ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕವಿ ಡುಂಡಿರಾಜ್ ಅವರ ಕೆಲವು ಹನಿಗವನಗಳು


ಕವಿ ಡುಂಡಿರಾಜ್ ಅವರ ಹನಿಗವನಗಳು

ಅಸಾಧ್ಯ:
 
ಸಂಕ್ರಾಂತಿಯಂದು 
ಎಳ್ಳು ಬೆಲ್ಲ ತಿಂದು 
ಒಳ್ಳೆ ಮಾತಾಡಬೇಕು 
ತಗೊಳ್ಳಿ ತಿನ್ನಿ ತಿನ್ನಿ 
ಅಂದರೆ 
ಏನು ಬೇಕಾದರೂ ತಿಂತೀನಿ 
ಮಾತಾಡುವುದು ಅಸಾಧ್ಯ 
ಅಂದರಂತೆ ನಮ್ಮ ಪ್ರಧಾನಿ! 

ನಗದು :
ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೇ ಇರಬೇಕು
ಹಾಕಿದ್ದಾರೆ ಬೋರ್ಡು
ನಗದು”!!!

ಸುಸ್ತು :
ನಡೆಯಲಿಲ್ಲ
ಓಡಲಿಲ್ಲ
ಕಾರಲ್ಲಿ ಬಂದರೂ
ಇಷ್ಟೊಂದು ಸುಸ್ತೆ?
ಹೌದು ಮಾರಾಯ್ರೇ
ಹಾಗಿದೆ ನಮ್ಮ ರಸ್ತೆ.

ತರಬೇತಿ :
ಭರತ ನಾಟ್ಯ
ಡಿಸ್ಕೋ ನೃತ್ಯ
ಕಥಕ್ಕಳಿ
ಕಲಿ ಕಲಿ
ಅನ್ನುತ್ತದೆ
ರಸ್ತೆ ಕುಳಿ

ಹೋಲಿಕೆ :
ನಡು ವಯಸ್ಸಿನ
ಗೃಹಿಣಿಯಾದರೂ
ಈಕೆ
ಶಿಲಾಬಾಲಿಕೆ
ಬೇಕಿದ್ದರೆ ನೀವೇ ನೋಡಿ
ಸದಾಕೈಯಲ್ಲಿ ಕನ್ನಡಿ!

ಅಂತಿಮ :
ಸತ್ತ ಮೇಲೆ
ಸತ್ತವರನ್ನು ಮರೆಯುತ್ತಾರೆ ಜನ
ಆದ್ದರಿಂದಲೇ
ಸತ್ತ ತಕ್ಷಣ
ಅಂತಿಮ ನಮನ!

ಯಾಕೆ :
ವಿದ್ಯುತ್ತಿಗಾಗಿ
ನೀರಿಗಾಗಿ
ಯಾಕೆ ಸುಮ್ಮನೆ
ಆಣೆಕಟ್ಟು
ಹೆಂಗಸರ ಕಣ್ಣುಗಳಲ್ಲಿ
ಎರಡೂ ಇವೆಯಲ್ಲ
ಬೇಕಾದಷ್ಟು

ಉದಾರಿ :
ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
ಉಂಗುರ ತೋಡಿಸಲು
ಬೆರಳು ಕೊಡುಎಂದಾಗ
ಕೈ ಕೊಟ್ಟಳು.

ಈಕೆ :
ನಕ್ಕರೆ ಈಕೆ
ದಂತದ ಗೊಂಬೆ
ಅತ್ತರೆ
ಅಯ್ಯೋ
ಆಗುಂಬೆ

ಏಕತಾನ :
ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚಕ್ ಬುಕ ಚಕ್ ಬುಕ್
ಚೆಕ್ ಬುಕ್

ಸತ್ಯ :
ಸುಳ್ಳಿಗೆ ಸುಳ್ಳು
ಸೇರಿದರೆ
ಸತ್ಯ.
ಉದಾಹರಣೆಗೆ
ನಮ್ಮ ದಾಂಪತ್ಯ!

ಕಷ್ಟ :
ಅಯ್ಯೋ ಪಾಪ!
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು.
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು
ಬೈದು ಬೈದು

ಎದ್ದೇಳಿ ಬೆಳಗಾಯಿತು :
ಹೇಳುತ್ತಲೆ ಇದ್ದಳು ಕನ್ನಡಾಂಬೆ
ಎದ್ದೇಳಿ ಕನ್ನಡಿಗರೆ ಬೆಳಗಾಯಿತು, ಬೆಳಗಾಯಿತು
ಈಗಲೂ ಹೇಳುತ್ತಿದ್ದಾಳೆ
ಇನ್ನಾದರೂ ಏಳಿ ಬೆಳ್ಳಗಾಯಿತು
ಗಡ್ಡ ಬೆಳ್ಳಗಾಯಿತು

ಸತ್ಯಪ್ರಿಯತೆ :
ಹೇಗಿದೆ ನೋಡಿ
ಭಾರತೀಯರ ಸತ್ಯಪ್ರಿಯತೆ
ಕಳ್ಳ ನೊಟಿನಲ್ಲೂ
ಅಚ್ಚಾಗಿರತ್ತೆ

ಸತ್ಯಮೇವ ಜಯತೆ !!!

Tag: Dundiraj hanigavanagalu, Dundiraj hanigavana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ