ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯುಗಾದಿಯ ಹಾಡು


ಯುಗಾದಿಯ ಹಾಡು

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವ ಬಿಟ್ಟುಹೋದರು
ಎದ್ದುಬಂದಿದೆ ಸಂಭ್ರಮ
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಫರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಷ್ಟಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರದ ಚಿಗುರಿನಂದದ
ಮಂದಹಾಸವೆ ಉಳಿಯಲಿ.

ಸಾಹಿತ್ಯ: ಜಿ.ಎಸ್.ಶಿವರುದ್ರಪ್ಪ


Tag: Yugadiya hadu, Yugaadiya haadu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ