ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಡಕೇರೀಲಿ ಮಂಜು


ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ಹಂಗೆ 
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ
ಮಡಕೇರೀಲಿ ಮಂಜು!

ಮಡಗಿದ್ ಅಲ್ಲೇ ಮಡಗಿದ್ಹಂಗೆ
ಲಂಗರ್ ಬಿದ್ದಿದ್ ಅಡಗಿದ್ಹಂಗೆ
ಸೀತಕ್ ಸಕ್ತಿ ಉಡಗೋದಂಗೆ
ಅಳ್ಳಾಡಾಲ್ದು ಮಂಜು!

ತಾಯಿ ಮೊಗೀನ್ ಎತ್ಕೊಂಡ೦ಗೆ
ಒಂದಕ್ಕೊಂದು ಅತ್ಕೊಂಡ೦ಗೆ
ಮಡಕೇರೀನ ಎದೆಗೊತ್ಕೊಂಡಿ
ಜೂಗೀಡ್ಸಿತ್ತು ಮಂಜು!
ಮಲಗಾಕ್ ಸೊಳ್ಳೆಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿ ಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್
ಮಡಕೇರೀ ಮೇಲ್ ಮಂಜು!

ಮಂಜಿನ್ ಮಸಕಿನ್ ಕಾವಲ್ನಲ್ಲಿ
ಒಣಗಿದ್ ಉದ್ದಾನೆ ಉಲ್ನಲ್ಲಿ 
ಒಳಗೇ ಏನೋ ಸರದೋದಂಗೆ
ಅಲಗಾಡ್ತಿತ್ತು ಮಂಜು!

ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ
ಗಸ್ತಾಕ್ತಿತ್ತು ಮಂಜು!

ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವಮ್ನೋರು
ತೆಳ್ನೆ ಬೆಳ್ನೆ ಬಟ್ಟೇನಾಕಿ
ಬಂದಂಗಿತ್ತು ಮಂಜು!
ಚಿಮ್ತಾನಿದ್ರ್ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ
ಆಲಿನ್ ಸೌದ್ರಿ ಮಂಜು!

ಅಗಲೇ ಬರಲಿ ರಾತ್ರಿ ಬರಲಿ
ಬಿಸಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ದು
ಮಡಕೇರೀಗೆ ಮಂಜು!
ತೈಲ ನೀರಿನ್ ಮೇಗಿದ್ಹಂಗೆ 
ಪೂವಮ್ಮ ನನ್ ತಂಗೀದ್ಹಂಗೆ
ಬಿಟ್ಟೂ ಬಿಡದಂಗ್ ಇಡಕೋಂತಿತ್ತು
ಮಡಕೇರೀಗೆ ಮಂಜು!

ಸಾಹಿತ್ಯ: ಜಿ. ಪಿ. ರಾಜರತ್ನಂ


Tag: Madikerili Manju

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ