ಜೀ. ಶಂ. ಪರಮಶಿವಯ್ಯ
ಜೀ. ಶಂ. ಪರಮಶಿವಯ್ಯ
ಜೀ.ಶಂ. ಪರಮಶಿವಯ್ಯನವರು ಮಹಾನ್ ಜಾನಪದ ವಿದ್ವಾಂಸರಾಗಿ ಜೀಶಂಪ ಎಂದೇ ಖ್ಯಾತರಾದವರು.
ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಬಲ ಜೀರಹಳ್ಳಿಯಲ್ಲಿ 1933ರ ನವೆಂಬರ್ 12ರಂದು ಜನಿಸಿದರು.
ಪರಮಶಿವಯ್ಯನವರು ಹೈಸ್ಕೂಲುವರೆಗಿನ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ನಡೆಸಿದರು. ತಮ್ಮ ಅಧ್ಯಾಪಕರಾಗಿದ್ದ ಹೊಯ್ಸಳ ಹಾಗೂ ಮನೆಯ ಪಕ್ಕದಲ್ಲಿದ್ದ ಪು.ತಿ.ನ ಅವರ ಒಡನಾಟದಿಂದ ಇವರಲ್ಲಿ ಸಾಹಿತ್ಯದ ಗೀಳು ಹಿಡಿಯಿತು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಬರೆದ ಕೆಲ ಕವನಗಳು ‘ತಾಯಿನಾಡು’ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು. ಮುಂದೆ ಇಂಟರ್‌ಗೆ ಮೈಸೂರಿನ ಯುವರಾಜ ಕಾಲೇಜು ಸೇರಿ ಅನುತ್ತೀರ್ಣರಾದಾಗ ಕನಕಪುರದ ಎಸ್. ಕರಿಯಪ್ಪನವರ ವಿದ್ಯಾಶಾಲೆಯಲ್ಲಿ ಮಾಧ್ಯಮಿಕ ಶಾಲೆಯ ಉಪಾಧ್ಯಾಯರಾಗಿ ಸೇರಿಕೊಂಡರಾದರೂ, ಮುಂದೆ ಇಂಟರ್ ಪಾಸುಮಾಡಿ ಮಹಾರಾಜ ಕಾಲೇಜಿನಲ್ಲಿ ಬಿ. ಎ, ಎಂ.ಎ. ಪದವಿಗಳನ್ನು ಪಡೆದರು. ‘ಜಾನಪದ’ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಗೌರವವನ್ನೂ ಗಳಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಉಪಕುಲಪತಿಗಳ ಕಾರ್ಯದರ್ಶಿಗಳಾಗಿ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಮಾನಸಗಂಗೋತ್ರಿಯಲ್ಲಿ ಜಾನಪದ ವಿಭಾಗ ಪ್ರಾರಂಭಗೊಂಡಾಗ ಅದರ ಮುಖ್ಯಸ್ಥರಾದ ಜೀಶಂಪ, ಪಿ.ಆರ್. ತಿಪ್ಪೇಸ್ವಾಮಿ ಅವರೊಡಗೂಡಿ ಜಾನಪದ ವಸ್ತು ಸಂಗ್ರಹಾಲಯವೊಂದನ್ನು ನಿರ್ಮಿಸಿ ಕನ್ನಡ ನಾಡಿನ ಮೂಲೆಮೂಲೆಯಲ್ಲೆಲ್ಲಾ ಸಂಚರಿಸಿ ಅಪಾರ ವಸ್ತುಗಳನ್ನು ಸಂಗ್ರಹಿಸಿದರು.
ಜಾನಪದದ ಉಳಿವಿಗಾಗಿ, ಅದರ ಶಾಸ್ತ್ರೀಯ ಅಧ್ಯಯನಕ್ಕೆ ವಿದ್ವಾಂಸರ ತಂಡವೊಂದನ್ನು ಜಾಗೃತಗೊಳಿಸಿ, ಚೇತನ ಚಿಲುಮೆಯಾಗಿ ದುಡಿದ ಜೀಶಂಪ ಅವರು ಜಾನಪದ ವಿದ್ವಾಂಸರಾಗಿದ್ದಷ್ಟೇ ಸೃಜನಶೀಲ ಬರಹಗಾರರೂ ಆಗಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರ ‘ಜೀವನಗೀತೆ’ ಎಂಬ ಕವನ ಸಂಕಲನ, ಮೇದರ ಕಲ್ಲು ಮೊದಲಾದ ಪ್ರಬಂಧಗಳು, ಸಣ್ಣ ಕಥೆಗಳು ಪ್ರಕಟಗೊಂಡಿದ್ದವು. ಜನಪ್ರಗತಿ, ಸುಧಾ ವಾರ ಪತ್ರಿಕೆಗಳಲ್ಲಿ ಜಾನಪದ ಕುರಿತ ಅವರ ಅನೇಕ ವಿದ್ವತ್ಪೂರ್ಣ ಲೇಖನಗಳೂ ಪ್ರಕಟಗೊಂಡವು.
1967ರಲ್ಲಿ ತರೀಕೆರೆಯಲ್ಲಿ ನಡೆದ ಪ್ರಥಮ ಜಾನಪದ ಸಮ್ಮೇಳನದ ಸಂದರ್ಭದಲ್ಲಿ ಜೀಶಂಪ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಹೊನ್ನಬಿತ್ತೇವು ಹೊಲಕೆಲ್ಲ’ ಕೃತಿ ಜಾನಪದ ಕ್ಷೇತ್ರದಲ್ಲೊಂದು ಅಪೂರ್ವ ಕೃತಿ ಎನಿಸಿದೆ.
ಜಾನಪದ ಅಧ್ಯಯನಕ್ಕಾಗಿ ಪರಮಶಿವಯ್ಯನವರು ವಿಶ್ವದೆಲ್ಲೆಡೆ ಸಂಚರಿಸಿದ್ದರು. ಜಾನಪದ ಲೇಖಕರಾಗಿ ಅವರು ಜಾನಪದ ಸಾಹಿತ್ಯ ಸಮೀಕ್ಷೆ, ಮಂಟೇಸ್ವಾಮಿ ನೀಲಗಾರರು, ಮೈಲಾರ ಗೊರವರು, ದೊಂಬಿದಾಸರು, ಕಿನ್ನರಿ ಜೋಗಿಗಳು. ಜಾನಪದ ಅಡುಗೆಗಳು, ಮೂಡಲಪಾಯ, ಜಾನಪದ ಕಲಾವಿದರು ಮುಂತಾದ 50ಕ್ಕೂ ಹೆಚ್ಚು ಕೃತಿ ರಚಿಸಿದರಲ್ಲದೆ ದಿಬ್ಬದಾಚೆ, ಕಾವಲುಗಾರ, ಜೀವನಗೀತೆ, ಸೋಲು ತಂದ ಸ್ವಯಂವರ, ನಾಡಿನಕರೆ ಮುಂತಾದ 16 ಸಾಹಿತ್ಯಕೃತಿಗಳನ್ನು; ದಾರಿದೀಪ, ಹೊನ್ನಬಿತ್ತೇವು ಹೊಲಕೆಲ್ಲ, ಕುವೆಂಪು ಗದ್ಯ ಪರಿಚಯ ಮುಂತಾದ 5 ಸಂಪಾದಿತ ಕೃತಿಗಳನ್ನು; ತೀ.ನಂ.ಶ್ರೀ. ಡಿ.ಎಲ್.ಎನ್, ಕುವೆಂಪು, ದೇಜಗೌ, ಎಚ್.ಎಲ್.ನಾಗೇಗೌಡ, ಕೆ.ವಿ.ಶಂಕರಗೌಡ, ಗುಜ್ಜೇಗೌಡ ಮುಂತಾದವರ ಕುರಿತಾದ ಗೌರವ ಗ್ರಂಥಗಳನ್ನು ಮೂಡಿಸಿ ನಾನಾಮುಖಿಯಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.
ಜೀ. ಶಂ. ಪರಮಶಿವಯ್ಯನವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ, ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವ, ರಾಜ್ಯಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಹದಿಮೂರನೆಯ ಅಧಿವೇಶನದ ಅಧ್ಯಕ್ಷತೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷ ಪದವಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. ‘ಜಾನಪದ ಸಂಭಾವನೆ’ ಎಂಬ ಅಭಿನಂದನ ಗ್ರಂಥವನ್ನು ಅವರ ಅಭಿಮಾನಿಗಳು ಸಮರ್ಪಿಸಿದ್ದರು.
ಪ್ರೊ. ಜಿ. ಶಂ. ಪರಮಶಿವಯ್ಯನವರು 1995ರ ಜೂನ್ 17ರಂದು ಈ ಲೋಕವನ್ನಗಲಿದರು.
Great folk scholar and writer Dr. G. S. Paramashivaiah...
ಕಾಮೆಂಟ್‌ಗಳು