ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

`ಸಾಲ ಮನ್ನಾ' ಬೇಡ: ಅಜ್ಜಿಯ ಮಾದರಿ

`ಸಾಲ ಮನ್ನಾ' ಬೇಡ: ಅಜ್ಜಿಯ ಮಾದರಿ
-ಭೀಮಸೇನ ಚಳಗೇರಿ

ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದ 81 ವರ್ಷ ವಯೋಮಾನದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ ಅಜ್ಜಿ ಮಾತ್ರ ಒಂದು ದಶಕದಿಂದ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಸಾಲವನ್ನು ಅವಧಿಗೆ ಮುನ್ನವೇ ಪಾವತಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ.

ಈ 10 ವರ್ಷಗಳ ಅವಧಿಯಲ್ಲಿ ಅನೇಕ ಬಾರಿ ಮಳೆ ಕೈಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತೆ ಬೆಳೆಯೂ ದಕ್ಕಿಲ್ಲ. ಆದರೆ, ಇದಾವುದೂ ತಾನು ಪಡೆದ ಬೆಳೆ ಸಾಲ ಮರುಪಾವತಿ ಮಾಡುವುದರಿಂದ ಅವರನ್ನು ವಿಮುಖರನ್ನಾಗಿ ಮಾಡಿಲ್ಲ!`ಅಂದಾಜು ಹತ್ವರ್ಷದ ಹಿಂದಿನ ಮಾತರಿ. ಹೊಲ್ದಾಗ ಕೆಲ್ಸ ಮಾಡ್ಸಾಕಂತ ಯಜಮಾನ ಊರಾಗ ಭಾಳ ಮಂದಿತಕ ಸಾಲ ಕೇಳಿದ್ದಾ.

ಆದರ ಯಾರೂ ತಮ್ಮ ಹಂತೇಕ ಬರಗೊಡಲಿಲ್ಲ. ಸಾಲ ಕೇಳ್ಕೊಂತ ನಾನು, ನನ್ನ ಯಜಮಾನ ಈ ಸೊಸೈಟ್ಗೆ ಬಂದ್ವಿ. ಒಂದ ಮಾತ್ಗೆ 15 ಸಾವಿರ‌ ರೂಪಾಯಿ ಸಾಲ ಕೊಟ್ರು. ಆವಾಗಿಂದ ನಮ್ಮ ಬಾಳೇವು ಛಂದಾಯಿತ್ರಿ` ಎಂದು ಆ ಕಷ್ಟದ ದಿನಗಳನ್ನು ಮೆಲುಕು ಹಾಕುವ ಅಜ್ಜಿ ನಿಂಗಮ್ಮ, ತಮ್ಮ ಕಷ್ಟಕ್ಕೆ ಸಂಘ ನೆರವಾಗಿರುವುದರಿಂದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಿರುವುದಾಗಿ ಹೇಳುತ್ತಾರೆ.

ಅನೇಕ ಬಾರಿ ಸಾಲ ಮರುಪಾವತಿ ಮಾಡಲು ಸಂಘದ ಕಚೇರಿಗೆ ಹೋದಾಗ ಕೆಲ ಗ್ರಾಹಕರು ಕೀಟಲೆ ಮಾಡಿದ ಪ್ರಸಂಗಗಳೂ ಇವೆ. `ಸಾಲ ಮನ್ನಾ ಆಕ್ಕೈತಿ ಕಟ್‌ಬ್ಯಾಡ್‌ಬೆ' ಎಂಬ ಸಲಹೆಗಳನ್ನು ಸಹ ಅಜ್ಜಿ ನಯವಾಗಿ ತಿರಸ್ಕರಿಸಿದ್ದಲ್ಲದೇ, ಪಡೆದ ಸಾಲ  ಕರಾರುವಾಕ್ಕಾಗಿ ಮರು ಪಾವತಿ ಮಾಡಿದ್ದಾರೆ ಎಂದು ಗ್ರಾಮದ  ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ದು ಲಕ್ಕುಂಡಿ ಹೆಮ್ಮೆಯಿಂದ ಹೇಳುತ್ತಾರೆ.

`ಸರ್ಕಾರ ಸಾಲ ನೀಡುತ್ತದೆ ಎಂದ ಮೇಲೆ ಅದನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡುವುದು ನನ್ನ ಧರ್ಮ. ಸರ್ಕಾರದ ಋಣ ತೀರಿಸಲೇಬೇಕು. ನನಗೆ ಸಾಲ ನೀಡುವ ಸೊಸೈಟಿಯೊಂದಿಗೆ ನಂಬಿಕೆ ಉಳಿಸಿಕೊಳ್ಳಬೇಕು. ಸಾಲ ಮರು ಪಾವತಿ ಮಾಡುವಂತೆ ಯಾರೂ ನನ್ನ ಮನೆಗೆ ಬರುವುದು ಇಷ್ಟವಿಲ್ಲ' ಎನ್ನುವ ನಿಂಗಮ್ಮ ಆ ಮಟ್ಟಿಗೆ ಸ್ವಾಭಿಮಾನಿ ಮಹಿಳೆಯೂ ಹೌದು.

`ಕೃಷಿ ಚಟುವಟಿಕೆಗಾಗಿ ಸಂಘದಿಂದ ಆರ್ಥಿಕ ನೆರವು (ಕೃಷಿ ಸಾಲ, ಬೆಳೆ ಸಾಲ) ಪಡೆಯುವ ನಿಂಗಮ್ಮ ಅವಧಿಗೂ ಮುನ್ನವೇ ಮರು ಪಾವತಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಮಳೆ ಬಂದಿಲ್ಲ. ಕೃಷಿ ಚಟುವಟಿಕೆಗಳು ಇನ್ನೂ ಆರಂಭಗೊಂಡಿಲ್ಲ.

ಬೆಳೆ ಕೈಕೊಟ್ಟಿದೆ ಎಂಬ ಸಬೂಬುಗಳನ್ನು ಹೇಳಿ ಸಾಲ ಮರುಪಾವತಿ ಮಾಡದೇ ಇರುವುದು ಇಲ್ಲವೇ ಸಾಲ ಮನ್ನಾ ಯೋಜನೆ ಲಾಭ ಪಡೆಯುವ ಉದ್ದೇಶದಿಂದ ಹಣ ಕಟ್ಟದೇ ದೂರ ಉಳಿಯುವಂತಹ ಕಾರ್ಯವನ್ನೂ ನಿಂಗಮ್ಮ ಮಾಡಿಲ್ಲ` ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಪಾದರಾವ್ ದೇಶಪಾಂಡೆ ಹೆಮ್ಮೆಯಿಂದ ಹೇಳುತ್ತಾರೆ.

ಕೃಪೆ: ಪ್ರಜಾವಾಣಿ


Tag: Saala Manna Beda

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ