1983ರ ಜೂನ್ 25ರಂದು ವಿಶ್ವಕಪ್ ಗೆದ್ದಾಗ
1983ರ
ಜೂನ್ 25ರಂದು ವಿಶ್ವಕಪ್ ಗೆದ್ದಾಗ
ಆಗ ನಾವೆಲ್ಲಾ ರೇಡಿಯೋ ಕ್ರಿಕೆಟ್ ಕಾಮೆಂಟರಿ ಕೇಳಿ ಬೆಳೆದವರು. ಆ ಹಿಂದೆ ಒಂದು ವರ್ಲ್ಡ್ ಕಪ್ ಮ್ಯಾಚಿನಲ್ಲಿ ಸುನಿಲ್ ಗಾವಸ್ಕರ್ ಅರವತ್ತು ಓವರ್ ಆಡಿ 36ರನ್ನು ಗಳಿಸಿ ಡ್ರಾ ಮಾಡಿಕೊಳ್ಳಲು ಆಡಿದ ಮೇಲೆ, ಇನ್ನೂ ಮಾನ ಮರ್ಯಾದೆ ಇಲ್ದೆ ಕ್ರಿಕೆಟ್ ಕೇಳ್ತೀರಲ್ರೋ ಅಂತ ಬಹಳಷ್ಟು ಕ್ರಿಕೆಟ್ ವೈರಾಗಿಗಳು ನಮ್ಮನ್ನು ನೋಡಿ ಅಪಹಾಸ್ಯ ಮಾಡ್ತಾ ಇದ್ರು.
1983ರಲ್ಲಿ ಭಾರತ ವಿಶ್ವಕಪ್ ಆಡಲಿಕ್ಕೆ ಹೋದಾಗ ಅಲ್ಲಿದ್ದವರೆಲ್ಲಾ ಹೊಸಬರು. ನಮ್ಮ ರೋಜರ್ ಬಿನ್ನಿ, ಕಿರ್ಮಾನಿ, ಮದನ್ ಲಾಲ್, ಶ್ರೀಕಾಂತ್, ಮೊಹಿಂದರ್ ಅಮರನಾಥ್ ಅಂತಹ ಹಲವರು ಅಂದಿನ ದಿನದ ಪಡ್ಡೆ ಹುಡುಗರು, ಇದ್ದ ಹಳಬನೆಂದರೆ ಹಳೆ ಚರಿತ್ರೆಯ ಜೊತೆಗೆ ನಾಯಕತ್ವ ಕಳೆದುಕೊಂಡು ಗುರ್ ಅನ್ನುತ್ತಿದ್ದ ಗಾವಸ್ಕಾರ್. ನಾಯಕನಾಗಿದ್ದವ ಯುವಕ ಕಪಿಲ್. ಅಲ್ಲಿ ಹಿಂದಿನ ವರ್ಷಗಳಲ್ಲಿ ಕ್ರಿಕೆಟ್ಟಿನಲ್ಲಿ ಸ್ವಲ್ಪ ಹೆಸರು ಉಳಿಸಿದ್ದ ಪಟೌಡಿ, ಜಿ. ಆರ್. ವಿಶ್ವನಾಥ್, ನಾಲ್ಕು ಜನ ಸ್ಪಿನ್ನರ್ಸ್ ಇವರ್ಯಾರೂ ಇರಲಿಲ್ಲ. ಹೀಗಾಗಿ ನಮಗೆ ಹೇಗಿದ್ರೂ ಟಿವಿಯಲ್ಲಿ ಬರ್ತಾ ಇದೆಯೆಲ್ಲಾ ಎಷ್ಟಾಗುತ್ತೋ ಅಷ್ಟು ನೋಡೋಣ ಎಂಬ ಚಪಲ ಬಿಟ್ಟು ಯಾವುದೇ ನಿರೀಕ್ಷೆ ಭರವಸೆಗಳೂ ಇರಲಿಲ್ಲ.
ನಮ್ಮ ಹುಡುಗ್ರು ನೋಡಿದ್ರೆ ಅಂದಿನ ದಿನದ ಬಲಾಡ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡವನ್ನೆಲ್ಲಾ ಸೋಲಿಸಿಬಿಟ್ರು. ಜಿಂಬಾವೇ ಮೇಲೆ 20ಕ್ಕೆ ಐದು ವಿಕೆಟ್ ಕಳೆದುಕೊಂಡು ಇನ್ನೇನು ಸೋಲ್ತಾರೆ, ನೋಡೋಣಾ ಅಂದ್ರೆ ಆ ಮ್ಯಾಚು ಟಿ.ವಿ ರಿಲೇ ಇಲ್ಲದ ಜಾಗದಲ್ಲಿ ಬೇರೆ ನಡೀತಾ ಇದೆ. ಆಮೇಲೆ ನೋಡಿದ್ರೆ ಕಪಿಲ್ 175ರನ್ನು ಹೊಡೆದು ಭಾರತವನ್ನು ಗೆಲ್ಲಿಸಿಬಿಟ್ಟಿದ್ದ.
ಫೈನಲ್ ಪಂದ್ಯದಲ್ಲಿ ಭಾರತ ಕಡಿಮೆ ಮೊತ್ತಕ್ಕೆ ಔಟಾದಾಗ ಕಾಮೆಂಟರೀ ಹೇಳ್ತಾ ಇದ್ದ, ಟೋನಿ ಕೋಸಿಯರ್, ರಿಚಿ ಬೆನಾಡ್ ನಿರ್ಣಯ ಕೊಟ್ಟೇಬಿಟ್ರು. ಈ ರನ್ನು ವೆಸ್ಟ್ ಇಂಡೀಜ್ ನವರಿಗೆ ಯಾವ ಮೂಲೆ, ಬಡಿದು ಬಿಸಾಕ್ತಾರೆ ನೋಡ್ತಾ ಇರಿ ಅಂತ!.
ನೋಡಿದ್ರೆ ಮೊದಲು ಬಂದ ವೆಸ್ಟ್ ಇಂಡೀಜ್ ಆಟಗಾರರು ಒಬ್ಬರಾದ ಮೇಲೆ ಒಬ್ರು ವಾಪಸ್ಸು ಹೋಗೋಕೆ ಪ್ರಾರಂಭ ಮಾಡಿದ್ರು. ಆದ್ರೆ, ಶಾಂತ ಮುಖದ ರಾಕ್ಷಸ ಶರೀರದ ಸುಲೋಚನದಾರಿ ಕ್ಲೈವ್ ಲಾಯ್ಡ್ ಮತ್ತು ಚೂಯಿಂಗ್ ಗಮ್ ಅನ್ನು ರಪ್ ರಪ್ ಅಂತ ಅಗೀತಾ, ನನ್ಮಕ್ಳ ನಿಮ್ಮನ್ನ ತುಂಡು ತುಂಡು ಮಾಡ್ತೀನಿ ಅಂತ ರಪ್ ರಪ್ ಅಂತ ಬೀಸ್ತಾ ಇದ್ದ ರಿಚರ್ಡ್ಸ್ ಮುಂದೆ ಇದೆಲ್ಲಾ ಯಾವ ಲೆಕ್ಕ ಅಂತ ದಿಗಿಲು!
ಆದ್ರೆ ನಮ್ಮ ಪುಟ್ಟ ಹುಡುಗರು ಅದೆಂತ ಮೋಡಿ ಮಾಡಿಬಿಟ್ರು. ಅತೀ ಸಾಧಾರಣವಾದರೂ ಅದೆಷ್ಟು ಚುರುಕಿನ ಬೌಲಿಂಗು, ಅಥ್ಲೆಟ್ಸ್ ಅಲ್ಲದಿದ್ರೂ ಪ್ರಾಣಬಿಟ್ಟು ಮಾಡಿದಂತ ಫೀಲ್ಡಿಂಗು, ಕೊನೆಯ ವಿಕೆಟ್ ಬೀಳಿಸಿದಾಗ ಕುಣಿದು ಕುಪ್ಪಳಿಸಿ ದೇಶವನ್ನೂ ಕುಣಿದು ಕುಪ್ಪಳಿಸುವಂತೆ ಮಾಡಿದ ಆ ಮುಗ್ಧಮಕ್ಕಳ ಮನೋಭಾವ ಅವಿಸ್ಮರಣೀಯ. ಮೊದಮೊದಲು ಸ್ವಪ್ರತಿಷ್ಠೆ, ಬಂಡುಕೋರತನದಲ್ಲಿ ಆಚೆ ಈಚೆ ನೋಡುತ್ತಿದ್ದ ಗಾವಸ್ಕರ್ ಕೂಡಾ ತಂಡ ಮನೋಭಾವನೆ ತೋರಿ ಎಲ್ಲರಲ್ಲೊಂದಾಗಿ ಆಡತೊಡಗಿದರು. ಒಟ್ಟಿನಲ್ಲಿ ಇಂದು ಈ ಕತೆಯನ್ನು ನೆನೆದರೆ ಶಾರುಕ್ ಖಾನನ ಯಶ ಗಳಿಸಿದ ಯಶ್ ಚೋಪ್ರಾ ಚಿತ್ರ 'ಚಕ್ ದೇ ಇಂಡೀಯಾ'ದ ಸತ್ಯ ಕತೆಯದು.
ಅಂದಿನ ದಿನದಲ್ಲಿ ನಾವು ವಿಶ್ವದಲ್ಲಿ ಎಲ್ಲೋ ಕುಬ್ಜರು ಎಂದು ಬದುಕುತ್ತಿದ್ದ ನಮಗೆ ನಾವೂ ತಲೆ ಎತ್ತಿ ನಿಲ್ಲಬೇಕು ಎಂಬ ಯಾವುದೋ ವಾಂಛೆಯನ್ನು ಈ ಘಟನೆ ಪ್ರೇರೇಪಿಸುತ್ತಾ ಇತ್ತು.
ರಾಮಾಯಣ ಕತೆಯಲ್ಲಿನ ಒಂದು ಮಾತು ನೆನೆಪಿಗೆ ಬರುತ್ತೆ. ರಾಮನ ಸೈನ್ಯ ರಾವಣನ ಸೈನ್ಯಕ್ಕೆ ಹೋಲಿಸಿದರೆ ತುಂಬಾ ಚಿಕ್ಕದಾಗಿತ್ತಂತೆ. ಆದರೆ "ಉತ್ಸಾಹವೂ ಚೈತನ್ಯವೂ ಉಳ್ಳಂತಹ ಸೇನೆ ಎಷ್ಟೇ ಚಿಕ್ಕದಾಗಿದ್ದರೂ ಮಹತ್ವದ್ದನ್ನು ಸಾಧಿಸಬಲ್ಲದು. ಹುಲ್ಲುಕಡ್ಡಿಗಳಿಂದ ಮಾಡಿದ ಒಂದು ಹಗ್ಗ ಆನೆಯನ್ನೇ ಬಂಧಿಸಬಲ್ಲದು" ಅಂತ. 1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ತಂಡ ನಮ್ಮ ಕಾಲದವರಿಗಂತೂ ನಮ್ಮ ಜೀವಮಾನದ ಒಂದು ಮಹತ್ವದ ಘಟನೆ.
Tag: When India won its first world cup in Cricket on 25th June 1983.
ಕಾಮೆಂಟ್‌ಗಳು