ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೊಟ್ಟದ್ದು ತನಗೆ


ಇದೊಂದು ಬಹು ಸುಂದರವಾದ ಆಫ್ರಿಕನ್ ಕಥೆ.   ಎಷ್ಟೋ ವರ್ಷಗಳ ಹಿಂದೆ ಒಂದು ಸಣ್ಣ ಊರಿನ ಹೊರಗೆ ಒಮ್ಮೆ ದೊಡ್ಡ ರಾಕ್ಷಸ ಬಂದು ವಸತಿ ಹೂಡಿತಂತೆ.  ಊರಿನವರೆಲ್ಲ ಎದೆ ಒಡೆದುಕೊಂಡರು.  ತಮ್ಮ ಊರಿನ ಬದಿಯಲ್ಲೇ ಇಂಥ ಭಯಂಕರ ರಾಕ್ಷಸ ಬದುಕಿದ್ದರೆ ತಾವು ಕ್ಷೇಮವಾಗಿರುವುದು ಹೇಗೆ ಸಾಧ್ಯ? ಬಹಳಷ್ಟು ಜನ ಗಾಬರಿಯಿಂದ ಹೆದರಿ ಮನೆಯಲ್ಲೇ ಅವಿತು ಕುಳಿತುಕೊಂಡರೆ ಕೆಲವರು ಧೈರ್ಯಶಾಲಿ ಯುವಕರು ಈ ರಾಕ್ಷಸನನ್ನು ಹೆದರಿಸಿ ಓಡಿಸುವ ಪ್ರಯತ್ನ ಮಾಡಿದರು.

ಒಬ್ಬ ತರುಣ ಧೈರ್ಯದಿಂದ ಆ ರಾಕ್ಷಸನನ್ನು ಕೊಂದೇ ಬರುವುದಾಗಿ ಹೊರಟ.  ಕೈಯಲ್ಲಿ ಹರಿತವಾದ ಖಡ್ಗ ಹಿಡಿದುಕೊಂಡು ಹೋದವನೇ ರಾಕ್ಷಸನ ಮೇಲೆ ಪ್ರಹಾರ ಮಾಡಿದ.  ಖಡ್ಗ ಮೈಮೇಲೆ ಬೀಳುತ್ತಿದ್ದಂತೆ ರಾಕ್ಷಸ ಜೋರಾಗಿ ನಕ್ಕು, ಆ ಖಡ್ಗವನ್ನು ಅವನ ಕೈಯಿಂದ ಸೆಳೆದುಕೊಂಡುಬಿಟ್ಟ.

ಕ್ಷಣಮಾತ್ರದಲ್ಲಿ ಮಂತ್ರಮಾಡಿದಂತೆ ತನಗೆ ಹೊಡೆದ ಖಡ್ಗದ ಎರಡು ಪಟ್ಟು ಗಾತ್ರದ ಖಡ್ಗವನ್ನು ಹೊರತೆಗೆದು ಸರ್ರೆಂದು ಬೀಸಿ ತರುಣನನ್ನು ಕತ್ತರಿಸಿ ಹಾಕಿದ.  ಊರ ಜನಕ್ಕೆ ಭಯ ಮತ್ತಷ್ಟು ಹೆಚ್ಚಾಯಿತು. ಕೆಲದಿನಗಳ ನಂತರ ಮತ್ತೊಬ್ಬ ತರುಣ ಕೈಯಲ್ಲೊಂದು ಮರದ ದಿಮ್ಮಿಯನ್ನು ಹಿಡಿದು ರಾಕ್ಷಸನನ್ನು ಕೊಲ್ಲಲು ಹೊರಟ.  ತನ್ನ ಶಕ್ತಿಯನ್ನೆಲ್ಲ ಬಳಸಿ ದಿಮ್ಮಿಯನ್ನು ಮೇಲೆತ್ತಿ ರಾಕ್ಷಸನ ತಲೆಯ ಮೇಲೆ ಬಲವಾಗಿ ಹೊಡೆದ.  ರಾಕ್ಷಸನಿಗೆ ಏನೂ ಆಗಲಿಲ್ಲ!

ಇನ್ನಷ್ಟು ಘೋರವಾಗಿ ನಕ್ಕು ತಕ್ಷಣ ತನ್ನನ್ನು ಹೊಡೆದ ದಿಮ್ಮಿಯ ಎರಡು ಪಟ್ಟು ಗಾತ್ರದ ದಿಮ್ಮಿ  ಸೃಷ್ಟಿಸಿ ಅದರಿಂದ ತರುಣನನ್ನು ಅಪ್ಪಳಿಸಿ ಹೊಸಕಿಹಾಕಿಬಿಟ್ಟ.  ಊರಿನ ಜನ ಇನ್ನಷ್ಟು ಕಂಗಾಲಾದರು. ತಮ್ಮ ತಮ್ಮ ಮಕ್ಕಳಿಗೆ ರಾಕ್ಷಸನ ವಿರುದ್ಧ ಜಗಳಕ್ಕೆ ಹೋಗದಂತೆ ತಾಕೀತು ಮಾಡಿದರು.  ತಮ್ಮ ಊರಿನ ದುರ್ದೈವದಿಂದ ಇಂಥ ಕ್ರೂರ ರಾಕ್ಷಸ ಬಂದು ನೆಲೆಮಾಡಿದ್ದಾನೆ. ಆಯ್ತು, ಹೇಗಾಗುತ್ತದೋ ಆಗಲಿ, ರಾಕ್ಷಸನ ಮನಸ್ಸಿನ ವಿರುದ್ಧ ಹೋಗುವುದು ಬೇಡ ಎಂದು ನಿರ್ಧಾರ ಮಾಡಿ ಹೆದರಿಕೆಯಲ್ಲೇ ಜೀವನ ಕಳೆಯತೊಡಗಿದರು.

ಕೆಲವು ತಿಂಗಳುಗಳ ನಂತರ ಬೇರೆ ಊರಿನ ತರುಣನೊಬ್ಬ ಬಂದ.  ಜನ ಹೆದರಿಕೆಯಿಂದ  ಬದುಕುತ್ತಿರುವುದನ್ನು ಕಂಡ.  ರಾಕ್ಷಸನ ಬಗ್ಗೆ ಜನರು ಹೇಳಿದ ಕಥೆಗಳನ್ನು ಕೇಳಿದ.  ತಾನು ರಾಕ್ಷಸನನ್ನು ಸೋಲಿಸುವುದಾಗಿ ಹೇಳಿ ನಡೆದ. ಹಿರಿಯರು ಅವನನ್ನು ತಡೆಯಲು ಪ್ರಯತ್ನಿಸಿದರೂ ಕೇಳದೇ ಹೊರಟ.

ಊರ ಜನವೆಲ್ಲ ಅವನ ಗತಿ ಏನಾದೀತೋ ಎಂದು ನೋಡಲು ಹೊರಟು ಊರಹೊರಗೆ ಸೇರಿದರು.  ಈ ತರುಣ ತನ್ನ ಜೊತೆಗೆ ಯಾವ ಆಯುಧವನ್ನೂ ತಂದಿರಲಿಲ್ಲ.  ನಿಧಾನವಾಗಿ ಹೋಗಿ ರಾಕ್ಷಸನ ಮುಂದೆ ನಿಂತ.  ಅದನ್ನು ದಿಟ್ಟಿಸಿ ನೋಡಿ ಮೆಲುವಾಗಿ ನಕ್ಕು ತನ್ನ ಜೇಬಿನಿಂದ ಒಂದು ಸುಂದರವಾದ ಕೆಂಪು ಸೇಬುಹಣ್ಣನ್ನು ತೆಗೆದು ಅದರತ್ತ ಚಾಚಿದ.  ರಾಕ್ಷಸ ಗಬಕ್ಕನೇ ಆ ಸೇಬುಹಣ್ಣನ್ನು ಕಿತ್ತುಕೊಂಡು ತಿಂದು ಸುಂದರವಾಗಿ ನಕ್ಕಿತು.  ಕ್ಷಣಮಾತ್ರದಲ್ಲಿ ತನ್ನ ಕೈ ಚಾಚಿ ಅವನು ನೀಡಿದ್ದ ಹಣ್ಣಿಗಿಂತ ಎರಡು ಪಟ್ಟು ದೊಡ್ಡದಾದ ಬಹುಸುಂದರವಾದ ಎರಡು ಹಣ್ಣುಗಳನ್ನು ಅವನಿಗೆ ನೀಡಿತು.  ಜನ ಬೆರಗಾದರು.

ತರುಣ ಹಿಂದೆ ಬಂದು ಮಣ್ಣಿನ ಮಡಿಕೆಯಲ್ಲಿ ಶುದ್ಧವಾದ ನೀರನ್ನು ತುಂಬಿ ಮತ್ತೆ ರಾಕ್ಷಸನ ಹತ್ತಿರ ಹೋಗಿ ನಗುತ್ತಾ ನೀಡಿದ. ರಾಕ್ಷಸ ಮತ್ತಷ್ಟು ಚೆನ್ನಾಗಿ ನಕ್ಕು ನೀರನ್ನು ಗಟಗಟನೇ ಕುಡಿದುಬಿಟ್ಟಿತು.  ಮತ್ತೆ ಒಂದು ಕ್ಷಣದಲ್ಲಿ ತನ್ನ ಬೃಹತ್ ಕೈಗಳನ್ನು ಚಾಚಿ ತರುಣ ನೀಡಿದ್ದ ಮಡಿಕೆಯ ಬದಲು ಅದಕ್ಕಿಂತ ಎರಡು ಪಟ್ಟು ದೊಡ್ಡದಾದ ಎರಡು ಬಂಗಾರದ ಪಾತ್ರೆಗಳಲ್ಲಿ ಬಹಳ ರುಚಿಯಾದ ಹಣ್ಣಿನ ರಸವನ್ನು ಕೊಟ್ಟಿತು. ಜನ ಸಂತೋಷದಿಂದ ಹುಚ್ಚೆದ್ದರು. ಇದು ರಾಕ್ಷಸನಲ್ಲ, ಪರಮಸ್ನೇಹಿತ.

ನಾವು ನೀಡಿದ್ದರ ಎರಡು ಪಟ್ಟು ಮರಳಿ ಕೊಡುತ್ತದೆ ಎಂದು ಅರ್ಥವಾಯಿತು.  ಅದು ಏನು ನೀಡಿದರೂ ದ್ವಿಗುಣವಾಗಿ ಕೊಡುತ್ತದೆ ಎಂಬುದು ಮನವರಿಕೆಯಾಯಿತು. ಈ ಕಥೆ ನೂರಾರು ವರ್ಷ ಹಿಂದಿನದಾದರೂ ಆ ರಾಕ್ಷಸ ಇನ್ನೂ ಇದೆ.  ನಮ್ಮ ಸಮಾಜದಲ್ಲಿ, ನಮ್ಮ ಮನೆಗಳಲ್ಲಿ, ನಮ್ಮ ಹೃದಯದಲ್ಲಿ. ನೀವು ಏನು ಕೊಡುತ್ತೀರೋ ಅದನ್ನು ದ್ವಿಗುಣವಾಗಿ ಮರಳಿ ಕೊಡುತ್ತದೆ.  ದ್ವೇಷವನ್ನು ನೀಡಿದರೆ ಅದೂ ಎರಡು ಪಟ್ಟಾಗಿ ಮರಳುತ್ತದೆ.

ಪ್ರೀತಿ ನೀಡಿದರೆ, ಪ್ರೀತಿಯ ಮಳೆಯನ್ನೇ ಸುರಿಸುತ್ತದೆ.  ಸಮಾಜಕ್ಕೆ ನಾವು ಕೊಟ್ಟದ್ದು ಬಹುಪಟ್ಟಾಗಿ ಮರಳಿ ಬರುತ್ತದೆ.  ಆದ್ದರಿಂದ ನಾವು ಸಂತೋಷವಾಗಿ, ಸುಖದಿಂದ ಬದುಕಬೇಕಾದರೆ ಅದನ್ನೇ ಸಮಾಜಕ್ಕೆ ನೀಡಬೇಕು. ಬೇರೆ ದಾರಿಯಿಲ್ಲ.


ನಿರೂಪಣೆ: ಡಾ. ಗುರುರಾಜ ಕರ್ಜಗಿ, ‘ಕರುಣಾಳು ಬಾ ಬೆಳಕೆ, ಕೃಪೆ: ಪ್ರಜಾವಾಣಿ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ