ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮನೆ ತುಂಬಿಸುವುದು



ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು
ನಿಮ್ಮ ಮಡಿಲೊಳಗಿಡಲು ತಂದಿರುವೆವು;

ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು

ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು.

ಮರೆಮೋಸ ಕೊಂಕುಗಳನರಿಯಳಿವಳು;
ಇನಿಸವಿಶ್ವಾಸವನು ಕಂಡರಿಯಳು;

ಕಷ್ಟಗಳ ಸೈಸದೆಯೆ ಕಾಣದಯೆ ಬೆಳೆದವಳು

ಸಲಹಿಕೊಳಿರೀ ಮಗಳನೊಪ್ಪಿಸುವೆವು.

ಕಠಿಣಗಳ ನೆಳಲ್ ಸುಳಿಯಲದುರಿ ಬಾಡುವಳು
ಹಿರಿ ಮಂಜು ಬಳಲಿಸಿದ ಹೂವಿನಂತೆ;
ಸುಖದಲ್ಲಿ ದುಃಖದಲಿ ಎಲ್ಲ ದೆಸೆಯರವಿನಲಿ
ನಿಮ್ಮ ಪಾಲಿಗೆ ನಿಲುವ ಕುವರಿಯಿವಳು.

ನಿಮಗಿವಳು ನೀಡುತಿಹ ಹಾಲುಹಣ್ಣುಗಳ
ಸವಿ
ಎಂದೆದು ಅವಳ ನಡೆ ನಿಮ್ಮ ಪರವಾಗಿ

ನಮ್ಮ ಕುಲ ಮನೆಗಳಿಗೆ ಹೊರಗಾಗಿ

ಬಂದಿಹಳು
ನಿಮ್ಮ ಕುಲವನು ಬೆಳಸೆ ಬಂದಿರುವಳು

ನಿನ್ನ ಮಡದಿಯ ಕೊಂಡು ಸುಖವಾಗಿರೌ, ಮಗುವೆ,
ನಿಮ್ಮ ಸೊಸೆ-ಸೋದರಿಯು-ಕೊಳ್ಳಿರಿವಳ;

ನಿಮ್ಮಕೀರುತಿ ಬೆಳೆಯಲಿವಳ ಸೌಜನ್ಯದಲಿ;

ನಿಮ್ಮ ಕುಲಶೀಲಗಳು ಪರಿಮಳಿಸಲಿ

ಹೆತ್ತವರ ಮನೆಗಿಂದು ಹೊರಗಾದೆ, ನೀ
ಮಗಳೆ,
ಈ ಮನೆಯ ಈ ಇವರೆ ನಿನ್ನವರು ಮುಂದೆ;

ಇವರೆ ತಾಯ್ಗಳು ಸಖರು ಭಾಗ್ಯವನು

ಬೆಳಸುವರು;
ಇವರ ದೇವರೆ ನಿನ್ನ ದೇವರುಗಳು

ನಿಲ್ಲು ಕಣ್ಣೊರೆಸಿಕೊಳು, ನಿಲ್ಲು ತಾಯ್, ಹೋಗುವೆವು;
ತಾಯ್ವಿರಾ,  ತಂದೆಯಿರ, ಕೊಳ್ಳಿರಿವಳ;

ಎರಡು ಮನೆಗಳ ಹೆಸರು ಖ್ಯಾತಿಗಳು ಉಳಿವಂತೆ

ತುಂಬಿದಾಯುಷ್ಯದಲಿ ಬಾಳಿ ಬದುಕು.


ಸಾಹಿತ್ಯ: ವಿ. ಸೀತಾರಾಮಯ್ಯ

Tag: Mane Thumbisuvudu, Namma mane angaladi, Yamma mane angaladi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ