ನನ್ನ ಹಾಡು
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
ಸಾಹಿತ್ಯ: ಅಂಬಿಕಾತನಯದತ್ತ
ಬೇಂದ್ರೆಯವರ ‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾರೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ ಲಕ್ಷಣವನ್ನು ವರ್ಣಿಸುತ್ತಾರೆ. ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ ಲಕ್ಷಣವನ್ನು ಸೂಚಿಸುತ್ತಾರೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು ವಿವರಿಸುತ್ತಾರೆ.
Tag: Nanna harana ninage sharana, Nanna haadu
Tag: Nanna harana ninage sharana, Nanna haadu
ಕಾಮೆಂಟ್‌ಗಳು