ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲ್ಯ

ಬಾಲ್ಯ

ಪುಟ್ಟ ಕಂದನಿಗಮ್ಮ ಚಂದಮಾಮನ ತೋರಿ
ಒಲಿಸಿ ತಿನಿಸಿದ ತುಪ್ಪದನ್ನ ಬಾಲ್ಯ;
'ನಿದ್ದಿಸಿತು ಪಾಪಚ್ಚಿ, ಇನ್ನು ಅಡಿಗೆಗೆ ಸಮಯ'
ಎನುತಿರಲು, ಎವೆ ಮೊಗ್ಗಿನರಳು ಬಾಲ್ಯ.

ಮನೆಯ ಮಂದಿಯ ಅಕ್ಕರಾಸ್ಥೆ ಚಿಪ್ಪುಗಳಲ್ಲಿ
ಬಿರಿವ ಮುದ್ದಿನ ಮುತ್ತು ಮಾಲೆ ಬಾಲ್ಯ;
ನಂಟರಿಷ್ಟರ ಹಿಗ್ಗು ಸೆಲೆಯಾಡಿಸಿದ ಬುಗ್ಗೆ,
ತಿಳಿ ನೀರ ಸ್ವಚ್ಚಂದ ಮೀಹ ಬಾಲ್ಯ.

ವಾಸ್ತವದ ದಳ್ಳುರಿಗೆ ಸೀಯದೆಯೆ ಉಳಿದಿರುವ
ಪುಟ್ಟ ಕನಸಿನ ಚಿಟ್ಟೆ ರೆಕ್ಕೆ ಬಾಲ್ಯ;
ಬಾಳ್ ಬನದ ಮೃದು ಗರಿಕೆ, ಮುದಿತನದ ಕನವರಿಕೆ,
ಕವಿಯ ನಿತ್ಯಸ್ಫೂರ್ತಿ ನೇವರಿಕೆ ಬಾಲ್ಯ.

ನೂರಾರು ತರಲೆಗಳ ಕಾರ್ಪಣ್ಯದೊರಲೆಗಳ
ಕೊಡಹಿ ತೇಲಿದ ಅರಳೆ ಬದುಕು ಬಾಲ್ಯ;
ಬಾಲ್ಯದಲ್ಲಿರುವವಗೆ ಮಧುರ ಬಾಲ್ಯದ ಮೌಲ್ಯ
ಮನವರಿಕೆಯಾಗದ ನಿತಮೂಲ್ಯ ಬಾಲ್ಯ.

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್

Tag: Baalya, Putta kandanigamma chandamaamana tori

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ