ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಡುಪಿಯ ಕಂಡೀರಾ?


ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ?
ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ?

ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ
ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ
ದ್ವಾರಕೆಯ ವಾಸ ಓ ಹೃಷಿಕೇಶ ಸಾಕೆನಿಸಿತೇನೋ ಈಶ?
ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ ದಾಟಿ ದೇಶ ದೇಶ

ಕಡಗೋಲು ಕೈಯ ಕಡುನೀಲಿ ಮೈಯ ಈ ಬಾಲರೂಪ ಕಂಡು
ಪೊಡಮಡದ ಶಿರವೊ ಜೋಡಿಸದ ಕರವೊ ಬರೀ ಹುಲ್ಲು ಮಣ್ಣು ಜೊಂಡು
ಆ ಮುಗುಳು ನಗೆಗೆ ಆ ನಿಂತ ಬಗೆಗೆ ಮರುಳಾದಳಂತೆ ಗೋಪಿ
ಶ್ರೀಮಧ್ವಗೊಲಿದ ಕೃಷ್ಣನನೆ ಗೆಲಿದ ವೆಗ್ಗಳದ ನಾಡು ಉಡುಪಿ

ಪಡುಗಡಲ ತೀರದಿಂದೆದ್ದು ಬಾರ ಕಡೆಗೋಲು ಹಗ್ಗ ಹಿಡಿದು
ಬಿಡುಗಡೆಯ ದಾರಿ ಭಕ್ತರಿಗೆ ತೋರಿ ನಮ್ಮೆದೆಯ ಬೆಣ್ಣೆ ಕಡೆದು
ಆನಂದತೀರ್ಥರೀ ಕರೆಗೆ ಪಾರ್ಥಸಾರಥಿಯು ಕರಗಿ ಬಂದು
ತಾನಿಂದ ಕಲ್ಲಿನೊಳಗಿಂದ ಇಲ್ಲಿ ವೈಕುಂಠವನ್ನೇ ತಂದು

ಸಾಹಿತ್ಯ: ಬನ್ನಂಜೆ ಗೋವಿಂದಾಚಾರ್ಯರು



Tag: Udupiya kandira, udupiya krishnana kandira

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ