ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಿಜದ ಸಂತಸದಲ್ಲಿ


ನಿಜದ ಸಂತಸದಲ್ಲಿ

ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣಸನ್ನೆಯ ಹೆಸರು ಪ್ರೇಮವೆಂದು

ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು

ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು

ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಿ ಎರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ

ಸಾಹಿತ್ಯ:  ಕೆ.ಎಸ್.ನರಸಿಂಹಸ್ವಾಮಿ


Tag: Nijada Santasadalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ