ನನ್ನ ಕಥೆ – ವಾರಿಜಾಶ್ರೀ
ನನ್ನ ಕಥೆ – ವಾರಿಜಾಶ್ರೀ
ಕರ್ನಾಟಕ ಶಾಸ್ತ್ರೀಯ ಸಂಗೀತದ ಪರಿಧಿಯಲ್ಲಿ ನನ್ನ ಸಂಗೀತದ ನಂಟು ಬೆಸೆದುಕೊಂಡರೂ ಅದರ ಸಾಂಪ್ರದಾಯಿಕತೆಯ ಆಚೆ ಹೊಸ ಪ್ರಯೋಗಗಳ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಮನಸ್ಸು ನನ್ನದು. ಅದಕ್ಕೆ ಒಂದು ಬಗೆಯ ಪ್ರೇರಣೆ ನೀಡಿದ್ದು ವಿಶ್ವ ಸಂಗೀತ. ಸಂಗೀತದ ನಿಯಮಗಳನ್ನು ಮೀರಿ, ಸಂಗೀತಗಾರ ತನ್ನ ಪ್ರತಿಭೆ, ಸಾಮರ್ಥ್ಯವನ್ನು ಪ್ರಯೋಗಾತ್ಮಕವಾಗಿ ಮತ್ತು ತನ್ನೊಳಗಿನ ಹೊಸ ಚಿಂತನೆಗಳನ್ನು ಪಾರದರ್ಶಕವಾಗಿ ಪ್ರೇಕ್ಷಕರಿಗೆ ತಲುಪಿಸುವ ವೇದಿಕೆ ವಿಶ್ವ ಸಂಗೀತದ್ದು. ಇಲ್ಲಿ ಸಂಗೀತ ಪ್ರಾಕಾರಗಳ ಹಂಗಿಲ್ಲ. ಕೊಲೊನಿಯಲ್ ಕಸಿನ್ಸ್ ಖ್ಯಾತಿಯ ಹರಿಹರನ್ ಮತ್ತು ಲೆಸ್ಲೆ ಲೂಯಿಸ್, ಸ್ಟೀಫನ್ ಡೆವಸಿ, ಗಿನೊ ಬ್ಯಾಂಗ್‌ರಂಥ ಖ್ಯಾತನಾಮರ ಜೊತೆ ವಿಶ್ವಸಂಗೀತದಲ್ಲಿ ದನಿಗೂಡಿಸುವ ಅಪೂರ್ವ ಅವಕಾಶ. ಲಘು ಸಂಗೀತ, ಗಜಲ್, ಸಿನಿಮಾ, ರಾಕ್, ಜಾಸ್ ಹೀಗೆ ನನ್ನನ್ನು ಆಕರ್ಷಿಸದ ಸಂಗೀತ ಪ್ರಕಾರವಿಲ್ಲ. ಈ ತೆರೆದ ಮನಸ್ಸಿನ ಫಲವೇ ದಾಸರ ಪದಗಳಲ್ಲಿನ ಪ್ರಯೋಗ.
ಸಂಗೀತ ನನ್ನ ರಕ್ತ, ಉಸಿರು ಎಂಬ ವರ್ಣನೆ ಕ್ಲೀಷೆ ಎನಿಸಲಾರದು. ಏಕೆಂದರೆ ಮನೆಯಲ್ಲಿ ಸಂಗೀತ `ಡಿಫಾಲ್ಟ್' ಆಗಿತ್ತು! ತಂದೆತಾಯಿ ಇಬ್ಬರೂ ಸಂಗೀತಗಾರರು. ತಂದೆ ಎಚ್.ಎಸ್. ವೇಣುಗೋಪಾಲ್ ಬ್ಯಾಂಕ್ ಉದ್ಯೋಗಿ. ಕೊಳಲು ವಿದ್ವಾಂಸರು. ತಾಯಿ ಹಾಡುಗಾರ್ತಿ. ಹೀಗಾಗಿ ಸಂಗೀತವೇ ಮನೆ ಮನವಾಗಿದ್ದ ವಾತಾವರಣ.
ನಾನು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ಒಂದೂವರೆ ವರ್ಷದವಳಿದ್ದಾಗಿನಿಂದಲೇ ತಂದೆಯಿಂದ ಸಂಗೀತದ ಪಾಠ ಆರಂಭವಾಯಿತು. ತಂದೆ ಜೊತೆ ಸಂಗೀತ ಕಾರ್ಯಕ್ರಮಗಳಿಗೆ ಹೋಗುತ್ತಿದ್ದವಳು ಆ ವಯಸ್ಸಿನಲ್ಲಿಯೇ ರಾಗಗಳನ್ನು ಗುರುತಿಸಲಾರಂಭಿಸಿದ್ದೆ. ಇದನ್ನು ಅರಿತ ತಂದೆ ಮತ್ತಷ್ಟು ಆಸಕ್ತಿಯಿಂದ ಸಂಗೀತದ ಆಳ ಅಗಲ ಪರಿಚಯಿಸಲಾರಂಭಿಸಿದರು. ನಾಲ್ಕನೇ ವಯಸ್ಸಿಗೆ ವಿದುಷಿ ಎಚ್. ಗೀತಾ ಅವರ ಬಳಿ ಸಂಗೀತ ಕಲಿಕೆ ಪ್ರಾರಂಭವಾಯಿತು.
ಆಗಲೇ ಸುಮಾರು ಇನ್ನೂರು ರಾಗಗಳನ್ನು ಗುರುತಿಸುವ ಸಾಮರ್ಥ್ಯ ಬೆಳೆದಿತ್ತು. ಮುಂದೆ ವಸಂತಾ ಶ್ರೀನಿವಾಸನ್, ಡಿ.ಎಸ್. ಶ್ರೀವತ್ಸ, ಸೇಲಂ ಸುಂದರೇಶನ್ ಮುಂತಾದ ಗುರುಗಳ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಸಾಗಿತು. ಮೊದಲ ಬಾರಿಗೆ ಸಮಾರಂಭದಲ್ಲಿ ಹಾಡಿದ್ದು ಏಳು ವರ್ಷದವಳಿದ್ದಾಗ, ಬೆಂಗಳೂರಿನ ಗಾಯನ ಸಮಾಜದಲ್ಲಿ. ಸಾವಿರಾರು ಜನ ನೆರೆದಿದ್ದ ಆ ಸಭಾಂಗಣದಲ್ಲಿ ಹಾಡುವಾಗ ನನಗಿಂತ ಹೆಚ್ಚು ಉದ್ವೇಗಕ್ಕೊಳಗಾಗಿದ್ದವರು ಅಪ್ಪ ಅಮ್ಮ.
ಶಾಸ್ತ್ರೀಯ ಸಂಗೀತದಲ್ಲಿ ಮುಳುಗಿದ್ದವಳನ್ನು ಲಘು ಸಂಗೀತ ಸೆಳೆದದ್ದು ಆರೇಳು ವರ್ಷದೀಚೆಗೆ. ಅದು ಕೇಳುತ್ತಾ ಒಲಿದದ್ದೇ ಹೊರತು ಕಲಿತದ್ದಲ್ಲ. ಚಿಕ್ಕಂದಿನಿಂದಲೂ ಗಜಲ್ ಹುಚ್ಚು. ಅದರಲ್ಲೂ ಹರಿಹರನ್, ಮೆಹ್ದಿ ಹಸನ್‌ರ ದೊಡ್ಡ ಅಭಿಮಾನಿ. ಫಯಾಜ್ ಖಾನ್ ಜೊತೆ ಒಮ್ಮೆ ಗಜಲ್‌ಗೆ ದನಿಗೂಡಿಸುವ ಭಾಗ್ಯ ನನ್ನದಾಗಿತ್ತು. ಗುಲಾಮ್ ಅಲಿಖಾನ್ ಅವರೆದುರು ಹಾಡಿದ್ದು ಮತ್ತೊಂದು ಭಾಗ್ಯ. ಇದರ ನಡುವೆಯೇ `ಹೆಳವನಕಟ್ಟೆ ಗಿರಿಯಮ್ಮ' ಧಾರಾವಾಹಿಯಲ್ಲಿ ದಾಸರ ಪದಗಳನ್ನು ಹಾಡುವ ಅವಕಾಶ ದಕ್ಕಿತು. ದಾಸರ ಪದಗಳಿಗೆ ಗಜಲ್ ಶೈಲಿಯ ಅಳವಡಿಕೆಯಾದರೆ ಸೊಗಸು ಎನಿಸಿತು. ಅದರಲ್ಲಿ ಹಾಡಿದ ಸುಮಾರು ಮುನ್ನೂರು ದಾಸರ ಪದಗಳಿಗೆ ಗಜಲ್ ಶೈಲಿಯ ರೂಪ ನೀಡಿ ಆಲ್ಬಂ ಹೊರತಂದೆ. ಸಿನಿಮಾ ಗಾಯಕಿಯಾಗಿ ನನ್ನನ್ನು ಪರಿಚಯಿಸಿದ್ದು ಸಂಗೀತ ನಿರ್ದೇಶಕ ವಿ. ಮನೋಹರ್. `ಪಾಗಲ್' ಚಿತ್ರದ ಮೂಲಕ ಸಿನಿ ಸಂಗೀತದ ಹೆಜ್ಜೆ ಇರಿಸಿದೆ. ಅದಿನ್ನೂ ಅಂಬೆಗಾಲಿನ ಪಯಣ. ವಿನಯ್‌ಚಂದ್ರ ಸಂಗೀತದ `ಜಟಾಯು' ಚಿತ್ರದಲ್ಲಿ ಸಾಹಿತ್ಯಕ್ಕೆ ದನಿಯಾದೆ. ಕಸ್ತೂರಿ ವಾಹಿನಿಯ ರಿಯಾಲಿಟಿ ಷೋ ಒಂದರಲ್ಲಿ ನಿರೂಪಕಿಯಾಗಿದ್ದಾಗ ಅದರಲ್ಲಿ ತೀರ್ಪುಗಾರರಾಗಿದ್ದ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಮತ್ತೆ ಸಿನಿಮಾ ಸಾಹಿತ್ಯಕ್ಕೆ ಹಾಡಿಸಿದರು. ಅದು ಅನೂಪ್ ಸೀಳಿನ್ ಸಂಗೀತ ನೀಡಿದ `ಮದರಂಗಿ' ಚಿತ್ರದ `ಡಾರ್ಲಿಂಗ್ ಡಾರ್ಲಿಂಗ್....' ಹಾಡು. ತುಸು ಹಿಂಜರಿಕೆಯಿದ್ದರೂ ಹೊಸತನ ಬಯಸುವ ನನಗೆ ಈ ಹಾಡಿನ ಗೆಲುವು ಮತ್ತೊಂದು ಸ್ಫೂರ್ತಿ. ಪ್ರಯತ್ನಿಸಿದರೆ ಹೊಸ ಸಾಧ್ಯತೆಗಳ ಪರಿಚಯವಾಗುವುದು. ಅದು ಈ ಹಾಡಿನಿಂದ ಸಾಧ್ಯವಾಯಿತು. ನನ್ನ ಬದುಕಿನ ಒಂದು ಮೈಲಿಗಲ್ಲು ಇದು.
ವೃತ್ತಿಯ ಹಾದಿ ಮಾತ್ರವಲ್ಲ, ನನ್ನ ಓದು ಕೂಡ ಸಂಗೀತವೇ. ಬಾಲ್ಯದ ಆಟ-ಪಾಠದ ಜೊತೆಯಲ್ಲಿ ಸಂಗೀತ ಬೆಸೆದುಕೊಂಡಿತ್ತು. ಸ್ವರ ಹೊಮ್ಮಿಸಿದಲ್ಲೆಲ್ಲಾ ಬೆನ್ನುತಟ್ಟಿ ಪ್ರೋತ್ಸಾಹಿಸುವವರನ್ನೇ ಪಡೆದ ಅದೃಷ್ಟವಂತೆ ನಾನು. ಅಪ್ಪ ಅಮ್ಮ ಎಂದೂ ಒತ್ತಾಯ ಮಾಡಿ ಸಂಗೀತ ಕಲಿಸಿದವರಲ್ಲ. ಆದರೆ ಅದರ ಆಸಕ್ತಿ ತಾನಾಗಿಯೇ ಒಲಿಯುವಂಥ ವಾತಾವರಣ ಸೃಷ್ಟಿಸಿದ್ದರು. ಕರ್ನಾಟಕ ಶಾಸ್ತ್ರೀಯದ ಒಳನೋಟಗಳು ಮನೆಯಲ್ಲಿಯೇ ತೆರೆದುಕೊಂಡಿತ್ತು. ಶಾಲೆಯಲ್ಲಿಯೂ ಅದೇ ಪರಿಸರ. ಈ ಬಾಂಧವ್ಯವನ್ನು ಶಿಕ್ಷಣದಲ್ಲಿಯೂ ಮುಂದುವರಿಸುವ ಆಸೆ. ಸಂಗೀತ ರಾಗಗಳನ್ನು ಕಲಿತು ಪ್ರದರ್ಶಿಸುವುದು ಮಾತ್ರವಲ್ಲ, ಸಂಗೀತದ ಕುರಿತ ಪ್ರಶ್ನೆಗಳಿಗೆ ವಿಶ್ಲೇಷಣಾತ್ಮಕವಾಗಿ ವಿವರಿಸಬಲ್ಲ ಜ್ಞಾನವೂ ಅಗತ್ಯ. ಸಂಗೀತ ಕುರಿತು ಪುಸ್ತಕಗಳಿದ್ದರೂ ಅದನ್ನು ಶೈಕ್ಷಣಿಕವಾಗಿ ಅಧ್ಯಯನ ಮಾಡುವುದೇ ಸೂಕ್ತ ಎನಿಸಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪೂರೈಸಿದೆ. ಈಗ ಸಂಗೀತ ನನ್ನ ವೃತ್ತಿ ಮತ್ತು ಪ್ರವೃತ್ತಿ. ಸಂಗೀತದ ಅಧ್ಯಯನವನ್ನು ಮುಂದುವರಿಸುವ ಆಸೆ. ಅದರಲ್ಲಿಯೂ ಸಂಗೀತ ಪ್ರಕಾರಗಳ ತುಲನಾತ್ಮಕ ಅಧ್ಯಯನದ ಗುರಿಯಿದೆ.
ಗಾಯನದ ಜೊತೆಗೆ ತಂದೆಯಿಂದ ಕೊಳಲು ವಾದನದ ಕಲೆಯೂ ಬಳುವಳಿಯಾಗಿ ಒಲಿದಿದೆ. ಬಾಲ್ಯದಲ್ಲಿ ಗಾಯನದತ್ತ ಹೆಚ್ಚು ಗಮನ ಹರಿಸಿದ್ದವಳಿಗೆ ಕೊಳಲು ಕಲಿಯಬೇಕೆಂಬ ಹಂಬಲ ಮೂಡಿದ್ದು ಕೆಲವು ವರ್ಷಗಳ ಹಿಂದೆ. ಅನೇಕ ಕಾರ್ಯಕ್ರಮಗಳಲ್ಲಿ ತಂದೆ ಜೊತೆ ಕೊಳಲು ನುಡಿಸಿದ್ದೇನೆ. ಹಾಡುತ್ತಾ ಕೊಳಲು ನುಡಿಸುವ ಅನುಭವ ವರ್ಣನಾತೀತ. ಹೀಗೆ ಹಾಡು ಮತ್ತು ಕೊಳಲು ಎರಡರ ಸಂಗಮದ ಆಲ್ಬಂ `ಬಿದಿರು' ಇತ್ತೀಚೆಗೆ ಹೊರಬಂದಿದೆ. ಅದು ದಾಸ ಸಾಹಿತ್ಯವನ್ನು ಆಧುನಿಕ ಸಂಗೀತಕ್ಕೆ ಅಳವಡಿಸುವ ಪ್ರಯತ್ನ. ಪ್ರವೀಣ್ ಡಿ ರಾವ್ ಸಂಗೀತ ನೀಡಿದ ಈ ಆಲ್ಬಂಗೆ `ಕೀಮಾ'ದ ಸಿನಿಮೇತರ ಸಂಗೀತ ವಿಭಾಗದ ಪ್ರಶಸ್ತಿ ಬಂದಿದೆ. `ಅರ್ಪಣ', `ಉಪಾಸನಾ', `ಮೇಳ ರಾಗ ಮಾಲಿಕಾ', `ಕಾಯೋ ಎನ್ನ ಗೋಪಾಲ' ನನ್ನ ಸಂಗೀತ ಶ್ರಮ ಹುದುಗಿರುವ ಆಲ್ಬಂಗಳು. ವಿದ್ವಾನ್ ಶತಾವಧಾನಿ ಆರ್. ಗಣೇಶ್ ನಿರ್ದೇಶಿಸಿದ `ಅಷ್ಟಾವಧಾನ' ಸಾಕ್ಷ್ಯಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದೇನೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹಿರಿಯರ ಆಶೀರ್ವಾದ ಸಿಕ್ಕಿದೆ. ಬಾಲಮುರಳಿ ಕೃಷ್ಣ, ಕೆ.ಎಸ್. ಗೋಪಾಲಕೃಷ್ಣನ್, ಕುನ್ನೆಕುಡಿ ವೈದ್ಯನಾಥನ್, ರಾಜೇಶ್ ವೈದ್ಯ ಮುಂತಾದ ಶ್ರೇಷ್ಠರನ್ನು ಭೇಟಿ ಮಾಡುವ ಅವಕಾಶಗಳು ಸಿಕ್ಕಿತ್ತು. ಕೆಲವೊಮ್ಮೆ ಆಸಕ್ತಿಯಿದ್ದು ಅವಕಾಶ ಸಿಗದಿರಬಹುದು, ಅವಕಾಶಗಳಿದ್ದು ಆಸಕ್ತಿಯಿಲ್ಲದಿರಬಹುದು. ಈ ನಿಟ್ಟಿನಲ್ಲಿ ನಾನು ನಿಜಕ್ಕೂ ಅದೃಷ್ಟವಂತೆ.
ಕರ್ನಾಟಕ ಸಂಗೀತದ ಶ್ರೋತೃವರ್ಗ ತೀರಾ ಸೀಮಿತ. ವಿವಿಧ ಪ್ರಕಾರದ ಸಂಗೀತವನ್ನು ಇಷ್ಟಪಡುವ ಜನ ನಮ್ಮಂದಿಗಿದ್ದಾರೆ. ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಸಂಗೀತದ ವ್ಯಾಪ್ತಿಯೂ ವಿಸ್ತರಿಸುತ್ತಿದೆ. ಜನ ಬಯಸುವ ಮಾದರಿಯಲ್ಲಿ ಶಾಸ್ತ್ರೀಯ ಸಂಗೀತವನ್ನು ಅವರಿಗೆ ಮುಟ್ಟಿಸುವ ಆಸೆ ನನ್ನಲ್ಲಿದೆ. ಈ ಕಾರಣಕ್ಕಾಗಿಯೇ ವಿಶ್ವಸಂಗೀತದ ಬಗ್ಗೆ ಹೆಚ್ಚು ಒಲವು. ಅದು ಸುಲಭವಾಗಿ ಎಲ್ಲಾ ವಿಧದ ಸಂಗೀತ ಮನಸ್ಸುಗಳನ್ನು ಸೆಳೆಯುತ್ತದೆ.
ಪ್ರಯೋಗದ ಜೊತೆಗೆ ಸಾಂಪ್ರದಾಯಿಕ ಶೈಲಿಯನ್ನು ಮರೆಯುವುದಿಲ್ಲ. ದೇಶದ ವಿವಿಧೆಡೆಯಲ್ಲದೆ ಶ್ರೀಲಂಕಾ ಮತ್ತು ಕುವೈತ್‌ಗಳಲ್ಲಿಯೂ ಹಾಡಿದ್ದೇನೆ.
ನನ್ನ ಪುಟ್ಟ ಪಯಣದಲ್ಲಿ ಹಲವು ಪ್ರಶಸ್ತಿಗಳೂ ಒಲಿದಿವೆ. `ಕೆಂಪೇಗೌಡ ಪ್ರಶಸ್ತಿ', `ವಿದ್ಯಾರತನ್ ರಾಷ್ಟ್ರೀಯ ಪ್ರಶಸ್ತಿ', `ಪರ್ಲ್ ಆಫ್ ಬೆಂಗಳೂರು', ಮದ್ರಾಸ್ ತೆಲುಗು ಅಕಾಡೆಮಿಯ `ಉಗಾದಿ ಪುರಸ್ಕಾರ' `ಅನನ್ಯ ನಾಡಜ್ಯೋತಿ ಯುವ ಪುರಸ್ಕಾರ' ಅವುಗಳಲ್ಲಿ ಕೆಲವು. ಶ್ರೀಲಂಕಾದ ಕೊಲಂಬೊದಲ್ಲಿ ಶಾರದಾ ಆಶ್ರಮದಿಂದ `ಗಾನವಿನೋದಿನಿ' ಬಿರುದು ಮುಡಿಗೇರಿದ ಹೆಮ್ಮೆ ನನ್ನದು.
ನಿರೂಪಣೆ: ಎಂ. ಎಸ್. ಅಮಿತ್. ಕೃಪೆ: ಪ್ರಜಾವಾಣಿ
Tag: Varijashree, Vaarijaashree
ಕಾಮೆಂಟ್‌ಗಳು