ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನ
ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನ
ಮೈಸೂರು ಅರಮನೆಯ ದರ್ಬಾರ್ ಹಾಲಿನಲ್ಲಿ
ದಸರಾ ಸಂದರ್ಭದಲ್ಲಿ ಕಾಣುವ ವೈಭವಯುತ ರತ್ನಖಚಿತ ಸಿಂಹಾಸನವು ಅತ್ಯಂತ ಗಮನ
ಸೆಳೆಯುವಂತದ್ದಾಗಿದೆ. ರಾಜಮನೆತನದ ಪಾರಂಪರಿಕವಾದ
ನವರಾತ್ರಿ ಆಚರಣೆಯಲ್ಲಿ ಶ್ರೀಕಂಠದತ್ತನರಸಿಂಹರಾಜ
ಒಡೆಯರ್ ಅವರು ಸಿಂಹಾಸನವನ್ನು ಆರೋಹಣ ಮಾಡಿ ಖಾಸಗಿ ದರ್ಬಾರ್ ನಡೆಸುತ್ತಾರೆ. ನಂತರದಲ್ಲಿ ಇದನ್ನು ಸಾರ್ವಜನಿಕ ದರ್ಶನಕ್ಕೆ
ತೆರೆದಿರಿಸಲಾಗುತ್ತಿದೆ.
ಈ ಸಿಂಹಾಸನವನ್ನು ಮೊದಲು ಮರದಲ್ಲಿ
ನಿರ್ಮಿಸಿ,
ಅದಕ್ಕೆ ದಂತದಿಂದ ಅಲಂಕರಿಸಿ ನಂತರದಲ್ಲಿ ಚಿನ್ನ ಮತ್ತು ಬೆಳ್ಳಿಯ ಹೊದಿಕೆಗಳಿಂದ
ವೈಭವಗೊಳಿಸಲಾಗಿದೆ ಎನ್ನಲಾಗಿದೆ.
ಒಂದು ನಂಬಿಕೆಯ ಪ್ರಕಾರ ಈ ಸಿಂಹಾಸನವು
ಪಾಂಡವರ ಕಾಲದ್ದಾಗಿದ್ದು,
ಕಾಲಾಂತರದಲ್ಲಿ ಕಂಪಿಲರಾಯನೆಂಬ ರಾಜನು ಇದನ್ನು ಪೆನಗೊಂಡಕ್ಕೆ
ತಂದನಂತೆ. ಯುದ್ಧದಲ್ಲಿ ಹತನಾಗುವುದಕ್ಕೆ ಮುಂಚೆ
ಆತ ಈ ಸಿಂಹಾಸನವು ಶತ್ರುಗಳ ಕೈಸೇರದಂತೆ ರಹಸ್ಯ
ಸ್ಥಳವೊಂದರಲ್ಲಿ ಹುಗಿದಿರಿಸಿದ್ದನಂತೆ.
1338ರಲ್ಲಿ ಧ್ಯಾನದೃಷ್ಠಿಯಿಂದ ಇದನ್ನರಿತ ಮಹರ್ಷಿ ವಿದ್ಯಾರಣ್ಯರು ವಿಜಯನಗರದ
ಚಕ್ರಾಧಿಪತಿ ಹರಿಹರನಿಗೆ ಈ ವಿಷಯವನ್ನು ತಿಳಿಸಲಾಗಿ, ಅದನ್ನು
ರಾಜೋಪಯೋಗಕ್ಕೆ ಹೊರತೆಗೆಯಲಾಯಿತಂತೆ.
ಮುಂದೆ ವಿಜಯನಗರದ ಅವನತಿಯ ವೇಳೆಗೆ
ಇದನ್ನು ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ
ರಾಯಭಾರಿಯ ಅರಮನೆಗೆ ಸಾಗಿಸಲಾಯಿತೆಂದು ಹೇಳಲಾಗಿದೆ. ಆ ಬಳಿಕ 1609ರಲ್ಲಿ ಆಗಿನ ಮೈಸೂರು ಅರಸರಾದ
ರಾಜಒಡೆಯರ್, ಶ್ರೀರಂಗರಾಜು ಎಂಬ ಅರಸನನ್ನು
ತಲಕಾಡಿಗೆ ಓಡಿಸಿ ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡರು. ಮುಂದೆ ಸ್ವಲ್ಪ ಕಾಲದ ಅವಧಿಯವರೆಗೆ ಈ ಸಿಂಹಾಸನವು
ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಬಳಿ ಇದ್ದದ್ದು ಹೊರತುಪಡಿಸಿ ಬಹುತೇಕವಾಗಿ ಮೈಸೂರರಸರ ಬಳಿಯೇ
ಇದೆಯೆಂದು ಹೇಳಲಾಗಿದೆ.
ಕಾಲಾನುಕ್ರಮದಲ್ಲಿ ಈ ಸಿಂಹಾಸನದಲ್ಲಿ
ಹಲವೊಂದು ಬದಲಾವಣೆಗಳಾಗಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಸಿಂಹಾಸನದ ಮೂಲಸ್ವರೂಪಕ್ಕೆ ಧಕ್ಕೆ ಬಾರದಂತೆ 1940
ಮತ್ತು 1945-46ರ ವರ್ಷಗಳಲ್ಲಿ ಶಿಲ್ಪಿ ಸಿದ್ಧಲಿಂಗಸ್ವಾಮಿಗಳ ಮೇಲ್ವಿಚಾರಿಕೆಯಲ್ಲಿ ಕೆಲವೊಂದು
ಪರಿಷ್ಕರಣೆಗಳನ್ನು ಮೂಡಿಸಲಾಗಿದೆ. ಮೊದಲಿಗೆ ಈ
ಸಿಂಹಾಸನವು ಎತ್ತರದಲ್ಲಿ ಸ್ವಲ್ಪ ಚಿಕ್ಕದಿದ್ದು 5 ಮೆಟ್ಟಿಲುಗಳನ್ನು ಮಾತ್ರ ಹೊಂದಿತ್ತು. ಈಗಿನ ಸಿಂಹಾಸನವು ಸ್ವಲ್ಪ ವಿಶಾಲವಾಗಿದ್ದು ಏಳು
ಮೆಟ್ಟಿಲುಗಳನ್ನು ಹೊಂದಿದೆ.
ಸಿಂಹಾಸನವು ಚಿನ್ನದ ಬಾಳೆಯ ಕಂಬ ಮತ್ತು
ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ
ಪಕ್ಷಿಯನ್ನು ಇರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಮೆಟ್ಟಿಲುಗಳ ಎರಡೂ ಕಡೆಗಳಲ್ಲಿ
ಸ್ತ್ರೀಪುತ್ಥಳಿಗಳನ್ನು ನಿರ್ಮಿಲಾಗಿದೆ. ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು
ಕಟ್ಟಲಾಗಿದೆ. ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದ್ದು,
ಉಭಯ ಪಾರ್ಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ
ಲತೆಗಳನ್ನು ಕೆತ್ತಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ
ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು
ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು
ಕುದುರೆಗಳು ಮತ್ತು ನಾಲ್ಕು ಹಂಸಪಕ್ಷಿಗಳನ್ನಿಡಲಾಗಿದೆ. ನಾಗದೇವತೆಗಳ ಚಿತ್ರಗಳು, ಸ್ವಾಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ.
ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ. ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96
ಸಾಲುಗಳ ಶ್ಲೋಕಗಳಿವೆ.
ಈ ಸಿಂಹಾಸನವು ಅಕ್ಟೋಬರ್ 23ರ ವರೆಗೆ
ಸಾರ್ವಜನಿಕ ದರ್ಶನಕ್ಕೆ ಲಭ್ಯವಿದೆ.
ಮಾಹಿತಿ ಆಧಾರ: ಹಲವು ಪತ್ರಿಕೆಗಳಲ್ಲಿ
ಲಭ್ಯವಿರುವ ವರದಿಗಳು
ಚಿತ್ರಕೃಪೆ: http://www.mysorepalace.gov.in
Tag: Mysore Simhasana, Mysore Golden Throne
ಕಾಮೆಂಟ್‌ಗಳು