಿಂಗ್ ಇರಬಹುದು, ತೆಂಡೂಲ್ಕರ್ ಇರಬಹುದು, ವಸಿಷ್ಠ, ಗೌತಮ, ಐನ್ ಸ್ಟೀನ್, ರಾಮನ್, ಬುದ್ಧ, ಮಹಮ್ಮದ್, ಕ್ರೈಸ್ತ, ನಾನಕ್, ರಾಮ, ಕೃಷ್ಣ, ..................ಯಾರೇ ಇರಬಹದು. ಅವರು ತಮ್ಮನ್ನು ತಾವು ಕೆಳೆದುಕೊಂಡ ಆ ಕ್ಷಣಗಳೇ ಅವರ ಬದುಕಿನ ಅಮೂರ್ತ ಕ್ಷಣಗಳು. ಅವರು ಆ ಕ್ಷಣದಲ್ಲಿ ಅವರನ್ನು ಇಲ್ಲವಾಗಿಸಿಕೊಂಡು, ತಮ್ಮನ್ನು ಜಾಗೃತವಾಗಿ ಕಂಡುಕೊಂಡು ತಮ್ಮ ಕೃತಿಯಲ್ಲಿ ಅದನ್ನು ಅಭಿವ್ಯಕ್ತಿಸುವುದಿದೆಯಲ್ಲ ಅದೇ ಅವರು ಬದುಕಿನಲ್ಲಿ ಅನುಭವಿಸಿರುವ ಧನ್ಯತೆ. ಅದು ಬೇಕಾದಾಗ ಬರುವುದಿಲ್ಲ, ಅದು ಬಂದಾಗ ಕಂಡುಕೊಳ್ಳುವುದಷ್ಟೇ! ಅದೇ ದರ್ಶನ.

ಅಂದರೆ ಎಲ್ಲರೂ ಈ ದರ್ಶನವನ್ನು ಕಂಡುಕೊಂಡಿರ ಬಹುದಲ್ಲವೆ. ಹೌದು. ಯಾವುದೋ ಪ್ರಕೃತಿ ದರ್ಶನದಲ್ಲೋ, ಪ್ರೀತಿಯಲ್ಲೊ, ಕಾರ್ಯ ಮಗ್ನತೆಯಲ್ಲೋ, ಕಷ್ಟ-ದುಃಖಗಳ ಅನುಭಾವದಲ್ಲೋ, ಗಾನಾಮೃತದಲ್ಲೋ, ಓದಿನಲ್ಲೋ, ಪರೀಕ್ಷೆಯಲ್ಲೋ, ಕಲೆಯಲ್ಲೋ, ನೋವಿನಲ್ಲೋ, ಸಂಭೋಗದಲ್ಲೋ, ಸುಖ ನಿದ್ರೆಯಲ್ಲೋ, ಭಕ್ತಿಯಲ್ಲೋ, ಧ್ಯಾನದಲ್ಲೋ ಇಂತಹ ಹೊಳಹುಗಳು ಎಲ್ಲರಿಗೂ ಕಂಡಿರಲು ಖಂಡಿತ ಸಾಧ್ಯ. ಆದರೆ, ಇದನ್ನು ವರ್ಣಿಸಿ ಎಂದು ಯಾರನ್ನಾದರೂ ಕೇಳಿ. ಸಾಧ್ಯವಿಲ್ಲ.

ಈ ಪ್ರಪಂಚದ ಜನರೆಲ್ಲ ಸ್ವಾರ್ಥಿಗಳು ಎಂಬ ಭಾವ ನಮ್ಮಲ್ಲಿದೆಯೇ. ಹಾಗಿದ್ದರೆ, ಯಾರನ್ನಾದರೂ ಕೇಳಿ ಆ ಅವ್ಯಕ್ತ ಅನುಭವ ನಿಮ್ಮಲ್ಲಿ ಯಾವುದೋ ಕ್ಷಣದಲ್ಲಿ ಆಯಿತೆಲ್ಲ ಅದರ ಮುಂದೆ ನಿಮ್ಮ ಎಲ್ಲ ಸುಖ ಸಂಪತ್ತುಗಳನ್ನು ಹೋಲಿಸಿದರೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು! ಆಗ ನಮಗರಿವಾಗುತ್ತದೆ, ಓಹ್, ನನ್ನ ಅಭಿಪ್ರಾಯ ತಪ್ಪು. ಇಲ್ಲಿರುವವರು ಸ್ವಾರ್ಥಿಗಳಲ್ಲ. ಬಹಳ ಅಸಹಾಯಕರು ಎಂದು. ಮಹಾತ್ಮರುಗಳು ಎಲ್ಲರನ್ನೂ ಎಲ್ಲವನ್ನೂ ದೈವವೆಂದು ಬಗೆಯುವ ಮೂಲದ ಸೆಲೆಯೇ ಇದು.

ಒಮ್ಮೊಮ್ಮೆ ಯಾವುದೋ ನಿಷ್ಯಬ್ದತೆ ನಮ್ಮನ್ನಾವರಿಸಿದ್ದಾಗ, ಹೀಗನಿಸುವುದುಂಟು. ಈ ನನ್ನನ್ನು ನಾನು ಅಂದುಕೊಳ್ಳುತ್ತಿದ್ದೇನಲ್ಲ, ಅದು ಇನ್ನೊಬ್ಬನಲ್ಲೂ ಅನಿಸುತ್ತಿರಬಹುದಲ್ಲವೇ ಅಂತ. ಹಾಗಾದರೆ, ಆ ನಾನೂವಿಗೂ, ನನ್ನ ನಾನೂವಿಗೂ ಏನಾದರೂ ಸಂಬಂಧ ಇರಬಹುದೇ! ಮತ್ತೊಮ್ಮೆ ಅದೇ ಉತ್ತರ, ಹೌದು. ಅದರ ವರ್ಣನೆ ಸಾಧ್ಯವಿಲ್ಲ. ಜೊತೆಗೆ, ಆ ಚಿಂತನೆಯ ಮುಂದುವರಿಕೆ ಕೂಡ ನಮಗೆ ಸಾಧ್ಯವಾಗುತ್ತಿಲ್ಲ!. ಬಹುಷಃ, ಪ್ರಾಜ್ಞರು ಹೇಳುತ್ತಾರೆ, ನಿನಗೆ ಬೇಕಿರುವುದು ಅದರ ಮುಂದುವರಿಕೆಯಲ್ಲ. ನಿನ್ನನು ನೀನು ಅಲ್ಲೇ ಇರಿಸಿಕೊಳ್ಳುವುದು ಅತಿ ಮುಖ್ಯ ಎಂದು. ಅಂತಹ ಪವಿತ್ರ ಸ್ಥಿತಿಯಲ್ಲಿ ನಮ್ಮನ್ನು ಇರಿಸಿಕೊಂಡು ಅದರ ಒಳಗನ್ನು ಅರ್ಥೈಸಿ ಅನುಭವಿಸುವುದೇ ಆಧ್ಯಾತ್ಮ ದರ್ಶನ. ಅದೇ ನಿಜವಾದ ಆತ್ಮಾವಲೋಕನ. ನಾವು ನಮಗೆ ಮುಂದುವರೆಯಲು ದಿಕ್ಕು ಗೊತ್ತಿಲ್ಲ ಎಂದು, ಆ ಅನುಭವದಿಂದ ಈಚೆ ಬಂದು ನಮ್ಮ ದಿನ ನಿತ್ಯದ ವೈಪರೀತ್ಯ ಜೀವನಗಳ ಯಾಂತ್ರಿಕಥೆಯಲ್ಲಿ ನಮ್ಮನ್ನು ಕಳೆದುಕೊಳ್ಳತೊಡಗುತ್ತೇವೆ.

ನಮಗೆ ಸಿಹಿಯ ಅನುಭವ ಆದರೆ, ಆ ಅನುಭವದಲ್ಲಿ ಇರುವುದನ್ನು ಬಿಟ್ಟು, ಇನ್ನಷ್ಟು ಸಿಹಿಯನ್ನು ಹಾಕಿಕೊಳ್ಳುವ ಯಾತ್ರೆಯಲ್ಲಿ ನಮ್ಮನ್ನು ತೊಡಗಿಸಿ, ಅದನ್ನು ವಾಖರಿಸಿಕೊಂಡು ಆ ಅನುಭವದಿಂದ ಹೊರ ಬರುವ ಕೆಲಸವನ್ನೇ ನಾವು ಸಾಮಾನ್ಯವಾಗಿ ಮಾಡುತ್ತೇವೆ.ಮೇಲ್ಕಂಡ ದಿವ್ಯ ಅನುಭವಗಳ ದೆಸೆಯಲ್ಲೂ ನಾವು ಮಾಡುವ ಕೆಲಸ ಅದೇ, ಹೊರಬರುವುದು. ಅದು ಸಿಗುವುದು ಎಲ್ಲಿ ಎಂದು ಗೊತ್ತಿದ್ದರೂ ನಮ್ಮಲ್ಲಿನ ಯಾವುದೊ ಜಾಡ್ಯ, ಸ್ವಲ್ಪ ತಡಿ ಈ ಸಿದ್ಧವಾಗಿರುವ, ಸುಲಭವಾಗಿ ಲಭ್ಯವಿರುವುದನ್ನು ಉಪಯೊಗಿಸು ಎಂದು ಹೇಳುತ್ತದೆ. ಈ ಜಾಡ್ಯ ನಮ್ಮನ್ನು ನಮ್ಮ ಅತೃಪ್ತಿಯ ಅಭಿವ್ಯಕ್ತಿಗೆ ಮುನ್ನವೇ ವಿಧ ವಿಧ ಪರಿಕರಗಳನ್ನು ತೋರಿಸಿ, ಇಲ್ಲಿ ಎಲ್ಲ ಇದೆ, ಸುಮ್ಮನೆ ಅನುಭವಿಸು ಎನ್ನುತ್ತದೆ. ನಮಗೆ ಅತೃಪ್ತಿ ಇದೆ ಎಂದು ಚಿಂತಿಸುವುದಕ್ಕೂ ಬಿಡದಷ್ಟು ನಮ್ಮನ್ನು ಬದುಕಿನಲ್ಲಿ ವ್ಯಸ್ಥರನ್ನಾಗಿ ಮಾಡುತ್ತದೆ. ಈ ವ್ಯಸ್ಥತೆಯೇ ಮೋಹ – attachment. ಈ ಮೋಹಕ್ಕೆ ನಾವು ಅಂಟಿಕೊಂಡಿರುವಷ್ಟು ಸಮಯವೂ ನಮ್ಮಲ್ಲಿ ಜಾಗೃತಿ ಇರುವುದಿಲ್ಲ. ಹಸಿವಿಲ್ಲದಿದ್ದರೂ ತಿನ್ನುತ್ತೇವೆ, ಅದೂ, ನಾವು ಏನು ತಿಂದೆವು ಎಂದು ಅರಿವಾಗದಷ್ಟು ಯಾಂತ್ರಿಕವಾಗಿ! ಅವಶ್ಯಕತೆ ಇಲ್ಲದಿದ್ದರೂ ಅಡ್ಡಾಡುತ್ತೇವೆ, ಅಂದರೆ ನಾವು ಏನು ಮಾಡುತ್ತಿದ್ದೇವೆ ಎಂಬ ಅರಿವಿಲ್ಲದೆ ದೇಹವನ್ನು ಯಾಂತ್ರಿಕವಾಗಿ ದಣಿಸುತ್ತೇವೆ. ನಮಗೆ ಏನು ಬೇಕು ಎಂದು ಕಂಡು ಕೊಳ್ಳುವ ಮೊದಲೇ ಚಹಾ, ಕಾಫಿ, ಸಿಗರೇಟು, ಶರಾಬು ಮತ್ತಿತರ ಭೋಗಾದಿ ವ್ಯಸನಗಳ ಹುತ್ತದೊಳಗೆ ಕೈ ಹಾಕಿ ಅದು ನಮಗೆ ಅರಿವಾಗುವ ಮುಂಚೆಯೇ ಆ ಕರ್ಮದ ಪರಿಣಾಮದಲ್ಲಿ ವಿಷಪ್ರಾಯರಾಗಿರುತ್ತೇವೆ. ನಾವು ಪ್ರಾಣಿಗಳಿಗೆ ಮಿಗಿಲಾದ ಸಾಧ್ಯತೆ ಉಳ್ಳವರು ಎಂಬ ಅರಿವನ್ನು ಹೊಂದಿದ್ದೂ ನಮ್ಮಲ್ಲಿನ ಮೃಗೀಯ ಭಾವನೆಗಳನ್ನು ಹೆಚ್ಚು ಹೆಚ್ಚು ಪೋಷಿಸಿಕೊಂಡು ನಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಪರಿ ಇದು. ಮೇಲೆ ಹೇಳಿದ ವ್ಯಸನಗಳು ನಮ್ಮೊಳಗೇ ನಾವು ಆಂತರಿಕವಾಗಿ ಕಂಡುಕೊಳ್ಳುವ ಅವಿತುಕೊಳ್ಳುವಿಕೆಯಾದರೆ, ನಾವು ಇತರರ ಸಂಪರ್ಕದಲ್ಲಿ ಮಾಡುವುದೆಲ್ಲ ಮತ್ತೊಬ್ಬರ ಕುರಿತಾದ ಬೇಡದ ಮಾತುಗಳಿಗೇ ಸೀಮಿತವಾಗಿರುತ್ತವೆ.

ನಾವು ಏನು ಮಾಡುತ್ತಿದ್ದೇವೆ, ನಮಗೇನು ಬೇಕು ಎಂಬ ಅರಿವಿಲ್ಲದಿರುವುದೇ ಸಕಲ ವ್ಯಸನ, ಅನಿಷ್ಟಗಳಿಗೆ ಕಾರಣ. ಅಷ್ಟೇ ಅಲ್ಲ, ನಮ್ಮ ಇಂತಹ ಬದುಕಿನಲ್ಲಿ ನಾನು ಯಾರೆಂಬ ಆಧ್ಯಾತ್ಮದ ಅರಿವು ಸಾಧ್ಯವೇ ಇಲ್ಲ ಎಂಬ ಮಾತಿರಲಿ. ನಾನು ಯಾರೆಂಬ ಸಾಮಾನ್ಯ ಪರಿಜ್ಞಾನ – ಸಿಂಪಲ್ ಕಾಮನ್ ಸೆನ್ಸ್ ಕೂಡ ಮರೆಯಾಗಿ ಹೋಗಿರುತ್ತದೆ. ನಾನು ಯಾರು ಎಂದು ಕೇಳಿದರೆ, ಇಂತಲ್ಲಿ ಅಧಿಕಾರಿ ಎಂತಲೋ, ನನ್ನ ಬಳಿ ಇಂತಹ ಕಾರ್, ಇಂತಹ ಬಂಗಲೆ, ಆ ದೇಶದ ಗ್ರೀನ್ ಕಾರ್ಡ್ ಇಷ್ಟೇ ಅಲ್ಲ, ಅಧಿಕಾರದಲ್ಲಿ ನಾನು ಏನಾಗಿದ್ದೆನೋ ಅದ್ದಕ್ಕೆ ಎರಡು ಪಂಕ್ತಿ ಮೇಲೆ, ವಯಸ್ಸಿನಲ್ಲಿ ಯೌವನಕ್ಕೆ ಆದಷ್ಟು ಆಸು ಪಾಸು, ಸಂಭಳದ ಬಗ್ಗೆ ಬಂಧುಗಳ ಬಳಿ ಹೆಚ್ಚು, ಕಂದಾಯ ಅಧಿಕಾರಿಗಳ ಬಳಿ ಹಾಗೂ ಆಶ್ರಿತರ ಬಳಿ ಕಡಿಮೆ, ಹೀಗೆ ಸಾಗುತ್ತದೆ ನಾನೆಂಬ ಚಿತ್ರಣ.
ಇಲ್ಲಿ ನಾನು ಎಂಬುದು ಒಂದು ರೀತಿಯಲ್ಲಿ ವ್ಯಸನಗಳ ಬುತ್ತಿ, ಅಂದರೆ, ನನ್ನನ್ನೇ ನಾನು ನೋಡಲಿಕ್ಕೆ ಇಷ್ಟ ಪಡದೆ ಮರೆಯಾಗಿಸಿಕೊಳ್ಳುವಿಕೆ. ಮತ್ತೊಂದು ಜೀವನ ಸಂಪರ್ಕದಲ್ಲಿ ನಾನು ಎಂಬ ಬಗ್ಗೆ ಸುಳ್ಳಿನ ಚಿತ್ರಣ, ಅಂದರೆ ನಾನು ಯಾರು ಎಂಬ ಬಗ್ಗೆ ನನ್ನಲ್ಲೇ ಪ್ರಾಮಾಣಿಕ ಅಭಿಪ್ರಾಯ ಇಲ್ಲದಿದ್ದಾಗಿಯೂ ಇತರರಲ್ಲಿ ಮಹಾತ್ಮನೆನಿಸಿಕೊಳ್ಳಬೇಕು ಎಂಬ ಭ್ರಮೆ. ಈ ವ್ಯಸನಗಳು-ಭ್ರಮೆಗಳು ನಿಷ್ಪಲವಾದಾಗ ಕ್ರೋಧ, ಭಯ, ಆಕ್ರಮಣ, ಪ್ರತಿಕ್ರಮಣ, ಹತ್ತಿಕ್ಕುವಿಕೆ, ನಾನೇ ಸರಿ ಎಂಬ ಅಹಂಕಾರಿ ಘೋಷಣೆ ಇತ್ಯಾದಿಗಳಲ್ಲಿ ಬದುಕು ಮತ್ತಷ್ಟು ವ್ಯವಧಾನವಿಲ್ಲದಂತೆ ಕಳೆದುಹೋಗುತ್ತಿದೆ. ಈ ವ್ಯವದಾನರಹಿತ ಮನೋಭಾವಗಳ ಮಧ್ಯೆ, ‘ನಾನು’ ಯಾರೆಂದು ಅರಿತುಕೊಳ್ಳುವ ಪ್ರೇರೇಪಣೆ ದೊರಕುವುದಾದರೂ ಹೇಗೆ?

ಇಲ್ಲಿ ಒಂದು ವಿಚಿತ್ರತೆಯನ್ನು ಗಮನಿಸಬೇಕು. ನಮಗಿರುವ ಅತೃಪ್ತಿಯೇ ನಮಗೆ ನಮ್ಮನ್ನು ನಮ್ಮನ್ನಲ್ಲದಂತೆ ಮಾಡಿದೆಯೇ ಎಂಬ ಸಂದೇಹ ಇಲ್ಲಿ ಹುಟ್ಟಬಹುದು. ಆದರೆ, ನಮಗೆ ತೊಂದರೆ ಇರುವುದು ನಮ್ಮಲ್ಲಿನ ಅತೃಪ್ತಿಯ ಕಾರಣದಿಂದ ಅಲ್ಲ. ನಮ್ಮನ್ನು ನಾವು ನೋಡಿಕೊಳ್ಳುವ ತಾಳ್ಮೆಯ ಅಭಾವದಿಂದಾಗಿ. ಅದರಿಂದಲೇ ನಮಗೆ ಆತ್ಮ ಜ್ಞಾನ ಸಿಗುತ್ತಿಲ್ಲ.

ನಾವು ಶಾಂತ ವಾತವರಣವನ್ನು ನಮಗೆ ಕೊಟ್ಟು ಕೊಂಡಲ್ಲಿ ನಮಗೆ ನಮಗಿರುವ ಅತೃಪ್ತಿ ಪರಿಚಯವಾಗುತ್ತದೆ. ಆದರೆ, ಈ ಬದುಕಿನ ಅನಿವಾರ್ಯತೆಗಳಲ್ಲಿ ನಮಗೆ ನಾವು ಇಂತಹ ಶಾಂತ ವಾತಾವರಣವನ್ನು ನಿರ್ಮಿಸಿಕೊಳ್ಳುವುದಾದರೂ ಹೇಗೆ. ಎಲ್ಲ ಧರ್ಮಗಳೂ ಪ್ರಮುಖವಾಗಿ ಹೇಳುವ ವಿಚಾರವೆಂದರೆ, ಆದಷ್ಟು ಪ್ರಾಪಂಚಿಕ ಆಸಕ್ತಿಗಳನ್ನು ಕಡಿಮೆ ಮಾಡಿಕೊಳ್ಳತಕ್ಕದ್ದು, ಕಾಮ್ಯ ಕರ್ಮಗಳನ್ನು ಆದಷ್ಟು ಕಡಿಮೆ ಮಾಡತಕ್ಕದ್ದು. ಆಲ್ಬರ್ಟ್ ಐನ್ ಸ್ಟೀನ್ ಇದನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ: “ನೀನು ನಿನ್ನನ್ನು ಯಾವುದೋ ವಸ್ತುವಿಗೋ ಇಲ್ಲವೇ ಯಾವುದೋ ವ್ಯಕ್ತಿಗೋ ಅಂಟಿಸಿಕೊಳ್ಳಬೇಡ. ನಿನ್ನನು ಒಂದು ಉದ್ದೇಶಕ್ಕೆ ಅಂಟಿಸಿಕೊ”. ಅಂತಹ ಉದ್ದೇಶಕ್ಕೆ ಅಥವ ನಾವು ಆಯ್ದುಕೊಂಡ ಕೆಲಸಕ್ಕೆ ಅದನ್ನು ಮಾಡಿ ಮುಗಿಸುವವರೆಗೆ ನಮಗೆ ತೃಪ್ತಿಯಿಲ್ಲ ಎಂಬ ಭಾವ-ಹಸಿವು ನಮ್ಮಲ್ಲಿ ತೀವ್ರವಾಗಿರಬೇಕು. ಆ ಅತೃಪ್ತಿಯ ಪರಿಚಯವೇ ನಮ್ಮನ್ನು ನಮಗೆ ಬೇಕಿರುವುದರ ಕಡೆಗೆ ಗಮನ ಹರಿಸುವ ಭಾವವನ್ನು ನೀಡುತ್ತದೆ. ಆ ಭಾವವೇ ಶ್ರದ್ಧೆ. ನಮಗೆ ಯಾವುದರಲ್ಲಿ ಶ್ರದ್ಧೆ ಉಂಟಾಗುತ್ತದೋ ಅದರಲ್ಲಿ ಪ್ರೀತಿಯಿಂದ ಭಾಗವಹಿಸುತ್ತೇವೆ. ಆ ಭಾಗವಹಿಕೆಯೇ ತಲ್ಲೀನತೆ. ಆ ತಲ್ಲೀನತೆಯಲ್ಲಿ ನಮ್ಮನ್ನು ನಾವು ಮರೆತು ನಮ್ಮ ಕಾರ್ಯವೇ ಪ್ರಧಾನವಾಗುವಿಕೆಯ ಅನುಭಾವವೇ ಭಕ್ತಿಯಾಗುತ್ತದೆ. ಆ ಭಕ್ತಿ ಭಾವದಲ್ಲಿ ನಮ್ಮನ್ನು ಕೃತಾರ್ಥಗೊಳಿಸಿಕೊಳ್ಳುವಿಕೆಯೇ ಧನ್ಯತೆ. ಹೀಗೆ ನಾವು ನಡೆಸಿದ ಕರ್ಮದಲ್ಲಿ ನಾವು ಏನನ್ನು ಪಡೆಯುತ್ತೇವೆಯೋ ಅದನ್ನೇ ಕೃಪೆ ಎಂಬ ಕೃತಾರ್ಥಭಾವ ಎನ್ನಬಹುದು. .ಈ ಶ್ರದ್ಧೆ-ಪ್ರೀತಿ-ತಲ್ಲೀನತೆ-ಭಕ್ತಿ-ಧನ್ಯತೆ-ಕೃತಾರ್ಥ ಭಾವಗಳಲ್ಲಿ ನಮ್ಮ ಕಾರ್ಯಗಳನ್ನು ನಡೆಸುವುದೇ ಶರಣಾಗತಿ. ಇದನ್ನೇ ಪರಮಾತ್ಮ ಭಗವದ್ಗೀತೆಯಲ್ಲಿ ಯೋಗ ಎಂದು ಹೇಳುತ್ತಾರೆ. ಈ ಯೋಗಭಾವದಲ್ಲಿ ಅತೃಪ್ತಿ ಸಂತೃಪ್ತಿಯಾಗಿ ಪರಿಷ್ಕರಣಗೋಳ್ಳುವುದರ ಜೊತೆಗೆ ಚಿರ ಶಾಂತಿಯೂ ದೊರಕುತ್ತದೆ.
ನಾವು ಇಂತಹ ಸಮರ್ಪಣಾ ಭಾವದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ನಾವು ನಮ್ಮ ದೇಹ, ಇಂದ್ರಿಯಗಳ ಆಚೆಗಿನ ಆನಂದ ಸ್ವರೂಪ ಪರಮಾತ್ಮನನ್ನು ಅನುಭಾವಿಸಲು ಸಾಧ್ಯ. ಈ ಔನ್ನತ್ಯ ಭಾವವೇ ಉಪಾಸನೆ (ಉಪ ಆಸನ), ಸ್ಸಾನ್ನಿಧ್ಯಭಾವ, ನಿರಂತರ ಭಗವಂತನ ಪೂಜೆ. ಇಂತಹ ಭಾವದಲ್ಲಿ ನಾನೆಂಬ ಅಹಂಭಾವ ಅಳಿಸಿಹೋಗುವುದರಿಂದ ಸೃಷ್ಠಿಯಲ್ಲಿ ನಾನೂ ಒಂದು ಭಾಗವೆಂಬ ಪರಿಜ್ಞಾನ ತಾನೇ ತಾನಾಗಿ ಮೂಡುತ್ತದೆ. ಅಂತಹ ಭಾವದಲ್ಲಿ ಈ ದೇಹ ಈ ಬದುಕೆಂಬ ಔನ್ನತ್ಯದ ಯಾತ್ರೆಯಲ್ಲಿ ಒಂದು ನಿಲ್ದಾಣ ಅಷ್ಟೇ, ನನ್ನ ಯಾತ್ರೆ ನಿರಂತರ ಹಾಗೂ ಸುಗಮ ಎಂಬ ದಿವ್ಯ ಜ್ಞಾನ ಸಹಜವಾಗುತ್ತದೆ.

ಇಂತಹ ಸಮರ್ಪಣಾ ಭಾವ ನಮ್ಮ ಕಾರ್ಯಕ್ಷೆತ್ರದಲ್ಲಿದ್ದರೆ ಅದು ತಾನೇ ತಾನಾದ ಶಾಕೋಪಶಾಕೆಗಳಿಂದ ನಮ್ಮ ಬದುಕಿನ ಇತರ ಕ್ಷೇತ್ರಗಳಿಗೂ ಹಬ್ಬುತ್ತದೆ. ನಾವು ಭೋಜಿಸುವಾಗ, ಕಾರ್ಯ ನಿರ್ವಹಿಸುವಾಗ, ಪರಮಾತ್ಮನ ಉಪಾಸನೆಯಲ್ಲಿ ಇರುವಾಗ, ಯಾವುದೇ ಭೋಗ ವಿಹಾರಗಳ ಅನುಭೋಗದಲ್ಲಿ, ಜಾಗೃತ, ನಿದ್ರೆ ಮತ್ತು ಕನಸಿನ ಮೂರೂ ಅವಸ್ಥೆಗಳಲ್ಲಿ ಮತ್ತು ಎಲ್ಲ ದಿಶೆ, ಕಾಲಗಳಲ್ಲೂ ಪರಮಾತ್ಮನ ಸಾನ್ನಿಧ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಡಾ. ಶಿವರಾಮ ಕಾರಂತರ ಕಾದಂಬರಿ ಒಂದರಲ್ಲಿ ಬರುವ ಮಾತಿದು. “ಮನುಷ್ಯ ತಾನು ದೊಡ್ದವನಾಗದೆ ಆತನ ಕಲ್ಪನೆಯ ದೇವರು ದೊಡ್ದವನಾಗಲಾರ”. ಇದನ್ನು ನಾನು ಬಿಡಿಸಿ ಯೋಚಿಸತೊಡಗಿದೆ. ಒಬ್ಬ ಬಿಕ್ಷುಕ ದೇವರನ್ನು ಬೇಡುತ್ತಾನೆ: “ನನ್ನ ಹೊಟ್ಟೆ ಪಾಡು ನೋಡು ತಂದೆ,” ಒಬ್ಬ ವ್ಯಾಪಾರಿ ತನ್ನ ಲಾಭದ ಹಿತಾಸಕ್ತಿಯನ್ನು ಬೇಡುತ್ತಾನೆ. ಒಬ್ಬ ವಿಜ್ಞಾನಿ ತನ್ನ ಪರಿಶೋಧನೆಗಳ ಬಗ್ಗೆ, ಹೀಗೇ ಮುಂದುವರೆದರೆ ಒಬ್ಬ ಜ್ಞಾನಿ ಸುಜ್ಞಾನವನ್ನೇ ಬೇಡುತ್ತಾನೆ. ನಮ್ಮ ಹುಡುಕಾಟ ನಮಗೆ ಸೇರಿದ್ದು.
ಬದುಕು ಒಂದು ಯಜ್ಞ. ಸರಿಯಾಗಿ ಬದುಕುವುದೇ ಒಂದು ಭಗವಂತನ ಆರಾಧನೆ. ಹೆಂಡತಿ ಮಕ್ಕಳು ತ್ಯಾಜ್ಯ ಎಂದಲ್ಲ. ಅವರನ್ನು ಪ್ರೀತಿಸಬಾರದು ಎಂದು ಯಾವ ವೇದಾಂತವೂ ಹೇಳುವುದಿಲ್ಲ. ಎಲ್ಲವನ್ನೂ ತೊರೆದು, ಜೀವಕ್ಕೆ ಬೆನ್ನು ಹಾಕಿ ಕಾಡಿಗೆ ತೆರಳುವುದು ಸಾಧನೆಯಲ್ಲ. ಪಲಾಯನವಾದ. ಹೆಂಡತಿ ಮಕ್ಕಳು ಮಾತ್ರವಲ್ಲ. ಇಡೀ ಬದುಕೇ ಒಂದು ಸಂಸಾರ. ಎಲ್ಲರೂ ನಮ್ಮವರೆ, ಏಕೆಂದರೆ ಭಗವಂತ ಎಲ್ಲರಲ್ಲೂ ಇದ್ದಾನೆ. ಎಲ್ಲೆಡೆಯೂ ಇದ್ದಾನೆ. ಎಲ್ಲರೊಳಗೂ ಇರುವ ‘ಸರ್ವಾತ್ಮ-ಸರ್ವಸ್ವ-ಸರ್ವಾಂತರ್ಯಾಮಿ’ ಅವನೊಬ್ಬನೇ. ಈ ಭಗವಂತನ ಅರಿವು ಮೂಡಿದರೆ ಇಡೀ ವಿಶ್ವವೇ ನಮ್ಮದು, ಯಾವುದೂ ಪರಕೀಯವಲ್ಲ ಎಂಬ ಭಾವನೆ ಬರುತ್ತದೆ. ಇನ್ನೊಬ್ಬನಲ್ಲೂ ಭಗವಂತನಿದ್ದಾನೆ. ಆತನನ್ನು ತೃಪ್ತಿ ಪಡಿಸಿದರೆ ಅವನಲ್ಲಿರುವ ಭಗವಂತನೂ ತೃಪ್ತನಾಗುತ್ತಾನೆ. ಅದೇ ಅವನಲ್ಲಿರುವ ಭಗವಂತನ ಪೂಜೆ.

ಪ್ರಪಂಚದಲ್ಲಿರುವುದನ್ನೆಲ್ಲ ಆಸ್ವಾದಿಸಿ, ಖುಷಿ ಪಟ್ಟುಕೊಳ್ಳೋಣ. ತಪ್ಪಲ್ಲ. ಪ್ರಪಂಚ ಇರುವುದೇ ಖುಷಿ ಪಡುವುದಕ್ಕೆ. ಜತೆಗೆ ಒಂದು ಎಚ್ಚರ ಮಾತ್ರ ಇರಲಿ. ಸೂರ್ಯ ಮರೆಯಾಗಿ ಪುನಃ ದರ್ಶನ ಭಾಗ್ಯ ತೆರೆದನೆಂದರೆ ನಮ್ಮ ಜೀವನದ ಒಂದು ದಿನ ಮುಗಿಯಿತು ಎಂಬ ಪರಿಜ್ಞಾನ ಅವಶ್ಯಕ. ಎಚ್ಚರ ಇಲ್ಲದೆ ಕಳೆದು ಹೋದ ಕ್ಷಣ ನಿಜವಾಗಿಯೂ ಕಳೆದು ಹೋದ ಕ್ಷಣವೇ. ನಮ್ಮ ಒಂದೊಂದು ಕ್ಷಣವೂ ಉಪಯುಕ್ತವಾಗಿ ಪರಮಾತ್ಮನ ಪರಿಜ್ಞಾನದಲ್ಲಿ, ನಮ್ಮ ಉದ್ಧೇಶಗಳ ಸಫಲತೆಯಲ್ಲಿ ಶ್ರೀಮಂತವಾಗಬೇಕು.

ನಾವು ಕನಸು ಕಾಣುತ್ತೇವೆ. ಕನಸಿನಲ್ಲಿ ಬೇರೆ ಬೇರೆ ರೂಪಗಳನ್ನು ಕಾಣುತ್ತೇವೆ. ಎಚ್ಚರದಲ್ಲಿ ನಾವು ಬಡವರಾಗಿದ್ದರೂ ಕನಸಿನಲ್ಲಿ ಶ್ರೀಮಂತರಾಗಿರಬಹುದು. ಏನೇನೋ ಆಗಬಹುದು. ಏನೇನೋ ಕಾಣಬಹುದು. ಕನಸಿನಲ್ಲಿ ಇದನ್ನು ಕಂಡದ್ದಾದರೂ ಹೇಗೆ? ಯಾರು ಈ ಕನಸು ಕಾಣಿಸಿದವರು. ನಾನೇ ಕನಸುಗಾರ, ನಾನೇ ಕಂಡದ್ದು ಎಂದಾದರೆ ನಾನು ಬಯಸಿದಂತ ಕನಸು ಏಕೆ ಬೀಳುವುದಿಲ್ಲ. ಬಯಸಿದ್ದು ಕಾಣುವುದಿಲ್ಲ. ಕಂಡದ್ದು ಬಯಸುವುದಿಲ್ಲ. ನಾನು ಕಂಡದ್ದು ಹೌದು ಆದರೆ ಸೃಷ್ಟಿಕರ್ತ ನಾನಲ್ಲ. ಎಚ್ಚರದಂತೆ ಕನಸು, ಕನಸಿನಂತೆ ಎಚ್ಚರ. ಇದನ್ನೇ ನಮ್ಮ ಪುರಾಣಗಳಲ್ಲಿ ಭಗವಂತನ ಲೀಲಾ ಸೃಷ್ಟಿ ಎಂದು ಕರೆಯಲಾಗಿದೆ. ಕನಸಿನಲ್ಲಿ ಒಂದು ದೇಹ. ಅದರ ಮೂಲಕ ಏನೇನೋ ಕಂಡೆವು. ಏನೇನೋ ಮಾಡಿದೆವು. ಎಚ್ಚರದಲ್ಲಿ ಈ ದೇಹ, ಇದರ ಮೂಲಕ ಈ ಬದುಕಿನ ನಾಟಕ. ಎರಡೂ ಭಗವಂತನ ಕೊಡುಗೆ. ಕನಸಿನಲ್ಲಿ ಈ ದೇಹದ ಮೋಹ ಇಲ್ಲ. ಎಚ್ಚರದಲ್ಲಿ ಈ ಮೋಹ ಇಲ್ಲ. ಹೀಗೆ ನಾವು ಅಂಟಿಸಿಕೊಂಡಿದ್ದು ಕಳೆಯಿತು ಅಂದರೆ ನಾವು ಸ್ವಚ್ಛಂದ ಹಕ್ಕಿಗಳು. ಪಂಜರದ ನಂಟು ಹರಿದ ಆಕಾಶವಿಹಾರಿಗಳು. ಎಲ್ಲವೂ ಇದೆ. ಆದರೆ ಯಾವುದರ ಬಂಧವೂ ನಮಗಿಲ್ಲ.

ಈ ಜಡವಾದ ದೇಹದೊಳಗೆ ಸೇರಿಕೊಂಡೆವು. ಇದಕ್ಕಿಂತ ಬೇರೆಯಾಗಿ ನಮ್ಮದೇ ಆದ ಒಂದು ಅಸ್ತಿತ್ವ ಇದೆ ಎನ್ನುವುದನ್ನು ಮರೆತೆವು. ಈ ದೇಹ-ನಮ್ಮ ಚಿಂತನೆಗಳ ಮಿಶ್ರಣವನ್ನೇ ನಮ್ಮ ವ್ಯಕ್ತಿತ್ವ ಎಂದು ತಿಳಿದು ಒದ್ದಾಡುತ್ತೇವೆ. ಇದ್ದಕ್ಕಿಂತ ಬೇರೆಯಾಗಿ ನಿಂತು ನಾವೇ ನಮ್ಮನ್ನು ಕಾಣುವುದು ಸಾಧ್ಯವಾದಾಗ ತಿಳಿದೀತು, ಈ ‘ನಾನು’ ಎನ್ನುವುದು ಒಂದು ಜ್ಞಾನದ ಮುದ್ದೆ. ಅಲ್ಲಿ ಜಡ ಸ್ಪರ್ಶವಿಲ್ಲ. ಅಜ್ಞಾನವಿಲ್ಲ. ಆ ಸ್ಥಿತಿಯಲ್ಲಿ ಮಾತ್ರ, ಎಲ್ಲವನ್ನೂ ಬಿಟ್ಟು ದೂರ ನಿಂತು, ಸಾಕ್ಷಿಯಾಗಿ ಜಗತ್ತನ್ನು ನೋಡಲು ಸಾಧ್ಯ. ಈ ತಟಸ್ಥ ದರ್ಶನ ಬಹುದೊಡ್ಡ ವಿಜ್ಞಾನ. ನೂರಾರು ವರ್ಷಗಳ ನಿರಂತರ ತಪಸ್ಸಿನಿಂದ, ಮನನದಿಂದ ಋಷಿಮುನಿಗಳು ಕಂಡುಕೊಂಡ ಸತ್ಯ.

ಕನಸಿನಲ್ಲಿ ನಾನಾ ರೂಪಗಳು, ಹಾಗೆಯೇ ಎಚ್ಚರದಲ್ಲೂ ನಾನಾ ಜನ್ಮಗಳು; ನಾನಾ ರೂಪಗಳು. ಮಾಯೆಯ ಜಾಲ. ಈ ಪ್ರಕೃತಿ ನಮಗೂ ನಾನಾ ವೇಷಗಳನ್ನು ತೊಡಿಸಿ, ಜನ್ಮ ಜನ್ಮಗಳಲ್ಲಿ ಬೇರೆ ಬೇರೆ ರಂಗ ಸ್ಥಳಗಳಲ್ಲಿ ಕುಣಿಸುತ್ತದೆ. ಈ ನಾಮ-ರೂಪಗಳು ನಾವಲ್ಲ, ನಾವು ತೊಟ್ಟ ವೇಷಗಳು. ಒಂದು ರೀತಿಯಲ್ಲಿ ಹೇಳುವುದಾದರೆ ಅಂಟಿಕೊಂಡ ಪ್ರಾರಬ್ಧಗಳು. ಈ ತೊಟ್ಟ ವೇಷವನ್ನು ಕಳಚಿ ನಾನೇ ನಾನಾಗಬೇಕೆಂಬ ಎಚ್ಚರ ನಮ್ಮಲ್ಲಿರಬೇಕು. ಸತ್ವ, ರಜಸ್ಸು, ತಮಸ್ಸು ಇವು ಮೂರು ಪ್ರಕೃತಿಯ ಗುಣಗಳು. ಇದರಿಂದ ನಾನು-ನನ್ನದು ಎನ್ನುವ ಹಮ್ಮು. ನಾವಲ್ಲದ್ದನ್ನು “ನಾವು” ಎಂದುಕೊಳ್ಳುತ್ತೇವೆ. ಕಳಚಿಕೊಳ್ಳಲು ಕಷ್ಟವಾಗುತ್ತದೆ. ನಮ್ಮದಲ್ಲದ್ದನ್ನು ನಮ್ಮದು ಎಂದು ಹಚ್ಚಿಕೊಳ್ಳುತ್ತೇವೆ. ಬಿಚ್ಚಿಕೊಳ್ಳಲು ಅಸಾಧ್ಯವಾಗುತ್ತದೆ. ‘ತೊಟ್ಟ ವೇಷ ನಾವಲ್ಲ; ಗ್ರೀನ್ ರೂಮ್ ನಮ್ಮ ಮನೆಯಲ್ಲ’ ಎಂದು ತಿಳಿಯದಿದ್ದರೆ ತುಂಬಾ ತೊಂದರೆ.

ಒಂದು ಅವಸ್ಥೆಯಲ್ಲಿ ಮಾತ್ರ ಮನುಷ್ಯ ಈ ದೇಹಬಂಧನದಿಂದ ಕಳಚಿಕೊಂಡು ಬದುಕುತ್ತಾನೆ. ಯಾವಾಗ? ಎಚ್ಚರದಲ್ಲಿ ಅಲ್ಲ. ಕನಸಿನಲ್ಲೂ ಅಲ್ಲ. ನಿದ್ರೆಯಲ್ಲಿ! ಆಗ ಅವನಿಗೆ ಸಂಸಾರದ ಬಂಧನ, ದೇಹದ ಬಂಧನ ಯಾವುದೂ ಇಲ್ಲ. ಇಲ್ಲ ಎಂದರೂ ಇದೆ. ಆದರೆ ಇದೆ ಎನ್ನುವ ಅರಿವಿಲ್ಲ. ಯಾವುದರ ಚಿಂತೆಯೂ ಇಲ್ಲ. ಬಾಹ್ಯ ಪ್ರಪಂಚದ attachment ಮತ್ತು awareness ಇಲ್ಲ. ನಿದ್ರೆಯಲ್ಲಿ ಇರುವ ಇನ್ನೊಂದು ಗುಣ ಅಂದರೆ ‘ನಾನು’ ಎಂಬುದರ ಅರಿವು. “ನಾನು ನಿನ್ನೆ ರಾತ್ರಿ ೧೧ ರಿಂದ, ಬೆಳಿಗ್ಗೆ ೬ರ ತನಕ ಸುಖವಾಗಿ ಮಲಗಿದ್ದೆ. ನನಗೊಂದೂ ಗೊತ್ತಿಲ್ಲ” ಎಂದು ಹೇಳುವಾಗ ಇಲ್ಲಿ ನಿದ್ರೆಯ ಅನುಭವದ ಒಟ್ಟು ಚಿತ್ರಣವಿದೆ. ನಿದ್ರೆಯಲ್ಲಿ ‘ನಾನು’ ಗೊತ್ತಿದೆ. ಕಾಲದ ಅರಿವಿದೆ. ಸುಖದ ಅರಿವಿದೆ. ಜೊತೆಗೆ ‘ತನಗೇನೂ ಗೊತ್ತಿಲ್ಲ’ ಎನ್ನುವುದೂ ಗೊತ್ತಿದೆ. ಎಚ್ಚರದಲ್ಲಿ ‘ನಮಗೆಲ್ಲಾ ಗೊತ್ತಿದೆ’ ಎನ್ನುವ ಭ್ರಮೆ-ಅಹಂಕಾರ ಇರುತ್ತದೆ. ನಿಜವಾಗಿ ಮನುಷ್ಯನಿಗೆ ಏನೂ ಗೊತ್ತಿಲ್ಲ. ಆದರೆ ಗೊತ್ತಿಲ್ಲ ಎನ್ನುವುದು ಗೊತ್ತಿರುವುದು ನಿದ್ರೆಯಲ್ಲಿ ಮಾತ್ರ. ನಮ್ಮ ಅಜ್ಞಾನದ ಎಚ್ಚರ ಇರುವುದು ನಿದ್ರೆಯಲ್ಲಿ ಮಾತ್ರ. ನಿದ್ರೆ ನಿಜವಾದ ಜಾಗೃತ ಸ್ಥಿತಿ. ಎಚ್ಚರದಲ್ಲೂ ಈ ಎಚ್ಚರ ಮೂಡಿದಾಗ, ಏನೂ ಗೊತ್ತಿಲ್ಲ ಎನ್ನುವುದು ಗೊತ್ತಾದಾಗ ಮನುಷ್ಯ ನಿಜವಾದ ಮನುಷ್ಯನಾಗುತ್ತಾನೆ. ಸಾಧನೆಯ ಬಾಗಿಲಿನ ಕೀಲಿ ಕೈ ಇಲ್ಲಿದೆ. ಎಚ್ಚರದಲ್ಲೂ ನಾವು ನಿದ್ರೆಯಂತೆ ಕಲಿಯಬಲ್ಲೆವೆ? ಏನೂ ಗೊತ್ತಿಲ್ಲ ಎಂಬ ಪೂರ್ಣ ಮನೋಭಾವದಿಂದ ನಮ್ಮ ಕಾರ್ಯ ಪ್ರಾರಂಭವಾಗಬೇಕು. ನಿದ್ರೆಯಲ್ಲಿ ಹೇಗೆ ಹೆಂಡತಿ, ಮಕ್ಕಳು, ಆಸ್ಥಿ, ವೈಭೋಗಗಳು, ಸಾಲ-ತಾಪತ್ರಯಗಳು ಹೀಗೆ ಎಲ್ಲ ಬಂಧನಗಳಿಂದಲೂ ದೂರ ನಿಂತು ಬದುಕಬಲ್ಲೆವೋ ಹಾಗೆಯೇ ಎಚ್ಚರದಲ್ಲೂ ‘ಬದುಕಲು ಕಲಿಯಬೇಕು’ . ಎಚ್ಚರದ ಅಭ್ಯಾಸಕ್ಕೆ ನಿದ್ರೆಯ ಪಾಠ ಮಾದರಿಯಾಗಬೇಕು. ಕನಸು ಮತ್ತು ನಿದ್ರೆ ಎಚ್ಚರಕ್ಕೆ ಆದರ್ಶವಾಗಿರಬೇಕು.
ಜೀವ ತನ್ನ ಹಿರಿಮೆಯನ್ನೇ ತಾನು ಅರ್ಥ ಮಾಡಿಕೊಳ್ಳದೆ ತೀರ ಕುಬ್ಜನಾಗಿ ಬದುಕುತ್ತಿದ್ದಾನೆ. ತಾನೇ ತನ್ನನ್ನು ಸಣ್ಣವನಾಗಿ ಮಾಡಿಕೊಳ್ಳುತ್ತಿದ್ದಾನೆ. ಅವನಿಗೆ ತನ್ನ ಹಿರಿಮೆಯ ಅರಿವಾದ ಕ್ಷಣದಲ್ಲಿ ಅವನು ಕಾಲ ಮತ್ತು ಮಾಯೆಯ ಸೀಮೆಯನ್ನು ಮೀರಿ ಅದರಾಚೆಗಿರುತ್ತಾನೆ. ನಾನು ಎಷ್ಟೋ ಸಹಸ್ರವರ್ಷಗಳ ಹಿಂದೆ ಕೂಡ ಇದ್ದೆ. ಮುಂದೆ ಕೂಡ ಇರುತ್ತೇನೆ. ಈ ಶರೀರ ಬಂದು ಹೋಯಿತು. ಈ ಜೀವ ಬಂದದ್ದಲ್ಲ ಇದ್ದದ್ದು. ಹಿಂದೆ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಹೀಗೆ ಕಾಲದ ಬೇಲಿಯನ್ನು ಕಳಚಿ, ಭೌತಿಕವಾದ ದೇಹ ಮತ್ತು ಇಂದ್ರಿಯಗಳ ಮಾಯೆಯ ಬೇಲಿಯನ್ನು ಕಳಚಿ ಎತ್ತರದಲ್ಲಿ ನಿಂತು ನಿಟ್ಟಿಸಿಕೊಂಡಾಗ ಉಳಿವಂಥ ವಸ್ತು ‘ನಾನು ಎಂಬ ಜೀವ ಕಲೆ’ ಎನ್ನುವುದು ಅರ್ಥವಾಗುತ್ತದೆ. ಅದೇ ನಿಜವಾದ ತನ್ನ ಅರಿವು; ಜೀವದ ಅರಿವು; ಆತ್ಮ ಸಾಕ್ಷಾತ್ಕಾರ.

ಮೊದಲು ನಾನು ನನ್ನನ್ನು ಅರ್ಥಮಾಡಿಕೊಳ್ಳಬೇಕು. ಆಗ ನನ್ನ ಇರವಿಗೂ ಕಾರಣವಾದ, ನನ್ನನ್ನೂ ನಿಯಂತ್ರಿಸುವ ವಿಶ್ವ ಶಕ್ತಿಯಾದ ಭಗವಂತನ ಅರಿವಿನ ಬಾಗಿಲು ಸಹಜವಾಗಿ ತೆರೆದುಕೊಳ್ಳುತ್ತದೆ. ಮೊದಲು ಆತ್ಮ ಸಾಕ್ಷಾತ್ಕಾರ. ಮತ್ತೆ ಪರಮಾತ್ಮ ಸಾಕ್ಷಾತ್ಕಾರ. ಮೊದಲು ‘ಅಹಂ’ ಮತ್ತೆ ‘ಸಃ’. ಇದೆ ‘ಸೋಹಂ’ ದ್ವೈತ – ಅದ್ವೈತಗಳ ಸಮ್ಮೇಳ.

ನಾನು ಈ ದೇಹದೊಳಗೆ ಇದ್ದೇನೆ. ಭಗವಂತನೂ ದೇಹದೊಳಗಿದ್ದಾನೆ. ನಾನು ಒಳಗಿದ್ದೇನೆ. ಹೊರಗಿಲ್ಲ. ಭಗವಂತ ಒಳಗಿದ್ದಾನೆ; ಹೊರಗೂ ಇದ್ದಾನೆ; ಎಲ್ಲೆಡೆಯೂ ಇದ್ದಾನೆ. ನಾನು ಅಣು ಮಾತ್ರ. ಅವನು ಅಣುವೂ ಹೌದು; ಮಹತ್ತೂ ಹೌದು. ನನ್ನದು ಸೀಮಿತವಾದ ಶಕ್ತಿ. ಅವನದು ಅನಂತಶಕ್ತಿ. ನಾನು ಆ ಅನಂತಶಕ್ತಿಯ ಒಂದು ಚಿಕ್ಕ ಪ್ರತಿಫಲನ. ನಾನು ಒಂದು ಜೀವ. ಅವನು ನಮಗೆಲ್ಲ ಜೀವನವಿತ್ತ ಜೀವರ ಜೀವ. ಇದು ಜೀವದ ಅರಿವು. ಇದು ಜೀವನದ ಅರಿವು. ಇದು ಭಗವಂತನ ಅರಿವು.

ಈ ಜಗತ್ತು ಇದ್ದಾಗಲೂ, ಇದು ಇರದಿದ್ದಾಗಲೂ, ಯಾವುದು ಎಂದೆಂದೂ ಇದೆಯೋ ಅದು ಪರತತ್ವ. ಈ ಜಗತ್ತು ಇದ್ದಲ್ಲೂ, ಇದು ಇರದಲ್ಲೂ ಯಾವುದು ಎಲ್ಲೆಲ್ಲೂ ಇದೆಯೋ ಅದು ಪರಮಸತ್ಯ. ಜೀವ ಕೂಡ ಎಂದೆಂದೂ ಇದ್ದ. ಆದರೆ ತಾನೇ ತಾನಾಗಿ ಇರಲಿಲ್ಲ. ಅವನಿಂದಾಗಿ ಇದ್ದ. ಅವನಿಂದಾಗಿ ರೂಪಗೊಂಡ. ಅವನು ಈ ಜೀವಕ್ಕೊಂದು ಜೀವನ ಕೊಟ್ಟ. ಅದಕ್ಕಾಗಿ ದೇಹ ಕೊಟ್ಟ. ಜೀವ ಅದರಿಂದ ತನ್ನನ್ನು ಅಂಟಿಸಿಕೊಂಡ. ಅದರಲ್ಲಿ ತನ್ನನ್ನೇ ಕಂಡ. ಈ ನಂಟಿನ ಅಂಟು ಕಳಚಿಕೊಂಡಾಗ ಎಲ್ಲ ಬಂಧನಗಳೂ ಕಳಚಿ ಹೋಗುತ್ತವೆ.

ಸತ್ಯ ಯಾವಾಗಲೂ ಬಹಳ ಸೂಕ್ಷ್ಮ. ಅದನ್ನು ತೋರಿಸಲಿಕ್ಕಾಗುವುದಿಲ್ಲ. ಅನುಭವಿಸಿ ತಿಳಿಯಬೇಕು. ತಾರ್ಕಿಕ ವಾದಗಳಿಂದ ಅದನ್ನು ಸಿದ್ಧಪಡಿಸುವುದು ಸಾಧ್ಯವಿಲ್ಲ. ನಿರಾಕರಿಸುವುದೂ ಸಾಧ್ಯವಿಲ್ಲ. ಅನುಭವವನ್ನು ಅನುಭವದಿಂದಲೇ ಮುಟ್ಟಬೇಕು ಹೊರತು ಒಣ ತರ್ಕದಿಂದ ಅಲ್ಲ. ಅನುಭವಿಸಬೇಕು. ಅನುಭವಿಸಿ ಮಾಗಬೇಕು. ಮಾಗಿ ಸಾಧನೆಯ ದಾರಿ ತುಳಿಯಬೇಕು. ತುಳಿದು ತಿಳಿಯಬೇಕು. ತಿಳಿದು ಬೆಳೆಯಬೇಕು.

Tag: Atmavalokana, Atmasakshatkara

ಕಾಮೆಂಟ್‌ಗಳು

  1. ಗುರುಗಳೇ 15 ಮಾರ್ಚ್ 2021 ರಂದು ತಮ್ಮ ಲೇಖನವನ್ನು ಓದಿದೆ. ಮನಸ್ಸಿಗೆ ತುಂಬಾ ಹಿಡಿಸಿತು. ನಿಮ್ಮ ಜ್ಞಾನವನ್ನು ನನಗೆ ಬಡಿಸಿದ್ದೀರಿ ನಾನು ಉಂಡಮೇಲೆ ಇತರರಿಗೂ ಉಣ ಬಡಿಸುತ್ತೇನೆ. ಲೋಕೋ ಸಮಸ್ತ ಸುಖಿನೋ ಭವಂತು.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ