ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಋತಚಿನ್ಮಯೀ ಜಗನ್ಮಾತೆಗೆ

 ಋತಚಿನ್ಮಯೀ ಜಗನ್ಮಾತೆಗೆ

ಓಂ! ಸಚ್ಚಿದಾನಂದ ತ್ರಿತ್ವಮುಖವಾದ ಪರಪ್ರಹ್ಮದಲ್ಲಿ

ಅಭವದೊತ್ತಾದೆ, ಭವದ ಬಿತ್ತಾದೆ, ಋತದ ಚಿತ್ತಾದೆ ನೀ;
ಇಳಿದು ಬಾ ಇಳಿಗೆ, ತುಂಬಿ ತಾ ಬೆಳಗೆ ಜೀವಕೇಂದ್ರದಲ್ಲಿ:
ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥಿವಿಯಲ್ಲಿ.


ಋತದ ಚಿತ್ತಾಗಿ ವಿಶ್ವಗಳ ಸೃಜಿಸಿ ನಡಸುತಿಹ ಶಕ್ತಿಯೆ,

ಅನ್ನ ಪ್ರಾಣಗಳ ಮನೋಲೋಕಗಳ ಸೂತ್ರಧರ ಯುಕ್ತಿಯೆ,
ಅಖಿಲ ಬಂಧನದ ಹೃದಯದಲ್ಲಿ ಅವಿನಾಶಿ ಆಸಕ್ತಿಯೆ,
ನಿನ್ನ ಅವತಾರವೆನ್ನ ಉದ್ಧಾರ; ಬಾ, ದಿವ್ಯ ಮುಕ್ತಿಯೆ.


ಅವಿಭಕ್ತವಾಗಿ ಸುವಿಭಕ್ತದಂತೆ ತೋರುತಿರುವ ಮಾಯೆ,

ಪ್ರಕೃತಿ ಪುರುಷರಿಗೆ ನಿತ್ಯಜನ್ಮವನು ನೀಡುತಿರುವ ತಾಯೆ,
ಕಾಲದೇಶ ಆಕಾಶಕೋಶಗಳನೂದುತಿರುವೆ ಛಾಯೆ,
ಅನೃತದಲ್ಲಿ ಋತವಾಗಿ ಸಂಭವಿಸು ಸಾವು ನೋವು ಸಾಯೆ.


ಎಲ್ಲವನು ಮಾಡಿ ಎಲ್ಲರೊಳಗೂಡಿ ನೀನೆಯೆಲ್ಲವಾದೆ.

ಜ್ಯೋತಿಯಾದರೂ ತಮೋಲೀಲೆಯಲಿ ಜಡದ ಮುದ್ರೆಯಾದೆ.
ಎನಿತು ಕರೆದರೂ ಓಕೊಳ್ಳದಿರುವ ಅಚಿನ್ನಿದ್ರೆಯಾದೆ;
ಬೆಳಗಿ ನನ್ನಾತ್ಮಕಿಳಿದು ಬಾ, ತಾಯಿ, ನೀನೆ ಬ್ರಹ್ಮಬೋಧೆ.


ಮರೆವು ನೀನೆ ಮೇಣರಿವು ನೀನೆ ಮೇಣ್ ಗುರುವು ನೀನೆ, ದೇವಿ.

ರೋಗಶಕ್ತಿ ನೀನೌಷಧಿಯ ಶಕ್ತಿ; ಕೊಲುವೆ ಕಾವೆಯೋವಿ.
ಮಾವಿನಲ್ಲಿ ಸಿಹಿ, ಬೇವಿನಲ್ಲಿ ಕಹಿ; ನಿನ್ನ ಇಚ್ಛೆಯಂತೆ
ಗಾಳಿ ಸೇರಿ ನೀರಾಗಿ ತೋರಲೀ ಪ್ರಕೃತಿ ನಿಯಮದಂತೆ!


ಹುಲ್ಲು ಬೆಳೆವಲ್ಲಿ, ನೆಲ್ಲು ಮೊಳೆವಲ್ಲಿ, ಕಾಯಿ ಪಣ್ಣುವಲ್ಲಿ,

ಗೂಡುಕಟ್ಟಿ ತಾಯ್ ಮೊಟ್ಟೆಯಿಟ್ಟು ಮರಿಮಾಡಿ ಸಲಹುವಲ್ಲಿ,
ಮಮತೆಯಂತೆ ಮೇಣ್ ಕಾಮದಂತೆ ಮೇಣ್ ಪ್ರೇಮಭಾವದಲ್ಲಿ
ನಿನ್ನ ಚಿಚ್ಛಕ್ತಿ ತನ್ನ ನಿತ್ಯಸದ್ ರಸವ ಸವಿವುದಿಲ್ಲಿ!


ಏಳು ಲೋಕಗಳನಿಳಿದು ದುಮುಕಿ ಜಡವಾಗಿ ಕಡೆಗೆ ನಿಂದೆ;

ಜಡದ ನಡುವೆ ಜೀವವನು ಕಡೆದೆ ಚಿತ್ತಪಶ್ಯಕ್ತಿಯಿಂದೆ.
ಜೀವದಿಂದೆ ಮನಸಾಗುತರಳಿ ಪರಿಣಾಮ ಪಡೆದು ಬಂದೆ;
ಮನವ ಮೀರ್ದ ವಿಜ್ಞಾನವನು ತೋರೆ ತೇರನೇರು ಇಂದೆ.


ಗಾಳಿಗುಸಿರು ನೀ ಬೆಂಕೆಗುರಿಯು ನೀನುದಕಕದರ ಜೀವ:

ಅಗ್ನಿ ಇಂದ್ರ ಬರುಣಾರ್ಕ ದೇವರನು ಮಾಡಿ ನೋಡಿ ಕಾವ
ಶಿವನ ಶಕ್ತಿ ನೀ, ವಿಷ್ಣು ಲಕ್ಷ್ಮಿ ನೀ, ಚತುರ್ಮುಖನ ರಾಣಿ;
ದಿವ್ಯವಿಜ್ಞಾನ ನನ್ನೊಳುದ್ಭವಿಸೆ ಮತಿಗಾಗಮಿಸು, ವಾಣಿ!


ಮೃತ್ಯುರೂಪಿ ನೀನಮೃತರೂಪಿ ನೀನಖಿಲ ಜನ್ಮದಾತೆ,

ಪರಾಪ್ರಕೃತಿ ನೀ ನಿನ್ನ ಮಾಯೆಯಲಿ ಸಕಲ ಜೀವಭೂತೆ.
ನಿನ್ನ ಕೃಪೆಯಿಲ್ಲದಿದ್ದರೆಮಗೆಲ್ಲಿ ಮುಕ್ತಿ, ಜಗನ್ನಾಥೆ?
ನಿನ್ನ ಋತುಚಿತ್ತನೆಮಗೆ ಕೃಪೆಯಿತ್ತು ಕಾಯಿ, ದಿವ್ಯಮಾತೆ.


ಹೃದಯಪದ್ಮ ತಾನರಳೆ ಕರೆವೆ ಬಾರಮ್ಮ ಬಾ, ಇಳಿದು ಬಾ!

ಮನೋದ್ವಾರ ತಾ ಬಿರಿಯೆ ಕರೆವೆ, ಜಗದಂಬೆ, ಬಾ ಇಳಿದು ಬಾ!
ಅಗ್ನಿಹಂಸ ಗರಿಗೆದರೆ ಕರೆವೆ, ಬಾ ತಾಯಿ, ಬಾ, ಇಳಿದು ಬಾ!
ಚೈತ್ಯಪುರುಷ ಯಜ್ಞಕ್ಕೆ ನೀನೆ ಅಧ್ವರ್ಯು, ಬಾ, ಇಳಿದು ಬಾ!


ಓಂ ಶಾಂತಿಃ ಶಾಂತಿಃ ಶಾಂತಿಃ

ಸಾಹಿತ್ಯ: ಕುವೆಂಪು


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ