ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂಗ್ಲಿಷ್ ವಿಂಗ್ಲಿಷ್

ಇಂಗ್ಲಿಷ್ ವಿಂಗ್ಲಿಷ್

ಬದುಕಿನಲ್ಲಿ ನಮಗೆ ಬದುಕು ತರಿಸುವ ಕೀಳರಿಮೆಗಳು ಸಾಕಷ್ಟು ಪ್ರಭಾವಶಾಲಿಯಾಗಿರುತ್ತವೆ. ಅದು ನಮ್ಮ ಕೌಟುಂಬಿಕ, ಕಚೇರಿ, ಸಾಮಾಜಿಕ ಬದುಕುಗಳಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಅನುಭಾವಿಸುವಂತಹ ಘಟನೆಗಳೇ ಆಗಿವೆ.  ಇಂಥಹ ವಾತಾವರಣಗಳಲ್ಲಿ ನಾವು ಕುಗ್ಗಿಹೊಗುವುದೇ ಹೆಚ್ಚಾದರೂ, ಇಂಥಹ ಪರಿಸ್ಥಿತಿಗಳೇ ನಮ್ಮನ್ನು ನಮ್ಮಿಂದ ಎತ್ತರಕ್ಕೆ ಕೊಂಡೊಯ್ಯುವ ಘಟನೆಗಳೂ ಆಗುವುದುಂಟು.  ನಮ್ಮ ಬದುಕಿನಲ್ಲಿ ಎದುರಾಗುವ  ಕೀಳರಿಮೆ ತರುವ  ಸನ್ನಿವೇಶಗಳಲ್ಲಿ  ನಾವು ಹೇಗೆ ನಮ್ಮನ್ನು ಸೈರಿಸಿಕೊಂಡು, ಪ್ರತಿಸ್ಪಂದಿಸಿಕೊಂಡು, ಹೇಗೆ  ನಮ್ಮನ್ನು  ಪರಿವರ್ತಿಸಿಕೊಳ್ಳುತ್ತೇವೆ ಎಂಬುದು ನಮ್ಮ ಬದುಕಿನ ದಿಕ್ಕನ್ನು ನಿರ್ಣಯಿಸುತ್ತದೆ ಎಂಬುದು ಮಾತ್ರ ಅಲ್ಲಗೆಳೆಯಲಾಗದ ಸತ್ಯ.

ಇಂಥಹ ಸೂಕ್ಷ ಎಳೆಯನ್ನು ಪ್ರಬುದ್ಧವಾಗಿ ತೆರೆದಿಡುವ ಚಿತ್ರ ಕೆಲವು ದಶಕಗಳ ಹಿಂದೆ ಪ್ರಖ್ಯಾತ ಮತ್ತು ಪ್ರಬುದ್ಧ ನಟಿಯಾಗಿ ಚಿತ್ರರಂಗದಲ್ಲಿ ವಿರಾಜಮಾನರಾಗಿದ್ದ ಶ್ರೀದೇವಿ ಅವರು ನಟಿಸಿರುವ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’.  ಗೃಹಿಣಿಯಾಗಿದ್ದು ಉತ್ತಮ ಉದ್ಯೋಗದಲ್ಲಿರುವ ಪತಿ, ಮುದ್ದಿನ ಮಕ್ಕಳು, ಪ್ರೀತಿಯ ಅತ್ತೆ, ಹೊರಬದುಕಿನಲ್ಲಿ  ಪ್ರೀತಿ  ತಂದುಕೊಟ್ಟ ಲಡ್ಡು ಮಾಡುವ  ಸ್ವಯಂ ಉದ್ಯೋಗ ಇವೆಲ್ಲವೂ ಇದ್ದರೂ, ಮನೆಯಲ್ಲಿ ಗಂಡ ಮತ್ತು ಮಕ್ಕಳು take her for granted ಎಂಬಂತೆ ಆಕೆಗೆ ಇಂಗ್ಲಿಷ್ ಗೊತ್ತಿಲ್ಲ, ಲಡ್ಡು ಮಾಡುವುದಕ್ಕೆ ಮಾತ್ರಾ ಲಾಯಕ್ಕು,  ಮನೆಯಲ್ಲಿ ಕೇಳಿ ಕೇಳಿದನ್ನು ಒದಗಿಸುವ ಒಂದು ಯಂತ್ರವಾಗಿ ಮಾತ್ರ ಕಾಣುತ್ತಿದ್ದಾರೆ  ಎಂಬ  ಭಾವನೆ ಆಕೆಯನ್ನು ತೀವ್ರವಾಗಿ ಬಾಧಿಸತೊಡಗುತ್ತದೆ.  ಅದಕ್ಕೆ ಪೂರಕವಾಗಿ ಎಂಬಂತೆ  ಅನಿವಾರ್ಯವಾಗಿ ಆಕೆ ಅಮೆರಿಕಕ್ಕೆ ಹೋಗಬೇಕಾಗಿ ಬಂದಾಗ ಇಂಗ್ಲಿಷ್ ಬಾರದ ಭಾವಗಳು ಆಕೆಯನ್ನು ಮತ್ತಷ್ಟು ಸಂಕುಚಿತತೆಗೆ ಹಿಂಡುತ್ತವೆ.  ಇದರಿಂದ ಹೊರಬರುವುದಕ್ಕಾಗಿ,  ಅಲ್ಲಿ ಆಕೆ ಗೌಪ್ಯವಾಗಿ  ಇಂಗ್ಲಿಷ್ ಕಲಿಕೆಗೆ ತೊಡಗಿ ತನ್ನ ಕೀಳರಿಮೆಯಿಂದ ಹೊರಬಂದು ತನ್ನನ್ನು ತಾನು ಕಂಡುಕೊಳ್ಳುವ ಈ ಕತೆ ಉತ್ತಮ ನಿರ್ದೇಶನ, ತಾಂತ್ರಿಕ ಗುಣಮಟ್ಟ ಮತ್ತು ಮನಮುಟ್ಟುವ ಅಭಿನಯಗಳಿಂದ ಅಪ್ಯಾಯಮಾನವೆನಿಸುತ್ತದೆ.

ಒಂದು ಸಿನಿಮಾ ಎಂಬುದಕ್ಕಿಂತ ಎಲ್ಲೋ ನಮ್ಮನ್ನೇ ನಾವು ಹುಡುಕಿಕೊಂಡ ಅನುಭವವನ್ನು ಕೊಡುವ ಈ ಕಲಾಕೃತಿ, ಚಲನಚಿತ್ರ ಕಲೆ ಸರಿಯಾಗಿ ಉಪಯೋಗಿಸಿದ್ದಲ್ಲಿ ಎಂತಹ ಸುಂದರ ಮಾಧ್ಯಮವಾಗಬಲ್ಲದು  ಎಂಬುದನ್ನು ಮತ್ತೊಮ್ಮೆ ಮನದಟ್ಟು ಮಾಡಿಕೊಡುತ್ತದೆ. ತನ್ನ ಅಭಿನಯ ಮತ್ತು ಸೌಂದರ್ಯದಿಂದ ಕಲಾವಿದೆ ಶ್ರೀದೇವಿ ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಬಂದು ಹೋಗುವ ಅಮಿತಾಬ್ ಬಚ್ಚನ್ ಅವರಂತೆಯೇ ಅತ್ಯಂತ ಎತ್ತರದ ಭಾವ ಮಿಡಿಸುತ್ತಾರೆ.   ಮಾತಿನ ಭಾಷೆಯ ಮಿತಿಗಳನ್ನು ಮೀರಿದ ಹೃದಯಸ್ಪರ್ಶಿ ಅನುಭವವಿದು.

ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಕಾಲೇಜಿನಲ್ಲಿ ಇಂಗ್ಲಿಷಿನಲ್ಲಿ ಕಷ್ಟಪಡುತ್ತಿದ್ದುದು, ಗುಗ್ಗುಗಳಂತೆ ಬದುಕಿ ಉದ್ಯೋಗಕ್ಕೆ ಕಾಲಿಟ್ಟಾಗ ಸ್ವಲ್ಪ ತಿಳಿದವರು ಎಂಬಂತೆ ಇರುವವರ ಮುಂದೆ ಏಗಬೇಕಾದ ಸ್ಥಿತಿ, ಸಾಫ್ಟ್ವೇರ್ ಉದ್ಯೋಗಕ್ಕೆ ಬಂದಾಗ ಅಲ್ಲಿ ಉನ್ನತ  ತಾಂತ್ರಿಕ ಪದವಿಗಳನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವವರ ಜೊತೆ ನಾವು ಏನೂ ಅಲ್ಲದೆ ಏಗುವುದಾದರೂ ಹೇಗೆ ಎಂದು ಬಂದ ಕೀಳರಿಮೆ ಮತ್ತು ಕಷ್ಟದ ಸನ್ನಿವೇಶಗಳು, ಅಷ್ಟೇ ಏಕೆ ಮನೆಯಲ್ಲಿ ಬುದ್ಧಿವಂತ ಒಡಹುಟ್ಟಿದವರಿದ್ದಾಗ ದಡ್ಡ ಎಂದು ಇತರರಿಂದ ಅನಿಸಿಕೊಂಡು ಬದುಕುತ್ತಿದ್ದ ಬದುಕು ಇವೆಲ್ಲವನ್ನೂ ಒಮ್ಮೆಗೆ ತೆರೆದಿಟ್ಟುಕೊಂಡ ಭಾವ ಮೂಡಿಬಂತು.  ಇಷ್ಟೆಲ್ಲಾ ಆದ ನಂತರದಲ್ಲಿ  ಇಂದು 'ಈ ನಾನೂ' ಕೂಡಾ  ಒಂದಿನಿತು ಪರಿಪೂರ್ಣತೆಯ ಭಾವ ಅನುಭಾವಿಸುತ್ತಿರುವುದರ ಕುರಿತು ಒಂದಷ್ಟು ಕೃತಾರ್ಥತೆಯೂ  ತೇಲಿಬಂತು.

Tag: English Vinglish

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ