ಬಿ. ಕೆ. ಎಸ್ ಅಯ್ಯಂಗಾರ್
ಬಿ. ಕೆ. ಎಸ್ ಅಯ್ಯಂಗಾರ್
ಯೋಗವಿದ್ಯೆಯನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸಿದವರಲ್ಲಿ ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಪ್ರಮುಖರು.
ಪರಮಯೋಗಾಚಾರ್ಯ ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ 1918ರ ಡಿಸೆಂಬರ್ 14ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದಲ್ಲಿ ಜನಿಸಿದರು. ಅವರು ಅತ್ಯಂತ ಬಡ ಕುಟುಂಬದಿಂದ ಬಂದವರು.
ಬಾಲ್ಯದ ಹೆಸರಿನ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಮುಂದೆ ಪ್ರೊ.ಬಿ.ಕೆ.ಎಸ್. ಅಯ್ಯಂಗಾರ್ ಎಂದು ಪ್ರಸಿದ್ಧರಾದರು. ಜಗತ್ತಿನ ಎಲ್ಲ ಭಾಷೆ ಮತ್ತು ಸಂಸ್ಕೃತಿಗಳ ನಡುವೆ ‘ಬಿ.ಕೆ.ಎಸ್.ಅಯ್ಯಂಗಾರ್ ಸ್ಕೂಲ್ ಆಫ್ ಯೋಗ’ ಎಂಬ ಪರಿಕಲ್ಪನೆಯನ್ನು ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಹುಪಾಲು ಮಂದಿ ಯೋಗ ಶಿಕ್ಷಕರು ಗುರೂಜಿ ಪ್ರೊ.ಬಿ.ಕೆ. ಅಯ್ಯಂಗಾರ್ ಅವರಿಂದ ಪ್ರೇರಿತರಾದವರು. ಇಂದು ವಿಶ್ವದಾದ್ಯಂತ ಯೋಗ ಎಂಬ ಭಾರತೀಯ ಕಲ್ಪನೆಯು ಹೆಚ್ಚು ಹೆಚ್ಚು ಸಾಕಾರಗೊಳ್ಳುವಲ್ಲಿ ಪ್ರೊ. ಬಿ. ಕೆ. ಎಸ್. ಅಯ್ಯಂಗಾರ್ ಅವರ ಕೊಡುಗೆ ಅಪರಿಮಿತವಾದುದು.
ಅಯ್ಯಂಗಾರ್ ಅವರು ತಮ್ಮ ಬಾಲ್ಯಕಾಲದಲ್ಲಿ ಅನಾರೋಗ್ಯದಿಂದ ತತ್ತರಿಸಿ ಹೋಗಿದ್ದಾಗ ಮೈಸೂರಿನಲ್ಲಿದ್ದ ತಮ್ಮ ಸೋದರಮಾವ ಪ್ರಸಿದ್ಧ ಯೋಗಿ ತಿರುಮಲ ಕೃಷ್ಣಮಾಚಾರ್ಯರಿಂದ ಚಿಕಿತ್ಸೆ ಪಡೆದು ಗುಣಮುಖರಾದರು. ಹೀಗೆ ಯೋಗ ಶಿಕ್ಷಣದ ಬಗ್ಗೆ ಒಲವು ಮತ್ತು ಶ್ರದ್ಧೆಯನ್ನು ಬೆಳೆಸಿಕೊಂಡು ಬೆಳೆದ ಅಯ್ಯಂಗಾರ್ ಅವರು ಇದಕ್ಕೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ಕಾಯಕವನ್ನು ಮಾಡಬೇಕು ಎಂದು ದೂರದ ಮಹಾರಾಷ್ಟ್ರದ ಪುಣೆಗೆ ಹೋದರು. ಭಾಷೆ ಗೊತ್ತಿಲ್ಲದ ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಸಾಬೀತು ಪಡಿಸಿದರು. ಕೆಲವೇ ವರ್ಷಗಳಲ್ಲಿ ತಮ್ಮ ಸತತ ಯೋಗಾಧ್ಯಯನ ಮತ್ತು ನಿರಂತರ ಪರಿಶ್ರಮವುಳ್ಳ ಕಾಯಕ ಸಾಧನೆಗಳಿಂದ ದೇಶವಿದೇಶದ ಪ್ರಜ್ಞಾವಂತರಿಗೆ ಪರಿಚಯವಾದರು.
ಪ್ರಖ್ಯಾತ ಲೇಖಕ ಖುಷ್ವಂತ್ ಸಿಂಗ್ ‘‘ಭಾರತ ಮತ್ತು ವಿದೇಶಗಳಲ್ಲಿ ಯೋಗಾಭ್ಯಾಸಕ್ಕೆ ವೃತ್ತಿ ಗೌರವವನ್ನು ತಂದು ಕೊಟ್ಟವರು ಪ್ರೊ.ಬಿ.ಕೆ.ಎಸ್.ಅಯ್ಯಂಗಾರ್’’ ಎಂದು ತಮ್ಮ ಬರಹಗಳಲ್ಲಿ ಅಭಿಪ್ರಾಯ ಪಡುತ್ತಾರೆ.
ಅಯ್ಯಂಗಾರ್ ಯೋಗ ಶಿಕ್ಷಣ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಯ್ಯಂಗಾರ್ 1991ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2014ರಲ್ಲಿ ಪದ್ಮವಿಭೂಷಣ, ಪುಣ್ಯಭೂಷಣ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಯೋಗಪಟುವಾದರೂ ದೇಹ ಒಂದು ಕಾಲದ ನಂತರದಲ್ಲಿ ನಶ್ವರವೇ. ಆಚಾರ್ಯ ಬಿ.ಕೆ. ಎಸ್. ಅಯ್ಯಂಗಾರ್ ಅವರು 2014ರ ಆಗಸ್ಟ್ 20ರಂದು ಪುಣೆಯಲ್ಲಿ ನಿಧನರಾದರು. ಯೋಗದಿಂದ ಅವರು ಈ ಲೋಕಕ್ಕೆ ನೀಡಿದ ಕೊಡುಗೆ ಅಮರವಾದದ್ದು. ಈ ಮಹಾನ್ ಚೇತನಕ್ಕೆ ಸಾಷ್ಟಾಂಗ ನಮನ.
Great Yoga Guru B K S Iyengar
ಕಾಮೆಂಟ್‌ಗಳು