ಪ್ರೇಮಾ ಕಾರಂತ
ಪ್ರೇಮಾ ಕಾರಂತ
ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರು ಪ್ರೇಮಾ ಕಾರಂತರು. ಪ್ರೇಮಾ ಕಾರಂತರು ತಾವು ನಿರ್ದೇಶಿಸಿದ (ಎಂ. ಕೆ. ಇಂದಿರಾ ಅವರ ಕಾದಂಬರಿ ಆಧಾರಿತ) ಚಿತ್ರವಾದ ಫಣಿಯಮ್ಮ ಹಾಗೂ ರಂಗಭೂಮಿಗೆ ಸಲ್ಲಿಸಿದ ಅತ್ಯಮೂಲ್ಯ ಕೊಡುಗೆಗಳಿಂದ ನಾಡಿನ ಜನರ ಮನಸ್ಸಿನಲ್ಲಿ ಹಸುರಾಗುಳಿದಿದ್ದಾರೆ.
ಪ್ರೇಮಾ ಅವರು 1936ರ ಆಗಸ್ಟ್ 15ರಂದು ಭದ್ರಾವತಿಯಲ್ಲಿ ಜನಿಸಿದರು. ತಂದೆ ದೇವೋಜಿ ರಾವ್. ತಾಯಿ ಕಮಲಮ್ಮ. ತಂದೆ ತಾಯಂದಿರನ್ನು ಬಾಲ್ಯದಲ್ಲೇ ಕಳೆದುಕೊಂಡ ಪ್ರೇಮಾ, ತಮ್ಮ ಅಜ್ಜಿ ತಾತಂದಿರ ಪೋಷಣೆಯಲ್ಲಿ ಕೋಲಾರದ ಶಿಡ್ಲಘಟ್ಟದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದರು. ಮುಂದೆ ಬೆಂಗಳೂರಿನ ಸೇಂಟ್ ತೆರೇಸಾ ಕಾನ್ವೆಂಟಿನಲ್ಲಿ ಶಿಕ್ಷಕ ತರಬೇತಿ ಪೂರೈಸಿ, ಅದೇ ಸಂಸ್ಥೆಯ ಪ್ರೈಮರಿ ಶಾಲೆಯ ಮಕ್ಕಳಿಗೆ ಶಿಕ್ಷಕಿಯಾದರು. ಈ ಸಂದರ್ಭದಲ್ಲಿ ಅವರು ಸಣ್ಣ ಸಣ್ಣ ನಾಟಕಗಳನ್ನು ಮಕ್ಕಳಿಗಾಗಿ ಮೂಡಿಸತೊಡಗಿದರು.
ಪ್ರೇಮಾ ಮತ್ತು ಬಿ. ವಿ. ಕಾರಂತರ ಪ್ರೇಮವಿವಾಹ 1958ರ ವರ್ಷದಲ್ಲಿ ಆರ್ಯ ಸಮಾಜದ ಪದ್ಧತಿಯಲ್ಲಿ ಜರುಗಿತು. ಮುಂದೆ ಈ ದಂಪತಿಗಳು ವಾರಣಾಸಿಯಲ್ಲಿ ತಮ್ಮ ಜೀವನವನ್ನು ನಡೆಸತೊಡಗಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರೇಮಾ ಕಾರಂತರ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಯಿತು. ಮುಂದೆ ಬಿ. ವಿ. ಕಾರಂತರು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದ ಸಂಧರ್ಭದಲ್ಲಿ ಪ್ರೇಮಾ ಅವರು ಅರವಿಂದರ ಆಶ್ರಮದಲ್ಲಿ ಶಿಕ್ಷಕಿಯಾದರು. ನಾಟಕ ಪ್ರಿಯರಾದ ಅವರು ಚರಿತ್ರೆ ಮತ್ತು ಗಣಿತದಂತಹ ಶೈಕ್ಷಣಿಕ ವಿಷಯಗಳನ್ನು ಸಹಾ ನಾಟಕಗಳ ಮೂಲಕ ಮಕ್ಕಳಲ್ಲಿ ಪ್ರೀತಿ ಹುಟ್ಟುವಂತೆ ಭೋಧಿಸುವ ಪ್ರಯೋಗಗಳನ್ನು ನಡೆಸಿದರು. ಮುಂದೆ ಬಿ.ವಿ. ಕಾರಂತರ ಒತ್ತಾಸೆಯ ಮೇರೆಗೆ ಪ್ರೇಮಾ ಕಾರಂತರೂ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ ಪದವಿ ಪಡೆದರು. ಓಂ ಪುರಿ, ಸಾಯಿ ಪರಾಂಜಪೆ ಮುಂತಾದವರು ಅವರ ಸಹಪಾಠಿಗಳಾಗಿದ್ದರು. ಪದವಿಯ ನಂತರದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ರೆಪರ್ಟರಿಯಲ್ಲಿ ಎರಡು ವರ್ಷ ಶಿಕ್ಷಕಿಯಾಗಿ ದುಡಿದರು.
ಪ್ರೇಮಾ ಕಾರಂತರು ಮೊದಮೊದಲಿಗೆ ಹೆಡ್ಡಾಯಣ, ದೈತ್ಯ, ಬಂದ ಬಂದ ಗುಣವಂತ, ಜಿಯಂಟ್ ಮಾಮಾ, ನಕ್ಕಳಾ ರಾಜಕುಮಾರಿ, ಶೆಟ್ಟಿ ಕಥೆ, ನಿರುಪಮಾ ಮುಂತಾದ ಲವಲವಿಕೆಯ ಮಕ್ಕಳ ನಾಟಕ ಪ್ರಯೋಗಗಳನ್ನು ಮಾಡಿದರು. ಮಕ್ಕಳಿಗಾಗಿ ಬೆನಕ ಮಕ್ಕಳ ಕೇಂದ್ರ ಎಂಬ ರೆಪರ್ಟರಿ ಆರಂಭಿಸಿದ ಅವರು ಮಕ್ಕಳಿಗೆ ರಂಗಕಲೆಗಳನ್ನು ಬೋಧಿಸುವ ವಿಶಿಷ್ಟ ಹೆಜ್ಜೆಯನ್ನಿಟ್ಟರು. ಈ ರೆಪರ್ಟರಿ 1979ರ ವರ್ಷದಲ್ಲಿ ‘ಅಳಿಲು ರಾಮಾಯಣ’ ಎಂಬ ಪ್ರಥಮ ಪ್ರದರ್ಶನವನ್ನು ನೀಡಿತು. ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಎನಿಸಿದ್ದ ಪ್ರೇಮಾ ಕಾರಂತರು ಹಯವದನ, ಈಡಿಪಸ್, ಒಥೆಲೋ, ಕಿಂಗ್ ಲಿಯರ್, ಜೋಕುಮಾರಸ್ವಾಮಿ, ಸಂಕ್ರಾಂತಿ, ಮ್ಯಾಕ್‍ಬೆತ್ ಮುಂತಾದ ಪ್ರಸಿದ್ಧ ನಾಟಕಗಳನ್ನೂ ಒಳಗೊಂಡಂತೆ 120ಕ್ಕೂ ಹೆಚ್ಚು ನಾಟಕಗಳಲ್ಲಿ ರಂಗವಿನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಕೇವಲ ಕನ್ನಡವಷ್ಟೇ ಅಲ್ಲದೆ ಪಂಜಾಂಬಿಯ ಧರ್ತಿ ದೇಶ್ ಪಂಜಾಬ್ ದಿ, ಹಿಂದಿಯ ಚಂದ್ರಗುಪ್ತ, ಸ್ಕಂದ ಗುಪ್ತ ಮುಂತಾದ ಅನೇಕ ನಾಟಕಗಳಿಗೂ ಅವರ ಪ್ರತಿಭೆ ಸಂದಿತು. ಪ್ರೇಮಾ ಕಾರಂತರು ತಾವು ದೇಶದಾದ್ಯಂತ ನಡೆಸಿದ ರಂಗ ಕಮ್ಮಟಗಳಿಂದಲೂ ಪ್ರಸಿದ್ಧರಾಗಿದ್ದರು.
ಜಿ. ವಿ. ಅಯ್ಯರ್ ಅವರ ಪ್ರಸಿದ್ಧ ಚಿತ್ರವಾದ ‘ಹಂಸಗೀತೆ’ಯ ವೇಷಭೂಷಣಗಳ ವಿನ್ಯಾಸಕಿಯಾಗಿ ಚಲನಚಿತ್ರರಂಗಕ್ಕೆ ಆಗಮಿಸಿದ ಪ್ರೇಮಾ ಕಾರಂತರು ಮುಂದೆ 1977ರ ವರ್ಷದಲ್ಲಿ ‘ಕುದುರೆ ಮೊಟ್ಟೆ’ ಚಿತ್ರಕ್ಕೆ ಕಲಾನಿರ್ದೇಶಕಿಯಾದರು. ಮುಂದೆ ನಿರ್ದೇಶಕಿಯಾಗಿ ಎಂ. ಕೆ. ಇಂದಿರಾ ಅವರ ‘ಫಣಿಯಮ್ಮ’ ಕಥೆಯನ್ನು ಆಯ್ಕೆ ಮಾಡಿಕೊಂಡ ಪ್ರೇಮಾ ಕಾರಂತರ ನಿರ್ದೇಶನಕ್ಕೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಮೆಚ್ಚುಗೆ, ಪ್ರಶಸ್ತಿಗಳು ಸಂದವು. ಮುಂದೆ ಅವರು ‘ನಕ್ಕಳಾ ರಾಜಕುಮಾರಿ’, ‘ಲಕ್ಷ್ಮೀ ಕಟಾಕ್ಷ’, ‘ಅಬ್ದುಲ್ಲಾ – ಗೋಪಾಲ’ ಮತ್ತು ಹಿಂದಿಯಲ್ಲಿ ‘ಬಂದ್ ಝರೋಕೆ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು.
‘ಮಣಿಪುರ್ – ದಿ ಲ್ಯಾಂಡ್ ಆಫ್ ಜ್ಯೂಯಲ್ಸ್’, ‘ಅಪ್ಪಿಕೋ’, ‘ಸ್ವಪ್ನ ಹೂವಿ ಸಾಕಾರ್’, ‘ಚಲೋ ಹಂಭೀ ಸುಖೀ ಬನೇ’, ‘ವಿಕ್ರಾಂತ್ ಮೈ ಫ್ರೆಂಡ್’, ‘ಅರ್. ನಾಗರತ್ನಮ್ಮ’ ಮುಂತಾದವು ಪ್ರೇಮಾ ಕಾರಂತರು ನಿರ್ದೇಶಿಸಿದ ಸಾಕ್ಷ್ಯ ಚಿತ್ರಗಳು.
‘ಸೋಲಿಸಬೇಡ ಗೆಲಿಸಯ್ಯ’ ಎಂಬುದು ಪ್ರೇಮಾ ಕಾರಂತರ ಪ್ರಸಿದ್ಧ ಆತ್ಮಚರಿತ್ರೆ. ಈ ಕೃತಿಯಲ್ಲಿ ತಾವು ಬದುಕಿನಲ್ಲಿ ಎದುರಿಸಿದ ಸಂಕಷ್ಟ – ಸವಾಲುಗಳನ್ನು ಮತ್ತು ಅವುಗಳನ್ನು ತಾವು ಎದುರಿಸಿದ ಬಗೆಯನ್ನೂ ವಿವರಿಸಿದ್ದಾರೆ. “ಜೀವನ ನಿಂತ ನೀರಾದಾಗ ಅದು ಬದುಕೇ ಅಲ್ಲ. ಸದಾ ಹರಿಯುತ್ತಲೇ ಇರಬೇಕು. ಈ ಹರಿಯುವ ನದಿಯಲ್ಲಿ ಏರಿಳಿತಗಳು ಅನೇಕ. ಈ ಏರಿಳಿತಗಳಲ್ಲಿ ಮುಳುಗಿ ಎದ್ದು, ದಡ ಸೇರಬೇಕಾಗಿ ಬಂದಂಥ ಒಂದು ಅಗ್ನಿ ಪರೀಕ್ಷೆ ನಮ್ಮ ಜೀವನದಲ್ಲಿ ನಡೆದುಹೋಯಿತು. ದುರ್ಘಟನೆ ನಡೆದದ್ದು ಕಾರಂತರ ಜೀವನದಲ್ಲಿ. ಕಾರಂತರ ಜೀವನ ನನ್ನ ಜೀವನವೇ ಅಲ್ಲವೇ? ಆ ದುರ್ಘಟನೆಯ ಪ್ರಭಾವ ನನ್ನ ಬದುಕಿನ ಮೇಲೆ ಬೀರಿದ ಪರಿಣಾಮ ಭಯಂಕರವಾದದ್ದು. ನಮ್ಮಿಬ್ಬರ ಜೀವನವನ್ನೇ ಅಲುಗಾಡಿಸಿದಂಥ ಈ ದುರ್ಘಟನೆ ರಾಷ್ಟ್ರೀಯ ಮಟ್ಟದಲ್ಲಿ ಜನಜನಿತವಾಗಿ ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಆಕಾರ ಪಡೆಯುತ್ತಾ ಹೋಯಿತು. ಆದರೆ ಬೇರೆ ಎಲ್ಲರ ದೃಷ್ಟಿಯಲ್ಲಿ ಸತ್ಯಾಸತ್ಯಗಳಿಗಿಂತ ಕಟ್ಟುಕಥೆಗಳೇ ಜಾಸ್ತಿಯಾಗಿದ್ದವು. ಆದರೆ ನಡೆದ ಘಟನೆಗಳನ್ನೆಲ್ಲಾ ನನ್ನ ಕಣ್ಣಿನಿಂದಲೇ ನೋಡಿರುವುದರಿಂದ, ನನ್ನ ದೃಷ್ಟಿಕೋನ ಕಟುಸತ್ಯಗಳಿಂದ ಕೂಡಿರುತ್ತೆ ಎಂದುಕೊಂಡಿರುತ್ತೇನೆ … ” ಎಂಬ ಈ ಕೃತಿಯಲ್ಲಿನ ಪ್ರೇಮಾ ಕಾರಂತರ ಮಾತುಗಳು ಬಹಳಷ್ಟನ್ನು ಹೇಳುತ್ತವೆ.
ಈ ಮಹಾನ್ ಸಾಧಕರಾದ ಪ್ರೇಮಾ ಕಾರಂತರು 2007ರ ಅಕ್ಟೋಬರ್ 29ರಂದು ಈ ಲೋಕವನ್ನಗಲಿದರು. ಬಿ. ವಿ. ಕಾರಂತರು ಮತ್ತು ಪ್ರೇಮಾಕಾರಂತರು ಕನ್ನಡ ಕಲಾಲೋಕದಲ್ಲಿ ಬೆಳೆಸಿದ ಹೊಸತನ ಎಂದೆಂದಿಗೂ ಅಮರ. ಅದು ಮುಗಿದುಹೋದದ್ದಲ್ಲ. ಸದಾ ಹರಿಯುತ್ತಿರುವ ನದಿ.
On the birth anniversary of great theatre personality and film director Prema Karanth 🌷🙏🌷
ಕಾಮೆಂಟ್‌ಗಳು