ಗಂಡಸರಿಗೆ ಅರ್ಥವಾಗದ್ದು
ಇತ್ತೀಚಿಗೆ ಒಂದು ಮದುವೆ ಮನೆಯಲ್ಲಿ
ಒಂದಷ್ಟು ಜನ ಸೇರಿದ್ದೆವು. ಈ ಸಂದರ್ಭಗಳಲ್ಲಿ
ಇರುವ ಹಾಗೆ ದಿಕ್ಕು ದೆಸೆ ಇಲ್ಲದ ಹರಟೆ ತಲೆ ಎತ್ತಿತು.
ಆ ಗುಂಪಿನಲ್ಲಿ ಗಂಡಸರೇ ಇದ್ದರು.
ಹೆಂಗಸರೆಲ್ಲ ಝಗಮಗಿಸುವ ಸೀರೆಗಳನ್ನಿಟ್ಟುಕೊಂಡು ಜೋರಾಗಿ ಮಾತನಾಡುತ್ತ ಮದುವೆಗೆ ಸಂಭ್ರಮ
ತರುತ್ತಿದ್ದರು.
ಯಾರೋ ಇನ್ನೊಬ್ಬರಿಗೆ ಕೇಳಿದರು `ನಿಮ್ಮ
ಹೆಂಡತಿ ಏನು ಮಾಡುತ್ತಾರೆ`. ಅವರು ತುಸು ಹೆಮ್ಮೆಯಿಂದಲೇ, `ಆಕೆ ಕೆ.ಎ.ಎಸ್ ಆಗಿದ್ದಾಳಲ್ಲ. ಈಗ
ಅಸಿಸ್ಟಂಟ್ ಕಮಿಷನರ್ ಆಗಿದ್ದಾಳೆ. ಇನ್ನೇನು ಐ.ಎ.ಎಸ್. ಬಂದುಬಿಡುತ್ತದೆ` ಎಂದು ಹೇಳಿ ಒಂದು ಸುತ್ತು ಎಲ್ಲರನ್ನೂ ನೋಡಿದರು.
ಇದೇ ರೀತಿ `ನಿಮ್ಮ ಹೆಂಡತಿ ಏನು ಮಾಡುತ್ತಾರೆ` ಎಂದು ಮತ್ತೊಬ್ಬರಿಗೆ
ಕೇಳಿದರು. ಕೆಲವರು ಬ್ಯಾಂಕ್ ಆಫೀಸರ್, ಕ್ಲರ್ಕ್, ಶಿಕ್ಷಕಿ, ಹೀಗೆಲ್ಲ
ವೃತ್ತಿಗಳನ್ನು ಹೇಳಿದರು. ಒಬ್ಬರು ನನಗೆ
ಕೇಳಿದರು, `ನಿಮ್ಮ ಹೆಂಡತಿ ಏನು ಮಾಡುತ್ತಾರೆ`. ಆಗ ನಾನು ಹೇಳಿದೆ, `ನನ್ನ ಹೆಂಡತಿ ಮಾಡುವ ಕೆಲಸವನ್ನು
ಏನೆಂದು ಹೇಳಲಿ.
ಆಕೆ ಯಾವಾಗಲೂ ಕೆಲಸದಲ್ಲೇ
ಇರುತ್ತಾಳೆ. ನನಗೇ ಸಿಗುವುದಿಲ್ಲ`. ಅದಕ್ಕವರು, `ಹಾಗಾದರೆ ಯಾವ ಕೆಲಸ ಅವರದು` ಎಂದು ಕುತೂಹಲದಿಂದ ಕೇಳಿದರು. `ನೋಡಿ ಆಕೆ ಕಾಯಿದೆಯಲ್ಲಿ ಪರಿಣತಳು.
ಮನೆಯಲ್ಲಿ ನಡೆಯಬೇಕಾದ್ದರ ಕಾಯಿದೆ ಎಲ್ಲ ಆಕೆಯೇ ಮಾಡಿದ್ದು.
ಆಕೆ ವೈದ್ಯ ವೃತ್ತಿಮಾಡುತ್ತಾಳೆ.
ಯಾರಿಗಾದರೂ ಆರೋಗ್ಯ ಕೆಟ್ಟರೆ ಯಾವ ಕಷಾಯ ಮಾಡಬೇಕು, ಯಾರಿಗೆ
ಬಿಸಿನೀರಿನ ಉಗಿ ನೀಡಬೇಕು, ಯಾವ ಮುಲಾಮು ಹಚ್ಚಬೇಕು ಎಂಬುದರ
ತೀರ್ಮಾನವೆಲ್ಲ ಆಕೆಯದೇ. ಆಕಸ್ಮಿಕವಾದ
ಗಾಯವೇನಾದರೂ ಆದರೆ ಅವರಿಗೆ ಪ್ರಥಮ ಚಿಕಿತ್ಸೆಯನ್ನು ಆಕೆಯೇ ನೀಡುತ್ತಾಳೆ. ಔಷಧಿ ಕೊಡುತ್ತಾಳೆ.
ಮರೆಯದೇ ಮಾತ್ರೆ ನೀಡುತ್ತಾಳೆ. ಈ
ವೈದ್ಯವೃತ್ತಿಯೊಡನೆ ಆಕೆ ಆಹಾರತಜ್ಞೆಯೂ ಹೌದು.
ಯಾರಿಗೆ ಯಾವುದು ಇಷ್ಟ ಎಂದು ಗಮನಿಸಿ ಆಹಾರ ತಯಾರು ಮಾಡುತ್ತಾಳೆ. ಬೇಜಾರಾಗದ ಹಾಗೆ ದಿನದಿನವೂ ರುಚಿಯಲ್ಲಿ ಬದಲಾವಣೆ ಮಾಡುವುದೂ ಆಕೆಯೇ. ಇದಿಷ್ಟೇ ಎನ್ನಬೇಡಿ. ಆರೋಗ್ಯ ಇಲಾಖೆಯೂ ಆಕೆಯದೇ.
ಬಟ್ಟೆಗಳನ್ನು ಶುದ್ಧಗೊಳಿಸಿ,
ಜೋಡಿಸಿ ಇಡುವುದು, ಮನೆಯಲ್ಲಿ ಸ್ವಲ್ಪವೂ ಕಸ ಇಲ್ಲದ
ಹಾಗೆ ಚೊಕ್ಕಟವಾಗಿ ಇರಿಸುವುದು. ಇದರ ಜೊತೆಗೆ
ಹಣಕಾಸೂ ಅವಳ ಸುಪರ್ದಿಗೆ ಸೇರಿದ್ದು. ಇದ್ದ
ಸ್ವಲ್ಪ ಹಣದಲ್ಲೇ ಹೇಗೆ ಬೇಕಾದ್ದನ್ನು ಮಾತ್ರ ಖರೀದಿಸಿ, ದುಂದುವೆಚ್ಚ
ಮಾಡದೇ ಉಳಿಸಿ ಕೂಡಿಟ್ಟು ಬೇಕಾದಾಗ ಮನೆಗೆ ನೀಡುತ್ತಾಳೆ.
ಬ್ಯಾಂಕಿನ ವ್ಯವಹಾರವೆಲ್ಲ ಅವಳದೇ
ಜವಾಬ್ದಾರಿ. ಯಾವ ವಿಶ್ವವಿದ್ಯಾಲಯದ ವಿಶೇಷ
ಡಿಗ್ರಿ ಇಲ್ಲದೇ, ತರಬೇತಿ ಇಲ್ಲದೇ ಮಕ್ಕಳಿಗೆ ಶಿಕ್ಷಣ,
ತರಬೇತಿ ನೀಡುತ್ತಾಳೆ. ಆದ್ದರಿಂದ ನಾನು, ನನ್ನ
ಮಕ್ಕಳು ಎಲ್ಲ ಆಕೆಗೆ ಶರಣಾಗಿಬಿಟ್ಟಿದ್ದೇವೆ.
ಅದಕ್ಕೇ ಆಕೆ ಗೃಹಿಣಿ ಎನ್ನಿಸಿಕೊಳ್ಳುತ್ತಾಳೆ` ಎಂದೆ.
ಅವರು ಬಾಯಿ ತೆರೆದುಕೊಂಡು ಕೇಳುತ್ತಲೇ ಇದ್ದರು. ಇದು ನನ್ನ ಮನೆಯ ವಿಷಯ ಮಾತ್ರ ಅಲ್ಲ. ಪ್ರತಿಯೊಂದು
ಮನೆಯಲ್ಲಿ ಮಹಿಳೆ ಮಾಡುವುದೂ ಇದನ್ನೇ. ಆದರೆ
ಬಹಳಷ್ಟು ಗಂಡಂದಿರಿಗೆ ಹೆಂಡತಿಯ ಪರಿಶ್ರಮದ ಅರ್ಥವೇ
ಆಗುವುದಿಲ್ಲ. ಯಾರಾದರೂ ಕೇಳಿದರೆ ನನ್ನ ಹೆಂಡತಿ
ಮನೆಯಲ್ಲಿದ್ದಾಳೆ.
ಯಾವ ಕೆಲಸದಲ್ಲೂ ಇಲ್ಲ. ಆಕೆ ಹೌಸ್ ವೈಫ್ ಎಂದು ಉದಾಸೀನದಿಂದ
ಹೇಳುತ್ತಾರೆ. `ಆಕೆ ಮಾಡುವ ಕೆಲಸ ಹತ್ತು ಜನ ಮಾಡುವ ಕೆಲಸ, ಮನೆ ಉಳಿಸುವ
ಬೆಳೆಸುವ ಕೆಲಸ` ಎಂದೆ. ಎಲ್ಲರೂ ಒಪ್ಪಿದಂತೆ ತೋರಿತು. ಈಗ ಸ್ವಲ್ಪ ಜನ
ಗಂಡಂದಿರರಿಗೆ ಇದರ ಅರಿವಾಗಿ ತಮ್ಮ, ತಮ್ಮ ಹೆಂಡತಿಯರಿಗೆ ಸಹಾಯ ಮಾಡುವ
ಪ್ರವೃತ್ತಿ ಬೆಳೆಯುತ್ತಿದೆ. ಆದರೂ ಸಹಾಯವೇ ಬೇರೆ
ಜವಾಬ್ದಾರಿಯೇ ಬೇರೆ.
ಗಂಡ ಏನು ಮಾಡಲಿ, ಎಂದು ಕೇಳಿದಾಗ ಏನು ಮಾಡಬೇಕು,
ಅವನಿಂದ ಏನು ಆದೀತು ಎಂದು ಯೋಚಿಸಿ ತೀರ್ಮಾನ ಕೊಡುವುದು ಹೆಂಡತಿಯೇ. ಆಕೆಗೂ
ಗಂಡನಂತೆ ಟಿ.ವಿ. ನೋಡಬೇಕು, ಆಟ ನೋಡಬೇಕು, ಗೆಳತಿಯರೊಂದಿಗೆ
ಸಿನಿಮಾಕ್ಕೆ ಹೋಗಬೇಕು, ಕಣ್ಣು ತುಂಬ ನಿದ್ರೆ ಮಾಡಬೇಕು ಎಂಬ
ಆಸೆಗಳಿದ್ದರೂ ಅವುಗಳನ್ನು ಮನೆಗೋಸ್ಕರ ಹತ್ತಿಕ್ಕಿಕೊಂಡು ಎಲ್ಲರೂ ತಮತಮಗೆ ಬೇಕಾದ್ದನ್ನು
ಪಡೆಯುವಂತೆ ಅನುವು ಮಾಡಿಕೊಡುವ ಗೃಹಿಣಿಯ ಬೆಲೆ ಅರಿಯದವರೇ ದಡ್ಡರು.ಅದಕ್ಕೆಂದೇ ಕವಿವಾಣಿ
ಹೇಳುತ್ತದೆ, `ಹೆಂಡತಿಯೊಲುಮೆಯ
ಭಾಗ್ಯವನರಿಯದ ಗಂಡಿಗೆ ಜಯವಿಲ್ಲ`
ನಿರೂಪಣೆ: ಡಾ. ಗುರುರಾಜ ಕರ್ಜಗಿ,
‘ಕರುಣಾಳು ಬಾ ಬೆಳಕೆ’, ಕೃಪೆ: ಪ್ರಜಾವಾಣಿ
ಚಿತ್ರಕೃಪೆ: www.kamat.com
ಕಾಮೆಂಟ್‌ಗಳು