ಎಚ್.ಎಸ್. ಗೋಪಾಲರಾವ್
ಎಚ್.ಎಸ್. ಗೋಪಾಲರಾವ್
ಶಾಸನಶಾಸ್ತ್ರಜ್ಞರೂ, ಬೋಧಕರೂ ಮತ್ತು ಬರಹಗಾರರಾದ ಡಾ. ಎಚ್.ಎಸ್. ಗೋಪಾಲರಾವ್ ಅವರು 1946ರ ನವೆಂಬರ್ 18ರಂದು ನೆಲಮಂಗಲ ತಾಲ್ಲೂಕಿನ ಹುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು. ತಂದೆ ಎಚ್.ಎನ್. ಸೂರ್ಯನಾರಾಯಣರಾವ್ ಅವರು ಮತ್ತು ತಾಯಿ ಮಹಾಲಕ್ಷ್ಮಮ್ಮನವರು.
ಗೋಪಾಲರಾವ್ ಅವರ ಪ್ರಾರಂಭಿಕ ಶಿಕ್ಷಣ ಶಿವಗಂಗೆ ಮತ್ತು ನೆಲಮಂಗಲಗಳಲ್ಲಿ ನಡೆಯಿತು. ಎಲೆಕ್ಟ್ರಿಕಲ್ ಇಂಜನಿಯರಿಂಗ್ ಡಿಪ್ಲೊಮ ಮುಗಿಸಿದ ನಂತರ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎರಡು ಚಿನ್ನದ ಪದಕಗಳ ಸಾಧನೆಯೊಂದಿಗೆ ಕನ್ನಡ ಎಂ.ಎ. ಪದವಿಯನ್ನು ಗಳಿಸಿದರು. 1991 ವರ್ಷದಲ್ಲಿ 'ಶಾಸನಗಳ ಹಿನ್ನೆಲೆಯಲ್ಲಿ ಕಲ್ಯಾಣ ಚಾಲುಕ್ಯ ದೇವಾಲಯಗಳು - ಒಂದು ಸಾಂಸ್ಕೃತಿಕ ಅಧ್ಯಯನ' ಎಂಬ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್. ಡಿ. ಪದವಿ ಪಡೆದರು.
ಗೋಪಾಲರಾವ್ ಅವರು ಕೆಲಕಾಲ ಮಹಾರಾಷ್ಟ್ರ ಸರಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಂತರ ಕರ್ನಾಟಕ ಸರಕಾರದ ವಿದ್ಯುತ್ ಪ್ರಸರಣ ನಿಗಮದಲ್ಲಿ ಸಹಾಯಕ ಕಾರ್ಯನಿರ್ವಾಹಕರಾಗಿ ಸೇರಿ ಕನ್ನಡ ಘಟಕದ ಸಮನ್ವಯಾಕಾರಿಯಾಗಿಯೂ ಸೇವೆ ಸಲ್ಲಿಸಿದರು.
ಡಾ. ಗೋಪಾಲರಾವ್ ಅವರಿಗೆ ಸಾಹಿತ್ಯ ಮತ್ತು ನಾಟಕಗಳಲ್ಲಿ ಅಪಾರ ಒಲವು. ತಾವು ರಚಿಸಿದ ಐತಿಹಾಸಿಕ ಕಾದಂಬರಿಗಳ ಹಿನ್ನೆಲೆಯಲ್ಲಿ ಅವರು ಆಳವಾದ ಆಧ್ಯಯನ ಕೈಗೊಂಡವರು. ಅವರ ಕೃತಿಗಳಲ್ಲಿ ಜೇನು ನಂಜು, ಗತಿ, ಬಿನ್ನ (ಕಾದಂಬರಿಗಳು), ಗುಲುಟ್ಟಿ ಮಾನ್ನುಟ್ಟಿ (ಮಕ್ಕಳ ನಾಟಕ), ನಮ್ಮ ನಾಡು ಕರ್ನಾಟಕ, ಬಾದಾಮಿ ಐಹೊಳೆ ಪಟ್ಟದ ಕಲ್ಲು, ಉಡುಪಿ, ಕರ್ನಾಟಕ ಏಕೀಕರಣ ಇತಿಹಾಸ, ಇತಿಹಾಸದ ಅಧ್ಯಯನ ಅಂದು ಇಂದು, ಗೋದಾವರಿಯ ಆಸುಪಾಸಿನಲ್ಲಿ (ಮಹಾರಾಷ್ಟ್ರದ ಪ್ರವಾಸ 1999), ಚಂಗಾಳ್ವರು, ಶಾಸನ ಸಂಕಲನ, ಭಾರತೀಯ ಬಹುಮುಖಿ ಸಂಸ್ಕೃತಿ (ಅನುವಾದ), ಇದು ನಮ್ಮ ಕರ್ನಾಟಕ, ಒಂದುಗೂಡಿದ ಕರ್ನಾಟಕ, ಇತಿಹಾಸದ ಇಣುಕುನೋಟ, ರಾಷ್ಟ್ರಕೂಟ ಶಿಲ್ಪಕಲೆ, ಎಪಿಗ್ರಾಫಿಯಾ ಕರ್ನಾಟಕ, ಕರ್ನಾಟಕ ದರ್ಶನ, ಕನ್ನಡ ಶಾಸನ ಪದಕೋಶ, ಕರ್ನಾಟಕ ಜನ ಇತಿಹಾಸ, ಭಾರತದ ಇತಿಹಾಸ, ಬೇಡಿ ಕಳಚಿತು ದೇಶ ಒಡೆಯಿತು, ರಾ.ಶಿ, ನಮ್ಮದಿದು ಇತಿಹಾಸ ಮುಂತಾದವು ಸೇರಿವೆ. ಜೊತೆಗೆ ವಕೀಲ ರಾಮಪ್ಪನ ಕೈಫಿಯತ್ತು, ಇತಿಹಾಸದ ಪರಾಮರ್ಶೆ, ಸುವರ್ಣ ಕರ್ನಾಟಕ ಶಿಲ್ಫಕಲೆ ಮಾಲೆಯಲ್ಲಿ 14 ಪುಸ್ತಕಗಳು, ತಮಿಳು ನಾಡಿನ ಶಾಸನಗಳು, ನಾಗಾಭಿನಂದನ, ನೆಲದ ಸಿರಿ, ಎಪಿಗ್ರಾಫಿಕಲ್ ಸ್ಟಡೀಸ್, ಕನಕ ಸಿರಿ ಮುಂತಾದ ಮಹತ್ವದ ಸಂಪಾದನಾ ಕೆಲಸಗಳನ್ನೂ ಮಾಡಿದ್ದಾರೆ.
ಡಾ.ಗೋಪಾಲರಾವ್ ಅವರು ಹಲವು ಸಾಕ್ಷ ಚಿತ್ರಗಳಿಗೆ ವಿಶೇಷ ತಜ್ಞರಾಗಿ ಕಾರ್ಯ ನಿರ್ವಹಿಸಿರುವುದೇ ಅಲ್ಲದೆ ಅವರ ಅಸಂಖ್ಯಾತ ಕನ್ನಡ ಮತ್ತು ಇಂಗ್ಲಿಷ್ ಬರಹಗಳು ವಿವಿಧ ಮಾಧ್ಯಮ ಜಾಲಗಳಲ್ಲಿ ಹೊರಹೊಮ್ಮಿವೆ. ಕರ್ಮವೀರ ಪತ್ರಿಕೆಯಲ್ಲಿನ ‘ನಮ್ಮದಿದು ಇತಿಹಾಸ’ ಎಂಬ ಅವರ ಅಂಕಣ ಕೂಡ ಜನಪ್ರಿಯವಾದದ್ದು.
ಡಾ. ಗೋಪಾಲರಾವ್ ಅವರು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಾಸನ ಶಾಸ್ತ್ರ ಬೋಧಕರಾಗಿ ಸಹಾ ಕೊಡುಗೆ ನೀಡಿದ್ದಾರೆ.
ಡಾ. ಗೋಪಾಲರಾವ್ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಬಾ, ರಾ. ಗೋಪಾಲ್ ದತಿ ನಿಧಿ ಪ್ರಶಸ್ತಿ (2007), ಎರಡನೆಯ ನೆಲಮಂಗಲ ತಾಲ್ಲೂಕು ಸಮ್ಮೇಳನದ ಅಧ್ಯಕ್ಷತೆ (2007), ಶಂಬಾ ಜೋಶಿ ಸಂಶೋಧನಾ ಪ್ರಶಸ್ತಿ (2007), ಕರ್ನಾಟಕ ಏಕೀಕರಣ ಇತಿಹಾಸ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂತಾದ ಅನೇಕ ಗೌರವಗಳು ಸಂದಿವೆ.
ಡಾ. ಎಚ್.ಎಸ್. ಗೋಪಾಲರಾವ್ ಅವರಿಗೆ ಜನ್ಮದಿನದ ಶುಭಹಾರೈಕೆ ಸಲ್ಲಿಸುತ್ತ ಅವರ ವಿದ್ವತ್ತಿನ ಬೆಳಕು ನಮ್ಮನ್ನು ನಿರಂತರ ಮಾರ್ಗದರ್ಶಿಸುತ್ತಿರಲಿ ಎಂದು ಆಶಿಸೋಣ.
Great historian and writer Dr. H.S. Gopalakrishna Rao
ಕಾಮೆಂಟ್‌ಗಳು