ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರುಣಾಳು ಬಾ ಬೆಳಕೇ


ಕರುಣಾಳು, ಬಾ, ಬೆಳಕೇ, ಮುಸುಕಿದೀ ಮಬ್ಬಿನಲಿ,
ಕೈ ಹಿಡಿದು ನಡೆಸೆನ್ನನು.
ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,
ಕೈ ಹಿಡಿದು ನಡೆಸೆನ್ನನು.
ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು
ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ.

ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,
ಕೈ ಹಿಡಿದು ನಡೆಸು ಎನುತ.
ನನ್ನ ದಾರಿಯ ನಾನೆ ನೋಡಿ ಹಿಡಿದೆನು; - ಇನ್ನು,
ಕೈ ಹಿಡಿದು ನಡೆಸು ನೀನು.
ಮಿರುಗುಬಣ್ಣಕೆ ಬೆರೆತು, ಭಯಮರೆತು, ಕೊಬ್ಬಿದೆನು;
ಮೆರೆದಾಯ್ತು; ನೆನೆಯದಿರು ಹಿಂದಿನದನೆಲ್ಲ.

ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು; ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ?
ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು,
ಇರುಳನ್ನು ನೂಕದಿಹೆಯಾ?
ಬೆಳಕಾಗ ಹೊಳೆಯದೇ ಹಿಂದೊಮ್ಮೆ ನಾನುಲಿದು
ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ?


ಸಾಹಿತ್ಯ: ಬಿ.ಎಂ.ಶ್ರೀ.

NEWMAN (1801-1890) - Lead, Kindly Light.

Tag: Karunalu ba belake, Karunalu baa belake

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ