ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನವರಾತ್ರಿ ನವೋದಯ

ನವರಾತ್ರಿ ನವೋದಯ
- ಗುರುರಾಜ ಪೋಶೆಟ್ಟಿಹಳ್ಳಿ

ದೇವಿ ವೈಭವವನ್ನು ಒಂಭತ್ತು ದಿನಗಳ ಕಾಲ ವೈವಿಧ್ಯಮಯವಾಗಿ ಆರಾಧಿಸುವ ಅನನ್ಯ ಹಬ್ಬ ನವರಾತ್ರಿ ಉತ್ರವ.

ನವರಾತ್ರಿ ಕೇವಲ ಪ್ರಾಂತೀಯವಾಗಿರದೆ ಭಾರತದಾದ್ಯಂತ ವೈಭವದಿಂದ ಆಚರಿಸುವ ಹಬ್ಬವಾಗಿದೆ. ಈ ಹಬ್ಬಕ್ಕೆ ದಸರಾ, ದುರ್ಗಾಪೂಜೆ, ಬೊಂಬೆ ಹಬ್ಬ ಇತ್ಯಾದಿ ಹಲವು ಹೆಸರುಗಳು. ಕರ್ನಾಟಕದಲ್ಲಿ ದಸರಾಕ್ಕೆ ನಾಡಹಬ್ಬ ಎನ್ನುವ ಸಂಭ್ರಮ.

ಶರತ್ ಋತು ಶುಭತ್ವಕ್ಕೆ, ಬಿಳುಪಿಗೆ ಹೇಳಿ ಮಾಡಿಸಿದ ಕಾಲ. ಶರತ್ ಕಾಲ ವೀರರಸಕ್ಕೆ ತಕ್ಕುದಾದ ಅವಧಿ. ಹಿಂದೆ ಈ ಕಾಲದಲ್ಲಿಯೇ ಕ್ಷತ್ರಿಯ ವೀರರು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಧೈರ್ಯ ಶೌರ್ಯಗಳ ದ್ಯೋತಕವಾಗಿ ಗಜ, ಅಶ್ವಬಲ, ರಥಬಲವನ್ನು ಪ್ರದರ್ಶನ ಮಾಡುವ ಪರಿಪಾಠವಿತ್ತು. ರಾಮನು ರಾವಣನನ್ನು ಸಂಹರಿಸಿದ ಕಾಲವೂ ಇದೇ ಆಗಿದೆ. ಜಗನ್ಮಾತೆ - ಲಕ್ಷ್ಮೀ - ಸರಸ್ವತಿ - ದುರ್ಗೆಯಾಗಿ ಆವಿರ್ಭವಿಸಿ, ರಾಕ್ಷಸ ಶಕ್ತಿಯನ್ನು ದಮನಗೊಳಿಸಿ, ಧರ್ಮಸ್ಥಾಪನೆ ಮಾಡಿದ್ದು ಈಗಲೇ.

ಆದ್ದರಿಂದಲೇ ರಾಕ್ಷಸ ಸಂಹಾರದ ಕಥೆಯಾದ ದುರ್ಗಾಸಪ್ತಶತಿಯನ್ನು ಈ ಸಮಯದಲ್ಲಿ ಸ್ಮರಿಸುವುದು  ವಿಶೇಷ. ನವರಾತ್ರಿಯಲ್ಲಿ ಒಂದು ದಿನವಂತೂ ಆಯುಧಪೂಜೆಗೆ ಮೀಸಲು.

ಅನೇಕ ಹಸ್ತಗಳಲ್ಲಿ ಅನೇಕ ಆಯುಧಗಳನ್ನು ಧರಿಸುವ ದೇವಿ ನಮಗೆ ಶಿಷ್ಟ - ರಕ್ಷಣೆ ದುಷ್ಟ ಶಿಕ್ಷೆಯ ಭರವಸೆಯನ್ನೀಯುತ್ತಾಳೆ. ಧನ-ಧಾನ್ಯ ಸಮೃದ್ಧಿ ಹಾಗೂ ಸ್ವಜನ ಪ್ರೀತಿ, ಸಹಕಾರಗಳನ್ನು ಲಕ್ಷ್ಮೀ ಪ್ರತಿನಿಧಿಸಿದರೆ, ಜೀವನಕ್ಕೆ ಅರ್ಥವನ್ನು ತುಂಬುವ ಜ್ಞಾನ, ಪ್ರತಿಭೆ, ಸೃಜನಶೀಲತೆ ಕಲಾಭಿಜ್ಞತೆ, ಭಾವನಾ - ಹಾಗೂ ವಿಚಾರಶಕ್ತಿಗಳನ್ನು ಸರಸ್ವತಿ ಪ್ರತಿನಿಧಿಸುತ್ತಾಳೆ. ಇವೆಲ್ಲದರ ಜೊತೆಗೆ ಕರ್ತೃತ್ವ, ನೇತೃತ್ವ ಶಕ್ತಿಗಳು ದೇಹ ಮನಗಳಲ್ಲಿ ಬಲ ಹುಮ್ಮಸ್ಸುಗಳನ್ನು, ಛಲ, ದೃಢತೆ ಮುಂತಾದವುಗಳನ್ನು ತುಂಬುವಳು ಕಾಳಿ. ಈ ಕಾಳಿ, ಲಕ್ಷ್ಮೀ ಸರಸ್ವತಿಯರ ಕೆಂಪು, ಬಿಳುಪು ಹಾಗೂ ಕಪ್ಪು ಬಣ್ಣಗಳು ಸತ್ವ, ರಜ, ತಮೋ ಗುಣಗಳ ಬಣ್ಣವೇ ಆಗಿದೆ.

ಲಕ್ಷ್ಮೀ - ದುರ್ಗೆ - ಸರಸ್ವತಿ ಶೌರ್ಯ, ಧೈರ್ಯದ ತೇಜಸ್ಸು, ಜ್ಞಾನ, ಯೋಗಗಳ ಓಜಸ್ಸು, ಕರುಣೆ, ಪಾವಿತ್ರ್ಯ, ಮಾತೃತ್ವಗಳ ವರ್ಚಸ್ಸು. ಸಕಲ ಸ್ತ್ರೀಯರಿಗೂ ಆದರ್ಶವಾಗಲೆಂದೇ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ದೇವಿಯರ  ಹೆಸರುಗಳನ್ನಿಡುವ ಪರಿಪಾಠವಿದೆ.

ನವರಾತ್ರಿಯೆಂದರೆ ಶಕ್ತಿ ಪೂಜೆಯೂ ಹೌದು. ಪ್ರಕೃತಿ ಪೂಜೆಯೂ ಹೌದು, ಶಕ್ತಿಯೆಂದರೆ ತಾಯಿಯೇ, ಪ್ರಕೃತಿಯೆಂದರೆ ತಾಯಿಯೇ, ಹಾಗಾಗಿ ನವರಾತ್ರಿಯೆಂದರೆ ಬೇರೇನು? ಮಾತೆಯನ್ನು ಪೂಜಿಸುವ ಶುಭಕಾಲವೇ.

ಅಮ್ಮಾ - ನಿನಗೆ ನಮೋ ನಮಃ:

ಕ್ಲಿಷ್ಟ -ಗಂಭೀರ ವೇದಮಂತ್ರ ಸ್ತೋತ್ರಗಳನ್ನು ಪಠಿಸಿಯಾಗಲೀ, ಇಲ್ಲವೇ ಶಾಸ್ತ್ರೀಯ ಲಘು ಸಂಗೀತವನ್ನು ಗಾನ ಮಾಡುವುದರಿಂದಲೂ ಈ ದೇವತೆಯನ್ನು ಆರಾಧಿಸಬಹುದು. ಆರಾಧನೆ ಅನುಸರಣೆ ಯಾವ ಬಗೆಯದಾದರೂ ಉದ್ದೇಶವೊಂದೇ ಅದು ಇಷ್ಟಾರ್ಥ ಸಿದ್ಧಿ ಹಾಗೂ ಮೋಕ್ಷ ಸಾಧನೆ. ದೇವಿ ಮಹಾತ್ಮೆಯಲ್ಲಿ 'ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೆ, ಶರಣ್ಯೇ ತ್ರಯಂಬಕೇ ಗೌರೀ, ನಾರಾಯಣಿ ನಮೋಸ್ತುತೇ' ಎಂಬಲ್ಲಿ ದೇವಿ ಶುಭಸ್ವರೂಪಿಣಿ ಎಂದು ತಿಳಿಸಲಾಗಿದೆ.

ಶರಣಾಗತ ದೀನಾರ್ತೆ ಪರಿತ್ರಾಣ ಎಂದಾಗ ಆಕೆ ಶರಣಾಗತರನ್ನು ರಕ್ಷಿಸುವವಳಾಗಿ ಎಲ್ಲರ ಪ್ರೀತಿಯ ನಾರಾಯಣಿಯಾಗಿದ್ದಾಳೆ. ಮಹಿಷಾಸುರ ಮರ್ದಿನಿಯನ್ನು ಅಯಿಗಿರಿ ನಂದಿನಿ ನಂದಿತ ಮೇದಿನಿ ಎಂದು ರಾಗ, ತಾಳ ಹಾಗೂ ಲಯಬದ್ಧವಾಗಿ ಹಾಡಿ ಹೊಗಳಿದಲ್ಲಿ ಆಕೆ ತನ್ನ ರೌದ್ರತೆಯನ್ನು ಮರೆತು ಕೋಮಲವಾದಾಳು.

ದಶಮಹಾವಿದ್ಯಾ ಎಂಬ ಸ್ತುತಿಯಲ್ಲಿ ದೇವಿಯ ದಶರೂಪಗಳು ಅಭಿವ್ಯಕ್ತಗೊಂಡಿದೆ. ದೇವಿಯ ಕಾಳಿ, ತಾರಾ, ಛಿನ್ನಮಸ್ತ, ಷೋಡಶಿ, ಭುವನೇಶ್ವರಿ, ತ್ರಿಪುರ, ಭೈರವಿ, ಧ್ರೂಮವತಿ, ಮಾತಂಗಿ ಹಾಗೂ ಕಮಲ ಮುಂತಾದವುಗಳಲ್ಲಿ ವಿದ್ಯೆ ಸಂಪತ್ತು, ಅಭಯ, ಮೋಕ್ಷ, ಆನಂದ ಇತ್ಯಾದಿಗಳನ್ನು ನೀಡುವಂತಹದ್ದು.

ನವರಾತ್ರಿ ಆಚರಣೆ ಮಾನವರು ತಮ್ಮ ಕೋರಿಕೆಯನ್ನು ದೇವಿಯಲ್ಲಿ ನಿವೇದಿಸಿಕೊಳ್ಳುವ ಒಂದು ಅಪೂರ್ವ ಸಂದರ್ಭವಾಗಿದ್ದು, ಸಾತ್ವಿಕತೆ ನಮ್ಮಲ್ಲಿ ಜ್ಞಾನವನ್ನುಂಟು ಮಾಡಿ ಆವರಿಸಿರುವ ಮಾಯೆಯನ್ನು ಪರಿಹರಿಸುವಂಥ ಕಾಲ.

ಈ ಜಗತ್ತೊಂದು ಪ್ರಾಣ ಸಂಚಾರವುಳ್ಳ ಮೊಟ್ಟೆ, ಬೃಹತ್ತಾದ ಸಂಚಲನ, ಶಕ್ತ ಸಂಯುತವಾದ ಇದನ್ನು ಬ್ರಹ್ಮಾಂಡವೆಂದು ಋಷಿಮುನಿಗಳು ಕರೆದರು. ನಮ್ಮ ದೇಹವೂ ಹೀಗೆಯೇ ಪ್ರಾಣಶಕ್ತಿ ಬಲದಿಂದ ಚಲಿಸುತ್ತಿರುವ ಒಂದು ಅಂಡ. ಬ್ರಹ್ಮಾಂಡದಲ್ಲಿ ಯಾವ ಶಕ್ತಿ ಇದೆಯೋ ಅದೇ ಪಿಂಡಾಂಡದಲ್ಲೂ ಇದೆ. ಅಂದರೆ ನಾವೆಲ್ಲ ಆ ಬೃಹತ್ ಅಂಡದ ಪ್ರತೀಕಗಳೇ. ಅದು ಸೃಷ್ಟಿಯ ಪ್ರತೀಕ. ಅದು ಸೃಷ್ಟಿಯ ಹಿಂದಿನ ಶಕ್ತಿಯ ಧ್ಯೋತಕ. ಅದು ತಾಯಿಯ ಸಂಕೇತ. ಅದು ನಮ್ಮ ಅಂಗೋಪಾಂಗಳಲ್ಲಿ ಚಟುವಟಿಕೆಯ ತುಡಿತವನ್ನು ಆಗಮಾಡಿಸುವ ಮೂಲಚೇತನ.


ಲೋಕದ ಸೃಷ್ಟಿ -ಸ್ಥಿತಿ-ಲಯಗಳಿಗೆ ಮೂಲ ಕಾರಣವಾದ ಪ್ರಾಣಶಕ್ತಿ ಸಹಸ್ರಾರ ಚಕ್ರದಲ್ಲಿ ಸ್ಥಿತವಾಗಿದೆ. ಅದು ಒಂದು ಕ್ಷಣ ಕಾಣಿಸಿಕೊಂಡು ಆತ್ಮಾನಂದವನ್ನು ತಂದುಕೊಡುವ ಮಿಂಚಿನಂಥ ಬೆಳಕು.

ಈ ಬೆಳಕಿಗಾಗಿಯೇ ಯುಗಯುಗಗಳಿಂದ ಜಪ-ತಪ-ಧ್ಯಾನ ತಪಶ್ಚರ್ಯಗಳು ನಡೆದಿರುವುದು. ಅಜ್ಞಾನದ ಕತ್ತಲನ್ನು ಹರಿಸಿ-ಮನ-ಬುದ್ಧಿ-ಭಾವಗಳಿಗೆ ಆತ್ಮಾನಂದ ಪ್ರಸಾದಿಸಬಲ್ಲ ಆ ಮಾತೃಶಕ್ತಿ ಪ್ರಕಟನ ಪ್ರಯತ್ನವೇ ಬೇರೆ ಬೇರೆ ವಿಧಿಗಳನ್ನುಳ್ಳ ಅರ್ಚನೆಗಳಾಗಿ, ರೂಢಿಗತ ಸಂಪ್ರದಾಯಗಳಾಗಿ ರೂಪು ತಳೆದಿದೆ.

ಆ ಮೂಲ ಶಕ್ತಿಯನ್ನು, ಆ ಮಹಾತಾಯಿಯನ್ನು ಇದೇ ಕಾರಣಕ್ಕಾಗಿ ರಾತ್ರಿ ಕಾಲದಲ್ಲಿ ಅರ್ಚಿಸಲಾಗುತ್ತದೆ. ವ್ಯಕ್ತಿತ್ವದೊಳಗಿನ ಶಕ್ತಿಯ ವಿಕಾಸಕ್ಕಾಗಿ ಪ್ರಾರ್ಥಿಸಲಾಗುತ್ತದೆ.

ಹೀಗೆಂದೇ ಆ ಶಕ್ತಿಗೆ ಬೆಳದಿಂಗಳನ್ನು ಹೆತ್ತ ಕತ್ತಲಲ್ಲಿ ಪೂಜೆ, ಅಜ್ಞಾನವೆಂಬ ಕತ್ತಲ್ಲಿ ಬೆಳಕಿನ ಕುಡಿಯನ್ನು ಹೊತ್ತಿಸುವವಳು ಇವಳೆಂದೇ ಆ ತಾಯಿಗೆ ನವ ವಿಧಿ ರಾತ್ರಿ ದೀಪೋತ್ಸವ.

ನವರಾತ್ರಿ ಎಂದರೆ ಸಂಕಲ್ಪಸಿದ್ಧಿಯ ಸಾರ್ಥಕ ಭಾವದ ಮಹಾನ್ ಯಜ್ಞ, ದೇವಿಯು ರಕ್ತಬೀಜಾಸುರನನ್ನು ಮರ್ಧಿಸುತ್ತಾಳೆ. ರಕ್ತಬೀಜ ಎಂದರೆ ರಾಗ ವಿಷಯ, ಬೇರುಸಹಿತ ಕಿತ್ತು ಹಾಕಿದರೆ ಮಾತ್ರ ಸಂಸಾರಯಾನದಲ್ಲಿ ಯಾನ ಸರಾಗ.

ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳ ಹಬ್ಬ. ಬೇಸಿಗೆಯಲ್ಲಿ ವಸಂತ ನವರಾತ್ರಿ ಮತ್ತು ಚಳಿಗಾಲದಲ್ಲಿ ಶರನ್ನವರಾತ್ರಿ ಆಚರಣೆ. ದೇವತೆಗಳನ್ನು ಪ್ರಸನ್ನಗೊಳಿಸಲು ಸರಿಯಾದ ಕಾಲ ಇವು.

ನವ ಎಂದರೆ ಹೊಸದು ಮತ್ತು ಒಂಬತ್ತು ಎಂಬ ಎರಡು ಅರ್ಥ ಇದೆ. ಒಂಬತ್ತು ಬಿಡಿ ಸ್ಥಾನದಲ್ಲಿರುವ ಸಂಖ್ಯೆಗಳಲ್ಲಿ ಅತ್ಯಂತ ದೊಡ್ಡದು. ಒಂಬತ್ತರ ಮಗ್ಗಿಯಲ್ಲಿ ಅಂಕೆಗಳನ್ನು ಕೂಡಿದರೆ ಹೇಗೆ ಒಂಬತ್ತೇ ಬರುತ್ತದೆಯೋ ಅದೇ ರೀತಿ ದೇವಿಯು ಎಷ್ಟೇ ಅವತಾರ ತಾಳಿದರೂ ಕೊನೆಗೆ ಆದಿಶಕ್ತಿಯಾಗಿ ಉಳಿಯುವಳು. ಈ ಸಂಖ್ಯೆ ಪರಿಪೂರ್ಣತೆಯನ್ನು ಸೂಚಿಸುತ್ತದೆ.

ನಾವು ಮನುಷ್ಯರಾಗಿ ದೇಹ ಮನಸ್ಸು ಹಾಗೂ ಬುದ್ಧಿ ಎಂಬ ಅಂಶಗಳನ್ನು ಸೇರಿಸಿಕೊಂಡು ಬಾಳುವುದರಿಂದ ಈ ಮೂವರನ್ನು ಹೊಂದಾಣಿಕೆಯಿಂದ ಹೆಣೆದುಕೊಳ್ಳುವುದು ಅಗತ್ಯ. ಇದಕ್ಕಾಗಿಯೇ ದೇವಿ ನವರಾತ್ರಿಯನ್ನು ಸೃಷ್ಟಿಸಿದ್ದಾಳೆ.

ಶಕ್ತಿ ಒಂದೇ. ಅದರ ಪ್ರಕಟ ರೂಪಗಳು ಬೇರೆ ಬೇರೆ ಸ್ವರೂಪಗಳಲ್ಲಿ ಶಸ್ತ್ರಗಳನ್ನು ಧರಿಸಿದ ಶಕ್ತಿಯೇ ವರ-ಅಭಯಗಳನ್ನು ಕೂಡ ನೀಡಬಹುದೆಂಬ ಸಂದೇಶವನ್ನು ಈ ರೂಪಗಳು ಸಾರುತ್ತಿರುವಂತೆಯೇ ಪೊರೆಯುವ ಈಕೆಯೇ ಅಧರ್ಮವನ್ನು ದಮನಿಸಬಲ್ಲಳು ಎಂಬ ಎಚ್ಚರವನ್ನು ನೀಡುತ್ತಿವೆ. ದುರ್ಗೆ ಎಂಬ ಸ್ವರೂಪದ ಮೂಲ ಆಶಯವೂ ಇದೇ.

ಮಾತೆ ತನ್ನ ಮಮತೆಯ ಕಂದನಿಗೆ ಪ್ರೇಮ ವರ್ಷದ ಪ್ರತೀಕವಾಗಿರುವಂತೆ, ಹಾದಿ ತಪ್ಪಿದ ಮಕ್ಕಳ ದುರ್ಗುಣಗಳ ಪಾಲಿಗೆ ಮೃತ್ಯು ಸ್ವರೂಪ ಆಗಬೇಕು. ನಮ್ಮ ದುರ್ಗುಣಗಳು ಹೀಗೆ ಮಾತೃಸಮ್ಮಿತ ಪ್ರೇರಣೆಯಿಂದ ನಿವಾರಣೆಯಾಗಬೇಕು. ಆಗ ಮಾತ್ರ ನಮ್ಮ ವ್ಯಕ್ತಿತ್ವ ವಿಕಸನ ಸಾಧ್ಯ. ಸಮಾಜದಲ್ಲಿ ಕತ್ತಲಿಂದ ಬೆಳಕಿಗೆ ಬರಲು ಸಾಧ್ಯ. ನವರಾತ್ರಿಯ ಆರಾಧನೆ ಇಂತಹ ಅರಿವನ್ನು ನಮ್ಮಲ್ಲಿ ಮೂಡಿಸಲಿ. ಮತ್ತೆ ಮತ್ತೆ ನಮ್ಮ ಪ್ರಾಣಶಕ್ತಿ ವಿಕಸಿತಗೊಂಡು, ಸೃಜನಶೀಲತೆ ಸಂವರ್ಧಿಸಲಿ.


ಕ್ರಪೆ: ಕನ್ನಡಪ್ರಭ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ