ಪ್ರಣಯ
ಪ್ರಣಯ
ನೀನು ಮುಗಿಲು ನಾನು ನೆಲ
ನಿನ್ನ ಒಲವೆ ನನ್ನ ಬಲ,
ನಮ್ಮಿಬ್ಬರ ಮಿಲನದಿಂದ
ಉಲ್ಲಾಸವೆ ಶ್ಯಾಮಲ!
ನಾನು ಎಳೆವೆ, ನೀನು ಮಣಿವೆ ;
ನಾನು ಕರೆವೆ, ನೀನು ಸುರಿವೆ ;
ನಮ್ಮಿಬ್ಬರ ಒಲುಮೆ ನಲುಮೆ
ಜಗಕಾಯಿತು ಹುಣ್ಣಿಮೆ!
ನಾನಚಲದ ತುಟಿಯೆತ್ತುವೆ
ನೀ ಮಳೆಯೊಲು ಮುತ್ತನಿಡುವೆ,
ನಿನ್ನಿಂದಲೆ ತೆರೆವುದೆನ್ನ
ಚೈತನ್ಯದ ಕಣ್ಣೆವೆ.
ಸೂರ್ಯಚಂದ್ರ ಚಿಕ್ಕೆಗಣ್ಣ
ತೆರೆದು ನೀನು ಸುರಿವ ಬಣ್ಣ
ಹಸುರಾಯಿತು, ಹೂವಾಯಿತು,
ಚೆಲುವಾಯಿತು ಈ ನೆಲ !
ನೀನು ಗಂಡು ನಾನು ಹೆಣ್ಣು,
ನೀನು ರೆಪ್ಪೆ ನಾನು ಕಣ್ಣು ;
ನಮ್ಮಿಬ್ಬರ ಮಿಲನದಿಂದ
ಸುಫಲವಾಯ್ತು ಜೀವನ.
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
ಸಂಗೀತ: ಸಿ. ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್
Tag: Pranaya, Neenu mugilu naanu nela
ಕಾಮೆಂಟ್‌ಗಳು