ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಗುನಗುತ ಹಗುರಾಗು


ನಗುನಗುತ ಹಗುರಾಗು – ಓ ಮನವೇ!
ನಗುನಗುತ ಹಗುರಾವಾಗು!

ವಿಷಗಳಿಗೆ ಬಂದೀತು ರಸಗಳಿಗೆ ಸಂದೀತು
ನಗುನಗುತ ಹಗುರವಾಗು!

ಬೆಳಕು ನೆಳಲುಗಳಂತೆ ಸುಖದುಃಖ ಬಂದೀತು
ನಗುನಗುತ ಹಗುರವಾಗು!

ಮೇರು ಪರ್ವತ ಗಾತ್ರ ಸುಖ ಕಳೆದುಹೋತು
ಕಣ್ಮುಚ್ಚಿ ತೆರೆವ ಮುನ್ನ!

ಸಾಸಿವೆಯ ಕಾಳನಿತು ಅಳಲಕರೆ ನಿಂತೀತು
ಕೊಂದು ಕಾಡುತಲಿ ನಿನ್ನ!

ವಿಷಗಳಿಗೆ ಬಂದಾಗ ಕೊರಗಿನೀ ಕುಗ್ಗದಿರು
ನಗುನಗುತ ಹಗುರವಾಗು!

ರಸಗಳಿಗೆ ಬಂದಾಗ ಹಿಗ್ಗಿ ಮೈಮರೆಯದಿರು
ಸಂಯಮದಿ ಭೋಗಿಯಾಗು

ಹಂಬಲಿಸಿ ಹಲುಬುತಿರೆ ಭುಗಿಭುಗಿಲು ಭುಗಿಲೆಂದು
ಹೆಚ್ಚೀತು ನಿನ್ನ ಅಳಲು

ಧೃತಿಗೆಡದೆ ನೀನಿರಲು ಹತ್ತಿರಕೆ ಬರಲಂದು
ನಾಚೀತು ನಿನ್ನ ಅಳಲು

ಕಾಲಚಕ್ರವನೊತ್ತಿ ಮುಂದಮುಂದಕೆ ನೂಕಿ
ಹಗಲಿರುಳು ಬರುವವೋಲು

ಜೀವನದ ನೌಕೆಯನು ಮುಂದು ಮುಂದಕೆ ನೂಕಿ
ಬಂದಾಗ ಗೆಲುವು ಸೋಲು!

ಸುಖದ ಹಾಲ್ಗಡಲಲ್ಲಿ ಮೆಲುಮೆಲನೆ ನಡೆದೀತು
ರಾಜ ಹಂಸನನು ಹೋಲಿ!

ದುಃಖದಾಳಿಯನಿಡಲು ಎಡವಿ ಮುಗ್ಗರಿಸೀತು,
ಎಂತೊ ಸೇರುವುದು ತೇಲಿ!

ನಗೆಯಕಾಲಂದುಗೆಯ ಝಣಝಣರು ಎಂದೀತು,
ಹರುಷದಲಿ ಮನವು ಉಕ್ಕಿ!

ಸತ್ವವುಡುಗುತ ದುಃಖ ಹೆಸರಳಿಸಿ ಹೋದೀತು
ನಗೆಯ ಸುಳಿಯೊಳಗೆ ಸಿಕ್ಕಿ!

ಸಾಹಿತ್ಯ: ಜಿ. ವರದರಾಜರಾವ್

Tag: Nagu naguta haguragu, nagu naguta haguraagu




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ