ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಲ್ಲವಗಳ ಪಲ್ಲವಿಯಲಿ


ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ;
ತಂಬೆಲರಲಿ ಹಬ್ಬುತ್ತಿದೆ ಕೋಗಿಲೆ ಸಂಗೀತ.
ಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ,
ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರ.

ಗಿರಿ ನದಿಗಳನಾವರಿಸಿದೆ ಹೊಸ ಚೇತನದುಸಿರು;
ಬನ ಬನದಲಿ ಅಚ್ಚಾಗಿದೆ ಹೊಸವರ್ಷದ ಹೆಸರು.
ಬಳುಕುವ ಎಲೆ, ಚೆಲುವಿನ ಬಲೆ, ಸಿರಿಯುಕ್ಕುವ ನೋಟ;
ತಿಳಿಗೊಳದಲಿ ಹೊಂದಾವರೆ ಹೂವರಳಿದ ತೋಟ.

ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ
ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ
ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ
ಮಧುಮಾಸವೆ ಅಡಿ ಇಡುತಿದೆ ಹೊಸವರ್ಷವ ಬೆಳಗೆ.

ನಲ್ಲೆಯ ತುಟಿ ಅದುರುತ್ತಿದೆ ನಲ್ಲನ ತುಟಿಯಲ್ಲಿ;
ನಸುಗೆಂಪಿನ ಉಂಗುರವಿದೆ ಆಕೆಯ ಬೆರಳಲ್ಲಿ.
ಮಲ್ಲಿಗೆ ಹೂ ಪರಿಮಳವಿದೆ ತುಂಬಿದ ಹೆರಳಲ್ಲಿ;
ಹೊಸವರ್ಷದ ಹೊಸ ಹಾಡಿದೆ ಆಕೆಯ ಕೊರಳಲ್ಲಿ

ಸಾಹಿತ್ಯ: ಕೆ.ಎಸ್. ನರಸಿಂಹಸ್ವಾಮಿ 
  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ