ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಕೋರಂಗೆ ಚಂದ್ರಮನ


ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!

ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ.

ಸೂರ್ಯನುದಯ ತಾವರೆಗೆ ಜೀವಾಳ!
ಚಂದ್ರಮನುದಯ ನೈದಿಲೆಗೆ ಜೀವಾಳ!
ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ.
ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ.
ಕೂಡಲಸಂಗನ ಶರಣರ ಬರವೆನಗೆ
ಪ್ರಾಣ-ಜೀವಾಳವಯ್ಯ.
.
ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತರೆನ್ನ ಮನೆಗೆ!
ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ,
ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ
ಕೂಡಲಸಂಗಮದೇವಾ ನಿಮ್ಮ ಮುಂದೆ.

ಗಿಳಿಯ ಪಂಜರವಿಕ್ಕಿ, ಸೊಡರಿಗೆಣ್ಣೆಯನೆರೆದು,
ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವ!
ತರಗೆಲೆ ಗಿರಕಂದರೆ, ಹೊರಗನಾಲಿಸುವೆ.
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವ.
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
'ಶಿವಾ' ಎಂದರೆ ಸಂತೋಷಪಟ್ಟೆನೆಲೆಗವ್ವ.

ಅಡವಿಯಲೊಬ್ಬ ಕಡುನೀರಡಸಿ
ಎಡೆಯಲ್ಲಿ ನೀರ ಕಂಡಂತಾಯಿತಯ್ಯ!
ಕುರುಡ ಕಣ್ಣ ಪಡೆದಂತಾಯಿತಯ್ಯ!
ಬಡವ ನಿಧಾನವ ಪಡೆದಂತಾಯಿತಯ್ಯ!
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯ.

ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು,
ಗುಡಿ, ತೋರಣವ ಕಟ್ಟಿ;
ಪಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ
ಉಘೇ, ಚಾಂಗು, ಭಲಾ, ಎಂಬೆ!
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.


ಸಾಹಿತ್ಯ: ಬಸವಣ್ಣನವರು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ