ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಮ್ಮೊಳಗಿದ್ದು ನಡೆಸುತ್ತಿರುವವ



ಈಶ್ವರಃ ಸರ್ವಭೂತಾನಾಂ ಹೃದ್ದೇಶೇರ್ಜುನ ತಿಷ್ಠತಿ |
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ||

ಅರ್ಜುನನೆ!  ಮಾಯೆಯಿಂದ ದೇಹಯಂತ್ರವನ್ನು ಏರಿ ಸಕಲ ಪ್ರಾಣಿಗಳನ್ನೂ ತಿರುಗಿಸುತ್ತಾ ಈಶ್ವರನು ಸರ್ವಭೂತಗಳ ಹೃದಯದಲ್ಲಿಯೂ ಕುಳಿತಿರುವನು.

ಪರಮಾತ್ಮನು ಎಲ್ಲರ ಹೃದಯನಿವಾಸಿ.  ಪುರಾಣಗಳ ಕತೆಯಲ್ಲಿ ಪರಮಾತ್ಮನನ್ನು ಕೈಲಾಸದಲ್ಲಿರುವ ಶಿವನೆಂದೂ, ವೈಕುಂಠದಲ್ಲಿರುವ ವಿಷ್ಣುವೆಂದೂ ವಿವರಿಸಿದ್ದಿದೆ.  ಆದರೆ ಈ ಶ್ಲೋಕದಲ್ಲಿ  ಪರಮಾತ್ಮನನ್ನು ಅವನು ಎಲ್ಲರ ಹೃದಯದಲ್ಲಿರುವವನು ಎಂದು ಹೇಳಿದೆ.  ನಾವು ಸಾಧನೆಯನ್ನು ಇಲ್ಲಿ ಮಾಡಬೇಕು ಎಂಬುದೇ ಇದರ ತಾತ್ಪರ್ಯ. ಇಲ್ಲಿ ಹೃದಯ ಎಂದರೆ ಮನಸ್ಸು ಬುದ್ಧಿ ಎಂದರ್ಥ.  ನಮ್ಮ ಮನಸ್ಸು-ಬುದ್ಧಿಯೆಂಬ ಯಂತ್ರವನ್ನು ಈಶ್ವರನು ಆರೂಢನಾಗಿ ಮೂರು ಅವಸ್ಥೆಗಳನ್ನು ಬೆಳಗುತ್ತಿರುತ್ತಾನೆ.  ಇಂದ್ರಿಯಗಳು ಮಾಡುವ ಎಲ್ಲಾ ಕೆಲಸಗಳಿಗೆ ಶಕ್ತಿಯನ್ನು ನೀಡುವವನೂ ಅವನೇ.  ಎಲ್ಲರ ಹೃದಯವನ್ನೂ ಅವನು ವ್ಯಾಪಿಸಿರುವುದರಿಂದ ಮತ್ತು ಎಲ್ಲರ ಹೃದಯವನ್ನೂ ಅವನು ವ್ಯಾಪಿಸಿರುವುದರಿಂದ ಮತ್ತು ಎಲ್ಲರ ಮನಸ್ಸು ಬುದ್ಧಿಗಳಿಗೂ ಅವನು ಒಡೆಯನಾಗಿರುವುದರಿಂದ ಅವನಿಗೆ “ಈಶ್ವರ” ಎಂದು ಹೆಸರು. 

ಪರಮಾತ್ಮನು ಶುದ್ಧ ಚೈತನ್ಯಸ್ವರೂಪನು.  ಕರ್ಮವು ಪ್ರಕೃತಿಗೆ ಸಂಬಂಧಪಟ್ಟದ್ದು.  ಪರಮಾತ್ಮನ ಸಾನ್ನಿಧ್ಯದಲ್ಲಿ ಪ್ರಕೃತಿಯು ಮಾಡುವ ನರ್ತನವೇ ನಾವೆಲ್ಲರೂ ಮಾಡುವ ಕರ್ಮಗಳು.  ಈ ಜ್ಞಾನವನ್ನು ಪಡೆಯುವುದೆಂದರೆ ಕರ್ಮಗಳನ್ನು ಮಾಡಿಕೊಂಡಿದ್ದೂ ಕರ್ಮಬಂಧನದಿಂದ ಮುಕ್ತರಾದಂತೆ.  ಇದನ್ನೇ ಪರಮಾತ್ಮನು ಮುಂದಿನ ಶ್ಲೋಕದಲ್ಲಿ ಹೇಳಿದ್ದಾನೆ.

ತಮೇವ ಶರಣಂಗಚ್ಛ ಸರ್ವಭಾವೇನ ಭಾರತ |
ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಯಸಿ ಶಾಶ್ವತಮ್ ||

ಎಲೈ ಭರತಕುಲೋತ್ತಮನೆ!  ಅವನನ್ನೇ ಸರ್ವಭಾವದಿಂದ ಶರಣುಹೊಂದು.  ಆತನ ಅನುಗ್ರಹದಿಂದ ಪರಮ ಶಾಂತಿಸ್ವರೂಪವಾದ ಮೋಕ್ಷವೆಂಬ ಶಾಶ್ವತಸ್ಥಾನವನ್ನು ಹೊಂದುವಿ.

“ಈಶ್ವರಬುದ್ಧಿಯಿಂದ ಈ ಪ್ರಪಂಚವನ್ನು ನೋಡಬೇಕು.  ಈಶ್ವರನಿಗೆ ಅರ್ಪಣೆಯಾಗುವಂತೆಯೇ ಎಲ್ಲಾ ಕೆಲಸಗಳನ್ನು ಮಾಡಬೇಕು.  ಹೀಗೆ ಮಾಡುತ್ತಾ ಜೀವಿಸುವುದಾದರೆ ಕರ್ಮಲೇಪವಿರುವುದಿಲ್ಲ” ಎಂದು ಈಶಾವಾಸ್ಯ ಉಪನಿಷತ್ತು ಹೇಳುತ್ತದೆ.  ಈ ತತ್ವವನ್ನೇ ಗೀತೆಯು ಪ್ರತಿಪಾದಿಸುತ್ತಿರುವುದು.

ಶರೀರೇಂದ್ರಿಯಗಳಲ್ಲಿ ತಾದ್ಯಾತ್ಮಭಾವವನ್ನು ಹೊಂದಿ ಅವುಗಳು ಮಾಡುವ ಕೆಲಸದಲ್ಲಿ ಕರ್ತವ್ಯಭಾವನೆಯನ್ನು ತಳೆಯುವುದಾದರೆ ಅದು ಸಂಸಾರಕ್ಕೆ ಕಾರಣವಾಗುವುದು.  ಇದರ ಬದಲು ಪರಮಾತ್ಮನ ಸಾನ್ನಿಧ್ಯದಲ್ಲಿ ಇಂದ್ರಿಯಗಳು ತಮ್ಮ ಪ್ರಕೃತಿಧರ್ಮಕ್ಕನುಗುಣವಾಗಿ ಕೆಲಸ ಮಾಡುತ್ತಿರುತ್ತವೆ ಎಂದು ತಿಳಿದುಕೊಂಡು ಜೀವಿಸುವುದಾದರೆ ಕರ್ಮಬಂಧನದಿಂದ ಮುಕ್ತಿಯನ್ನು ಪಡೆದಂತೆ.

ಇದನ್ನೇ ಇಲ್ಲಿ ಪರಮಾತ್ಮನು ಹೇಳುತ್ತಿರುವುದು – “ಎಲೈ ಅರ್ಜುನನೆ!  ಸರ್ವಭಾವದಿಂದಲೂ ಬುದ್ಧಿಯನ್ನು ಬೆಳಗುವ ಪರಮಾತ್ಮನನ್ನೇ ಶರಣುಹೋಗು.  ಅವನ ಪ್ರಸಾದದಿಂದ (ಆತ್ಮಜ್ಞಾನವನ್ನು ಪಡೆಯುವುದರ ಮೂಲಕ) ಮೋಕ್ಷಪದವಿಯನ್ನು ಪಡೆಯುವೆ”  ಎಂದು.

ಇಲ್ಲಿ ‘ಸರ್ವಭಾವೇನ’ ಎಂದರೆ ಅಹಂಕಾರವನ್ನು ಸ್ವಲ್ಪವೂ ಉಳಿಸಿಕೊಳ್ಳದೇ ಎಂದು;  ಅಥವಾ ಕರ್ತೃತ್ವ ಭೋಕ್ತೃತ್ವಭಾವನೆ ಎರಡನ್ನೂ ಬಿಟ್ಟು ಎಂದು.  ಇದನ್ನೇ ಸಂಪೂರ್ಣ ಶರಣಾಗತಿ ಅಥವಾ ಪ್ರಪತ್ತಿ ಎಂದು ಕರೆಯುವುದು.  ರಾಧಾ, ಹನುಮಾನ್, ಪ್ರಹ್ಲಾದ, ಮೀರಾ ಇವರೆಲ್ಲ ಪರಮಾತ್ಮನಿಗೆ ಸಂಪೂರ್ಣ ರೀತಿಯಲ್ಲಿ ಶರಣುಹೋದ ಮಹಾತ್ಮರು.  ಅಂಥವರಿಗೆ ಮಾತ್ರ ಪರಮಾತ್ಮನ ಪ್ರಸಾದವು ಲಭಿಸುವುದು.  ಪ್ರತಿಯೊಬ್ಬ ಸಾಧಕನು ಹೀಗೆ ಶರಣಾಗುವುದಕ್ಕೆ ಪ್ರಯತ್ನಿಸಬೇಕು.

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ |
ವಿಮೃಶ್ಶೈತದಶೇಷೇಣ ಯಥೇಚ್ಛಸಿ ತಥಾ ಕುರು ||

ಇದೋ ! ಅತ್ಯಂತ ರಹಸ್ಯವಾದ ಜ್ಞಾನವನ್ನು ನಾನು ನಿನಗೆ ಹೇಳಿದ್ದಾಯಿತು.  ಇದನ್ನೆಲ್ಲಾ ಸರಿಯಾದ ರೀತಿಯಲ್ಲಿ ಮನನ ಮಾಡಿ ಆಮೇಲೆ ನಿನಗೆ ಇಚ್ಛೆ ಬಂದಂತೆ ಮಾಡು. 


(ಆಧಾರ: ಸ್ವಾಮಿ ಚಿನ್ಮಯಾನಂದರ ಶ್ರೀಮದ್ ಭಗವದ್ಗೀತೆ) 

Tag: Bhagavadgita, Nammolagiddu nadesuttiruvava

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ