ಎಂ. ಪಿ. ನಟರಾಜಯ್ಯ
ಎಂ.ಪಿ. ನಟರಾಜಯ್ಯ
ನಮ್ಮ ಆತ್ಮೀಯ ಗೆಳೆಯ ಮಹಾನ್ ಕಲಾವಿದ ಎಮ್. ಪಿ. ಜಿ. ನಟರಾಜಯ್ಯ ಅವರ ಜನ್ಮದಿನ ಏಪ್ರಿಲ್ 14 ರಂದು. ತಮ್ಮ ಅದ್ಭುತ ಕಲೆಯಿಂದ ಕಲಾಪ್ರಿಯರ ಮನಸೆಳೆದಿರುವ ನಟರಾಜಯ್ಯನವರ ಕಲಾಕುಂಚ, ನಾಡಿನ ಪ್ರಸಿದ್ಧ ಮುಖಪುಟಗಳಲ್ಲೂ, ಕಥಾನಕಗಳಲ್ಲೂ, ಪ್ರಸಿದ್ಧರ ಮನೆಗಳ ಭಿತ್ತಿಗಳಲ್ಲೂ, ಚಿತ್ರಪ್ರದರ್ಶನಗಳಲ್ಲೂ ನಿರಂತರವಾಗಿ ರಾರಾಜಿಸುತ್ತಿವೆ. ನಮ್ಮ ‘ಕನ್ನಡ ಸಂಪದ’ ಪುಟ ಮತ್ತು 'ಸಂಸ್ಕೃತಿ ಸಲ್ಲಾಪ' ತಾಣದ ಮುಡಿಚಿತ್ರ ಕೂಡಾ ನಟರಾಜಯ್ಯನವರ ಕೃಪೆ.
ನಟರಾಜಯ್ಯನವರು ಸೌರಮಾನ ಯುಗಾದಿಯ ದಿನವಾದ 1971ರ ಏಪ್ರಿಲ್ 14ರಂದು ದಾವಣಗೆರೆಯಲ್ಲಿ ಜನಿಸಿದರು. ತಂದೆ ಎಂ.ಪಿ.ಎಂ. ಮಹಾದೇವಯ್ಯನವರು ಚಿಕ್ಕ ಕಿರಾಣಿ ಅಂಗಡಿ ಮತ್ತು ಕಟ್ಟಿಗೆಯ ವ್ಯಾಪಾರ ಮಾಡುತ್ತಿದ್ದರು. ತಾಯಿ ಮೀನಾಕ್ಷಮ್ಮನವರು. ತಂದೆಯವರು ವ್ಯಾಪಾರದಲ್ಲಿನ ಪ್ರಾಮಾಣಿಕತೆಗೆ ಊರಲ್ಲೆಲ್ಲಾ ಹೆಸರಾಗಿದ್ದರೆ, ತಾಯಿ ಸಾತ್ವಿಕಗುಣದಿಂದ ಸುತ್ತಲಿನ ಸಮಾಜದಲ್ಲಿ ಗೌರವಾನ್ವಿತೆ.
ಬಾಲ್ಯದ ಹುಡುಗುತನದಲ್ಲಿ ತರಲೆ, ಕೀಟಲೆ, ಶಾಲೆಗೆ ಚಕ್ಕರ್ ಹೊಡೆದು ಸದಾ ಕೆರೆ ಕಾಲುವೆ ಹಳ್ಳಗಳಲ್ಲಿ ಮಿಂದೇಳುವುದನ್ನು ದಿನಚರಿ ಮಾಡಿಕೊಂಡಿದ್ದರೂ, ಕಂಡ ಕಂಡಲ್ಲಿ, ಮನೆಗಳ ಸುಣ್ಣಬಣ್ಣಕಂಡ ಗೋಡೆಗಳ ಮೇಲೇಲ್ಲ ಇದ್ದಿಲು ಇಲ್ಲ, ಸೀಮೆಸುಣ್ಣದಿಂದ ಕ್ರಿಕೆಟ್ ಪ್ರೀತಿಯೋ, ಇಲ್ಲ ಜೆಮಿನಿ ಸರ್ಕಸ್ಸಿನ ಹುಲಿ, ಸಿಂಹ, ಆನೆ, ಕಲಾವಿದರೂ ಹೀಗೆ ವಿವಿಧ ಚಿತ್ರಗಳು ನಟರಾಜರಿಂದ ರೂಪುಗೊಳ್ಳುತ್ತಿದ್ದವು. ಮಳೆಗಾಲದಲ್ಲಿ ಜೇಡಿಮಣ್ಣಿನಿಂದ ಬೊಂಬೆಗಳನ್ನು, ಕೆಲವೊಮ್ಮೆ ಗಣಪನನ್ನು ಮಾಡು ಅಂದರೆ ಅವರಪ್ಪನನ್ನು ಮಾಡುವ ಗುಣ ಬೆಳೆಸಿಕೊಂಡಿದ್ದ ಇವರು ತಮ್ಮ ಶಾಲೆಯ ಪಠ್ಯಪುಸ್ತಕಗಳಲ್ಲಿ ಸಹಾ ಬಿಳಿಯ ಜಾಗವಿದ್ದೆಡೆಯಲ್ಲೆಲ್ಲಾ ಚಿತ್ರಗಳನ್ನು ತುಂಬಿಸುವ ಅದಮ್ಯತೆ ತುಂಬಿ ಬೆಳೆಯತೊಡಗಿದ್ದರು. ಇವರ ಈ ಎಲ್ಲಾ ಹುಡುಗುತನಕ್ಕೆ ತಡೆ ನೀಡಿದ್ದು ಅವರ ತಂದೆಯವರ ಅಕಾಲಿಕ ಮರಣ. ಬದುಕು ದುಸ್ತರವಾಗಿ, ಪ್ರೌಢಶಾಲೆಯ ಓದಿಗೇ ಕೈಮುಗಿದು ವಿವಿಧ ರೀತಿಯ ಅಂಗಡಿಗಳಲ್ಲಿ ಬಾಲಕಾರ್ಮಿಕನಾದರು.
ಬಾಲಕ ನಟರಾಜಯ್ಯನಲ್ಲಿ ಕಲಾವಿದನೊಬ್ಬನನ್ನು ಕಂಡಿದ್ದ ಅವರ ಪ್ರೀತಿಯ ಸೋದರಮಾವನವರಾದ ಮುಕ್ತಿನಾಥಯ್ಯ ಮತ್ತು ಚಿಕ್ಕಪ್ಪನವರಾದ ಕೆ.ಜಿ. ಮಹಾದೆವಯ್ಯನವರ ಸಹಾಯದಿಂದ ದಾವಣಗೆರೆಯ ಚಿತ್ರಕಲಾ ಮಹಾವಿದ್ಯಾಲಯ ಸೇರಿದ ನಟರಾಜಯ್ಯನವರು ಅಲ್ಲಿ ಐದು ವರ್ಷಗಳ ಕಾಲ ಮಲ್ಲಿಕಾರ್ಜುನ ಜಾಧವ್, ಕೊರತಿ, ವೈ.ಎಸ್. ಸೂಗೂರ್ ಮತ್ತು ಪ್ರಾಂಶುಪಾಲರದ ವಿ.ಬಿ. ಹಿರೇಗೌಡರ ಮುಂತಾದವರ ಮಾರ್ಗದರ್ಶನದಲ್ಲಿ ಕಲಿತು ಕಲಾಪದವೀಧರರಾಗಿ ಹೊರಹೊಮ್ಮಿದರು.
ನಟರಾಜಯ್ಯನವರು ವೃತ್ತಿಯಲ್ಲಿ ಬಹುಪಾಲು ಬೆಂಗಳೂರಿನ ವಿವಿಧ ಜಾಹಿರಾತು ಹಾಗೂ ವಿದೇಶಿ ಸಂಸ್ಥೆಗಳಲ್ಲಿ ಕೆಲಸಮಾಡಿದರು. ಚೆನೈ, ಹೈದರಬಾದ್ ನಗರಗಳಲ್ಲಿನ ಅನಿಮೇಷೀನ್ ಕಂಪನಿಗಳಲ್ಲಿ ಕಾನ್ಸೆಪ್ಟ್ ಆರ್ಟಿಸ್ಟ್ ಆಗಿ ಕೆಲಸಮಾಡಿ ಅನುಭವ ಪಡೆದು, ಮುಂದೆ ಸ್ವತಂತ್ರರಾಗಿ ಕೆಲಸ ಮಾಡತೊಡಗಿದರು. ಕೆಲವು ವರ್ಷ ಇವರ ಕುಂಚ ಕಲೆ ಕರ್ಮವೀರ ಪತ್ರಿಕೆಯ ಮುಖಪುಟಗಳನ್ನೂ ಅಲಂಕರಿಸಿತ್ತು.
ಎಂ.ಪಿ. ನಟರಾಜಯ್ಯನವರು 2014ರಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಚಿತ್ರಯಾನ’ ಎಂಬ ಐದು ದಿನಗಳ ಏಕವ್ಯಕ್ತಿ ಪ್ರದರ್ಶನವನ್ನು ನೀಡಿದರು. ಚಿತ್ರಸಂತೆ ಮುಂತಾದ ಪ್ರದರ್ಶನಗಳಲ್ಲಿ ಅವರ ಚಿತ್ರಗಳ ಮುಂದೆ ಜನ ನೂಕುನುಗ್ಗಲಿನಲ್ಲಿ ನಿಂತು ಕಣ್ತುಂಬಿಕೊಳ್ಳುವುದು ಕಾಣುವುದು ಸರ್ವೇ ಸಾಮಾನ್ಯ. ಬೆಳಕನ್ನು ಉತ್ತಮವಾಗಿ ಬಳಸಿಕೊಳ್ಳುವುದು ಅವರ ಚಿತ್ರಗಳ ವೈಶಿಷ್ಟ್ಯ.
“ಚಿತ್ರಕಲೆಯಲ್ಲಿ ವಿಭಿನ್ನವಾದುದನ್ನು ಮಾಡಬೇಕು. ಭಾರತೀಯ ಸಂಸ್ಕೃತಿಯ ಪೌರಾಣಿಕ ಕಥಾನಕಗಳ ಸೊಗಡನ್ನು ಚಿತ್ರಗಳಲ್ಲಿ ಬಿಂಬಿಸಬೇಕು ಎಂಬ ಅಭಿಲಾಷೆಯೇ ಈ ಚಿತ್ರಗಳಿಗೆ ಸ್ಪೂರ್ತಿ” ಎಂದು ತಮ್ಮ ಕಣ್ಮನ ಸೆಳೆಯುವ ಚಿತ್ರಗಳತ್ತ ಆಧ್ಯಾತ್ಮಿಕ ಭಾವದಲ್ಲಿ ನೋಟ ಬೀರುವ ಎಂ.ಪಿ. ನಟರಾಜಯ್ಯನವರು ಆಯಿಲ್ ಪೇಂಟಿಂಗ್, ವಾಟರ್ ಕಲರ್, ಪೆನ್ಸಿಲ್ ಹಾಗು ಡಿಜಿಟಲ್ ಆರ್ಟ್ ಮಾಡುತ್ತಾರೆ.
ನಟರಾಜಯ್ಯನವರ ಕಲೆ ಹೆಚ್ಚು ಹೆಚ್ಚು ಕಲಾಪ್ರಿಯರನ್ನು ಸೇರಿ ಅವರ ಕಲೆ ವೃದ್ಧಿಸಲಿ ಎಂದು ಆಶಿಸುತ್ತಾ ಈ ಮಹಾನ್ ಕಲಾವಿದರಿಗೆ ಹುಟ್ಟುಹಬ್ಬದ ಆತ್ಮೀಯ ಶುಭ ಹಾರೈಕೆಗಳನ್ನು ಹೇಳೋಣ.
On the birth day of our great artiste and affectionate friend Mpm Natarajaiah Sir
ಕಾಮೆಂಟ್‌ಗಳು