ಪಡುಕೋಣೆ ರಮಾನಂದರಾಯರು
ಪಡುಕೋಣೆ ರಮಾನಂದರಾಯರು
ಕನ್ನಡ ಹಾಸ್ಯ ಸಾಹಿತ್ಯಲೋಕದ ತಾರೆಯರಲ್ಲಿ ಪಡುಕೋಣೆ ರಮಾನಂದರಾಯರು ಪ್ರಮುಖರು. ರಮಾನಂದರಾಯರು ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣೆಯಲ್ಲಿ 1896ರ ಡಿಸೆಂಬರ್ 30ರಂದು ಜನಿಸಿದರು. ತಂದೆ ನರಸಿಂಗರಾಯರು ಮತ್ತು ತಾಯಿ ಚಂದ್ರಭಾಗಿ ಅವರು.
ರಮಾನಂದರಾಯರ ಪ್ರಾರಂಭಿಕ ಶಿಕ್ಷಣ ಮಂಗಳೂರಿನ ಶಾಲಾ ಕಾಲೇಜುಗಳಲ್ಲಿ ನೆರವೇರಿತು.
ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ರಮಾನಂದರಿಗೆ ಸಾಹಿತ್ಯದತ್ತ ಒಲವು ಹರಿಯಿತು. ಪಿ.ಜಿ. ವುಡ್‌ಹೌಸ್, ಸ್ಟೀಫನ್ ಲೀಕಾಕ್ ಬರಹಗಳೆಂದರೆ ಅವರಿಗೆ ಅಚ್ಚುಮೆಚ್ಚು. ಮಂಗಳೂರಲ್ಲಿ ಇಂಟರ್ಮೀಡಿಯೆಟ್ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಮತ್ತು ಎಲ್.ಟಿ. ಪದವಿಗಳನ್ನು ಗಳಿಸಿದರು. ಪದವಿ ಪಡೆದ ನಂತರ ರಾಜಮಹೇಂದ್ರಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದರು. ಕೆಲಕಾಲ ತಲಚೇರಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿ ನಂತರ ಮಂಗಳೂರಿನ ತರಬೇತು ಕಾಲೇಜಿನ ಪ್ರಾಂಶುಪಾಲರ ಹುದ್ದೆ ನಿರ್ವಹಿಸಿ ನಿವೃತ್ತರಾದರು. ನಿವೃತ್ತಿಯ ನಂತರವೂ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು.
ರಮಾನಂದರಾಯರಿಗೆ ಸಂಗೀತ, ನಾಟಕ, ಸಿನಿಮಾಟೋಗ್ರಫಿ, ಸಾಹಿತ್ಯ ಹೀಗೆ ಎಲ್ಲದರಲ್ಲೂ ಅಪಾರ ಆಸಕ್ತಿ. ನಾಟಕಗಳಲ್ಲಿ ಅಭಿನಯಿಸಿದ ಅವರು ಶಿವರಾಮ ಕಾರಂತರ ಸಿನಿಮಾದಲ್ಲೂ ಪಾತ್ರ ನಿರ್ವಹಿಸಿದ್ದರು.
ರಮಾನಂದರಾಯರು ಕೈಲಾಸಂರವರ ನಾಟಕ ‘ಹೋಂ ರೂಲ್’ನ್ನು ರಂಗಕ್ಕೆ ತಂದುದಲ್ಲದೆ ಕೊಂಕಣಿಗೂ ಅನುವಾದ ಮಾಡಿದರು. ಸಿ.ಕೆ. ವೆಂಕಟರಾಮಯ್ಯನವರ ಮಂಡೋದರಿ, ವಿ.ಸೀ.ಯವರ ಸೊಹ್ರಾಬ್-ರುಸ್ತುಂ ಮುಂತಾದವನ್ನು ರಂಗಕ್ಕೆ ತಂದ ಖ್ಯಾತಿ ರಮಾನಂದರಾಯರದು.
ಹಲವಾರು ಸಾಹಿತಿ ನಾಟಕಕಾರರಿಗೆ ರಮಾನಂದರಾಯರ ಮನೆಯಲ್ಲಿ ಧಾರಾಳ ಆತಿಥ್ಯ ಸಲ್ಲುತ್ತಿತ್ತು. ರಾಜರತ್ನಂರವರು ‘ಬೌದ್ಧ ಧರ್ಮದ ಗ್ರಂಥ’ ಬರೆದದ್ದು ಇವರ ಅತಿಥಿಯಾಗಂತೆ.
ರಮಾನಂದರಾಯರು ಹಲವಾರು ಕೃತಿಗಳನ್ನು ರಚಿಸಿದ್ದರು. ಅವರ ಹುಚ್ಚು ಬೆಳದಿಂಗಳ ಹೂಬಾಣಗಳು ವಿಶಿಷ್ಟ ಹಾಸ್ಯ ಪ್ರಬಂಧ ಕೃತಿ. ಚೆರ್ರಿ ಹಣ್ಣಿನ ತೋಟ ಎಂಬುದು ಆಂಟನಿ ಚಕಾವ್ ನಾಟಕದ ಅನುವಾದ. ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ ಎಂಬುದು ಜರ್ಮನ್ ಕಾದಂಬರಿ 'ಆಲ್ ಕ್ವಯಟ್ ಆನ್ ದಿ ವೆಸ್ಟರ್ನ್ ಫ್ರಂಟ್'ಎಂಬ ಪ್ರಖ್ಯಾತ ಕೃತಿಯ ಅನುವಾದ. ಇದಲ್ಲದೆ ಇಂಗ್ಲಿಷ್‌ನಲ್ಲಿ THE CLOAK, MIRDAD ಮುಂತಾದ ಕೃತಿಗಳನ್ನು ರಚಿಸಿದ್ದರು. ರಮಾನಂದರಾಯರ ಜನ್ಮಶತಾಬ್ದಿ ವರ್ಷದಲ್ಲಿ ‘ರಮಾನಂದ ನಮನ' ಎಂಬ ನೆನಪಿನ ಸಂಚಿಕೆ ಪ್ರಕಟಗೊಂಡಿತು.
ರಮಾನಂದರಾಯರ ಪತ್ನಿ ಸೀತಾದೇವಿ ಅವರು ಮದುವೆಯ ನಂತರದಲ್ಲಿ ಓದು ಕಲಿತು ಕೃತಿ ರಚಿಸುವ ಮಟ್ಟಕ್ಕೆ ಬೆಳೆದಿದ್ದರು. ಮಡಿವಂತಿಕೆಯ ಸಮಾಜದ ಯುಗದಲ್ಲಿ ಪತಿ ಪತ್ನಿಯರಿಬ್ಬರೂ ಒಟ್ಟಾಗಿ ನಾಟಕಗಳಲ್ಲಿ ಅಭಿನಯಿಸಿದ್ದರು.
ಪಡುಕೋಣೆ ರಮಾನಂದರಾಯರ ಪುತ್ರಿಯರಲ್ಲಿ ಚಂದ್ರಭಾಗಾದೇವಿ ಅವರು ನೃತ್ಯ ಕಲಾವಿದೆಯಾಗಿ ಮತ್ತು ಜಯವಂತಿ ದೇವಿ ಹಿರೇಬೆಟ್ ಅವರು ಸುಪ್ರಸಿದ್ಧ ಗಾಯಕಿಯಾಗಿ ಕೀರ್ತಿವಂತರು. ಶಾಂತಿ ಚಿತ್ರಕಲೆಯ ಸಾಧಕರು. ಯಶೋಧರ ಅವರು ಸಂಗೀತ ಮತ್ತು ನೃತ್ಯ ಕ್ಷೇತ್ರಗಳ ಸಾಧಕಿ. ಪುತ್ರ ಪ್ರಭಾಶಂಕರ ವೃತ್ತಿಯಲ್ಲಿ ಇಂಜಿನಿಯರ್.
ಪಡುಕೋಣೆ ರಮಾನಂದರಾಯರು 1983ರ ಫೆಬ್ರವರಿ 13ರಂದು ಈ ಲೋಕವನ್ನಗಲಿದರು.
Photo Courtesy: www.kamat.com
On the birth anniversary of great humorist and multi talented Padukone Ramananda Rao
ಕಾಮೆಂಟ್‌ಗಳು