ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾನು ಬಡವಿ

ನಾನು ಬಡವಿ


ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕುಟುಕುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ.

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ.

ಆತ ಕೊಟ್ಟ ವಸ್ತು ವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬ ಮುತ್ತು.

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.


ಸಾಹಿತ್ಯ: ಅಂಬಿಕಾತನಯದತ್ತ

ಟಿಪ್ಪಣಿ:  ಬೇಂದ್ರೆಯವರು ಜೈಲುವಾಸ ಅನುಭವಿಸಿ, ಅನಂತರದಲ್ಲಿ ಪೋಲೀಸ್ ಕಾವಲಿನ ಮಧ್ಯದಲ್ಲಿ ಕೆಲವು ದಿವಸ ಮುಗದ ಎಂಬ ಹಳ್ಳಿಯಲ್ಲಿ ವಾಸ ಮಾಡಿದರು.  ಆಗ  ಅವರು ಅನುಭವಿಸಿದ ಬಡತನದ ಅನುಭೂತಿ ಇಲ್ಲಿ ಒಂದು ನಾಟ್ಯಗೀತವಾಗಿದೆ.  ಹಣದಿಂದ ಬಡತನ ಬಂದರೂ, ಪತಿ-ಪತ್ನಿಯರಲ್ಲಿಯ ಪ್ರೀತಿಗೆ ಬಡತನ ಬರದಿದ್ದರೆ ಸಾಕು.  ಅದು ಅಕ್ಷಯ ಶ್ರೀಮಂತಿಕೆ.

ಈ ಕವಿತೆಯ ಕುರಿತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಾಖ್ಯಾನ:

ಬೇಂದ್ರೆಯವರ ಕಾವ್ಯ ಪ್ರತಿಭೆ ವಿಶೇಷವಾಗಿ ರೂಪಗಳ ಮೂಲಕವೇ ಕ್ರಿಯಾತ್ಮಕವಾಗುವುದು.  ಉದಾಹರಣೆಯಾಗಿ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಎಂಬ ಈ ಕವನವನ್ನೇ ನೋಡಬಹುದು.

ಈ ಕವಿತೆಯ ಮೊದಲ ನಾಲ್ಕು ಸಾಲುಗಳಲ್ಲಿ ಅರ್ಥ ಹಂತ ಹಂತವಾಗಿ ಬೆಳೆಯುವುದನ್ನು ನೋಡಬಹುದು.  ಅವರಿಬ್ಬರೂ ಬಡವರೆಂದೇ ಮೊದಲ ಸಾಲು ಆರಂಭವಾದರೂ ಎರಡನೆಯ ಸಾಲು ಈ ಇಬ್ಬರ ಬದುಕು ಪರಸ್ಪರ ಅವರಿಬ್ಬರಲ್ಲಿ ಒಂದು ಜೀವ ಮತ್ತೊಂದು ಜೀವದ ಕಡೆಗೆ ಒಲೆಯುವುದೇ ಬಲವಾಗಿ ಒಲೆಶಬ್ದದ ಅರ್ಥಚ್ಚಾಯೆಗಳನ್ನೆಲ್ಲ ಬಳಸಿಕೊಳ್ಳುತ್ತ ಕವಿಯ ಅಭಿವ್ಯಕ್ತಿ ಶಕ್ತಿಯನ್ನು ಧ್ವನಿಸುತ್ತದೆ.  ಮುಂದಿನ ಎರಡು ಸಾಲುಗಳ ಕೊನೆ ಸಾಲು ಒಲಿಯುವ ಹೃದಯವೊಂದಿದ್ದರೆ ಏನೆಲ್ಲವನ್ನು ಪಡೆಯಬಹುದೆಂಬುದನ್ನು ಸೂಚಿಸುತ್ತದೆ.

ಎರಡನೆಯ ಪದ್ಯದಲ್ಲಿ ಪ್ರೀತಿಯಿಂದ ಪದೆದದ್ದೇನು ಎಂಬುದರ ಮೊದಲ ಹೆಜ್ಜೆಯಿದೆ.  ಬಡವನಾದರೂ ಒಲಿದವನು ಹತ್ತಿರವೇ ಇರಲಿ, ದೂರವೇ ಇರಲಿ ತನ್ನನ್ನು ಕುಣಿಸುವ ರಂಗಸಾಲೆಯಾಗುವುದು.  ಆತನ ರೂಪ ಕಣ್ಣಿಗೆ ಕಟ್ಟುವಂತೆ ಪ್ರಿಯವಾಗಿ ಕಣ್ಣಲ್ಲೆ ನೆಲೆಸುವುದು, ಕಣ್ಣು ಕಟ್ಟುವಂತ ಮಾಟಗಾರಿಕೆಯಿಂದ ಕೂಡಿದ್ದು; ಕಣ್ಣುಗಳನ್ನು ತನ್ನಲ್ಲಿಯೆ ಬಂಧಿಸಿಡುವಂಥದ್ದು ಈ ಅರ್ಥದ ಪದರಗಳನ್ನು ತೆರೆಯುವುದು.  ಕಿವಿಗೆ ಕೊಡುವುದು ಮೆಚ್ಚಿನ ಒಲೆ ಎಂದು ಪ್ರೀತಿಯನ್ನೇ ಧಾರಾಳವಾಗಿ ಸವಿಯುವ ಭಾಗ್ಯ ಪಡೆಯುವುದು ಈ ಪದ್ಯದಲ್ಲಿನ ಘಟ್ಟ.  ಈ ಪಂಕ್ತಿಗಳಲ್ಲಿ ಅವರಿಬ್ಬರ ಮುಗ್ಧತೆ ಹಾಗೂ ಮುಕ್ತತೆಗಳು ಧ್ವನಿತವಾಗುತ್ತಿದ್ದು ಮುಂದಿನ ಪದ್ಯದಲ್ಲಿ ಈ ಪ್ರೀತಿ ಪರಾಕಾಷ್ಠೆಗೇಳುವುದನ್ನು ಗುರುತಿಸಬಹುದು.

ಬೇಸಿಗೆಕಾಲ, ಚಳಿಗಾಲಗಳೆರಡರಲ್ಲೂ ಪ್ರಿಯವಾಗುವ ಬದುಕು ಪ್ರಿಯಕರನದು;  ಆತನ ಮೈಯನ್ನು ಮುಟ್ಟಿದರೆ ಆತ ಕೊಡುವ ಉಡುಗರೆಯಾದರೂ ಪ್ರೀತಿಯದೇ ನವಿರು ಬಟ್ಟೆ.  ಅದೂ ಮೈತುಂಬ ಮುಚ್ಚಿಕೊಳ್ಳುವಷ್ಟು ಪ್ರೀತಿಸುವ ಹೃದಯದ ಉಕ್ಕನ್ನು. ಅವರಿಬ್ಬರ ಪ್ರಣಯದಾಟದ ಚಿತ್ರವಾದರೂ ಮುಗ್ಧವಾದದ್ದು.

ಇಷ್ಟೆಲ್ಲ ಪ್ರಣಯಭರಿತವಾದ ಈ ಲೋಕದ ಕೊನೆಯಾವುದೆಂಬುದನ್ನು ಸೂಚಿಸುತ್ತದೆ ಕೊನೆಯ ಪದ್ಯ.  ಈ ಕವಿತೆಯ ಶಿಖರ ಇದು.  ಇಂಥ ಒಲವಿದ್ದರೂ ಮತ್ತೇನೂ ಬೇಡ ಎನ್ನುವ ತೃಪ್ತಿಯ ಜೊತೆಗೇ ಪ್ರಣಯ ಲೋಕದ ಆಳಕ್ಕಿಳಿಯುವ ಕೊನೆಯ ಎರಡು ಸಾಲುಗಳು ಬೇಂದ್ರೆಯವರ ಕಾವ್ಯದ ಮಾಂತ್ರಿಕತೆಗೂ ಉದಾಹರಣೆಯಾಗುತ್ತದೆ.  ಇಂಥ ಪ್ರಣಯದಿಂದ ಆತ ಕೊಟ್ಟಿದ್ದೇನು ಎಂದು ಬೆರಗಾಗಬೇಕಿಲ್ಲ.  ತುಟಿಯ ತುಂಬ ಹಾಲು ಜೇನು ತುಂಬುವ ಅಕ್ಕರೆ ಬದುಕಿನ ಸಮೃದ್ಧಿಯನ್ನು ಧ್ವನಿಸಿದ ಹಾಗೆಯೇ ಹೊಟ್ಟೆಗಿತ್ತ ಜೀವಫಲವ ಎಂಬುವ ಮಾತುಗಳು ಈ ಪ್ರಣಯದಾಟದ ಜೀವದ ಸಾತತ್ಯದ ಅಭೀಪ್ಸೆಯ ಸಾರ್ಥಕ್ಯವನ್ನೂ ವ್ಯಂಜಿಸುತ್ತದೆ.  ಕೇವಲ ಮುಗ್ಧ ಪ್ರಣಯಗೀತೆಯಂತೆ ತೋರುವ ಈ ಕವಿತೆ ಕೂಡ ಮುಟ್ಟುವ ಎತ್ತರ ಅದರ ಕೊನೆಯ ಎರಡು ಸಾಲುಗಳಲ್ಲಿ ವ್ಯಂಜಿತವಾಗಿ ಮತ್ತೆ ನಾನು ಬಡವಿ ಆತ ಬಡವ ಎಂಬ ಮೊದಲ ಸಾಲಿಗೆ ತಟ್ಟನೆ ಅರ್ಥದ ತಿರುವೊಂದು ಪ್ರಾಪ್ತವಾಗಿ ಬಿಡುತ್ತದೆ.  ನಿಜವಾಗಿ ಅವರು ಸಮೃದ್ಧರು ಎಂದು ಅನ್ನಿಸಿ.


Tag: Nanu badavi aata badava

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ