ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾ, ಮಳೆಯೇ ಬಾ


ಬಾ, ಮಳೆಯೇ ಬಾ 

ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
 ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ, ಹಿಂತಿರುಗಿ ಹೋಗದಂತೆ

ಓಡು, ಕಾಲವೇ, ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು, ಗಾಳಿಯೇ, ಬೀಸು, ನನ್ನದೆಯ ಆಸೆಗಳ
ನಲ್ಲೆ ಹೃದಯಕೆ ತಲುಪಿಸು
ಹಾಸು, ಹೂಗಳ ಹಾಸು, ಸಖಿ ಬರುವ ದಾರಿಯಲಿ
ಕಲ್ಲುಗಳ ತಾಗದಂತೆ
ಪಾದ ಕಲ್ಲುಗಳ ತಾಗದಂತೆ

ಬೀರು, ದೀಪವೇ, ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು, ನಮ್ಮ ಈ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.


ಸಾಹಿತ್ಯ: ಬಿ ಆರ್ ಲಕ್ಷ್ಮಣರಾವ್

ಚಿತ್ರಕೃಪೆ: (ಸೋಹ್ನಿ ಮಹಿವಾಲ್)  


ಚಿತ್ರ: ಆಕ್ಸಿಡೆಂಟ್
ಸಂಗೀತ:  ಲಕ್ಕೀ ಕೇಜ್
ಗಾಯನ: ಸೋನು ನಿಗಮ್ 

Tag: Ba maleye ba, Baa Maleye Baa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ