ಅಲೆಗ್ಸಾಂಡರ್ ಗ್ರಹಾಂಬೆಲ್
ಅಲೆಗ್ಸಾಂಡರ್
ಗ್ರಹಾಂಬೆಲ್
ದೂರಸಂಪರ್ಕ
ಮಾಧ್ಯಮದ ಹರಿಕಾರ, ಮಹಾನ್ ವಿಜ್ಞಾನಿ ಅಲೆಗ್ಸಾಂಡರ್
ಗ್ರಹಾಂಬೆಲ್ ಅವರು ಮಾರ್ಚ್ 3, 1847ರಂದು ಸ್ಕಾಟ್ಲ್ಯಾಂಡಿನ
ಎಡಿನ್ಬರ್ಗ್ ಎಂಬಲ್ಲಿ ಜನಿಸಿದರು. ಮುಂದೆ
ಓನ್ಟೇರಿಯೋದಲ್ಲಿ ಕೆಲಕಾಲವಿದ್ದು ನಂತರದಲ್ಲಿ
ಅಮೆರಿಕದ ಬೋಸ್ಟನ್ನಿನಲ್ಲಿ ನೆಲೆಸಿದರು.
ಸ್ವಭಾವತಃ ಸಂಶೋಧಕ ಪ್ರವೃತ್ತಿಯನ್ನು ಚಿಕ್ಕವಯಸ್ಸಿನಲ್ಲೇ ಬೆಳೆಸಿಕೊಂಡಿದ್ದ ಬೆಲ್
ಪುಟ್ಟ ವಯಸ್ಸಿನಲ್ಲೇ ಗೋಧಿಯಿಂದ ಹಿಟ್ಟು ತೆಗೆಯಲು ಕಷ್ಟಕರವಾದ ಯಂತ್ರವನ್ನು ಉಪಯೋಗಿಸುತ್ತಿದ್ದ
ತಮ್ಮ ಗೆಳೆಯರ ಕುಟುಂಬಕ್ಕಾಗಿ ಒಂದು ನವೀನರೀತಿಯ ಯಂತ್ರ ರೂಪಿಸಿಕೊಟ್ಟಿದ್ದರು.
ತನ್ನ
ತಾಯಿಯ ಕಿವುಡುತನ ಹಾಗೂ ಅವರೊಡನೆ ಅವರು ಸಂಭಾಷಿಸಲು ಉಪಯೋಗಿಸುತ್ತಿದ್ದ ಹಲವು ಸ್ವಯಂನಿರ್ಮಿತ
ತಂತ್ರಗಳು ಅವರನ್ನು ಕಿವುಡ ಮಕ್ಕಳ ಕುರಿತಾಗಿ ಅಪಾರ ಆಸಕ್ತಿ ವಹಿಸುವಂತೆ ಮಾಡಿದವು. ಈ ಆಸಕ್ತಿಯು ಅವರನ್ನು ಮೈಕ್ರೋಫೋನ್ ನಿರ್ಮಿಸಲು
ಪ್ರೇರಣೆ ನೀಡಿ, 1876ರ ವೇಳೆಗೆ “ವಿದ್ಯುತ್ ಚಾಲಿತ ಸಂಭಾಷಣಾ ಯಂತ್ರ” ಅಥವ “ಎಲೆಕ್ಟ್ರಿಕಲ್ ಸ್ಪೀಚ್ ಮೆಷಿನ್” ಅನ್ನು
ನಿರ್ಮಿಸಿದರು. ಈ ಯಂತ್ರವೇ ಇಂದು ನಾವೆಲ್ಲರೂ
ಉಪಯೋಗಿಸುತ್ತಿರುವ ‘ಟೆಲಿಫೋನ್’. ಅವರ ಈ ಸಂಶೋಧನೆ, ಕ್ಷಿಪ್ರವಾಗಿ
ದೇಶದೆಲ್ಲೆಡೆ ಮಾತ್ರವಲ್ಲದೆ ಯೂರೋಪ್ ಖಂಡವನ್ನೆಲ್ಲಾ
ವ್ಯಾಪಿಸಿತ್ತು. 1878ರ ವರ್ಷದ ವೇಳೆಗೆ ಗ್ರಹಾಂ
ಬೆಲ್ ಕನೆಕ್ಟಿಕಟ್ಟಿನ ನ್ಯೂ ಹಾವೆನ್ ಎಂಬಲ್ಲಿ
ಮೊದಲ ದೂರವಾಣಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದರು.
1884ರ ವೇಳೆಗೆ ಬೋಸ್ಟನ್, ಮಸ್ಸಚುಸೆಟ್ಸ್ ಮತ್ತು ನ್ಯೂಯಾರ್ಕ್ ನಗರಗಳ ನಡುವೆ ದೂರ ಸಂಪರ್ಕ ವ್ಯವಸ್ಥೆಗಳು ನಿರ್ಮಾಣಗೊಂಡಿದ್ದವು.
ಗ್ರಹಾಂಬೆಲ್
ಅವರು ದೂರವಾಣಿ ಸೌಲಭ್ಯಗಳಿಂದ ಆಗುವ ಬಹಳಷ್ಟು ಪ್ರಯೋಜನಗಳನ್ನು ಮನಗಂಡಿದ್ದರು. ಇಂದು ಈ ವ್ಯವಸ್ಥೆಯ ಮೂಲಕ ವಿಡಿಯೋ ರೂಪಕಗಳನ್ನು
ಕಳುಹಿಸುವ ಸಾಧ್ಯತೆಗಳನ್ನು ಅವರು ಅಂದು ಊಹಿಸಿರಲಿಲ್ಲವೇನೋ. ಗ್ರಹಾಂಬೆಲ್ ಅವರು 1922ರ ವರ್ಷದಲ್ಲಿ
ನಿಧನರಾದರು. ಅಲ್ಲಿಂದ ಇಂದಿನವರೆಗೆ ದೂರಸಂಪರ್ಕ
ಕ್ಷೇತ್ರದಲ್ಲಿ ಅದ್ಭುತವೆನಿಸುವಂತಹ ಬದಲಾವಣೆಗಳಾಗಿವೆ.
ಶ್ರವಣ ದೋಷಹೊಂದಿರುವವರಿಗಾಗಿಯೇ ವಿಶೇಷ ರೀತಿಯ ಟೆಲಿಫೋನ್ ವ್ಯವಸ್ಥೆಗಳು ನಿರ್ಮಿತಿಗೊಂಡಿವೆ. ಫೈಬರ್ ಆಪ್ಟಿಕ್ಸ್ ತಂತ್ರಜ್ಞಾನದಲ್ಲಿನ
ಸಂಶೋಧನೆಗಳಿಂದಾಗಿ ಮಾಹಿತಿ ಸಂವಹನ ವ್ಯವಸ್ಥೆಗೆ ಒದಗಿರುವ ವೇಗ ಅಪರಿಮಿತವಾದದ್ದು. ಗ್ರಹಾಂಬೆಲ್ಲರು ನಿರ್ಮಿಸಿದ ‘ವಿದ್ಯುತ್ ಸಂಭಾಷಣಾ ಯಂತ್ರ’ದ ಆವಿಷ್ಕಾರವು ಇಂದು
ಅಪಾರವಾಗಿ ಬೆಳೆದಿರುವ ವಿಶ್ವಮಾಹಿತಿ ವಿಜ್ಞಾನಕ್ಕೆ ಹಾಕಿಕೊಟ್ಟ ಹೆದ್ಧಾರಿ ನಿತ್ಯಸ್ಮರಣೀಯವಾದದ್ದು.
ಕಾಮೆಂಟ್‌ಗಳು