ಮಾನವನೆದೆಯಲಿ ಆರದೆ ಉರಿಯಲಿ
ಮಾನವನೆದೆಯಲಿ ಆರದೆ ಉರಿಯಲಿ
ದೇವರು ಹಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ
ಕೊಲ್ಲಲ್ಲು ಎತ್ತಿದ ಕೈಗೂ ಗೊತ್ತಿದೆ
ಕೆನ್ನೆಯ ಸವರುವ ಪ್ರೀತಿ
ಇರಿಯುವ ಮುಳ್ಳಿನ ನಡುವೆಯೆ ನಗುವುದು
ಗುಲಾಬಿ ಹೂವಿನ ರೀತಿ
ಉರಿಯನು ಕಾರುವ ಆಗಸ ತಾರದೆ
ತಂಪನು ತೀಡುವ ಮಳೆಯ?
ಲಾವಾರಸವನು ಕಾರುವ ಧರೆಯೇ?
ನೀಡದೆ ಅನ್ನದ ಬೆಳೆಯ?
ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ಥಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ.
ಸಾಹಿತ್ಯ: ಎನ್ ಎಸ್ ಲಕ್ಷ್ಮೀನಾರಯಣ ಭಟ್ಟ
ಕಾಮೆಂಟ್‌ಗಳು