ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಡ ದೇವಿಯೆ ಕಂಡೆ


ನಾಡ ದೇವಿಯೆ ಕಂಡೆ
ನಿನ್ನ ಮಡಿಲಲ್ಲಿ
ಎಂಥ ದೃಶ್ಯ
ನೋವು ನಗೆಯ
ಸಮ್ಮಿಶ್ರದಲ್ಲಿ
ಎದೆ ಆಯಿತದಕೆ ವಶ್ಯ

ಒಂದೆದೆಯ ಹಾಲ
ಕುಡಿದವರ ನಡುವೆ
ಎನಿತೊಂದು ಭೇದ ತಾಯಿ
ಒಂದೆ ನೆಲದ
ರಸ ಹೀರಲೇನು
ಸಿಹಿ ಕಹಿಯ ರುಚಿಯ ತಾಯಿ 

ಕತ್ತಲಲ್ಲಿ ಕಂಗೆಟ್ಟು
ಎಡವಿ ತಡವರಿಸುತಿರಲು ಮಂದಿ
ಕಡೆಗಣಿಸುತವರ ನಡೆದಿರುವನೊಬ್ಬ
ಸ್ವಹಿತಕ್ಕೆ ಹಿಡಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು
ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ
ವೈಭವದ ಹುಟ್ಟು ಹಬ್ಬ 

ಅನ್ನವಿರದ ಹಸುಳೆಗಳ ತಬ್ಬಿ
ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೆ
ಕೊಚ್ಚಿತ್ತು ಬಾಳ ದಂಡೆ
ಹೊಟ್ಟೆ ಹೇಡಿಗೆಯ
ಬಿಚ್ಚಿ ಹಸಿದ ಹಾವನ್ನು
ಚುಚ್ಚಿ ಕೆಣಕಿ
ಯುಕ್ತ ರಾಗದಲಿ ಕುಣಿಸಿ ದಣಿಸಿ
ನಲಿದಿಹರು ಹಲರು ಬದುಕಿ 

ನರನನ್ನೆ ಗಾಳವಾಗಿಸುತ
ಬಾಳ ನೀರಲ್ಲಿ ನಲಿವ ನರಿಗೆ
ಸಾವೊಂದು ಎನುವ ಸತ್ಯಕ್ಕೆ
ಅಡ್ಡಗಾಲೆಳೆವ ನಾಡಿನರಿಗೆ
ಎಚ್ಚರವ ನೀಡಿ ತಿದ್ದುತ್ತಲಿರಲಿ
ಕವಿ ಭಾವವೆಂಬ ಬಡಿಗೆ
ತಾಯಿ ಭಾರತಿಯೆ
ಇದುವೆ ನಿನಗೆ ನಾ
ಸಲಿಸಲಿರುವ ಕೊಡುಗೆ

ಸಾಹಿತ್ಯ: ಕೆ. ಎಸ್. ನಿಸಾರ್ ಅಹಮದ್ 

Tag: Naada Deviye kande 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ