ಅಮೆರಿಕದಲ್ಲಿ ಸೂರ್ಯನಮಸ್ಕಾರ ಅಭಿಯಾನ
ಅಮೆರಿಕದಲ್ಲಿ
ಸೂರ್ಯನಮಸ್ಕಾರ ಅಭಿಯಾನ
ಅಮೆರಿಕದಲ್ಲಿರುವ ಭಾರತೀಯ ಹೃನ್ಮನಗಳು ತಮ್ಮಲ್ಲಿ
ಅಂತರ್ಗತವಾಗಿರುವ ಭಾರತೀಯ ಸಾಂಸ್ಕೃತಿಕ
ಒಲವನ್ನು ನಿರಂತರವಾಗಿ ಕಂಡುಕೊಳ್ಳಲು
ಸ್ಥಾಪಿಸಿಕೊಂಡಿರುವ ಕೈಗನ್ನಡಿಯೋಪಾದಿಯ ಒಕ್ಕೂಟ ‘ಹಿಂದೂ ಸ್ವಯಂಸೇವಕ ಸಂಘ’. HSS ಎಂದು ಅಮೆರಿಕದಾದ್ಯಂತ ಪ್ರಸಿದ್ಧಿಗೊಂಡಿರುವ ಈ ಒಕ್ಕೂಟ
ನಡೆಸುತ್ತಿರುವ ಸಾಮೂಹಿಕ ಚಟುವಟಿಕೆಗಳು
ವೈವಿಧ್ಯಪೂರ್ಣವಾಗಿವೆ. ಈ
ಚಟುವಟಿಕೆಗಳಲ್ಲಿ ಪ್ರಮುಖವಾದುದು ಅಮೆರಿಕದಲ್ಲಿರುವ
ಭಾರತೀಯರನ್ನು ಮಾತ್ರವಲ್ಲದೆ ಅಮೆರಿಕದಲ್ಲಿರುವ
ವಿಶ್ವದೆಲ್ಲೆಡೆಯ ಜನಾಂಗವನ್ನು
ಆಕರ್ಷಿಸಿರುವ ‘ಸೂರ್ಯನಮಸ್ಕಾರ ಅಭಿಯಾನ’. ಈ ಒಕ್ಕೂಟವು ಕಳೆದ 9 ವರ್ಷಗಳಿಂದ ತಾನು ಕೈಗೊಂಡಿರುವ ‘ಸೂರ್ಯನಮಸ್ಕಾರ ಯಜ್ಞ’ದಲ್ಲಿ
ಅಸಂಖ್ಯಾತ ವಿಶ್ವಸಮೂಹವನ್ನು ಪಾಲ್ಗೊಳ್ಳುವಂತೆ ಮಾಡುತ್ತಿದೆ.
ನಮಗೆಲ್ಲ ತಿಳಿದಿರುವಂತೆ ಯೋಗ ಪದ್ಧತಿಯ
ಅನುಸರಣೆಯಲ್ಲಿರುವ ಆಸನಗಳ ಮುಖೇನ ಸೂರ್ಯದೇವನಿಗೆ ನಮಸ್ಕಾರಗಳನ್ನು ಸಲ್ಲಿಸುವುದೇ ಸೂರ್ಯನಮಸ್ಕಾರ.
ದೈಹಿಕವಾಗಿ ಆಸನಗಳ ಅನುಸರಣೆಯ ಜೊತೆಗೆ
ಸೂಕ್ತರೀತಿಯ ಉಸಿರಾಟವನ್ನೂ ಜೊತೆಗೂಡಿಸಿಕೊಂಡ ಈ ಯೋಗಕ್ರಿಯೆಯಿಂದ ಅಪಾರವಾದ ಲಾಭವಿದೆ ಎಂಬುದನ್ನು ಆಧುನಿಕ ವಿಜ್ಞಾನಯುಗ ಕೂಡಾ ಸರ್ವರೀತಿಯಲ್ಲಿ ಕಂಡುಕೊಂಡಿದೆ.
‘ಸೂರ್ಯನಮಸ್ಕಾರ’ದಂತಹ ಚಟುವಟಿಕೆಗಳನ್ನು
ಕೈಗೂಡಿಸುವುದು ಸೊನ್ನೆ ಡಿಗ್ರಿ ಹಾಗೂ ಅದಕ್ಕೂ
ಕಡಿಮೆ ಉಷ್ಣಾಂಶಯುಕ್ತ ಹಿಮಾವೃತ ಪ್ರದೇಶಗಳನ್ನೂ
ಒಳಗೊಂಡಂತೆ ವೈವಿಧ್ಯಮಯ ಹವಾಮಾನ ಯುಕ್ತ
ಅಮೆರಿಕದಂತಹ ಭೌಗೋಳಿಕವಾಗಿ ವಿಸ್ತೃತವಾದ ದೇಶದಲ್ಲಿ ಕೈಗೊಳ್ಳುವುದು ಅಷ್ಟು ಸುಲಭದ
ಮಾತಲ್ಲ. ಹೀಗಿದ್ದೂ ಅಮೆರಿಕದಾದ್ಯಂತ ವ್ಯಾಪಿಸಿರುವ ಹಿಂದೂ ಸ್ವಯಂಸೇವಕ ಸಂಘದ ಕಾರ್ಯಕರ್ತರು
ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಈ
ಒಕ್ಕೂಟವು ಕಳೆದ 9 ವರ್ಷಗಳಿಂದ ‘ಸೂರ್ಯನಮಸ್ಕಾರ’
ಯಜ್ಞವನ್ನು ಸರಿಸುಮಾರು ಜನವರಿ ತಿಂಗಳಲ್ಲಿ 2 ವಾರಗಳವರೆಗೆ ಅಮೆರಿಕದಾದ್ಯಂತ ನಡೆಸಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷದಲ್ಲಿ ಈ ಅಭಿಯಾನವು ಜನವರಿ 16ರಿಂದ
ಮೊದಲ್ಗೊಂಡಿದ್ದು ಜನವರಿ 31ರವರೆಗೆ
ನಡೆಯುತ್ತಿದೆ.
ಅಮೆರಿಕದಲ್ಲಿ ವ್ಯಾಪಿಸಿರುವ ಈ ಸೂರ್ಯನಮಸ್ಕಾರ ಅಭಿಯಾನದ ಬಗ್ಗೆ ನನಗೆ
ತಿಳಿದುಬಂದಿದ್ದು ಫೇಸ್ಬುಕ್ ಮೂಲಕ ನನಗೆ ಆತ್ಮೀಯರಾಗಿರುವ ಕನ್ನಡತಿ ಶ್ರೀಮಾಲಾ ಮೂರ್ತಿ
ಅವರಿಂದ. ಶ್ರೀಮಾಲಾ ಮೂರ್ತಿ ಅವರು ಅಮೆರಿಕದ
ಇಂಡಿಯಾನ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ‘ಸೂರ್ಯನಮಸ್ಕಾರ’ ಅಭಿಯಾನದ ಸಂಘಟನಾ ನೇತೃತ್ವವನ್ನು
ವಹಿಸಿದ್ದಾರೆ. ಇದಲ್ಲದೆ ಶ್ರೀಮಾಲಾ ಅವರು
ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಮಕ್ಕಳಲ್ಲಿ ಭಾರತೀಯ ಸಂಸ್ಕಾರಗಳನ್ನು ಜೀವಂತವಾಗಿರಿಸುವ ‘ಬಾಲ ಪ್ರಮುಖ್’
ಅಭಿಯಾನದ ಬಾಲಪ್ರಮುಖ ನೇತೃತ್ವವನ್ನೂ ಸಹಾ ಅತ್ಯಂತ ಅಕ್ಕರೆ ಹಾಗೂ ಆತ್ಮೀಯ ಸಾಂಸ್ಕೃತಿಕ
ಕಾಳಜಿಗಳಿಂದ ನಿರ್ವಹಿಸುತ್ತಿದ್ದಾರೆ. ಶ್ರೀಮಾಲಾ ಅವರು ಈ ನಿಟ್ಟಿನಲ್ಲಿ ನಡೆಸುತ್ತಿರುವ
ಭಾರತೀಯ ಹಬ್ಬಗಳ ಕಾರ್ಯಕ್ರಮಗಳಂತೂ
ಮನೆಸೂರೆಗೊಳ್ಳುವಂತಿವೆ. ಈ ನಿಟ್ಟಿನಲ್ಲಿ
ಈ ಲೇಖನಕ್ಕೆ ಸಂಬಂಧಿಸಿದಂತೆ ಸೂರ್ಯನಮಸ್ಕಾರಗಳ ಚಿತ್ರದ ಜೊತೆಯಲ್ಲಿ ಇತ್ತೀಚೆಗೆ ಅವರ
ನೇತೃತ್ವದಲ್ಲಿ ನಡೆಸಿದ ಸಂಕ್ರಾಂತಿ ಸಂಭ್ರಮದ ಚಿತ್ರವನ್ನೂ ಕ್ರೋಡೀಕರಿಸಿದ್ಧೇನೆ.
‘ಸೂರ್ಯನಮಸ್ಕಾರ’ದ ಅಭಿಯಾನ ಅಂದರೆ ಸಿಕ್ಕಸಿಕ್ಕವರಿಗೆಲ್ಲಾ
ಸೂರ್ಯನಮಸ್ಕಾರ ಮಾಡಿ ಎಂದು ಉಪನ್ಯಾಸ ಕೊಡುವುದು ಮಾತ್ರವೇ?. ಈ ನಿಟ್ಟಿನಲ್ಲಿ ಶ್ರೀಮಾಲಾ ಮೂರ್ತಿ, ಅವರ ಪತಿ ಉದಯ್
ಮೂರ್ತಿ ಮತ್ತು ಈ ದಂಪತಿಗಳ ಇಬ್ಬರು ಮಕ್ಕಳು, ಇತರರನ್ನು
ಪ್ರೆರೆಪಿಸುವ ಮೊದಲು ತಮ್ಮನ್ನು ತಾವೇ ಈ ಸೂರ್ಯನಮಸ್ಕಾರ ಪ್ರಕ್ರಿಯೆಯಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಅಪ್ಯಾಯಮಾನರಾಗಿ ನುಡಿಯುವ ಶ್ರೀಮಾಲಾ ಅವರು
ಹೀಗೆ ಹೇಳುತ್ತಾರೆ: “2009ರ ವರ್ಷದಲ್ಲಿ ನಮ್ಮ
ಮಕ್ಕಳು ಇನ್ನೂ 8 ವರ್ಷ ಮತ್ತು 4 ವರ್ಷದವರಿದ್ದಾಗಿನಿಂದ ಒಂದು ಕುಟುಂಬವಾಗಿ ನಮ್ಮ ನಾಲ್ಕು
ಜನರಿಂದ 2 ವಾರಗಳ ಅವಧಿಯಲ್ಲಿ ಸುಮಾರು
ಎನ್ನಬಹುದಾದ 500 ಸೂರ್ಯನಮಸ್ಕಾರಗಳ ಗುರಿಯನ್ನು ಹಾಕಿಕೊಂಡೆವು. ನಂತರದಲ್ಲಿ ಪ್ರತೀವರ್ಷವೂ ನಾವು ನಮ್ಮ
ಮಕ್ಕಳನ್ನು ಕ್ರಮೇಣವಾಗಿ ಇದನ್ನು ವಿಸ್ತರಿಸಲು
ಪ್ರೇರೇಪಿಸುತ್ತಾ ಬಂದಿದ್ದೇವೆ. 2014ರ
ವರ್ಷದಲ್ಲಿ ನನ್ನ ಮಗ ಆತ್ರೇಯ ಎರಡು ವಾರಗಳಲ್ಲಿ 1008
ಸೂರ್ಯನಮಸ್ಕಾರಗಳ ಗುರಿಯನ್ನು
ಹೊಂದಿದ್ದ. ಅದರಲ್ಲಿ ಅವನಿಗೆಷ್ಟೊಂದು ಆಸ್ಥೆ
ಹುಟ್ಟಿತೆಂದರೆ 2016 ಸೂರ್ಯನಮಸ್ಕಾರಗಳನ್ನು
ಪೂರೈಸಿದ. ಮುಂದೆ 2015ರ ವರ್ಷದಲ್ಲಿ
4021 ಸೂರ್ಯನಮಸ್ಕಾರಗಳನ್ನು ಮಾಡಿದ. ಈ
ವರ್ಷದಲ್ಲಿ ದಿನಕ್ಕೆ 24 ಪೂರ್ಣ ಸೂರ್ಯನಮಸ್ಕಾರಗಳಂತೆ (24 x 13) ಒಟ್ಟು 6000
ಸೂರ್ಯನಮಸ್ಕಾರಗಳತ್ತ ತನ್ನ ಮುನ್ನಡಿಯಿರಿಸಿದ್ದಾನೆ. ವೈಯಕ್ತಿಕವಾಗಿ ನನಗಂತೂ ಇದೊಂದು ಉಲ್ಲಾಸಕರ ಅನುಭವದಂತಿದೆ. ಅದರಲ್ಲೂ ಹೊರಗಡೆ ಸೊನ್ನೆ ಡಿಗ್ರಿ ಉಷಾಂಶದ
ವಾತಾವರಣದಲ್ಲಿರುವ ನಮಗೆ ಇದೊಂದು ವಿಸ್ಮಯಕಾರಿ ಅನುಭವದಂತಿದೆ. ನನ್ನಿಬ್ಬರು ಮಕ್ಕಳೂ ಬೆಳಿಗ್ಗೆ 6.50ಕ್ಕೆ ಶಾಲಾ ಬಸ್
ಬರುವ ವೇಳೆಗೆ ಮುಂಚಿತವಾಗಿಯೇ ತಮ್ಮ ಉಳಿದ
ದಿನಚರಿಗಳ ಮಧ್ಯದಲ್ಲಿ ಕಡೇ ಪಕ್ಷ ಎರಡು ಪೂರ್ಣ
ಸುತ್ತು (ಒಟ್ಟು 26) ಸೂರ್ಯನಮಸ್ಕಾರಗಳನ್ನು
ಅತ್ಯಂತ ಪ್ರೀತಿಯಿಂದ ಪೂರೈಸಿ ದೈನಂದಿನದಲ್ಲಿ ಉತ್ಸಾಹಿಗಳಾಗಿ ಕಾಣುತ್ತಿದ್ದಾರೆ. ತಮ್ಮ 83ನೇ ವಯಸ್ಸಿನಲ್ಲೂ ಪ್ರತಿದಿನ 108 ಸೂರ್ಯನಮಸ್ಕಾರಗಳನ್ನು
ಮಾಡುತ್ತಿರುವ ನಮ್ಮ ತಂದೆಯವರೇ ನಮಗೆಲ್ಲಾ ಸ್ಫೂರ್ತಿ”.
ಹೀಗೆ ಶ್ರೀಮಾಲಾ ಅವರು ಸೂರ್ಯನಮಸ್ಕಾರ ಪ್ರಕ್ರಿಯೆಯ ಬಗ್ಗೆ ಅತ್ಯಂತ ಆಪ್ತತೆ ಹೊಂದಿದವರಾಗಿ ಮಾತನಾಡುತ್ತಾರೆ.
ತಾವು ಅನುಭಾವಿಸುತ್ತಿರುವ ಸೂರ್ಯನಮಸ್ಕಾರದ ಚೈತನ್ಯ ಎಲ್ಲೆಡೆ ವ್ಯಾಪಿಸಬೇಕು ಎಂಬ ತಮ್ಮ
ಹಾಗೂ ತಾವು ಪ್ರತಿನಿಧಿಸುತ್ತಿರುವ ಅಮೆರಿಕದಲ್ಲಿನ ಹಿಂದೂ ಸ್ವಯಂಸೇವಕ ಸಂಘದ ಆಶಯ ಎಂದು
ಕಂಡುಕೊಂಡಿರುವ ಶ್ರೀಮಾಲಾ ಮೂರ್ತಿ ಅವರು ಪ್ರತಿವರ್ಷ ಹೆಚ್ಚು ಹೆಚ್ಚು ಜನರನ್ನು ಈ ನಿಟ್ಟಿನಲ್ಲಿ
ನಿರಂತರವಾಗಿ ಪ್ರೇರೇಪಿಸುತ್ತಾ ಸಾಗಿದ್ದಾರೆ.
ಅದಕ್ಕಾಗಿ ಅವರು ಯೋಗ ಶಾಲೆಗಳು, ಎಲ್ಲಾ
ಜನಾಂಗಗಳನ್ನೂ ಒಳಗೊಂಡ ತಮ್ಮ ಸಹೋದ್ಯೋಗಿಗಳು, ದೇಗುಲಗಳು, ಸ್ಥಳೀಯವಾಗಿರುವ ಭಾರತೀಯ ಅಂಗಡಿಗಳು,
ಭಾರತೀಯ ಸಮುದಾಯದ ವಿವಿಧ ಸಂಘಟನೆಗಳು ಹಾಗೂ
ಅವುಗಳ ಅಂಗ ಸಂಸ್ಥೆಗಳು ಹೀಗೆ ಎಲ್ಲರನ್ನೂ ಸಂಪರ್ಕಿಸುತ್ತಾರೆ. 2014ರ ವರ್ಷದಲ್ಲಿ ಶ್ರೀಮಾಲಾ ಅವರು ಕ್ರಿಯಾಶೀಲರಾಗಿರುವ ಇಂಡಿಯಾನಾ
ವಿಭಾಗದಲ್ಲೇ 4 ರಿಂದ 80 ವರ್ಷ ವಯೋಮಾನದ ಸುಮಾರು ನೂರು ಜನ ಭಾಗವಹಿಸಿದ್ದರು. ಇದೇ ರೀತಿ ಸಮೀಪದ ದಕ್ಷಿಣ ಪ್ರಾಂತ್ಯವಾದ
ಇಂಡಿಯಾನಪೊಲಿಸ್ ವಿಭಾಗದಲ್ಲೂ ಬಹಳಷ್ಟು ಸಂಖ್ಯೆಯಲ್ಲಿ ಸೂರ್ಯನಮಸ್ಕಾರ ಅಭಿಯಾನದಲ್ಲಿ
ಪಾಲ್ಗೊಂಡಿದ್ದರು. ಇಂಡಿಯಾನಾ ವಿಭಾದಗಲ್ಲಿ
ಪಾಲ್ಗೊಂಡವರಲ್ಲಿ ಕ್ಯಾನ್ಸರಿನಿಂದ ಉಳಿದುಕೊಂಡ
ಮಹಿಳೆ ಸಹಾ ಇದ್ದರು. ಆ ಮಹಿಳೆ “ಸೂರ್ಯನಮಸ್ಕಾರ
ಪ್ರಾರಂಭಿಸಿದ ಮೇಲೆ ನನ್ನ ದೇಹಸ್ಥಿತಿಯಲ್ಲಿ ಆದ ಬದಲಾವಣೆಯಿಂದ ತಮ್ಮ ವೈದ್ಯರುಗಳೇ ಆಶ್ಚರ್ಯಚಕಿತರಾಗಿದ್ದಾರೆ” ಎಂದು ನುಡಿದರು
ಎನ್ನುತ್ತಾರೆ ಶ್ರೀಮಾಲಾ.
2015ರ ವರ್ಷದಲ್ಲಿ ಇಂಡಿಯಾನಾ ಪ್ರಾಂತ್ಯದಲ್ಲಿ ಏರ್ಪಟ್ಟ ‘ಯೋಗಾಥಾನ್(Yogathon)’
ಕಾರ್ಯಕ್ರಮದಲ್ಲಿ ಸುಮಾರು 95 ಮಂದಿ ಒಟ್ಟುಗೂಡಿದ್ದರು.
ಈ ಕಾರ್ಯಕ್ರಮದಲ್ಲಿ ಸಾಮೂಹಿಕ ಸೂರ್ಯನಮಸ್ಕಾರದ ಜೊತೆಗೆ ಆಹ್ವಾನಿತ ವಿಶೇಷ
ಅತಿಥಿಗಳಿಂದ ಯೋಗ ಮತ್ತು ಸೂರ್ಯನಮಸ್ಕಾರಗಳ
ಮಹತ್ವದ ತಿಳುವಳಿಕೆಯ ಕಾರ್ಯಕ್ರಮಗಳನ್ನು ಸಹಾ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಸ್ತ್ರಚಿಕೆತ್ಸೆಗಳಿಗೂ
ಒಳಗಾಗಿದ್ದ 75 ವರ್ಷದ ಮಹಿಳೆಯೋರ್ವರು ನಿರಂತರವಾಗಿ 169 (13 x 13) ಸೂರ್ಯನಮಸ್ಕಾರಗಳನ್ನು
ಮಾಡಿ ಸಮಸ್ತರನ್ನೂ ದಂಗುಬಡಿಸಿದರು.
ಪ್ರಸಕ್ತವರ್ಷದಲ್ಲಿ ಜನವರಿ 16ರಿಂದ ಜನವರಿ 31ರವರೆಗೆ ಹಮ್ಮಿಕೊಳ್ಳಲಾಗಿರುವ ಸೂರ್ಯನಮಸ್ಕಾರದ ಅಭಿಯಾನದ ಸಮಾರೋಪದ ಸಮಾರಂಭದಲ್ಲಿಯೂ
ಉತ್ಸಾಹಪೂರ್ಣ ಜನಸ್ಪಂದನೆ ದೊರಕುತ್ತದೆ ಎಂಬ ನಂಬುಗೆ ಶ್ರೀಮಾಲಾ ಅವರಲ್ಲಿದೆ.
ಈ ಹಿಂದೆ ನೇರ ಭಾಗವಹಿಕೆಯ ಸೂರ್ಯನಮಸ್ಕಾರ ಕಾರ್ಯಕ್ರಮಗಳೇ ಅಲ್ಲದೆ ‘ಲೆಹರ್’
(ಸೂರ್ಯನಮಸ್ಕಾರದ ಅಲೆ) ಎಂಬ ಚಿಂತನಾತ್ಮಕ ಸ್ವರೂಪದಲ್ಲಿ ‘ಸಹಾ ಸೂರ್ಯನಮಸ್ಕಾರ ಯಜ್ಞ’ವನ್ನು
ನಡೆಸಲಾಗಿತ್ತು. ಈ ಕಾರ್ಯಕ್ರಮದನ್ವಯ ಸಮಸ್ತ ಅಮೆರಿಕದಲ್ಲಿ ಆಸಕ್ತರಿಗೆ ಬೆಳಿಗ್ಗೆ 8ರಿಂದ
10ಗಂಟೆಯ ಸಮಯನೀಡಿ ಅವರಿಗೆ ಅನುಕೂಲವಾದ ಸ್ಥಳದಲ್ಲಿ ಅಂದರೆ ಮನೆಯಿರಬಹುದು, ಅಕ್ಕಪಕ್ಕದ
ಆಸುಪಾಸಿನ ಆವರಣಗಳಲ್ಲಿರಬಹುದು, ಹಿಂದೂ
ಸ್ವಯಂಸೇವಾಸಂಘದ ಶಾಖೆಗಳಲ್ಲಿರಬಹುದು, ಅಥವಾ ಯಾವುದೇ ಸಾರ್ವಜನಿಕ ಸ್ಥಳವಿರಬಹುದು ಹೀಗೆ ಅನುಕೂಲವಾದ
ಸ್ಥಳದಲ್ಲಿ ಎರಡು ಗಂಟೆಗಳ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೂರ್ಯನಮಸ್ಕಾರಗಳನ್ನು
ಕೈಗೊಳ್ಳುವ ಪ್ರೇರೇಪಣೆಯನ್ನು ಜನಸಮುದಾಯಕ್ಕೆ
ನೀಡಲಾಗಿತ್ತು. ಅಮೆರಿಕದಾದ್ಯಂತ ಜನ ಈ ಕಾರ್ಯಕ್ರಮದಲ್ಲಿ ಉತ್ಸಾಹಿಗಳಾಗಿ
ಭಾಗವಹಿಸಿದ್ದರು.
ಹೀಗೆ ಈ ‘ಸೂರ್ಯನಮಸ್ಕಾರ’ ಅಭಿಯಾನದಲ್ಲಿ ವಾರ್ಷಿಕವಾಗಿ ಒಂದು ಮಿಲಿಯನ್ (ದಶಲಕ್ಷ) ಸೂರ್ಯನಮಸ್ಕಾರಗಳನ್ನು
ಸಾಧಿಸುವ ಗುರಿಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದಲ್ಲಿ ಈಗಾಗಲೇ (ಇನ್ನೂ ಎರಡು ದಿನಗಳು ಬಾಕಿ
ಇರುವಂತೆಯೇ) ಈ ಸಂಖ್ಯೆ ಒಂದು ಮಿಲಿಯನ್ ಹದಿನೆಂಟು ಸಾವಿರವನ್ನು ದಾಟಿದೆ. ಶ್ರೀಮಾಲಾ ಅವರ ಪರಿಧಿಯಲ್ಲಿರುವ ಇಂಡಿಯಾನಾ ರಾಜ್ಯದ
ಪರಿಧಿಯಿಂದ ಇಪ್ಪತ್ತು ಸಾವಿರ ಸೂರ್ಯನಮಸ್ಕಾರಗಳ
ಗುರಿಯಿದ್ದು ಈ ಸಂಖ್ಯೆಯ ಗಡಿಯನ್ನು ಸಹಾ ಈಗಾಗಲೇ ಸಮೀಪಿಸಿದ್ದು ಮುಂದಿನ ಎರಡು ದಿನಗಳ
ವಾರಾಂತ್ಯದ ಕಾರ್ಯಕ್ರಮಗಳ ನಿಟ್ಟಿನಿಂದ ಈ ಸಂಖ್ಯೆ ಬಹಳಷ್ಟು ಹೆಚ್ಚುವ ಸೂಚನೆಗಳು ಸ್ಪಷ್ಟವಾಗಿವೆ.
ಹೀಗೆ ಎಲ್ಲೇ ಇದ್ದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿರಿಸಿರಲು ಅನನ್ಯ ಕಾಳಜಿ
ವಹಿಸಿರುವ ಹಿಂದೂ ಸ್ವಯಂಸೇವಕ ಸಂಘದಂತ
ಒಕ್ಕೂಟಗಳಿಗೂ , ಆ ಒಕ್ಕೂಟದಲ್ಲಿ ಅಪಾರ ಪ್ರೀತಿ ಉತ್ಸಾಹಗಳಿಂದ ಸಂಘಟನಾ ಕಾರ್ಯದಲ್ಲಿ ತೊಡಗಿರುವ
ಶ್ರೀಮಾಲಾ ಮೂರ್ತಿ ಅವರಂತಹ ನಿಷ್ಠಾವಂತ ಸಂಘಟಕರಿಗೂ ಹಾಗೂ ಇಂತಹ ಕಾರ್ಯಕ್ರಮಗಳಿಗೆ ಜೊತೆಗೂಡುವ
ಅಸಂಖ್ಯಾತ ಹೃನ್ಮನಗಳಿಗೂ ಅಭಿನಂದನೆಗಳನ್ನು
ಹೇಳೋಣ, ಜೊತೆಗೆ ಇಂತಹ ಕಾರ್ಯಗಳು ನಿರಂತರ ಯಶಸ್ಸು ಕಾಣುತ್ತಿರಲಿ ಎಂದು ಆಶಿಸೋಣ, ಸರ್ವರಿಗೂ
ಇಂತಹ ಕಾರ್ಯಕ್ರಮಗಳ ಲಾಭ ದೊರಕಲಿ ಎಂದು ಹಾರೈಸೋಣ.
‘ವಸುದೈವ ಕುಟುಂಬಕಂ’ ಎಂಬ ವಿಶ್ವವೆಲ್ಲಾ
ಒಂದೇ ಕುಟುಂಬ ಎಂಬ ನಮ್ಮ ಭಾರತೀಯ
ಶ್ರೇಷ್ಠಕಲ್ಪನೆ ಸಾಕಾರಗೊಳ್ಳಲು ಇಂತಹ ಶ್ರೇಷ್ಠ ಕಾಯಕಗಳು ನಿರಂತರವಾಗಿ ನಡೆಯುತ್ತಿರಲಿ
ಎಂಬುದು ನಮ್ಮೆಲ್ಲರ ಹೃದಯಪೂರ್ವಕ ಆಶಯ.
ಹೆಚ್ಚಿನ ವಿವರಗಳು ಇಲ್ಲಿವೆ : www.hssus.org
Tag: Yogathon, Surya Namaskara, Sreemala Murthy
ಕಾಮೆಂಟ್‌ಗಳು