ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಗುರು

ಶ್ರೀಗುರು


ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯ ಸೂರ್ಯನ ತೆರದಿ ರಂಜಿಸಿದೆ;
ಹೃದಯ ನಭದಜ್ಞಾನ ತಿಮಿರವನಿರದೆ ಭಂಜಿಸಿದೆ.

ಸರ್ವಮಾರ್ಗಗಗಳೊಂದೆನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಭೋದಿಸಿದೆ;
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧ ಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲಿಸಿದೆ.

ಮಾಯತಿಮಿರದಿ ಮಾರ್ಗ ಕಾಣದೆ ಗೋಳಿಡುತಲಿಹರ
ಅಭಯದೀಪವ ಹಿಡಿದು ದಾರಿಯ ತೋರಿ ರಕ್ಷಿಸಿದೆ;
ಘೋರ ಸಂಸಾರಾಂಬುನಿಧಿಯೊಳು ಮುಳುಗಿ ತೇಲುವರ
ಅಮ್ರುತನಾವೆಯ ತಂದು ವೇಲೆಯನಿರದೆ ಸೇರಿಸಿದೆ.

ಶಿರವ ನಾಕದೊಳಿರಿಸಿ ಚರಣಗಳೆರಡ ಭೂತಳದಿ
ಗುರು ಹಿಮಾಚಲದಂತೆ ನಿಂತಿಹೆ, ಶಾಂತಿಯಾಶ್ರಯನೆ.
ಹೃದಯ ನಿನ್ನದು ಮೇರೆಯಿಲ್ಲದ ರುಂದ್ರವಾರಿನಿಧಿ;
ಚಲಿತ ಮತಗಳ ಚಂದ್ರ ನಾವೆಗಳಲ್ಲಿ ತೇಲುತಿವೆ!

ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮೆಕ್ಕಗಳೆಲ್ಲ ನಿನ್ನೊಳಗೈಕ್ಯವಾಗಿಹವು’!

ದಕ್ಷಿಣೇಶ್ವರ ದೇವನಿಲಯದ ಪರಮಯೋಗೀಂದ್ರ,
ಶ್ರೀವಿವೇಕಾನಂದ ಪೂಜಿತನಾತ್ಮ ಭಾವಿತನೆ,
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು;
ನೆನೆವರೆಲ್ಲರ ಹೃದಯವಾಗಲಿ ನಿನ್ನ ನೆಲೆವೀಡು.

ಸಾಹಿತ್ಯ: ಕುವೆಂಪು


Tag: Sriguru

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ