ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೋಣಿ ಸಾಗಲಿ

ದೋಣಿ ಸಾಗಲಿ ಮುಂದೆ ಹೋಗಲಿ

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ.

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ.

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿದೆ.

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನೆನ್ನೆ ನೆನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.

ಸಾಹಿತ್ಯ:  ಕುವೆಂಪು

Tag: Done saagali munde hogali

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ