ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪಾವಳಿ ಪಟಾಕಿ


ದೀಪಾವಳಿ ಪಟಾಕಿ

ಕೆಲವು ವರ್ಷಗಳ ಹಿಂದೆ ಪಟಾಕಿ ಸಮಯ ಪ್ರಾರಂಭ ಆಗುವುದರೊಳಗೆ ಮನೆ ಸೇರಿಕೊಳ್ಳಬೇಕು ಯಾವ ಪಟಾಕಿ ಯಾವಾಗ ನಮ್ಮ ಬಳಿ ‘ಢಂ’ ಎಂದೀತೋ, ಯಾರು ತಮ್ಮ ಕೈಯಲ್ಲಿನ ಪಟಾಕಿಯನ್ನು ಯಾವುದೋ ಜ್ಞಾನದಲ್ಲಿ ನಮ್ಮ ಮೇಲೆ ಎಸೆಯುತ್ತಾರೆ ಎಂಬ ಆತಂಕಗಳು ಕಾಡುತ್ತಿದ್ದವು.  ಇತ್ತೀಚಿನ ವರ್ಷಗಳಲ್ಲಿ ಅಪಾರ್ಟ್ಮೆಂಟುಗಳಲ್ಲಿ ಪಟಾಕಿ ಹೊಡೆಯುವುದಕ್ಕೆ ನಿಷೇದ ಇರುವುದರಿಂದ ಪಟಾಕಿ ಸಂಭ್ರಮ ನೋಡೋಣ ಅಂತ ರಸ್ತೆಯಲ್ಲಿ  ಒಂದು ಸುತ್ತು ಹೊರಟರೂ ಎಲ್ಲೂ ಪಟಾಕಿಯ ಸುಳಿವು ತುಂಬಾ ಕಡಿಮೆ ಆಗುತ್ತಿದೆ ಅನಿಸುತ್ತೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕ್ಷೀಣ ಸದ್ದು ಮಿಂಚುಗಳು.

ಪಟಾಕಿ ಹೊಡೆಯುವಾಗ ಜವಾಬ್ಧಾರಿ, ಪರಿಸರ ಪ್ರಜ್ಞೆ ಇವೆಲ್ಲ ಇರಬೇಕು ಅನಿಸುವುದು ಸತ್ಯ.  ಆದರೂ ಪಟಾಕಿ ಎಂಬುದು ನಮ್ಮ ಬಾಲ್ಯದ ಅಮೂಲ್ಯ ಅನುಭಾವಗಳಲ್ಲೊಂದು.  ಮನೆಯಲ್ಲಿ ನೀಡುತ್ತಿದ್ದ ಒಂದು ರೂಪಾಯಿಯಲ್ಲಿ ಕೊಂಡು ತಂದ ಪಟಾಕಿಗಳನ್ನು ನರಕ ಚತುರ್ದಶಿಯ ದಿನ ಬೆಳಿಗ್ಗೆ ಮೂರು ಗಂಟೆಗೆ ಎಣ್ಣೆ ನೀರು ಹಾಕಿಕೊಂಡ ಕ್ಷಣದಿಂದಲೇ  ‘ಢಂ’ ಎಂದು ಹಚ್ಚುತ್ತಿದ್ದ ನಾವು, ಸಣ್ಣ ಪುಟ್ಟ (ಕುದುರೆ ಪಟಾಕಿ ಅಥವಾ ಸರದ ಪಟಾಕಿಯನ್ನೂ ಸೇರಿಸಿ) ಪಟಾಕಿಗಳನ್ನು  ಬಿಡಿ ಬಿಡಿಯಾಗಿ ಒಂದೊಂದೇ, ಒಂದೊಂದೇ ಎಂದು ಮೂರು  ದಿನಗಳವರೆಗೆ ಅತ್ಯಂತ ಕಾಳಜಿಯಿಂದ ವ್ಯಾಪಿಸಿಕೊಳ್ಳುತ್ತಿದ್ದೆವು.     

ಪುಟ್ಟ ವಯಸ್ಸಿನಲ್ಲಿ ಹೆಚ್ಚು ಶಬ್ದ ಮಾಡುವ ಪಟಾಕಿ ಹೊಡೆಯಲು ಒಲವಿರುತ್ತದಾದರೂ ಮುಂದೆ ಬೆಳೆಯುವ ದಿನಗಳಲ್ಲಿ ಅದು ಅಂತಹ ಒಲವು ತರುವುದಿಲ್ಲ.  ಆದರೆ, ಈ ಹೂಬಾಣದ ಕುಡಿಕೆ, ಸುರು ಸುರು ಬತ್ತಿ, ಭೂಚಕ್ರ  ಮುಂತಾದ ಪಟಾಕಿಗಳನ್ನು ಇಂದು ಕಂಡಾಗಲೂ ತುಂಬಾ ಸಂತೋಷವಾಗುತ್ತದೆ.  ಇವೆಲ್ಲಾ ಸೊಬಗು ಬಿಟ್ಟು ಹೋದರೆ ದೀಪಾವಳಿ ಸಂಭ್ರಮ ಮೊದಲಿನಂತೆ ಇರಲು ಸಾಧ್ಯವೇ ಎಂಬ ಚಿಂತನೆ ಮನಸ್ಸಿನಲ್ಲಿ ಹಾದುಹೋಗುತ್ತೆ.

ದಿನ ಬೆಳಗಾದರೆ ರಾಶಿ ರಾಶಿ ಪ್ಲಾಸ್ಟಿಕ್ ಉಪಯೋಗಿಸಿ, ಬೇಡದಿದ್ದರೂ ಚಿಕ್ಕ ಚಿಕ್ಕದಕ್ಕೂ ಪೆಟ್ರೋಲ್ ಉರಿಸಿ, ಇರುವ ಮರ ಗಿಡಗಳನ್ನೆಲ್ಲಾ ಕಡಿದು ಗುಡ್ಡೆ ಹಾಕಿ ಕಾಂಕ್ರೀಟ್ ಕಾಡು ಮಾಡುವುದರಲ್ಲಿ ನಿರತರಾದ ನಾವು, ನಾವು ಆಧುನಿಕರು ಎಂದು ಭಾವಿಸಿಕೊಳ್ಳುವ ಸೋಗಿನಲ್ಲಿ, ಸಾಂಸ್ಕೃತಿಕ ಪರಂಪರೆಯಲ್ಲಿ ಇರುವ ಕಿಂಚಿತ್ ಸೌಂದರ್ಯಕ್ಕೂ ಕಪ್ಪು ಮಸಿ ತರುವುದರ ಬದಲು ಒಂದಷ್ಟು ಸುಂದರ ಪಟಾಕಿಯ ಮಸಿಯೇ ವಾಸಿಯಲ್ಲವೇ ಅನಿಸೀತು.  ಇಲ್ಲದಿದ್ದರೆ ನಮ್ಮ ಹಬ್ಬಗಳೂ ಬರೀ ಫೇಸ್ಬುಕ್ಕಿನಲ್ಲಿ ಮಾತ್ರವೇ ಕಳೆದುಹೋಗುವ ಯಾಂತ್ರಿಕತೆಯಾಗಿ ಹೋದೀತು.  ಬೇಜವಾಬ್ದಾರಿ ಪಟಾಕಿ ಹಚ್ಚುವಿಕೆ, ಅನಗತ್ಯ ದುಂದುಗಾರಿಕೆ    ಖಂಡಿತ ಬೇಡ.  ಅಂತೆಯೇ ಬದುಕಿನಲ್ಲಿ ಸಾಂಸ್ಕೃತಿಕ ಸೌಂದರ್ಯ ಪ್ರಜ್ಞೆಯೂ ಕಳೆದುಹೋಗದಿರಲಿ.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ