ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ.ಬಿ. ಮೊಳೆಯಾರ


 ವಿ.ಬಿ. ಮೊಳೆಯಾರ


ಸಾಹಿತ್ಯ ಲೋಕದಲ್ಲಿ ಪ್ರೊ. ವಿ.ಬಿ. ಮೊಳೆಯಾರ ಎಂದೇ ಪ್ರಸಿದ್ಧಿ ಪಡೆದವರು ವೆಂಕಟರಮಣಭಟ್ಟರು.

ವಿ.ಬಿ. ಮೊಳೆಯಾರ ಅವರು ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರು ಮನೆತನದಲ್ಲಿ 1936ರ ಜೂನ್ 26ರಂದು ಜನಿಸಿದರು. ತಂದೆ ಶಂಕರನಾರಾಯಣ ಭಟ್ಟರು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಘನ ವಿದ್ವಾಂಸರು. ತಾಯಿ ಪರಮೇಶ್ವರಿ.

ಮೊಳೆಯಾರರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅತ್ತಾವರ ಶಾಲೆಯಲ್ಲಿ ನಡೆಸಿ,  ಮುಂದೆ ಮಂಗಳೂರಿನ ಗಣಪತಿ ಹೈಸ್ಕೂಲು ಸೇರಿದರು. ಮಂಗಳೂರು ಪ್ರಥಮ ದರ್ಜೆ ಕಾಲೇಜಿನಿಂದ ಇಂಟರ್ ಮೀಡಿಯೆಟ್ ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ. (ಆನರ್ಸ್‌)  ಮತ್ತು ಎಂ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಗಳಿಸಿದರು. 

ವಿ.ಬಿ. ಮೊಳೆಯಾರ  ಅವರು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಆದರೆ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ತರಗತಿ ನಡೆಯದಾದಾಗ, ಉದ್ಯೋಗ ಬಿಟ್ಟು ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜು ಸೇರಿದರು. ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರಭಾವಿ  ಪ್ರಿನ್ಸಿಪಾಲರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 

ತಂದೆಯವರಲ್ಲಿದ್ದ ಸಾಹಿತ್ಯಾಭಿಲಾಷೆ, ಸಾಹಿತ್ಯ ರಚನೆಯ ಗುಣಗಳು ಮೊಳೆಯಾರರಲ್ಲಿಯೂ ಬಾಲ್ಯದಿಂದಲೇ ಮೊಳೆಯತೊಡಗಿತ್ತು. ವಿದ್ಯಾರ್ಥಿ ದೆಸೆಯಲ್ಲಿಯೇ ಛಂದೋಬದ್ಧವಾದ ಹಲವಾರು ಕವಿತೆಗಳನ್ನು ರಚಿಸಿದ್ದರು. 
ರಾಬರ್ಟ್ ಸೌತಿ ಅವರ 'ಸ್ಕಾಲರ್' ಕವಿತೆಯ ‘ಹರಕೆಯ ಪೂರ್ಣತೆ’ ಎಂಬ ರಚನೆಯಿಂದ ಇವರ ಕಾವ್ಯಲೋಕ   ಪ್ರಾರಂಭಗೊಂಡಿತು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟಗೊಂಡವು.

ವಿ. ಬಿ. ಮೊಳೆಯಾರ ಅವರ ಚಿಂತನ ಬರಹಗಳು ಸಮುಚ್ಚಯ, ಸಂಚಿತ, ಸಮುಚಿತ, ಸಂಕುಲ, ಸಮಂಜಸ  ಎಂಬ ಕೃತಿಗಳಲ್ಲಿ  ಪ್ರಕಟಗೊಂಡಿವೆ. ಇವರ ನಗೆ ಬರಹಗಳ ಸಂಕಲನಗಳಲ್ಲಿ  ನಗು ಇಷ್ಟು ಸಾಕು, ನಕ್ಕುಬಿಡಿ ಸಾಕು, ನಕ್ಕುಬಿಡಿ, ಚಟಾಕಿ ಮುಂತಾದುವು ಪ್ರಕಟಗೊಂಡಿವೆ. ಪರಿವರ್ತನೆ ಎಂಬುದು ಮೊಳೆಯಾರರ ನಾಟಕ ಕೃತಿ.  ಇವರ ವ್ಯಕ್ತಿಚಿತ್ರ ರಚನೆಗಳಲ್ಲಿ  ಫರ್ಡಿನೆಂಡ್ ಕಿಟ್ಟೆಲ್, ಮದರ್ ಥೆರೇಸಾ ಮುಂತಾದವು ಮೂಡಿವೆ. ಕಾರಂತ ಚಿಂತನ -‍ ಕಾರಂತ ಕೃತಿಗಳ ಆಯ್ದ ವಾಕ್ಯಗಳ ಸಂಕಲನ, ಮೂಲ ಅರ್ಥಶಾಸ್ತ್ರ ಚರಿತ್ರೆ, ನೀತಿಪಾಠ ಮಾಲೆ ಮುಂತಾದವು ಇವರ ಇತರ ಇನ್ನಿತರ ಕೆಲವು ಕೃತಿಗಳು.

ವಿ. ಬಿ. ಮೊಳೆಯಾರ ಅವರು ಸಾಹಿತ್ಯ ಪ್ರಕಟಣೆ, ಪ್ರಚಾರ ಸಾಹಿತ್ಯ, ಸಂಘಟನೆ, ಸಾಹಿತ್ಯ ಚಟುವಟಿಕೆ ಹೀಗೆ ಒಂದಿಲ್ಲೊಂದು ಕಾರ್ಯದಲ್ಲಿ  ಸದಾಮಗ್ನರಾಗಿರುತ್ತಿದ್ದರು. ಅವರದ್ದು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟದ ಬದುಕು. ಪುತ್ತೂರು ಕನ್ನಡ ಸಂಘ, ಸಂತ ಫಿಲೋಮಿನ ಕಾಲೇಜು ಸಂಘ, ಲಯನ್ಸ್ ಕ್ಲಬ್, ‘ದೃಶ್ಯ’ ಪುತ್ತೂರು ನಾಟಕ ಸಂಸ್ಥೆ, ದಸರಾ ನಾಡಹಬ್ಬದ ಕಾರ‍್ಯಕ್ರಮಗಳು ಮುಂತಾದುವುಗಳಲ್ಲಿ ಅವರ ಮುಖಂಡತ್ವವಿತ್ತು. 

ವಿ. ಬಿ. ಮೊಳೆಯಾರ ಅವರಿಗೆ ಪುಸ್ತಕ ಪ್ರಕಾಶನದ ಗೌರವ ಪ್ರಶಸ್ತಿ, ಪುತ್ತೂರು ತಾಲ್ಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದಿದ್ದವು.  1994ರಲ್ಲಿ ಇವರ  ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಸಮರಸ'.

ವಿ. ಬಿ. ಮೊಳೆಯಾರ ಅವರು 2009 ವರ್ಷದಲ್ಲಿ ಈ ಲೋಕವನ್ನಗಲಿದರು.

On the birth anniversary of scholar Prof. V. B. Moleyar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ